ಈ ಭೂಮಿಯ ಪ್ರತಿಯೊಂದು ಜೀವಿಯೂ ಪ್ರಕೃತಿಯನ್ನು ತನ್ನ ಮನೆಯೆಂದು ಭಾವಿಸಿದೆ. ಆದರೆ ಬುದ್ಧಜೀವಿ ಮನುಷ್ಯ ಮಾತ್ರ ಪ್ರಕೃತಿಯನ್ನು ಉಳಿಸುವುದಕ್ಕಿಂತ ಹೆಚ್ಚಾಗಿ ನಾಶ ಮಾಡುವ ಕಾಯಕದಲ್ಲೇ ಮಗ್ನನಾಗಿದ್ದಾನೆ. ಆದರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ, ಎರಡಲ್ಲ ಬರೋಬ್ಬರಿ 1 ಕೋಟಿ ಮರಗಳನ್ನು ನೆಟ್ಟು ನಿಜವಾದ ಪ್ರಕೃತಿ ಪುತ್ರ ಎನಿಸಿಕೊಂಡಿದ್ದಾರೆ.
ಪ್ರಕೃತಿಯೇ ದೇವರು, ದೇವರೇ ಪ್ರಕೃತಿ ಎಂಬ ತತ್ವದಲ್ಲಿ ಬದುಕುತ್ತಿರುವ ತೆಲಂಗಾಣ ಖಮ್ಮಮ್ ಜಿಲ್ಲೆಯ ದಾರಿಪಲ್ಲಿ ರಾಮಯ್ಯನವರು ‘ಚೆಟ್ಲಾ ರಾಮಯ್ಯ’ ಎಂದೇ ಪ್ರಸಿದ್ಧಿ ಪಡೆದವರು, ತೆಲುಗಿನಲ್ಲಿ ಚೆಟ್ಲಾ ಎಂದರೆ ಮರ ಎಂದರ್ಥ.
ತನ್ನ ತಾಯಿ ಮುಂದಿನ ಮುಂಗಾರಿಗೆ ಹಾಕಲೆಂದು ವಿವಿಧ ಜಾತಿಯ ಗಿಡಗಳ ಬೀಜಗಳನ್ನು ಸಂಗ್ರಹಿಸಿಡುತ್ತಿದ್ದುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಾಮಯ್ಯನವರಿಗೆ ಅದು ಒಂದು ದೊಡ್ಡ ಪಾಠವಾಯಿತು. ತಾಯಿಯಂತೆ ಅವರೂ ಬೀಜಗಳನ್ನು ಸಂಗ್ರಹಿಸಿ ಅದನ್ನು ಸರಿಯಾದ ಸಮಯದಲ್ಲಿ ಬಿತ್ತನೆ ಮಾಡಿ ಗಿಡ ಬೆಳೆದು ಮರವಾಗುವಂತೆ ಮಾಡುವ ಕಾಯಕ ಆರಂಭಿಸಿದರು. ಇದೀಗ ಇಳಿ ವಯಸ್ಸಿನಲ್ಲೂ ಅವರು ತಮ್ಮ ಕಾಯಕವನ್ನು ಆಸಕ್ತಿಯಿಂದ ಮಾಡುತ್ತಿದ್ದಾರೆ. ಆದರೆ ಅವರ ಈ ಕಾಯಕಕ್ಕೆ ಯಾರೂ ಅವರಿಗೆ ಹಣ ನೀಡುವುದಿಲ್ಲ. ಇದು ಪ್ರಕೃತಿ ಮಾತೆಯ ರಕ್ಷಣೆಗಾಗಿ ಅವರು ಮಾಡುತ್ತಿರುವ ಅಳಿಲ ಸೇವೆ.
ಬೀಜಗಳನ್ನು ಹಿಡಿದುಕೊಂಡು ಸೈಕಲ್ ಮೂಲಕ ಸವಾರಿ ನಡೆಸುವ ಅವರು ಖಾಲಿ ಜಾಗವಿದ್ದಲ್ಲಿ ಬಿತ್ತನೆ ಮಾಡುತ್ತಾರೆ. ಆ ಸ್ಥಳ ಮುಂದೊಂದು ದಿನ ಹಸಿರಾಗಲಿ ಎಂಬ ಆಶಯ ಅವರದ್ದು. ಅಷ್ಟೇ ಅಲ್ಲದೇ ಹತ್ತು ಹಲವಾರು ಗಿಡಗಳ ಬೀಜ ಸಂಗ್ರಹಿಸಿ ಅದನ್ನು ಗಿಡವಾಗಿ ಮಾರ್ಪಾಟು ಮಾಡಿ ಬಳಿಕ ಅದನ್ನು ನೆಡುವವರಿಗೆ ನೀಡುತ್ತಾರೆ. ಅಲ್ಲದೇ ಲೈಬ್ರರಿಯ ಆವರಣದಲ್ಲಿ, ದೇಗುಲಗಳ ಆವರಣದಲ್ಲಿ ಹೀಗೆ ಮರ ಬೆಳೆಯಲು ಅನೂಕೂಲವಿರುವ ಸ್ಥಳಗಳಲ್ಲಿ ಹೋಗಿ ಗಿಡ ನೆಡುತ್ತಾರೆ. ಅವುಗಳು ದೊಡ್ಡದಾಗುವವರೆಗೂ ಅವುಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಇದುವರೆಗೆ ಅವರು ನೆಟ್ಟ ಒಟ್ಟು ಮರಗಳ ಸಂಖ್ಯೆ 1 ಕೋಟಿ
ರಾಮಯ್ಯ ಪಂಡಿತ, ವಿದ್ವಾಂಸರಲ್ಲ, ಅಷ್ಟೊಂದು ವಿದ್ಯಾಭ್ಯಾಸವೂ ಅವರಿಗಿಲ್ಲ. ಆದರೆ ಪ್ರತಿ ಮರದ ಇತಿಹಾಸ, ಪ್ರಮುಖ್ಯತೆ ಅವರಿಗೆ ಗೊತ್ತಿದೆ. ಪ್ರಕೃತಿಯನ್ನು ರಕ್ಷಿಸಿ, ಮರ ಬೆಳೆಸಿ ಎಂಬಿತ್ಯಾದಿ ಸಂದೇಶಗಳುಳ್ಳ ರಟ್ಟಿನ ಕಿರೀಟ ಧರಿಸಿ, ಕುತ್ತಿಗೆಗೂ ಹಸಿರಿನ ಶಾಲು ಹೊದ್ದು ಸೈಕಲ್ ಸವಾರಿ ಮಾಡಿ ಸದಾ ಜನರಲ್ಲಿ ಪ್ರಕೃತಿ ರಕ್ಷಣೆಯ ಜಾಗೃತಿಯನ್ನು ಇವರು ಮೂಡಿಸುತ್ತಾರೆ. ಅವರ ಸಾಧನೆಗೆ ಹಲವಾರು ಪ್ರಶಂಸೆಗಳು, ಪ್ರಶಸ್ತಿಗಳು ದೊರೆತಿವೆ.
‘ವಿಕಾಸದ ರಹಸ್ಯವೇ ಬೀಜ. ದೇವರು ಅದಕ್ಕೆ ಜೀವನ ನೀಡಿದ್ದಾನೆ, ಅದನ್ನು ಮಣ್ಣಿಗೆ ಹಾಕಿದಾಗ ಅದು ಗಿಡವೊಂದಕ್ಕೆ ಹುಟ್ಟು ನೀಡುವ ಮೂಲಕ ತನ್ನ ಅಸ್ತಿತ್ವವನ್ನು ದೃಢಪಡಿಸುತ್ತದೆ. ತನ್ನ ಸುತ್ತ ತನ್ನನ್ನು ಕಡಿಯುವವರೇ ಇದ್ದರೂ ಅವರನ್ನು ರಕ್ಷಿಸಲು ಸ್ಥಾವರದಂತೆ ಮರ ನಿಲ್ಲುತ್ತದೆ. ತನ್ನ ಪೀಳಿಗೆ ಬೆಳೆಯಲಿ ಎಂದು ಭೂಮಿಗೆ ಬೀಜಗಳನ್ನು ಸುರಿಯುತ್ತದೆ, ತನ್ನ ಸುಕಾರ್ಯವನ್ನು ಮುಂದುವರೆಸುತ್ತದೆ ಎಂದು ರಾಮಯ್ಯ’ ಹೇಳುತ್ತಾರೆ.
ಮಕ್ಕಳಿಗೆ ಹಣ್ಣನ್ನು ನೀಡುವ ಬದಲು ಗಿಡವನ್ನು ನೀಡಿ. ಅದನ್ನು ನೆಟ್ಟು ತಮಗೆ ಬೇಕಾದ ಹಣ್ಣನ್ನು ಅವರು ಪಡೆದುಕೊಳ್ಳಲಿ ಎನ್ನುವ ರಾಮಯ್ಯ, ನಿಜಕ್ಕೂ ಪ್ರಕೃತಿ ಮಾತೆಯ ಅನರ್ಘ್ಯ ರತ್ನ. ಪ್ರಕೃತಿಯ ರಕ್ಷಣೆಗೆ ಅವರು ನಡೆಸುತ್ತಿರುವ ಈ ಮೌನ ಅಭಿಯಾನ ಎಲ್ಲರಿಗೂ ಪ್ರೇರಕವಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.