ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದು ಇಂದಿಗೆ ಎರಡು ವರ್ಷ. ಸಾಲು ಸಾಲು ಸವಾಲುಗಳ ನಡುವೆಯೂ, ಸಮರ್ಥವಾಗಿ ಜನಸ್ನೇಹಿ ಆಡಳಿತ ನೀಡಿ, ರಾಜ್ಯವನ್ನು ಸರಿಯಾದ ದಾರಿಯಲ್ಲಿ, ಸರಿಯಾದ ರೀತಿಯಲ್ಲಿ ಮುನ್ನಡೆಸಿದ ಕೀರ್ತಿ ಬಿಎಸ್ವೈ ಸರ್ಕಾರದ್ದು ಎಂದರೆ ತಪ್ಪಲ್ಲ.
ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸಲು ಆರಂಭಿಸಿದ ಕೆಲವೇ ದಿನಗಳಲ್ಲಿ ಪ್ರವಾಹ, ಜಾಗತಿಕ ಮಹಾಮಾರಿ ಎಂದೇ ಕುಖ್ಯಾತವಾದ ಕೊರೋನಾ ಮಹಾಮಾರಿ ಬಂತು. ಜೊತೆಗೆ ವಿಪಕ್ಷಗಳ ಟೀಕೆ ಟಿಪ್ಪಣಿಗಳು, ಹೀಗೆ ಸಾಲು ಸಾಲು ಅಡೆತಡೆಗಳ ನಡುವೆ ರಾಜ್ಯವನ್ನು ಮುನ್ನಡೆಸಿದ, ರಾಜ್ಯಕ್ಕೆ ನ್ಯಾಯಬದ್ಧ ಆಡಳಿತವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿಯ ಕೊಡುಗೆಗಳನ್ನು ನಾವು ಮರೆಯುವಂತಿಲ್ಲ.
ಬಿಜೆಪಿ ಸರ್ಕಾರದ ಯಶಸ್ವಿ ಆಡಳಿತದ ಈ ಎರಡು ವರ್ಷಗಳಲ್ಲಿ ಸರ್ಕಾರವನ್ನು ಇನ್ನಿಲ್ಲದಂತೆ ಕಾಡಿದ್ದು, ಕಂಗೆಡಿಸಿದ್ದು ಕೊರೋನಾ ಸೋಂಕು. ರಾಜ್ಯದ ಅದೆಷ್ಟೋ ಜನರು ಕೊರೋನಾ ಸೋಂಕಿಗೆ ತುತ್ತಾಗಿ ನರಳಿದರು. ಆರೋಗ್ಯ ಮೂಲಸೌಕರ್ಯಗಳ ಕೊರತೆ, ಲಾಕ್ಡೌನ್ ಸಂಕಷ್ಟ ಇವೆಲ್ಲದರ ಜೊತೆಗೆ ವಿರೋಧಿ ಬಣಗಳ ಸಮಸ್ಯೆ.. ಈ ಎಲ್ಲದರ ನಡುವೆ ಆಡಳಿತ ನಡೆಸುವುದು ಸುಲಭದ ಮಾತಾಗಿರಲಿಲ್ಲ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಸಹ ಸಮಸ್ಯೆ, ಸವಾಲುಗಳನ್ನು ಮತ್ತಷ್ಟು ಹೆಚ್ಚುಗೊಳಿಸಿತ್ತು. ಆದರೂ ಕಂಗೆಡದ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಆಹಾರ ಭದ್ರತೆ, ಆರೋಗ್ಯ ಭದ್ರತೆ, ಸಾಮಾಜಿಕ, ಶೈಕ್ಷಣಿಕ ಭದ್ರತೆಗಳನ್ನು ಒದಗಿಸುವ ನಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರಗಳಿಗೆ ಮೆಚ್ಚುಗೆ ಸೂಚಿಸಲೇ ಬೇಕು. ಸರ್ಕಾರವನ್ನು ಅಭಿನಂದಿಸಲೇ ಬೇಕು.
ಕೊರೋನಾ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಸಂಪೂರ್ಣ ಆರೋಗ್ಯ ಕ್ಷೇತ್ರವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಂಡಿತು. ಕೊರೋನಾ ಲಾಕ್ಡೌನ್ ಅವಧಿಯಲ್ಲಿ ಸರ್ಕಾರ ಜನರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಶ್ರಮ ವಹಿಸಿತು. ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ನೇಮಕ, ಹಾಸಿಗೆಗಳ ಹೆಚ್ಚಳ, ಔಷಧಗಳ ಹೆಚ್ಚಳ, ವೆಂಟಿಲೇಟರ್ಗಳ, ಪಿಪಿಇ ಕಿಟ್ಗಳು, ಆಕ್ಸಿಜನ್ ಪೂರೈಕೆಗೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಇನ್ನಾವುದೇ ಸರ್ಕಾರ ಈ ಸಂದರ್ಭದಲ್ಲಿ ಆಡಳಿತದಲ್ಲಿದ್ದಿದ್ದರೂ ನಿಭಾಯಿಸಲಾಗದ ರೀತಿಯಲ್ಲಿ, ಇಡೀ ದೇಶಕ್ಕೆ ಮಾದರಿ ಎಂಬಂತೆ ಪರಿಸ್ಥಿತಿಗಳನ್ನು ನಿಭಾಯಿಸಿತು. ಆರ್ಥಿಕ ಸವಾಲಿನ ನಡುವೆಯೂ ರಾಜ್ಯವನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಲ್ಲಬೇಕು. ಈ ವಿಚಾರವನ್ನು ನಾವು ಮರೆಯುವಂತಿಲ್ಲ.
ಇನ್ನು ಲಸಿಕಾ ಅಭಿಯಾನದಲ್ಲಿ ಬಿಎಸ್ವೈ ಸರ್ಕಾರ ಹಲವು ಸವಾಲುಗಳನ್ನು ಎದುರಿಸಿದೆ. ಆರಂಭದಲ್ಲಿ ಲಸಿಕೆಯ ಬಗ್ಗೆ ಜನರ ದಾರಿ ತಪ್ಪಿಸುವ ಕೆಲಸವನ್ನು ವಿಪಕ್ಷಗಳು ಮಾಡಿದಾಗಲೂ, ಲಸಿಕೆಯ ಮಹತ್ವವನ್ನು ಜನರಿಗೆ ಸರಿಯಾಗಿ ಅರ್ಥ ಮಾಡಿಸುವಲ್ಲಿಯೂ ಸರ್ಕಾರ ಸಫಲವಾಗಿದೆ. ಹಾಗೆಯೇ ಲಸಿಕೆ ನೀಡುವಲ್ಲಿ ಸುಮಾರು 3 ಕೋಟಿಗಳಷ್ಟು ಗುರಿ ಸಾಧಿಸಿ ದಾಖಲೆ ಮಾಡಿದೆ. ಬಹಳ ಮುಖ್ಯವಾಗಿ ಯಾರು ಲಸಾಕೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರೋ, ಅವರೇ ಲಸಿಕೆ ಪಡೆಯುವಂತೆ, ಅವರ ಬಾಯಿಂದಲೇ ಲಸಿಕೆಯ ಉಪಯೋಗ, ಪ್ರಯೋಜನದ ಬಗ್ಗೆ ಮಾತುಗಳು ಹೊರಡುವಂತಾಗಿದೆ ಎಂದರೆ ಅದರ ಹಿಂದಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮಕ್ಕೆ ಶಹಬ್ಬಾಸ್ ಎನ್ನಲೇ ಬೇಕು. ಈ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲಾ ವಲಯಗಳ ಅಭಿವೃದ್ಧಿ ಕೊಂಚ ನಿಧಾನವಾಗಿದ್ದರೂ, ಯಾವುದೇ ಕ್ಷೇತ್ರವನ್ನು ಅವಗಣನೆಗೆ ಮಾಡದೆ ಅಭಿವೃದ್ಧಿಯತ್ತ ಚಿತ್ತ ನೆಟ್ಟು ಯಡಿಯೂರಪ್ಪ ನೇತೃತ್ವದ ಕಮಲ ಪಾಳಯದ ನಡೆ ಸ್ಮರಣೀಯ. ಆರೋಗ್ಯ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ವಿರುದ್ಧ ಮಾತುಗಳನ್ನಾಡುವಂತೆಯೇ ಇಲ್ಲ ಎನ್ನುವ ಮಟ್ಟಿಗೆ ಅಭಿವೃದ್ಧಿಯ ವಿಜಯ ಪತಾಕೆಯನ್ನು ಕೇವಲ ಎರಡೇ ವರ್ಷದಲ್ಲಿ ಹಾರಿಸಿದೆ ರಾಜ್ಯ ಬಿಜೆಪಿ ಸರ್ಕಾರ.
ರಾಜ್ಯ ಸರ್ಕಾರದ ನಿಜವಾದ ಶಕ್ತಿಯ ಅನಾವರಣವನ್ನು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಮಾಡಿದ, ಎದೆಗುಂದದೆ ಕರ್ತವ್ಯವನ್ನು ನಿಭಾಯಿಸಿದ ರೀತಿಗೆ ಶ್ಲಾಘನೆ ವ್ಯಕ್ತಪಡಿಸಲೇ ಬೇಕು. ಇಂದು ರಾಜ್ಯದಲ್ಲಿ ವೈದ್ಯಕೀಯ ಮೂಲಸೌಕರ್ಯಗಳ ಅಭಿವೃದ್ಧಿ ಈ ಎರಡು ವರ್ಷಗಳ ಅವಧಿಯಲ್ಲಿ ಕಂಡು ಕೇಳರಿಯದ ಪ್ರಮಾಣದಲ್ಲಾಗಿದೆ. ಇದೆಲ್ಲಕ್ಕೂ ಕಾರಣ ಬಿ ಎಸ್ ಯಡಿಯೂರಪ್ಪ ಅವರ ತಂಡದ ಸಮರ್ಥ ಆಡಳಿತ, ದೂರಾಲೋಚನೆಗಳ ಕ್ರಮ ಎಂದರೆ ಅದು ಅತಿಶಯವಲ್ಲ.
ಹಾಗೆಯೇ ಆರ್ಥಿಕತೆಯನ್ನು ಮತ್ತೆ ಮೇಲಕ್ಕೆತ್ತುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಉಪಕ್ರಮಗಳ ಹಿನ್ನೆಲೆಯಲ್ಲಿಯೂ ನಾವು ಸರ್ಕಾರಕ್ಕೆ ಆಭಾರಿಯಾಗಲೇ ಬೇಕು. ಕೃಷಿ ವಲಯ, ಕೈಗಾರಿಕಾ ವಲಯ, ನೀರಾವರಿ, ಶಿಕ್ಷಣ, ಆರೋಗ್ಯ ಸೇರಿದಂತೆ ರಾಜ್ಯದ ಬಡ ಜನರ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಲಾಕ್ಡೌನ್ನಿಂದ ಜನರೆಲ್ಲರೂ ಮನೆಯಲ್ಲಿ ಕೆಲಸ ಕಾರ್ಯಗಳಿಲ್ಲದೆ, ಒಂದೊತ್ತಿನ ಆಹಾರಕ್ಕೂ ಪರದಾಡುವ ಪರಿಸ್ಥಿತಿ ಬರುವ ಮೊದಲೇ, ಅಂತಹ ಎಲ್ಲಾ ಜನರನ್ನು ಗುರುತಿಸಿ ನೆರವಿನ ಹಸ್ತ ಚಾಚಿದ ಸರ್ಕಾರಕ್ಕೆ ಧನ್ಯವಾದಗಳನ್ನು ಸಮರ್ಪಿಸಬೇಕು. ಮಕ್ಕಳ ಶಿಕ್ಷಣಕ್ಕಾಗಿ ಆನ್ಲೈನ್ ವ್ಯವಸ್ಥೆ, ಟ್ಯಾಬ್ ವಿತರಣೆ ಸೇರಿದಂತೆ ಇನ್ನೂ ಹಲವು ಮಾದರಿ ಕ್ರಮಗಳನ್ನು ಅನುಸರಿಸಿದ ಬಿಎಸ್ವೈ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಲೇ ಬೇಕು.
ತಮ್ಮ ಇಳಿ ವಯಸ್ಸಿನಲ್ಲಿಯೂ ಜನರು ಮೂಗಿಗೆ ಬೆರಳಿಡುವಂತೆ ಯಶಸ್ವಿ ಆಡಳಿತ ನೀಡಿದ ಯಡಿಯೂರಪ್ಪ ಯವ ಮನಗಳಿಗೂ ಪ್ರೇರಣೆಯೇ ಸರಿ. 75 ಕಳೆದರೂ 25 ರ ಹುಡುಗನಂತೆ ಪಾದರಸದ ರೀತಿಯಲ್ಲಿ ಸರ್ಕಾರವನ್ನು ಮುನ್ನಡೆಸಿದ ಯಡಿಯೂರಪ್ಪ ಅವರ ದಿಟ್ಟತನ ಎಲ್ಲರಿಗೂ ಸ್ಪೂರ್ತಿ. ಮಾದರಿ ನಾಯಕನ ಮಾದರಿ ಹೆಜ್ಜೆಗಳು ಯುವ ನಾಯಕರಿಗೂ ಮಾರ್ಗದರ್ಶಿ ಎನ್ನಬಹುದು.
ಕೊರೋನಾ ಸಂಕಷ್ಟದ ಅವಧಿಯಲ್ಲಿಯೂ ಈ ಎರಡು ವರ್ಷಗಳ ಆಡಳಿತವನ್ನು ಜನಸ್ನೇಹಿಯಾಗಿ ನೀಡಿ, ಮಾದರಿಯಾದ ಬಿ ಎಸ್ ಯಡಿಯೂರಪ್ಪ ಮತ್ತು ಅವರ ತಂಡಕ್ಕೆ, ಇದಕ್ಕೆ ಪೂರಕವಾಗಿ ಸರ್ಕಾರದ ಯೋಜನೆಗಳನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಿದ ಸಾಮಾನ್ಯ ಕಾರ್ಯಕರ್ತರಿಗೆ ಅಭಿನಂದನೆಗಳು. ಯಡಿಯೂರಪ್ಪ ಅವಧಿ ಬಳಿಕವೂ ಬಿಜೆಪಿ ಸರ್ಕಾರ ಮತ್ತಷ್ಟು ಸಾಧನೆಯ ಉತ್ತುಂಗವನ್ನೇರಲಿ. ಯಶಸ್ವಿಯಾಗಿ ಐದು ವರ್ಷಗಳನ್ನು ಪೂರೈಸಿ ಆ ಬಳಿಕವೂ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವಂತೆ ಜನತೆ ಆಶೀರ್ವದಿಸಲಿ ಎಂಬ ಆಶಯದೊಂದಿಗೆ..
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.