ಭಾರತದ ಹಾಕಿ ಆಟಗಾರರಲ್ಲಿ ಅತ್ಯುತ್ತಮ ಹಾಗೂ ಹೆಸರಾಂತ ಆಟಗಾರ ಧ್ಯಾನ್ಚಂದ್. 1905ರ ಆಗಸ್ಟ್ 29ರಂದು ಉತ್ತರ ಪ್ರದೇಶದ ಅಲ್ಲಾಹಾಬಾದ್ನ ಪ್ರಯಾಗನಲ್ಲಿ ಬೈಸ್ ರಾಜಪುತ ಕುಟುಂಬದಲ್ಲಿ ಜನಿಸಿದ್ದರು. ಇವರ ತಂದೆ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಜೊತೆಗೆ ಹಾಕಿ ಆಡುತ್ತಿದ್ದವರು. ಅವರ ಮೂಲ ಹೆಸರು ಧ್ಯಾನ್ ಸಿಂಗ್.
ಕುಸ್ತಿ ಆಟವನ್ನೇ ಹೆಚ್ಚು ಇಷ್ಟಪಡುತ್ತಿದ್ದ ಧ್ಯಾನ್ ಚಂದ್, ತಮ್ಮ ಬಾಲ್ಯದಲ್ಲಿ ಸ್ನೇಹಿತರ ಜೊತೆ ಹಳೆಯ ಬಟ್ಟೆಗಳ ಸಹಾಯದಿಂದ ತಾವೇ ತಯಾರಿಸಿದ ಹಾಕಿ ಬೆತ್ತದಿಂದ ಹಾಕಿ ಆಟ ಆಡುತ್ತಿದ್ದರು. ಸ್ಥಳೀಯವಾಗಿ ಸೇನಾ ವತಿಯಿಂದ ಆಡಲಾಗುತ್ತಿದ್ದ ಹಾಕಿ ಪಂದ್ಯವೊಂದನ್ನು ತನ್ನ ತಂದೆಯ ಜೊತೆ ವೀಕ್ಷಿಸುತ್ತದ್ದ ಧ್ಯಾನ್ಚಂದ್ ಸೋಲಿಗೆ ಸಿಲುಕಿದ್ದ ತಂಡದ ಪರವಾಗಿ ತಾನು ಆಡುವುದಾಗಿ ತಂದೆಯ ಬಳಿ ಮನವಿ ಮಾಡಿಕೊಂಡರು. ತಂದೆಯ ಒಪ್ಪಿಗೆ ಸಿಗುತ್ತಲೇ ಮೈದಾನಕ್ಕಿಳಿದ ಅವರು ಆ ಪಂದ್ಯದಲ್ಲಿ ೪ ಗೋಲು ಬಾರಿಸಿದರು. ಧ್ಯಾನ್ ಅವರ ಈ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಭಾರತೀಯ ಸೇನೆಯ ಮುಖ್ಯಸ್ಥ, ೧೯೨೨ರಲ್ಲಿ ಅವರ 16ನೇ ವಯಸ್ಸಿನಲ್ಲಿ ಪಂಜಾಬ್ ರೆಜಿಮೆಂಟ್ನಲ್ಲಿ ಸಿಪಾಯಿಯಾಗಿ ನೇಮಿಸಿದರು. ಸುಬೇದಾರ್ ಮೇಜರ್ ಭೋಲೆ ತಿವಾರಿ ಮಾರ್ಗದರ್ಶನದಲ್ಲಿ ಧ್ಯಾನ್ ಹಾಕಿ ತರಬೇತಿ ಪಡೆದರು.
1926ರಲ್ಲಿ ನ್ಯೂಜಿಲೆಂಡ್ ಪ್ರವಾಸದ ಮೂಲಕ ಭಾರತೀಯ ಹಾಕಿಗೆ ಪದಾರ್ಪಣೆಗೈದರು. 1928ರ ಆಮ್ಸ್ಟರ್ಡ್ಯಾಮ್ ಒಲಿಂಪಿಕ್ಸ್, 1932ರ ಲಾಸ್ ಎಮಂಜಲೀಸ್ ಒಲಿಂಪಿಕ್ಸ್, 1936೬ರ ಬರ್ಲಿನ್ ಒಲಿಂಪಿಕ್ಸ್ನಲ್ಲಿ 3 ಬಾರಿ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. 1936ರ ಬರ್ಲಿನ್ ಒಲಿಂಪಿಕ್ಸ್ಗೆ ಭಾರತ ತಂಡದ ಕಪ್ತಾನರಾಗಿದ್ದರು. ಧ್ಯಾನ್ಚಂದ್ ಆಡಿರುವ ಒಲಿಂಪಿಕ್ಸ್ ಪಂದ್ಯಗಳಲ್ಲಿ 101 ಗೋಲು, ಇನ್ನಿತರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 300 ಗೋಲುಗಳನ್ನು ಗಳಿಸಿದ್ದಾರೆ. ಅವರು ಒಟ್ಟಾರೆ 1000ಕ್ಕೂ ಅಧಿಕ ಗೋಲುಗಳನ್ನು ಬಾರಿಸಿದ್ದಾರೆ. ಅವರ ಅಭೂತಪೂರ್ವ ಸಾಧನೆಗೆ ಭಾರತ ಸರ್ಕಾರ 1956ರಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಧ್ಯಾನ್ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ.
1934ರಲ್ಲಿ ಭಾರತ ತಂಡದ ಕಪ್ತಾನರಾದ ಧ್ಯಾನ್ಚಂದ್ ಅವರ ಬರ್ಲಿನ್ ಒಲಿಂಪಿಕ್ಸ್ನಲ್ಲಿಯ ಪ್ರದರ್ಶನದಿಂದ ಆಕರ್ಷಿತರಾದ ಹಿಟ್ಲರ್, ಅವರನ್ನು ಜರ್ಮನ್ ಸೇನೆಯ ಕರ್ನಲ್ ಆಗಿ ನೇಮಕ ಮಾಡುವ ಪ್ರಸ್ತಾಪವನ್ನೂ ಮಾಡಿದ್ದರು. ಆದರೆ ದೇಶಭಕ್ತ ಧ್ಯಾನ್ ಇದನ್ನು ತಿರಸ್ಕರಿಸಿದರು. ತನ್ನ ೪೩ನೇ ವಯಸ್ಸಿನಲ್ಲಿ 1947ರಲ್ಲಿ ಭಾರತ ತಂಡ ಪೂರ್ವ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ಈ ಸರಣಿಯಲ್ಲಿ ತಾನಾಡಿದ 21 ಪಂದ್ಯಗಳಿಂದ 61 ಗೋಲು ಗಳಿಸಿದ್ದರು. 25 ವರ್ಷಗಳ ಅದ್ಭುತ ಕ್ರೀಡಾ ಜೀವನಕ್ಕೆ ಅವರು 1949ರಲ್ಲಿ ವಿದಾಯ ಹಾಡಿದರು.
ಭಾರತೀಯ ಸೇನೆಯ ಸೈನ್ಯಾಧಿಕಾರಿ ಪದವಿಯಿಂದ ನಿವೃತ್ತಿ ಪಡೆದ ಧ್ಯಾನ್ಚಂದ್, ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ನಲ್ಲಿ ಹಾಕಿ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು. ಡಿ.3, 1979ರಲ್ಲಿ ಅವರು ನಿಧನರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.