ಕಷ್ಟವನ್ನು ಅನುಭವಿಸಿದವರಿಗೆ ಮಾತ್ರ ಕಷ್ಟದ ನೋವಿನ ಅರಿವಿರುತ್ತದೆ. ಜೀವನದಲ್ಲಿ ಬರೀ ಸುಖವನ್ನೇ ಕಂಡವ ಸಂಕಷ್ಟದಲ್ಲಿರುವವರ ವೇದನೆಯನ್ನು ಅರ್ಥೈಸಿಕೊಳ್ಳಲು ವಿಫಲನಾಗುತ್ತಾನೆ. ತನ್ನಂತೆಯೇ ನೋವುಂಡವರನ್ನು ಕಂಡು ಹೃದಯ ಕಲುಕಿದಾಗ ವ್ಯಕ್ತಿ ಎಂತಹ ತ್ಯಾಗವನ್ನೂ ಮಾಡಲು ಸಿದ್ಧನಾಗುತ್ತಾನೆ. ಅದಕ್ಕೆ ಉದಾಹರಣೆಯೇ ಮಮತೆಯ ಸೆಲೆಯಾಗಿರುವ, ಸಾವಿರಾರು ಅನಾಥರ ಬಾಳಿನ ಬೆಳಕಾಗಿರುವ ಸಿಂಧೂತಾಯಿ.
ಭಿಕ್ಷೆ ಬೇಡಿ ಅನೇಕ ಅನಾಥ ಮಕ್ಕಳನ್ನು ಪೋಷಿಸಿದ ಮಹಾ ತಾಯಿ ಸಿಂಧುತಾಯ್ ಸಪ್ಕಲ್ ಅವರ ಯಶೋಗಾಥೆ ಎಂತವರನ್ನೂ ಒಂದು ಕ್ಷಣ ಭಾವುಕರನ್ನಾಗಿಸುತ್ತದೆ. ಹಸಿದವನಿಗೆ ಮಾತ್ರ ಹಸಿವಿನ ವೇದನೆ ಗೊತ್ತು ಎಂಬಂತೆ ತನ್ನಂತೆಯೇ ಅನಾಥರಾಗಿರುವವರ ಜೀವನ ಬೆಳಗಲು ಈಕೆ ತನ್ನ ಜೀವನವನ್ನು ಮುಡುಪಾಗಿಟ್ಟವರು.
14 ನವೆಂಬರ್ 1948ರಲ್ಲಿ ಮಹಾರಾಷ್ಟ್ರದ ಪಿಂಪ್ರಿ ಮೆಘೆ ಹಳ್ಳಿಯಲ್ಲಿ ಜನಿಸಿದ ಸಿಂಧು ತಾಯಿ ನಾಲ್ಕನೇ ತರಗತಿಯವರೆಗೆ ವಿದ್ಯೆ ಕಲಿತಿದ್ದಾರೆ. ಇವರ ಕುಟುಂಬ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡದ ಹಿನ್ನಲೆಯಲ್ಲಿ ಎಲೆ ಮತ್ತು ಮರಳಿನ ಮೇಲೆ ಇವರು ಅಕ್ಷರಭ್ಯಾಸ ಕಲಿತರು. ಬಳಿಕ 10ನೇ ವಯಸ್ಸಿಗೆ ಮದುವೆಯಾದ ಸಿಂಧುತಾಯಿ ಶಿಕ್ಷಣ ಅರ್ಧಕ್ಕೆ ನಿಂತು ಹೋಯಿತು. ಬಳಿಕ 20ನೇ ವಯಸ್ಸಿನಲ್ಲಿ 9 ತಿಂಗಳ ಗರ್ಭಿಣಿಯಾಗಿದ್ದಾಗಳೇ ಕ್ರೂರಿ ಗಂಡನಿಂದ ಮನೆಯಿಂದ ಹೊರದೂಡಲ್ಪಟ್ಟರು. ಅಲ್ಲಿಂದ ಹಲವಾರು ಕಿಲೋ ಮೀಟರ್ ನಡೆದು ತವರು ಮನೆಗೆ ಹೋದರೂ ಅಲ್ಲೂ ಅವರಿಗೆ ನೆಲೆ ಸಿಗಲಿಲ್ಲ. ಕೊನೆಗೆ ದನದ ಕೊಟ್ಟಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತರು.
ಈ ಎಲ್ಲಾ ಕಷ್ಟವನ್ನು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದರಾದರೂ ತನ್ನ ಮಗುವಿಗಾಗಿ ಬದುಕುವ ದೃಢ ನಿರ್ಧಾರ ಕೈಗೊಂಡರು. ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡಿ ಜೀವನ ದೂಡಿದರು. ಹಸಿದವರ ವೇದನೆಯ ಅರಿವಿದ್ದ ಇವರು ಭಿಕ್ಷೆ ಬೇಡಿ ತನ್ನ ಬದುಕನ್ನು ಮಾತ್ರ ಸಾಗಿಸಲಿಲ್ಲ, ಇತರ ಅನಾಥರ ಬಾಳು ಬೆಳಗಿಸುವ ಕಾರ್ಯಕ್ಕೆ ಮುಂದಾದರು. ಭಿಕ್ಷೆ ಬೇಡಿ ಬಂದ ಹಣದಿಂದಲೇ ಅನೇಕ ಅನಾಥ ಮಕ್ಕಳನ್ನು ಪೋಷಿಸಿದರು. ಅನಾಥರನ್ನು ಪೋಷಿಸಲೆಂದೇ ಹೆಚ್ಚು ಹೆಚ್ಚು ಸಮಯಗಳ ಕಾಲ ಭಿಕ್ಷೆ ಬೇಡಿದರು. ಹಲವಾರು ಮಕ್ಕಳನ್ನು ದತ್ತು ಪಡೆದರು. ಈ ಮೂಲಕ ಅನಾಥ ಮಕ್ಕಳ ತಾಯಿ ಎಂದೇ ಕರೆಯಲ್ಪಟ್ಟರು. ಇದುವರೆಗೆ ಅವರು ದತ್ತು ಪಡೆದ ಮಕ್ಕಳ ಸಂಖ್ಯೆ 1400.
ಅನಾಥ ದತ್ತು ಮಕ್ಕಳಿಗೆ ಉತ್ತಮ ಶಿಕ್ಷಣ, ಜೀವನವನ್ನು ಕಲ್ಪಿಸಿರುವ ಸಿಂಧುತಾಯಿ.ತನ್ನ ಸ್ವಂತ ಮಗಳು ಮತ್ತು ತನ್ನ ಸಾಕು ಮಕ್ಕಳ ಬಗ್ಗೆ ತನಗೆ ಭೇದಭಾವ ಮೂಡಬಾರದು ಎಂಬ ಕಾರಣಕ್ಕೆ ತನ್ನ ಮಗಳನ್ನು ಅನಾಥಾಶ್ರಮವೊಂದಕ್ಕೆ ನೀಡಿದರು. ಈಗ ಅವರ ಮಗಳು ಕೂಡ ಅನಾಥಾಶ್ರಮವೊಂದನ್ನು ನಡೆಸುತ್ತಿದ್ದಾರೆ. ಅವರ ದತ್ತು ಮಕ್ಕಳಲ್ಲಿ ಅನೇಕರು ಈಗ ವಕೀಲರು, ವೈದ್ಯರಾಗಿದ್ದಾರೆ. ಅವರೆಲ್ಲರಿಗೂ ಇವರು ಮುದ್ದಿನ ಮಾಯಿ (ತಾಯಿ) ಆಗಿದ್ದರು.
ಸಿಂಧು ತಾಯಿ ಕಾರ್ಯಕ್ಕೆ 500ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ, ಅನಾಥರಿಗಾಗಿ 15ಕ್ಕೂ ಹೆಚ್ಚು ಸಂಸ್ಥೆಗಳನ್ನು ಅವರು ನಡೆಸುತ್ತಾ ಬಂದರು. ವಿವಿಧ ಕಾರ್ಯಕ್ರಮಗಳಿಗೆ ಭಾಷಣ ಮಾಡಲು ಹೋಗುವ ಅವರು ಅಲ್ಲಿ ಸಿಕ್ಕ ಹಣವನ್ನು ಅನಾಥರ ಉದ್ಧಾರಕ್ಕಾಗಿ ಬಳಕೆ ಮಾಡುತ್ತಿದ್ದರು. ಅವರ ಕಾರ್ಯಕ್ಕೆ ಈಗ ನೂರಾರು ಮಂದಿ ಕೈಜೋಡಿಸಿದ್ದಾರೆ.
ಒಂದು ಕಾಲದಲ್ಲಿ ಅವರನ್ನು ಮನೆಯಿಂದ ಹೊರಹಾಕಿದ್ದ ಅವರ ಗಂಡ ಕೂಡ ಅವರ ಬಳಿ ವಾಪಾಸ್ಸಾಗಿ ಕ್ಷಮೆಯಾಚಿಸಿದ. ಮಮತಾಮಯಿ ಮಾಯಿಯಾಗಿರುವ ಸಿಂಧುತಾಯಿ ಆತನ ತಪ್ಪನ್ನು ಕ್ಷಮಿಸಿ ತನ್ನ ಬಳಿಯೇ ಆತನನ್ನು ಇರಿಸಿಕೊಂಡು ನೋಡಿಕೊಳ್ಳುತ್ತಿದ್ದರು. ನನಗಿರುವ ಸಾವಿರಾರು ಮಕ್ಕಳಲ್ಲಿ ಈತನೂ ಒಬ್ಬ ಎಂದು ಅವರು ಹೇಳಿಕೊಳ್ಳುತ್ತಿದ್ದರು.
ಸಿಂಧುತಾಯಿಯ ಈ ಕಾರ್ಯಕ್ಕೆ ದೊರೆತ ಶ್ಲಾಘನೆ, ಪ್ರಶಂಸೆಗಳು ಹಲವಾರು. ಅವರ ಜೀವನದ ಯಶೋಗಾಥೆ ಮರಾಠಿ ಸಿನಿಮಾವಾಗಿದೆ. ಇತರರಿಗೆ ಸ್ಫೂರ್ತಿಯ ಸೆಲೆಯಾಗಿರುವ ಮಮತಾಮಯಿ ಮಾಯಿ ಮಂಗಳವಾರ ಪುಣೆಯಲ್ಲಿ ನಿಧನರಾಗಿದ್ದಾರೆ. ಅವರ ಅಗಲುವಿಕೆಯಿಂದ ಅನಾಥರ ಲೋಕ ಮತ್ತಷ್ಟು ಅನಾಥವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.