ಕರ್ನಾಟಕ ಸರಕಾರ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೇವಾಸಿಂಧು ಮೂಲಕ ಜನರು ಮಾಡಿದ ಶಿಫಾರಸುಗಳನ್ನು ಪರಿಶೀಲಿಸಿದ ನಂತರ ಪ್ರಶಸ್ತಿ ಸಲಹಾ ಸಮಿತಿ ಮತ್ತು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದ 66 ಮಂದಿ ಸಾಧಕರ ಹೆಸರನ್ನು ಪ್ರಶಸ್ತಿಗೆ ಅಂತಿಮಗೊಳಿಸಿದೆ. ತೆರೆಮರೆಯಲ್ಲಿ ಯಾವುದೇ ಪ್ರಚಾರ ಬಯಸದೆ ತಮ್ಮಪಾಡಿಗೆ ನಿಸ್ವಾರ್ಥ ಸೇವೆಯಲ್ಲಿ ತೊಡಗಿಕೊಳ್ಳುತ್ತಾ ಸಾಧನೆ ಮಾಡಿದ ಸಾಧಕರ ಹೆಸರು ಪ್ರಶಸ್ತಿಗೆ ಆಯ್ಕೆಯಾಗಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ. ಪೌರಕಾರ್ಮಿಕ, ಸೂಲಗಿತ್ತಿ, ಸ್ಮಶಾನದ ಉದ್ಯೋಗಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆ ತಂದಿದೆ.
ಅಲೆಮಾರಿ ಸಮುದಾಯದ ಸೂಲಗಿತ್ತಿ ಯಮನವ್ವ, ಕಲಾವಿದ ದುರ್ಗಪ್ಪ ಚನ್ನದಾಸರ, ಬೆಂಗಳೂರಿನ ದೊಮ್ಮಲೂರು ಸ್ಮಶಾನದ ಉದ್ಯೋಗಿ ಮುನಿಯಪ್ಪ, ಯಾದಗಿರಿಯ ಪೌರಕಾರ್ಮಿಕ ಮಹಿಳೆ ರತ್ನಮ್ಮ ಶಿವಪ್ಪರವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ. ಮಾತ್ರವಲ್ಲದೆ, ಇನ್ನಷ್ಟು ಸಾಧಿಸಬೇಕು ಎಂಬ ತುಡಿತವನ್ನು ಕನ್ನಡಿಗರಲ್ಲಿ ಬಿತ್ತಿದೆ.
ಸುಮಾರು 50 ವರ್ಷಗಳಿಂದ ರಥ ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗಂಗಾವತಿಯ ವೆಂಕಣ್ಣ ಚಿತ್ರಗಾರ ಅವರ ಕೈಯಲ್ಲಿ ಸುಮಾರು ನೂರಕ್ಕೂ ಅಧಿಕ ರಥಗಳು ಅರಳಿವೆ. ಇವರು ನಿರ್ಮಿಸಿರುವ ರಥಗಳು ವಿಜಯನಗರ ಶೈಲಿಯ ವಾಸ್ತು ಪ್ರಕಾರ ಹೊಂದಿದೆ.ಇವರು ಪರಿಸರಸ್ನೇಹಿ ಮಣ್ಣಿನ ಮೂರ್ತಿ ಸೇರಿದಂತೆ ಹಲವಾರು ರೀತಿಯ ಕೆತ್ತನೆ ಕೆಲಸಗಳನ್ನು ಕೂಡ ಇವರು ಮಾಡುತ್ತಿದ್ದಾರೆ. ಇವರ ಅನನ್ಯ ಕಲೆಯನ್ನು ಗುರುತಿಸಿ ಕರ್ನಾಟಕ ಸರಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನಿಸುತ್ತಿದೆ.
ಕನ್ನಡನಾಡಿನ ಸಾಂಪ್ರದಾಯಿಕ ಶಿಲ್ಪಗಳ ಮೂಲ ಬೇರನ್ನು ಕಂಡುಕೊಂಡು ಇಂದಿನ ತಲೆಮಾರಿನ ಆಸಕ್ತ ಶಿಲ್ಪ ವಿದ್ಯಾರ್ಥಿಗಳಿಗೆ ಬೋಧಿಸಿ ಆ ಮೂಲಕ ಸಂಪ್ರದಾಯಿಕ ಶಿಲ್ಪಕ್ಕೆ ಹೊಸ ಆಯಾಮವನ್ನು ಕಲ್ಪಿಸುವ ಕೆಲಸವನ್ನು ಮಾಡುತ್ತಿರುವ, ಕನ್ನಡದಲ್ಲಿ ಶಿಲ್ಪಶಾಸ್ತ್ರವನ್ನು ರಚಿಸುತ್ತಿರುವ ಸ್ಥಪತಿ ಡಾ.ಜಿ. ಜ್ಞಾನಾನಂದ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನಲ್ಲಿ ಸಾವಿರಾರು ಅನಾಥ ಶವಗಳ ಅಂತ್ಯಕ್ರಿಯೆಯನ್ನು ನೆರವೇರಿಸಿದ ಮಹಾನ್ ಕಾಯಕಯೋಗಿ ಮುನಿಯಪ್ಪ ದೊಮ್ಮಲೂರ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ನಿಜವಾದ ಅರ್ಥದಲ್ಲಿ ಪ್ರಶಸ್ತಿಗೆ ಸಂದ ಗೌರವವಾಗಿದೆ.
ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಯಾವುದೇ ಪ್ರಚಾರವನ್ನು ಪಡೆದುಕೊಳ್ಳದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಸಮಾಜದಲ್ಲಿ ಪರಿವರ್ತನೆಯನ್ನು ತರಲು ಶ್ರಮಿಸಿದ ನಿಜವಾದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಪ್ರಶಸ್ತಿಗೇ ಪ್ರಶಸ್ತಿ ಲಭಿಸಿದಂತೆ ಎಂದರೆ ಅತಿಶಯೋಕ್ತಿಯಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.