ಆಯುರ್ವೇದದಲ್ಲಿ ಬೃಂಗರಾಜ, ಕೇಶ ರಾಜ ಹಾಗೂ ಕನ್ನಡದಲ್ಲಿ ಗರಗ ಎಂದು ಜನಜನಿತ. Eclipta alba ಇದರ ಸಸ್ಯಶಾಸ್ತ್ರೀಯ ಹೆಸರು.
ನಸು ಕಂದು ವರ್ಣದ, ಸಿಲಿಂಡರ್ ಆಕಾರದ, ತೆಳ್ಳಗಿನ ಕಾಂಡವನ್ನು ಇದು ಹೊಂದಿರುತ್ತದೆ. ಬಿಳಿ ಬಣ್ಣದ ಸಣ್ಣಗಾತ್ರದ ಹೂವುಗಳು, ಈ ಗಿಡವನ್ನು ದೂರದಿಂದಲೇ ಗುರುತಿಸುವಂತೆ ಮಾಡುತ್ತದೆ. ಒಟ್ಟಿನಲ್ಲಿ ಇದರ ಎಲೆ, ಹೂವು, ಕಾಂಡಗಳನ್ನು ನೋಡಿ ಈ ಗಿಡವನ್ನು ಸ್ಪಷ್ಟವಾಗಿ ಗುರುತಿಸಬಹುದು.
ಆಯುರ್ವೇದದ ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ ಇದರ ಗುಣಗಳನ್ನು ಉಲ್ಲೇಖಿಸಿದ್ದಾರೆ. ಇದು ಕಫ ಹಾಗೂ ವಾತದೋಷ ಶಾಮಕ ವಾಗಿದೆ. ಕೂದಲುಗಳ ಬೆಳವಣಿಗೆಗೆ ಹಾಗೂ ಬಣ್ಣಕ್ಕೆ, ಚರ್ಮದ ಕಾಂತಿಗೆ, ಕ್ರಿಮಿ ಬಾಧೆಗೆ,ಶ್ವಾಸ ಇತ್ಯಾದಿ ಉಸಿರಾಟದ ತೊಂದರೆಗೆ, ಕೆಮ್ಮು, ಬಾವು ಇತ್ಯಾದಿ ತೊಂದರೆಗಳಲ್ಲಿ ಬಹು ಉಪಯೋಗಿಯಾಗಿದೆ. ಚರ್ಮರೋಗಗಳಲ್ಲಿ, ಕಣ್ಣು ಹಾಗೂ ತಲೆಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ವಿಶೇಷವಾಗಿ ಬಳಸಬಹುದು.
ಇದರಲ್ಲಿ Ecliptine ಎಂಬ alkaloid ಪ್ರಮುಖ ಕಾರ್ಯಕಾರಿ ಅಂಶವಾಗಿದೆ. ಬೇರು ಮತ್ತು ಎಲೆಗಳನ್ನು ಸಾಮಾನ್ಯವಾಗಿ ಔಷಧಿಯಲ್ಲಿ ಬಳಸುತ್ತೇವೆ. ಕಾಣುವುದಕ್ಕೆ ಇದೊಂದು ಸಣ್ಣ ಜಾತಿಯ ಗಿಡ. ಬೃಂಗರಾಜ ಎನ್ನುವ ಹೆಸರಿಗೆ ತಕ್ಕಂತೆ, ಲಿವರ್ ಮತ್ತು ಪಿತ್ತಕೋಶದ ಕಾಯಿಲೆಗಳಲ್ಲಿ ಇದಕ್ಕೆ ರಾಜಮರ್ಯಾದೆ ಇದೆ.
1.ಕಾಮಲಾ ಅಥವಾ ಜಾಂಡಿಸ್ ಕಾಯಿಲೆಯಲ್ಲಿ ಇದರ 20 ಗ್ರಾಂನಷ್ಟು ಎಲೆಗಳನ್ನು, ಸಾಮಾನ್ಯ ಏಳು ಕರಿಮೆಣಸು ಗಳೊಂದಿಗೆ ಮಿಶ್ರ ಮಾಡಿ ಅರೆದು, ನಂತರ ಮಜ್ಜಿಗೆಯೊಂದಿಗೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು.
2.ಎರಡರಿಂದ ಮೂರು ಬಿಂದುಗಳಷ್ಟು ಇದರ ಎಲೆಗಳ ತಾಜಾ ರಸವನ್ನು 8 ಬಿಂದುಗಳ ಅಷ್ಟು ಜೇನಿನೊಂದಿಗೆ ಮಿಶ್ರ ಮಾಡಿಕೊಟ್ಟಲ್ಲಿ ಶಿಶುಗಳ ಸಾಮಾನ್ಯ ಶೀತದ ತೊಂದರೆಯಲ್ಲಿ ಪ್ರಯೋಜನಕಾರಿ.
3.ಇಡೀ ಸಸ್ಯವನ್ನು ಜಜ್ಜಿ ರಸತೆಗೆದು ಸೇವಿಸಿದಲ್ಲಿ ಸೂಕ್ಷ್ಮಾಣು ನಾಶಕ ಹಾಗೂ ಬಲ ನೀಡುವ ಟಾನಿಕ್ ನಂತೆ ಕಾರ್ಯ ನಿರ್ವಹಿಸುತ್ತದೆ. ಆಯುರ್ವೇದದ ಪರಿಭಾಷೆಯಲ್ಲಿ ಹೇಳುವುದಾದರೆ ಬಂದ ರೋಗವನ್ನು ಗುಣಪಡಿಸುವ, ಮುಂದೆ ಬರುವ ರೋಗಗಳನ್ನು ತಡೆಗಟ್ಟುವ ರಸಾಯನ ಔಷಧ.
4.ಇದರ ಎಲೆಗಳನ್ನು ಮಜ್ಜಿಗೆ ಹಾಗೂ ತೆಂಗಿನಕಾಯಿಯ ತುರಿ ಸೇರಿಸಿ, ಗ್ರೈಂಡರ್ ನಲ್ಲಿ ಹಾಕಿ ತಿರುವಿದಲ್ಲಿ, ಆಗ ಅದನ್ನು ಆಹಾರದ ಜೊತೆಗೆ ಸೇವಿಸಬಹುದು. ರುಚಿಗೆ ಸ್ವಲ್ಪ ಉಪ್ಪು, ಮತ್ತು ಮೆಣಸನ್ನು ಸೇರಿಸಬಹುದು. ಇದನ್ನು ದಕ್ಷಿಣ ಕನ್ನಡದ ಹಾಗೂ ಉತ್ತರ ಕನ್ನಡ ಭಾಗದಲ್ಲಿ ತಂಬುಳಿ ಎಂದು ಕರೆಯುತ್ತಾರೆ.
ಅಧ್ಯಯನಗಳ ಪ್ರಕಾರ ಇದಕ್ಕೆ ರಕ್ತದಲ್ಲಿನ ಸಕ್ಕರೆ(blood sugar, Diabetes)ಹಾಗೂ ರಕ್ತದೊತ್ತಡವನ್ನು (blood pressure)ನಿಯಂತ್ರಿಸುವ ಗುಣವಿದೆ. ನೋವನ್ನು ಶಮನಗೊಳಿಸುವ(analgesic) , ಮೂತ್ರದ ಪ್ರಮಾಣವನ್ನು ಹೆಚ್ಚಿಸುವ(diuretic), ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ (immune booster) ಪ್ರಭಾವವಿದೆ.
ಇಂದಿನ ಸ್ಥಿತಿಯಲ್ಲಿ ಎಲ್ಲರಿಗೂ ಚಿರಪರಿಚಿತವಾದ ವೈರಸ್ ರೋಗಾಣುಗಳ ವಿರುದ್ಧ ಕೆಲಸ ಮಾಡುವ(antiviral) ಗುಣ ಇದೆ.
Salmonella typhimurium ಹಾಗೂ Staphylococcus epidermis ಎಂಬ ರೋಗಾಣು ಬ್ಯಾಕ್ಟೀರಿಯಾಗಳ ವಿರುದ್ಧ ಇದು ಕೆಲಸ ಮಾಡುತ್ತದೆ.
Candida albicans ಎನ್ನುವ ರೋಗಕಾರಕ ಶಿಲೀಂದ್ರ(fungus) ಗಳ ವಿರುದ್ಧ ಇದು ಕೆಲಸ ಮಾಡುವುದರಿಂದ antifungal, ಅಂದರೆ ಶಿಲೀಂದ್ರನಾಶಕ ಗುಣವಿದೆ.
antioxidant, ಅಂದರೆ ಕೋಶಗಳನ್ನು ಹಾನಿಗೊಳಿಸುವ ಕಣಗಳನ್ನು ತಟಸ್ಥ ಗೊಳಿಸುವುದರ ಮೂಲಕ ಕೋಶಗಳನ್ನು ಕಾಪಾಡುವ ಗುಣ ಹೊಂದಿದೆ.
anticancer, ಅಂದರೆ ಕೋಶಗಳು ವಿಕೃತವಾಗಿ ಬೆಳೆಯುವಂತಹ, ವೈದ್ಯ ಜಗತ್ತಿಗೆ ಎಂದೆಂದಿಗೂ ಸವಾಲಾಗಿ ನಿಂತಿರುವ ಕ್ಯಾನ್ಸರ್ ಎಂಬ ಮಹಾ ಮಾರಿಯನ್ನು ತಡೆಗಟ್ಟಬಹುದಾದ ಸಾಮರ್ಥ್ಯ ಇದಕ್ಕೆ ಇದೆ.
ರಕ್ತದಲ್ಲಿನ ಹಾನಿಕಾರಕವಾದ ಕೊಬ್ಬನ್ನು ಮಿತಿ ಮೀರದಂತೆ ತಡೆಯುವ Hypolipedimic ಪ್ರಭಾವವನ್ನು ಸಹ ಇದು ಪ್ರದರ್ಶಿಸುತ್ತದೆ.
✍️ ಡಾ. ಆರ್.ಪಿ.ಬಂಗಾರಡ್ಕ. M. S. (Ayu)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.