ನಮ್ಮ ನಡುವೆ ಹಲವಾರು ಜನಸಾಮಾನ್ಯರು ಅಸಾಮಾನ್ಯ ರೀತಿಯಲ್ಲಿ ಒಂದಲ್ಲೊಂದು ಸಾಧನೆಗಳನ್ನು ಮಾಡಿ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಕೆಲವೊಂದಷ್ಟು ಜನ ಪರದೆಯ ಮೇಲೆ ಅಥವಾ ಅಕ್ಷರಗಳ ರೂಪದಲ್ಲಿ ಪುಟಗಳಲ್ಲಿ ಕಾಣಸಿಗುವರಾದರೆ, ಮತ್ತೊಂದಿಷ್ಟು ಜನ ಇಂತಹ ಮಾಧ್ಯಮಗಳ ಮೂಲಕ ಹೊರಜಗತ್ತಿಗೆ ತಿಳಿಯದಿದ್ದರೂ ತಮ್ಮ ಸುತ್ತಲಿನ ಪರಿಸರದಲ್ಲಿ ಗುರುತಿಸಿಕೊಂಡಿರುತ್ತಾರೆ. ಮತ್ತೂ ಕೆಲವರು ಅಸಾಮಾನ್ಯ ಸಾಧನೆಯನ್ನು ಮಾಡಿದರೂ ಯಾರದೇ ಗೋಜಿಗೆ ಹೋಗದೆ ತಮ್ಮ ಪಾಡಿಗೆ ತಾವಿರುತ್ತಾರೆ.
ಸಾಧಿಸುವ ತುಡಿತ ಎಲ್ಲರಲ್ಲಿದ್ದರೂ ಸಾಧನೆಯ ಶಿಖರವನ್ನು ಏರಲು ಮಾತ್ರ ಕೆಲವರಿಗಷ್ಟೇ ಸಾಧ್ಯವಾಗುತ್ತದೆ. ಅದನ್ನು ತಲುಪಲು ಪಟ್ಟಪಾಡು, ಅದರ ಹಿಂದಿರುವ ಶ್ರಮ, ತ್ಯಾಗ, ನಿಷ್ಠೆ, ಬದ್ಧತೆ ಇವುಗಳೆಲ್ಲಾ ಸಾಧಿಸಿದ ಕ್ಷಣದಲ್ಲಿ ಸಂತೋಷವಾಗಿ ಬದಲಾಗುತ್ತದೆ. ಆದರೆ ಅದು ಸಾರ್ಥಕ್ಯ ಪಡೆಯುವುದು ಮಾತ್ರ ಆ ಸಾಧನೆಯ ಹಾದಿಯನ್ನು ಸಮಾಜ ಒಪ್ಪಿಕೊಂಡಾಗ. ಅಂದರೆ, ಸಮಾಜ ಅದನ್ನು ಗುರುತಿಸಿದಾಗ.
ಇಂದಿನ ತಾಂತ್ರಿಕ ಯುಗದಲ್ಲಿ ಪ್ರಚಾರ ಪಡೆಯುವುದಕ್ಕೆ ಕಷ್ಟವೇನೂ ಇಲ್ಲ. ತಾನು ಮಾಡಿದ್ದನ್ನು ಬೆರಳ ತುದಿಯ ಒಂದು ಸ್ಪರ್ಶದಿಂದ ಇಡೀ ಲೋಕಕ್ಕೆ ತಿಳಿಸಬಹುದು. ಪ್ರಚಾರಪಡಿಸಲು ಒಂದು ಛಾಯಾಚಿತ್ರವನ್ನು ತೆಗೆದುಹಾಕಿದರೂ ಸಾಕು, ಒಂದೆರಡು ನಿಮಿಷಗಳಲ್ಲಿ ಲಕ್ಷಾಂತರ ನೋಟಗಳು, ಸಾವಿರಾರು ಸಂದೇಶಗಳು ಬಂದೇ ಬಿಡುತ್ತವೆ. ಆದರೆ, ಏನೋ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿ, ಹೆಜ್ಜೆ ಹೆಜ್ಜೆಯಾಗಿ ಬೆಳೆಯುವ ಒಬ್ಬ ವ್ಯಕ್ತಿಯನ್ನು ಗುರುತಿಸುವ ಸುಗುಣ ಯಾಕೋ ನಮ್ಮ ಸಮಾಜದಲ್ಲಿ ಕ್ಷೀಣಿಸುತ್ತಿದೆ ಎಂಬ ಭಾವನೆ ಮೂಡುತ್ತಿದೆ. ವ್ಯಕ್ತಿಯ ಏಳಿಗೆಯನ್ನೂ, ಬಂದ ದಾರಿಯನನ್ನೂ ಪ್ರಶಂಸಿ ಸುವುದರ ಬದಲು, ದ್ವೇಷ, ಅಸೂಯೆ, ಅಪಪ್ರಚಾರ, ಅವಮಾನ ಇವೇ ಮೊದಲಾದ ದುರ್ಗುಣಗಳಿಂದ, ಆತನ ಅಧಃಪತನವನ್ನೇ ಕಾಯುವ ಕೆಲ ಮಾನಸಿಕತೆಗಳು ಹೆಚ್ಚಿಕೊಂಡಿವೆ. ತನ್ನ ಸ್ಥಾನಮಾನವನ್ನು ಕಾಪಾಡಲು ಮತ್ತೊಬ್ಬನನ್ನು ಬಲಿಪಶುವಾಗಿಸುವ, ಆ ಮೂಲಕ ಮೇಲೇರಬಹುದು ಎಂಬ ಚಿಂತನೆಯನ್ನು ಮಾಡುವವರೂ ನಮ್ಮ ನಡುವಿದ್ದಾರೆ.
ಆರೋಗ್ಯಕರ ಸ್ಪರ್ಧೆ ಉತ್ತಮ. ಆದರೆ ಅಡ್ಡದಾರಿಯಲ್ಲಿ, ಒಪ್ಪಿಕೊಳ್ಳಲಾಗದ ರೀತಿಯಲ್ಲಿ ವ್ಯವಹರಿಸಿ, ವಿನಾಕಾರಣ ಸ್ಪರ್ಧೆಯನ್ನು ಒಡ್ಡುವವರ ಬಗ್ಗೆ ನಿಜವಾಗಲೂ ಅನುಕಂಪ ಹುಟ್ಟುತ್ತಿದೆ. ತನ್ನ ಸಾಮರ್ಥ್ಯವನ್ನು ನಿರೂಪಿಸಲು ಸಾಧ್ಯವಾಗದವರ ವ್ಯವಹರಣಾ ಶೈಲಿ ಇದು. ಸ್ಪರ್ಧೆ ಎನ್ನುವಾಗ ಸ್ಪರ್ಧಿಸುವ ವ್ಯಕ್ತಿ ಯಾವ ಹಂತದಲ್ಲಿದ್ದಾನೆ? ಸ್ಪರ್ಧಿಸುವ ಮನಸ್ಥಿತಿಯಲ್ಲಿದ್ದಾನೆಯೋ? ನಾನು ಆತನಿಗೆ ಸರಿಸಮಾನನಾಗಿದ್ದೇನೆಯೋ? ಎಂಬಿತ್ಯಾದಿ ವಿಷಯಗಳು ಗಣನೆಗೆ ಬರಬೇಕು. ಆದರೆ, ತನ್ನ ಪಟ್ಟವನ್ನು ಭದ್ರಪಡಿಸುವ ಹಪಾಹಪಿತನದಲ್ಲಿ ವ್ಯಕ್ತಿ ಈ ಎಲ್ಲಾ ವಿಚಾರಗಳನ್ನು ಬದಿಗೊತ್ತಿ, ವಿಷಯ ಸಾಧನೆಗೆ ಮಾತ್ರ ಹವಣಿಸುತ್ತಾನೆ. ಅದರ ಫಲವೇನು..? ಹಾಗೆ ಮಾಡುವುದರೊಂದಿಗೆ ತನ್ನ ಬಗೆಗಿನ ಅಭಿಪ್ರಾಯಗಳೇನು…? ಎಂಬುದರ ಬಗ್ಗೆ ದೃಷ್ಟಿಯನ್ನೂ ಹಾಯಿಸುವುದಿಲ್ಲ. ತಾನು ಅರ್ಹ ಎಂಬುದರೆಡೆಗೆ ಮಾತ್ರ ಇರುವ ಕಣ್ಣೋಟವನ್ನು, ತನ್ನ ಎದುರಾಳಿ ತನಗಿಂತ ಅರ್ಹನಿರಬಹುದು ಎಂಬ ವಿಚಾರದಲ್ಲೂ ಹಾಯಿಸಿದರೆ, ಅನೇಕಾನೇಕ ಅವಾಂತರಗಳನ್ನು ತಪ್ಪಿಸಬಹುದು ಮಾನಸಿಕ ವಿಕೋಪವನ್ನೂ ಕಮ್ಮಿ ಮಾಡಬಹುದು.
ಪ್ರಚಾರಕ್ಕೂ ಗುರುತಿಸಿಕೊಳ್ಳುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ತಾನೊಬ್ಬನೇ ಸಾಧಿಸಿದ್ದು, ತಾನೊಬ್ಬನೇ ಬೆಳೆಯಬೇಕು, ನಾಲ್ಕಾರು ಜನ ತನ್ನ ಬಗ್ಗೆಯೆ ಮಾತನಾಡಬೇಕು, ಮೆಚ್ಚುಗೆ ವ್ಯಕ್ತಪಡಿಸಬೇಕೆಂಬ ಮಾನಸಿಕತೆಯವನಾದರೆ, ಆತನದ್ದು ಪ್ರಚಾರವೇ ಹೊರತು ಮತ್ತೇನಲ್ಲ. ಆದರೆ, ಒಬ್ಬ ವ್ಯಕ್ತಿ ಆತನ ಬೆಳವಣಿಗೆಯಿಂದ, ಆತನ ಕೃತಿ ಕಾರ್ಯಗಳಿಂದ, ನಾಲ್ಕಾರು ಜನ ಪ್ರಭಾವಿತರಾಗುತ್ತಾರೆ, ಆ ಹಾದಿಯನ್ನು ಅನುಸರಿಸುತ್ತಾರೆ ಎಂದಾದರೆ ಆ ವ್ಯಕ್ತಿಯನ್ನು ಗುರುತಿಸುವುದು ಜೊತೆಗೆ ಗೌರವಿಸುವುದು ಸಮಾಜದ ಕರ್ತವ್ಯವಾಗಿರುತ್ತದೆ. ಜೀವನದಲ್ಲಿ ಒಬ್ಬೊಬ್ಬನಿಗೆ ಒಂದೊಂದು ರೀತಿಯ ಪ್ರಶ್ನೆಪತ್ರಿಕೆ ಇರುವಾಗ ನಾವು ನಾವೇ ನಾ ಮೇಲು ತಾ ಮೇಲು ಎಂದು ಬಡಿದಾಡಿಕೊಂಡಿದ್ದರೆ, ಸಮಾಜವಿರಲಿ ನಾವೂ ಅಭಿವೃದ್ಧಿಗೊಳ್ಳುವುದಿಲ್ಲ. ಕವಿ ಹೇಳಿದ ಹಾಗೆ, ಇರುವ ಮೂರು ದಿನಗಳ ಸಂತೆಯನ್ನು ಸುಖ ಸಂತೋಷದಿಂದ, ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ, ನಾನೂ ಬೆಳೆಯುತ್ತೇನೆ, ನನ್ನವರೂ ಬೆಳೆಯಲಿ ಎಂಬ ಆಶಯದೊಂದಿಗೆ ಕಳೆದರೆ, ದುಃಖದ ಋಣಾತ್ಮಕ ಕಂಪನಗಳು ನಮ್ಮ ಬಳಿ ಸರಿಯುವುದೇ ಇಲ್ಲ. ಸಾಧನೆಯನ್ನೂ, ಸಾಧಿಸಿದವನನ್ನೂ ಗುರುತಿಸುವ ಕಲೆಯು ನಮ್ಮಿಂದಲೇ ಮೊದಲ್ಗೊಳ್ಳಲಿ, ಆ ಮೂಲಕ ಶ್ರೇಷ್ಠ ಸಮಾಜದ ಶ್ರೇಷ್ಠ ವಾರಸುದಾರರಾಗೋಣ.
✍️ಶ್ರೀಲಕ್ಷ್ಮೀ ಮಠದಮೂಲೆ,
ಮಂಗಳೂರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.