ಉಕ್ರೇನಿನಲ್ಲಿ ಕೆಲವೊಂದಷ್ಟು ದಿನಗಳಿಂದ ಯುದ್ಧದ ವಾತಾವರಣ ಅಲ್ಲಿನ ಜನಗಳಲ್ಲಿ ಆತಂಕವೋ ಆತಂಕ. ಹೀಗಿರುವಾಗ ಭಾರತ ರಷ್ಯಾ ಕಡೆಯೂ ಹೋಗದೆ ಉಕ್ರೇನ್ ಕಡೆಯೂ ನಿಲ್ಲದೆ ತಟಸ್ಥ ನೀತಿ ಅನುಸರಿಸಿದೆ. ಕೆಲವರ ಅಭಿಪ್ರಾಯದಂತೆ ಭಾರತ ಮಾನವತ್ವದ (humanitarian) ನೆಲೆಯಲ್ಲಿ ರಷ್ಯಾದ ವಿರುದ್ಧ ಉಕ್ರೇನ್ ಪರ ನಿಲ್ಲಬೇಕಿತ್ತಂತೆ. ಆದರೆ ಆ ನಿಲುವು ಭಾರತದ ಮೇಲೆ ಬೇರೆ ರೀತಿಯ ಪರಿಣಾಮ ಖಂಡಿತ ಬೀಳ್ತದೆ. ಅವೆಲ್ಲದರ ಬಗೆಗೆ ಅರಿವಿರದ ಕೆಲ ಹೆಸರಾಂತ (ಬರಿಯ ಹೆಸರಿಗಷ್ಟೇ) ಶಾಂತಿ ಪ್ರಿಯರು ಭಾರತದ ನಿಲುವನ್ನು ವಿರೋಧಿಸುತ್ತಿದ್ದಾರೆ. ಅಫ್ಘಾನಿಸ್ತಾನದ ತಾಲೀಬಾನಿಗಳೇ ಶಾಂತಿಯ ಪ್ರಸ್ತಾಪ ಮಾಡಿರುವಾಗ ಅದರೆದುರು ಇವೆಲ್ಲವೂ ಅಷ್ಟೊಂದು ಹಾಸ್ಯಾಸ್ಪದ ಎಣಿಸದು ಬಿಡಿ.
ಈ ರೀತಿಯ ಪರಿಸ್ಥಿತಿಯಲ್ಲಿ ಉಕ್ರೇನ್ನಲ್ಲಿರುವ ಎಲ್ಲಾ ಭಾರತೀಯರನ್ನು ಕರೆತರುವ ಹೊಣೆ ಭಾರತ ಸರ್ಕಾರದ ಮೇಲೆ ಬಿದ್ದಿದೆ. ಸುಮಾರು 20,000 ಭಾರತೀಯರು ಅಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲಿ ಹೆಚ್ಚಿನವರು ವಿದ್ಯಾರ್ಜನೆಗೆಂದು ಅಲ್ಲಿಗೆ ತೆರಳಿದವರೇ. ಅಂತಹವರನ್ನು ಕರೆತರುವ ಮಹತ್ತರ ಹೊಣೆ ಹೊತ್ತ ಭಾರತದ ಸರ್ಕಾರ, ರಷ್ಯಾದ ಜೊತೆಗೂ ಮಾತುಕತೆ ನಡೆಸಿ ಭಾರತದ ಧ್ವಜವಿರುವ ಯಾವುದೇ ವಾಹನಗಳಿಗೂ ಏನೂ ಮಾಡಬಾರದೆಂದು ಹೇಳಿ, ಎಲ್ಲಾ ಭಾರತೀಯ ವಿದ್ಯಾರ್ಥಿಗಳು ಪೋಲೆಂಡ್, ಹಂಗೇರಿ, ರೊಮ್ಯಾನಿಯಾ ಅಥವಾ ಸುತ್ತಮುತ್ತಲಿನ ಮತ್ತಾವ ದೇಶಕ್ಕೆ ಹೋಗುವುದಾದರೂ ತಾವು ಸಂಚರಿಸುವ ವಾಹನಗಳಲ್ಲಿ ಭಾರತದ ತ್ರಿವರ್ಣ ಧ್ವಜವಿರಬೇಕೆಂದು ಹೇಳಿದರು. ಅದರಂತೆ ಎಲ್ಲಾ ವಾಹನಗಳನ್ನು ವಿದ್ಯಾರ್ಥಿಗಳು ಧ್ವಜವನ್ನು ಇರುವಂತೆ ನೋಡಿಕೊಂಡು ಹೊರಟರು. ಹಾಗೆ ಹೊರಟವರಿಗಾಗರಿಗೂ ಹಾದಿಯ ನಡುವಲ್ಲಿ ಯಾವ ತೊಂದರೆಯೂ ಆಗಲಿಲ್ಲ. ಭಾರತದ ಧ್ವಜ ಕಂಡು ಸೈನಿಕರು ಕನಿಷ್ಠ ತಪಾಸಣೆಯನ್ನೂ ನಡೆಸದೆ ಸುಮ್ಮನೆ ಬಿಟ್ಟರಂತೆ.
ಹೀಗಿರುವಾಗ ಅಲ್ಲಿಂದ ಬಂದ ಕೆಲವು ವಿದ್ಯಾರ್ಥಿಗಳ ದರ್ಪ ಅತ್ಯಂತ ನೋವನ್ನುಂಟು ಮಾಡುತ್ತದೆ. ಅಲ್ಲ ಸ್ವಾಮಿ ನಿಮಗೆ ಹೆಚ್ಚಿನ ಅವಕಾಶಗಳು ಬೇಕೆಂಬ ಕಾರಣಕ್ಕಾಗಿ ಅಲ್ಲಿಗೆ ವಿದ್ಯಾಭ್ಯಾಸ ಮಾಡಲು ಹೊರಟವರು ಇವರು. ಅಲ್ಲಿ ಹೋಗಿ ಖಷಿಯಲ್ಲಿದ್ದಂತಹ ಸಂದರ್ಭದಲ್ಲಿ ಯಾರೂ ಇವರಿಗೆ ನೆನಪಿಗೆ ಬರಲಿಲ್ಲ. ಭಾರತದ ದೇಶದ ನೆನಪೂ ಆಗಿತ್ತೋ ಇಲ್ವೋ!!! ಹೀಗಿರುವಾಗ ಇವರಿಗೆ ಭಾರತದ ನೆನಪಾಗಿದ್ದು ಅಡಿಯಲ್ಲಿ ಸಿಡಿಮದ್ದು ಸಿಡಿದಾಗಲೇ. ಆ ಸಂದರ್ಭದಲ್ಲಿ ಅಲ್ಲಿರುವ ಇವರನ್ನು ಅಲ್ಲಿಂದ ಭಾರತಕ್ಕೆ ಕರೆದುಕೊಂಡು ಬರಲು ಅನೇಕ ಕಷ್ಟಗಳನ್ನೆದುರಿಸಿ ಭಾರತಮಾತೆಯ ವೀರ ಪುತ್ರರನ್ನು ವಿಮಾನದಲ್ಲಿ ಯದ್ಧಭೂಮಿಗೆ ಕಳುಹಿಸಿ ಕರೆದುಕೊಂಡು ಬರುವ ಪ್ರಯತ್ನ ಮಾಡಿದರೆ ಆರಾಮವಾಗಿ ಬಂದು ಇಳಿದ ನಂತರ, ಭಾರತ ಸರ್ಕಾರದ ವಿರುದ್ಧ ಹುಚ್ಚು ಹುಚ್ಚಾಗಿ ಮಾತನಾಡುವುದನ್ನು ನೋಡುವಾಗ, ವಾರಗಟ್ಟಲೆ ಉಪವಾಸ ಇದ್ದವನು ಹೊಟ್ಟೆ ತುಂಬ ತಿಂದು, ನಂತರ ಊಟ ಹಾಕಿದವನ ಬಳಿ ಹೋಗಿ ರುಚಿಯ ಬಗೆಗೆ ಆಕ್ಷೇಪ ಎತ್ತಿದ ಹಾಗೆ ಇತ್ತು.
ನೀವು ನಿಮ್ಮ ಅವಕಾಶಕ್ಕಾಗಿ ಮತ್ತು ಭವಿಷ್ಯತ್ತಿಗಾಗಿ ಆ ದೇಶಕ್ಕೆ ಹೋದವರೇ ಹೊರತು, ಅಲ್ಲಿದ್ದು ಭಾರತ ಮಾತೆಯ ಸೇವೆ ಮಾಡಬೇಕೆಂಬ ದೃಷ್ಟಿಯಿಂದಂತೂ ಅಲ್ಲ. ಭಾರತೀಯರ್ಯಾರೂ ನಿಮ್ಮನ್ನು ಅಲ್ಲಿ ಹೋಗಿ ವಿದ್ಯಾಭ್ಯಾಸ ಮಾಡಿರೆಂದು ಕೇಳಿ ಬೇಡಿ ಕಳುಹಿಸಲೂ ಇಲ್ಲ. ನೀವೇ ಸ್ವಹಿತಾಸಕ್ತಿಯ ದೃಷ್ಟಿಯಿಂದ ಹೋದವರು. ಅದು ತಪ್ಪೆಂದೂ ಹೇಳುತ್ತಿಲ್ಲ. ಆದರೆ ಅಲ್ಲಿಂದ ಭಾರತಕ್ಕೆ ಬಂದ ನಂತರ ಭಾರತದ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡುತ್ತಿರುವುದು ಮಾತ್ರ ಖಂಡನೀಯ. ಏನು ಸ್ವಾಮಿ ಭಾರತದ ಸರಕಾರಕ್ಕೆ ನಿಮ್ಮ ಯೋಗಕ್ಷೇಮ ನೋಡುವುದೊಂದೇ ಕೆಲಸವ? 130 ಕೋಟಿ ಜನ ಸಂಖ್ಯೆ ಇರುವ ದೇಶ ಇದು. ಎಲ್ಲರ ಬಗೆಗೂ ಗಮನ ಹರಿಸಬೇಕು. ಹೀಗಿರುವಾಗಲೂ ನಿಮ್ಮನ್ನು ಭಾರತಕ್ಕೆ ಕರೆತರಲು ಎಷ್ಟು ಕಷ್ಟಪಡುತ್ತಿದ್ದಾರೆಂದು ಅರಿವಿದ್ದೇ ಮಾತನಾಡುತ್ತಿದ್ದೀರೇನು?
ಭಾರತಕ್ಕೆ ಬಂದ ಒಬ್ಬಾಕೆ ಬರೆದದ್ದು ನೋಡಿದರೆ ನಗು ಬರುತ್ತದೆ. ಆಕೆಗೆ ಬರುವಾಗ ವಿಮಾನದಲ್ಲಿ ಮನರಂಜನೆ ಇರಲಿಲ್ಲವಂತೆ, ಯು.ಎಸ್.ಬಿ ಕೇಬಲ್ ಇರಲಿಲ್ಲವಂತೆ, ಎಂತಹ ಹೊಣೆಗೇಡಿತನದ ಹೇಳಿಕೆ ಅಂತ ಅನಿಸುದಿಲ್ವ?
ಅದರಲ್ಲಿ ಕರ್ನಾಟಕದ ಒಬ್ಬ ಅನೀಶ್ ಎಂಬ ವಿದ್ಯಾರ್ಥಿ ಹೇಳ್ತಾನೆ “ಭಾರತ ಸರ್ಕಾರ ಏನೂ ಮಾಡಿಯೇ ಇಲ್ಲ. ನಾವೇ ವಾಹನ ಮಾಡಿ ಭಾರತದ ಧ್ವಜ ಹಾಕಿ ಅಲ್ಲಿಂದ ಸೇಫ್ ಝೋನ್ ಗೆ ಬಂದೆವು ನಂತರ ಕರೆದುಕೊಂಡು ಬರಲು ಇವರೇ ಬೇಕೇ? ಅದರಲ್ಲೂ ಬರುವಾಗ ಕೊಟ್ಟದ್ದು ಬರೀ ಬ್ರೆಡ್ ಮತ್ತು ಮಯೋನೀಸ್ ಮತ್ತು ಸ್ವಲ್ಪ ಸಮಯದ ನಂತರ ಬಿಸ್ಕೆಟ್” ಎಂದು. ಅಲ್ಲ ಭಾರತ ಸರ್ಕಾರ ಏನೂ ಮಾಡದೇ ಇದ್ದಿದ್ದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ನೋಡಿದ ಮಾತ್ರಕ್ಕೆ ಗಡಿಗಳಲ್ಲಿ ಸುಮ್ಮನೆ ಬಿಡುತ್ತಿದ್ದರೆಂದು ಅನಿಸ್ತದಾ? ಹಾಗಾದರೆ ಹೀಗೆಯೇ ಬೇರಾವ ದೇಶದ ಧ್ವಜಕ್ಕೂ ಬೆಲೆ ಏಕಿಲ್ಲ? ಆಪರೇಶನ್ ಗಂಗಾದಂತೆ ಬೇರಾವ ದೇಶವೂ ಮತ್ತಾವುದೇ ಆಪರೇಶನ್ ಮಾಡದಿರುವುದೇಕೆ? ಇವರೆಲ್ಲ MBBS ಮುಗಿಸಿ ಭಾರತಕ್ಕೆ ವೈದ್ಯರಾಗಿ ಬರುವ ಮೊದಲು ಇವರ ಸುಟ್ಟಗಾಯಗಳಿಗೆ ಔಷಧಿ ಮಾಡಿಕೊಂಡು ಬರಲಿ. ಅದಾದ ನಂತರವೂ ಇವರ ಬಳಿ ಔಷಧಿ ತೆಗೆದುಕೊಳ್ಳಲು ಹೋಗುವುದು ಯಾರೆಂಬುದು? ಇವರಿಗೂ ಒಂದು ಯಕ್ಷ ಪ್ರಶ್ನೆಯೇ ಸರಿ ಬಿಡಿ!!
ಇವೆಲ್ಲ ನೋಡುವಾಗ ಕೊನೆಯದಾಗಿ ಹೇಳಬೇಕನಿಸುವುದು ಇಷ್ಟೆ. ಯುದ್ಧ ಭೂಮಿಯಿಂದ ಬಂದವರು ಅಬ್ಬ ಬದುಕಿ ಬಂದೆವೆಂದು ನಿಟ್ಟುಸಿರು ಬಿಡಬೇಕೇ ಹೊರತು, ತಡವಾಗಿ ಕರೆತಂದರೆಂದು, ದೇಶವನ್ನು ಬೈಯ್ಯುವುದಲ್ಲ. ನಾವು ಕಟ್ಟಿದ ಕರ(tax)ದ ಹಣದಿಂದ ನಿಮ್ಮ ರಕ್ಷಣೆ ಸಾಧ್ಯವಾಗಿದೆ, ಅದಕ್ಕೆ ಕೃತಜ್ಞತೆ ತೋರಿ. ನೀವು ಅಷ್ಟೆಲ್ಲ ನಿಷ್ಠಾವಂತರು ಮತ್ತು ಘಡ್ಸ್ ಇರುವವರೇ ಆಗಿದ್ದರೆ ವಿದ್ಯೆ ಕಲಿಸಿದ ಭೂಮಿಗಾಗಿ ಹೋರಾಡಿ ನಿಮ್ಮ ನಿಷ್ಠೆಯನ್ನು ತೋರಿಸಿ ಬರುತ್ತಿದ್ದಿರಿ. ಆನಂತರ ಭಾರತ ಸರ್ಕಾರದ ಕರ್ತವ್ಯದ ವಿರುದ್ಧ ಮಾತನಾಡುವ ಹಕ್ಕಿರುತ್ತಿತ್ತು.
ವಂದೇ ಭಾರತ ಮಾತರಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.