ಮಾವೋವಾದಿ ಪಾದ್ರಿ ಸ್ಟಾನ್ ಸ್ವಾಮಿಯ ಸಾವಿಗೆ ಅನೇಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಸಾವಿಗೆ ಸಂತಾಪ ವ್ಯಕ್ತಪಡಿಸುವುದು ಅಸಹಜವೇನಲ್ಲ. ಆದರೆ ಸಂತಾಪದ ನೆಪದಲ್ಲಿ ಭಾರತ ಭಂಜಕನೊಬ್ಬನನ್ನು ಹುತಾತ್ಮನನ್ನಾಗಿಸುವ ವ್ಯವಸ್ಥಿತ ಪ್ರಯತ್ನವೊಂದು ನಡೆಯುತ್ತಿದೆ. ಅಲ್ಲಲ್ಲಿ ಕಾಣಿಸುತ್ತಿರುವ ಕ್ಯಾಂಡಲ್ ಮಾರ್ಚ್ಗಳು, ಪೋಸ್ಟರ್ಗಳು, ಶ್ರದ್ಧಾಂಜಲಿ ಸಭೆಗಳ ಮೂಲಕ ಅಮಾಯಕರ ಸಾವಿನ ರೂವಾರಿಯನ್ನು ಮಹಾತ್ಮನನ್ನಾಗಿಸುವ ಸಂಚೊಂದು ಕ್ರಿಯಾಶೀಲವಾಗಿದೆ. ಭಾರತ ವಿರೋಧಿಗಳು ಆತನ ಸಾವನ್ನು ವೈಭವೀಕರಿಸುತ್ತಿದ್ದಾರೆ. ಕಾಂಗ್ರೇಸ್, ಕಮ್ಯುನಿಷ್ಠರು, ಸ್ವಘೋಷಿತ ಬುದ್ದಿಜೀವಿಗಳು, ಪತ್ರಕರ್ತರ ವೇಷದ ಅರ್ಬನ್ ನಕ್ಸಲರು ಎಲ್ಲರೂ ಜತೆಗೂಡಿದ್ದಾರೆ. ಸ್ಟಾನ್ನನ್ನು ಓರ್ವ ಆಕ್ಟಿವಿಸ್ಟ್ ಎಂಬಂತೆ ಬಿಂಬಿಸಲಾಗುತ್ತಿದೆ. ಇಷ್ಟಕ್ಕೂ ಸ್ಟಾನ್ ಸ್ವಾಮಿ ಮೃತಪಟ್ಟಿರುವುದು ವಯೋಸಹಜ ಖಾಯಿಲೆಯಿಂದಲೇ ಹೊರತು ಪೋಲಿಸ್ ಎನ್ಕೌಂಟರ್ನಿಂದ ಅಲ್ಲ. ಆದರೆ ಆತನ ಸಾವನ್ನು ಮುಂದಿಟ್ಟುಕೊಂಡು ಭಾರತ ಸರ್ಕಾರವನ್ನು, ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ನಿಂದಿಸುತ್ತಿರುವ ವ್ಯಕ್ತಿಗಳು ಪರೋಕ್ಷವಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಯಾವ ಅಂಬೇಡ್ಕರ್ ದೇಶದ ಸುವ್ಯವಸ್ಥಿತ ಚಾಲನೆಗಾಗಿ ಶ್ರೇಷ್ಠ ಸಂವಿಧಾನವನ್ನು ರೂಪಿಸಿದರೋ, ಅದೇ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಂಗವನ್ನು ತಮಗನುಕೂಲಕರವಾದ ತೀರ್ಪು ನೀಡಲಿಲ್ಲವೆಂದು ನಿಂದನೆಗಿಳಿದವರು ಸಂವಿಧಾನ ವಿರೋಧಿಗಳೇ ಆಗುತ್ತಾರೆ. ಸಂವಿಧಾನ ವಿರೋಧಿಗಳು ಅಂದರೆ ಅಕ್ಷರಶಃ ಅಂಬೇಡ್ಕರ್ ವಿರೋಧಿಗಳೇ.ದೇಶದ ಹಿತ, ದೇಶದ ಸಾರ್ವಭೌಮತ್ವವನ್ನು ಕಾಪಾಡುವ ಹೊಣೆಹೊತ್ತ ವ್ಯವಸ್ಥೆಯನ್ನು ಕೀಳಾಗಿ ಚಿತ್ರಿಸುತ್ತಿರುವವರು ದೇಶಭಕ್ತರಾಗಿರಲು ಸಾಧ್ಯವೇ? ಖಂಡಿತಾ ಇಲ್ಲ.
ಸ್ಟಾನ್ ಸ್ವಾಮಿ ಲೋಕದ ಕಣ್ಣಿಗೆ ಓರ್ವ ಕ್ರೈಸ್ತ ಪಾದ್ರಿ. ಆದರೆ ಆತನ ಒಡನಾಟ, ಚಟುವಟಿಕೆಗಳಿದ್ದುದು ನಿಷೇಧಿತ ಮಾವೋವಾದಿಗಳೊಂದಿಗೆ. ಹೆಸರಿಗೆ ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಡುವ ಹೋರಾಟಗಾರ. ನಡೆಸುತ್ತಿದ್ದುದು ಬುಡಕಟ್ಟು ಜನರ ಮತಾಂತರ. ಅಮಾಯಕ ಜನರ ಕೈಗೆ ಶಸ್ತ್ರಕೊಟ್ಟು ದೇಶದ ವಿರುದ್ಧ ಬಂಡಾಯವೇಳಲು ಪ್ರಚೋದಿಸಿದಾತ ಮಹಾತ್ಮನಾಗಲು ಹೇಗೆ ತಾನೇ ಸಾಧ್ಯ? ಆತನನ್ನು ರಾತ್ರಿ ಬೆಳಗಾಗುವುದರೊಳಗಾಗಿ ಪೋಲಿಸರು ಜೈಲಿಗೆ ಹಾಕಿರಲಿಲ್ಲ, ಆತನ ವಿರುದ್ಧ ಕೇವಲ ನೆಪಮಾತ್ರದ ಆರೋಪಗಳಿದ್ದುದಲ್ಲ, ರಾಷ್ಟ್ರೀಯ ತನಿಖಾ ಸಂಸ್ಥೆ ಆತನ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳು ಹತ್ತು ಸಾವಿರ ಪುಟಗಳಿಗಿಂತ ಅಧಿಕವೆಂದರೆ ಪ್ರಕರಣದ ತೀವ್ರತೆ ಅರ್ಥವಾಗಬಹುದು. ಮಹಾರಾಷ್ಟ್ರದಲ್ಲಿ ಭೀಮಾ ಕೋರೆಗಾಂವ್ 200 ನೇ ವರ್ಷದ ವಿಜಯಾಚರಣೆಯಲ್ಲಿ ಹುಟ್ಟಿಕೊಂಡ ಹಿಂಸಾಚಾರ ಎಲ್ಗಾರ್ ಪರಿಷತ್ ಪ್ರಕರಣದ ಮುಖ್ಯ ರೂವಾರಿ ಈತನೆ. ಭೀಮಾ ಕೋರೆಗಾಂವ್ ನೆಪದಲ್ಲಿ ಹಿಂಸಾಚಾರವನ್ನು ಹುಟ್ಟುಹಾಕಿ ಅಮಾಯಕರ ಹತ್ಯೆಗೆ ಕಾರಣನಾದ ವ್ಯಕ್ತಿಯ ಸಾವಿಗೆ ಕ್ಯಾಂಡಲ್ ಮಾರ್ಚ್ ಮಾಡಿದವರ ಬುದ್ಧಿಗೆ ಪೊರೆ ಬಂದಿರುವುದರ ಬಗ್ಗೆ ಅನುಮಾನವಿಲ್ಲ. ಆತನ ತಂತ್ರವಿದ್ದುದೇ ದಲಿತ ಸಂಘಟನೆಗಳನ್ನು ಮುಂದಿಟ್ಟುಕೊಂಡು ದೇಶದ ವಿರುದ್ಧ ಗಲಭೆಗೆ ಪ್ರಚೋದಿಸುವುದು. ಆ ಮೂಲಕ ದೇಶದಲ್ಲಿ ಭಾರಿ ಪ್ರಮಾಣದ ಹಿಂಸಾಚಾರವನ್ನು ನಡೆಸುವುದಾಗಿತ್ತು. ಆತನ ಬೆನ್ನ ಹಿಂದೆ ಇದ್ದುದು ನಿಷೇಧಿತ ಮಾವೋವಾದಿ ಸಂಘಟನೆಯ ಕಾಮ್ರೇಡ್ಗಳು.
ಆದರೆ ಎಡಪಂಥೀಯ ತೀವ್ರವಾದಿಗಳ ಸಂತಾಪ ಸೂಚಕ ಸಭೆಗಳಲ್ಲಿ, ಮಾಧ್ಯಮಗಳಲ್ಲಿ ಆತನೊಬ್ಬ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಎಂಬಂತೆ ಚಿತ್ರಿಸಲಾಗುತ್ತಿದೆ. ಜಾರ್ಖಂಡ್ ಆತನ ಕಾರ್ಯಕ್ಷೇತ್ರವಾಗಿತ್ತು. ವನವಾಸಿ ಸಮಾಜವನ್ನು ಅವರ ಹಕ್ಕುಗಳ ಹೆಸರಿನಲ್ಲಿ , ಅವರ ಭೂಮಿಯನ್ನು ಉಳಿಸುವ ಹೋರಾಟದ ನೆಪದಲ್ಲಿ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾತ. ಬುಡಕಟ್ಟು ಜನರ ಕಲ್ಯಾಣಕ್ಕಾಗಿಯೇ ರೂಪುಗೊಳ್ಳುತ್ತಿದ್ದ ಯೋಜನೆಗಳೆಲ್ಲವನ್ನೂ ಅವರ ಹಕ್ಕಿನ ರಕ್ಷಣೆಯ ನೆಪದಲ್ಲಿ ವಿರೋಧಿಸುತ್ತಿದ್ದ ಈತ ಯೋಜನೆಗಳೆಲ್ಲವನ್ನೂ ತಡೆದು ಜನಪ್ರಿಯನಾದನೇ ಹೊರತು, ಅವರಿಗಾಗಿ, ಅವರ ಬದುಕನ್ನು ಹಸನುಗೊಳಿಸುವ ಯಾವ ಯೋಜನೆಗಳನ್ನು ರೂಪಿಸಿ ನಾಯಕನಾದವನಲ್ಲ. ವನವಾಸಿಗಳಿಗಾಗಿ ಶಾಲೆಗಳನ್ನು ತಂದರೆ? ಆಸ್ಪತೆಗಳನ್ನ್ರು ಕಟ್ಟಿಸಿದರೆ? ಕಾಡಿನ ಉತ್ಪನ್ನಗಳಿಗಾಗಿ ಮಾರುಕಟ್ಟೆ ಸೃಷ್ಟಿಸಿದರೆ? ಯಾವುದೂ ಇಲ್ಲ. ಮಾನವ ಹಕ್ಕಿನ ಹೆಸರಿನ ಹೋರಾಟ ನಮ್ಮ ದೇಶದಲ್ಲಿ ಲಾಭದಾಯಕ ಉದ್ಯಮಗಳಲ್ಲೊಂದು. ಆ ಉದ್ಯಮದ ಪಾಲುದಾರರೇ ಇವರು. ತಾವು ನಡೆಸುವ ಹಿಂಸಾಕೃತ್ಯಗಳ ರಕ್ತದ ಕಲೆಯನ್ನು ಮುಚ್ಚಿ ಹಾಕಲು ಈ ಹೋರಾಟ ಒಂದು ಮುಖವಾಡ ಮಾತ್ರ. ಬುಡಕಟ್ಟು ಸಮುದಾಯಗಳ ಹಿತ ರಕ್ಷಕನೆಂಬಂತೆ ಬಿಂಬಿಸಲ್ಪಡುವ ಈತ, ಅದೇ ಬುಡಕಟ್ಟು ಪ್ರದೇಶಗಳಲ್ಲಿ ಬುಡಕಟ್ಟು ಜನರನ್ನೆ ನಕ್ಸಲಿಯರು ಹತ್ಯೆ ಮಾಡಿದಾಗ, ಅತ್ಯಾಚಾರ, ಮಾಡಿದಾಗ, ಮಕ್ಕಳ ಕಳ್ಳಸಾಗಾಣಿಕೆ ನಡೆಸಿದಾಗ ಎಷ್ಟು ಹೋರಾಟ ಮಾಡಿದ್ದಾನೆ? ಅವೆಲ್ಲವನ್ನೂ ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ. ಅದರ ಬದಲು ಕೈಗೆ ಶಸ್ತ್ರ ಕೊಟ್ಟು ಬುಡಕಟ್ಟು ಜನರನ್ನು ಸರ್ಕಾರದ ವಿರುದ್ಧ ಪ್ರಚೋದಿಸುತ್ತಿದ್ದಾತ.
ನಮ್ಮ ದೇಶದಲ್ಲಿ ಮಾನವ ಹಕ್ಕು, ಬುಡಕಟ್ಟು ಹಕ್ಕು, ಮಹಿಳಾ ಹಕ್ಕು, ದಲಿತ ಹಕ್ಕುಗಳ ಹೆಸರಿನಲ್ಲಿ ವಕೀಲರು, ಪತ್ರಕರ್ತರು, ವಿದ್ಯಾರ್ಥಿ ನಾಯಕರು, ಬುದ್ದಿಜೀವಿಗಳು ನಡೆಸುತ್ತಿರುವ ಹೋರಾಟಗಳು ನೈಜ ಕಾಳಜಿಗಳನ್ನು ಕಳೆದುಕೊಂಡು ಜನಸಮುದಾಯಗಳನ್ನು ಸರ್ಕಾರದ ವಿರುದ್ದ ಹೋರಾಟಕ್ಕಾಗಿ ಪ್ರಚೋದಿಸುವ ಯೋಜನೆಗಳಾಗಿದೆ. ಈ ಹೋರಾಟಗಳು ಇಂದು ಭಾರತ ಭಂಜಕರ ಕೂಟಗಳಾಗಿವೆ. ಸ್ಟಾನ್ ಸ್ವಾಮಿ ನಿಷೇಧಿತ ಮಾವೋವಾದಿ ಸಂಘಟನೆಯ ಸದಸ್ಯ ಎಂದಾದ ಮೇಲೆ ಆತನ ಮೇಲಿನ ಅನುಕಂಪ ಅರ್ಥರಹಿತವಾದುದು. ನ್ಯಾಯಾಲಯವೇ ಹೇಳಿರುವ ಪ್ರಕಾರ ಈತ ಮಾವೋವಾದಿ ಚಟುವಟಿಕೆಗಳ ಹಿಂದಿನ ಕ್ರಿಯಾಶೀಲ ಸಂಘಟಕ. ದುರಾದೃಷ್ಟವೆಂದರೆ ಭಾರತೀಯ ಮಾಧ್ಯಮಗಳ ಪೂವ್ರಾಗ್ರಹ ಪೀಡಿತ , ಕಪೋಲಕಲ್ಪಿತ ವರದಿಗಳ ಆಧಾರದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಸಮಿತಿಯೂ ಸೇರಿದಂತೆ ಅನೇಕರು ಭಾರತೀಯ ನ್ಯಾಯಾಂಗವನ್ನೇ, ನ್ಯಾಯ ವಿತರಣೆಯ ಪ್ರಕ್ರಿಯೆಯನ್ನೇ ಅನುಮಾನಿಸಿ ಸ್ಟಾನ್ ಸಾವಿನ ಪ್ರಕರಣವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಸರ್ಕಾರಿ ಪ್ರಾಯೋಜಿತ ಹತ್ಯೆಯೆಂದೋ, ಕಸ್ಟಡಿ ಸಾವು ಎಂದೋ ತೀರ್ಮಾನಿಸಿ ಭಾರತದ ಘನತೆಗೆ ಮಸಿಬಳಿಯುವ ಮೊದಲು ಆತನ ರಕ್ತಪಾತಕಿ ಹಿನ್ನೆಲೆಯನ್ನು ಸರಿಯಾಗಿ ಅರಿತುಕೊಳ್ಳಬೇಕಾಗಿತ್ತು. ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಮುಕ್ತ ಅವಕಾಶ 1975ರ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಹೊರತು ಪಡಿಸಿದರೆ ಅದು ಎಂದೂ ಮೊಟಕುಗೊಂಡಿಲ್ಲ. ಭಿನ್ನಾಬಿಪ್ರಾಯಗಳನ್ನು ವ್ಯಕ್ತಪಡಿಸುವುದು ಬೇರೆ, ದೇಶದ ವಿರುದ್ಧ ಸಂಚು ರೂಪಿಸುವುದು ಬೇರೆ ಎನ್ನುವುದನ್ನು ಅರಿಯಲಾರದವರ ಮೂರ್ಖತನಕ್ಕೆ ಏನೆನ್ನಬೇಕು? ಸಂವಿಧಾನದ ಮೌಲ್ಯವನ್ನು ಧಿಕ್ಕರಿಸಿದವರಿಗೆ ಶಿಕ್ಷೆಯಾಗಬಾರದು ಎನ್ನುವವರ ನೈತಿಕತೆ ಸಂಶಯಾಸ್ಪದವಾದುದೇ. ಇವರಿಂದ ನಡೆದ ಹಿಂಸಾಕೃತ್ಯಗಳು, ಭಯೋತ್ಪಾಧನೆ, ಪ್ರತ್ಯೇಕತಾ ಮನೋಭಾವ ಕಾಶ್ಮೀರದಲ್ಲಿ ಭಯೋತ್ಪಾಧಕರಿಂದ ನಡೆದ ಕೃತ್ಯಗಳಿಗಿಂತ ಯಾವ ಸ್ವರೂಪದಲ್ಲೂ ಕಡಿಮೆಯಲ್ಲ.
ಜೈಲಿನಲ್ಲೇ ಇರುವ ಎಲ್ಗರ್ ಪರಿಷದ್ ಪ್ರಕರಣದ ಸಹ ಕೈದಿಗಳು ನಡೆಸುವ ಉಪವಾಸ, ಸ್ಟಾನ್ ಸ್ವಾಮಿಯ ಅಂತ್ಯ ಸಂಸ್ಕಾರದ ಸಂದರ್ಭಲ್ಲಿ ನೀಡಲಾದ ಹೇಳಿಕೆಗಳು, ಅವರಿಗಾಗಿ ನಡೆಸುತ್ತಿರುವ ಶ್ರದ್ಧಾಂಜಲಿ ಸಭೆಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಒಂದು ಕಣ್ಣಿಡಬೇಕಾದ ಅಗತ್ಯವಿದೆ. ಇಲ್ಲವಾದರೆ ಭೀಮಾ ಕೋರೆಗಾಂವ್ ವಿಜಯಾಚರಣೆಯ ವಿಚಾರವನ್ನು ಮುಂದಿಟ್ಟುಕೊಂಡು ದೇಶದ ವಿರುದ್ಧ ಸಮರ ಸಾರಿದ ದೇಶದ್ರೋಹಿಗಳೇ ಸ್ಟಾನ್ ಸ್ವಾಮಿಯ ಹೆಸರನ್ನು ಮುಂದಿಟ್ಟುಕೊಂಡು ಮತ್ತೊಂದು ಹಂತದ ಗಲಭೆಯ ಸಂಚಿನ ಪ್ರಯತ್ನಕ್ಕೆ ಇಳಿಯಬಹುದಾದ ಸಾಧ್ಯತೆಯನ್ನು ನಿರಾಕರಿಸಲಾಗದು. ಬುರ್ಹಾನ್ ವಾನಿ ಎಂಬ ಭಯೋತ್ಪಾದಕನ ಹತ್ಯೆಯಾದಾಗ , ಅಫ್ಜಲ್ ಗುರು ಎನ್ನುವ ಭಯೋತ್ಪಾದಕನಿಗೆ ಮರಣದಂಡನೆಯಾದಾಗ ಅವರ ಮೇಲೆ ಕವನ ಗೀಚಿದ, ನಾಟಕ ಬರೆದು ಪ್ರದರ್ಶಿಸಿದ ಘಟನೆಗಳನ್ನು ದೇಶ ಇನ್ನೂ ಮರೆತಿಲ್ಲ. ಯಾರು ಬುರ್ಹಾನ್ ವಾನಿಯನ್ನು, ಅಪ್ಜಲ್ ಗುರುವನ್ನು ಸ್ವಾತಂತ್ರ್ಯ ಹೋರಾಟಗಾರರೆಂಬಂತೆ ವೈಭವೀಕರಿಸಿದ್ದರೋ ಅದೇ ಶಕ್ತಿಗಳು ಇಂದು ಸ್ಟಾನ್ ಸಾವಿನ ನಂತರ ಆತನ ವೈಭವೀಕರಣಕ್ಕಿಳಿದಿದ್ದಾರೆ. ದೇಶದ ವಿರುದ್ಧ ಕೆಲಸ ಮಾಡುವ ಎಲ್ಲಾ ಶಕ್ತಿಗಳು ಜತೆಗೂಡುತ್ತಿದ್ದಾರೆ. ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ಅಂತಹದ್ದೊಂದು ಪ್ರಯತ್ನ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ.
ಇಂದು ದೇಶ ತಲೆತಗ್ಗಿಸಬೇಕಾದುದು ಸ್ಟಾನ್ ಸಾವಿಗಾಗಿ ಅಲ್ಲ, ದೇಶದ ಅನ್ನ ಉಂಡು, ನೀರು ಕುಡಿದು, ಗಾಳಿಯನ್ನು ಉಸಿರಾಡಿ ಅದೇ ನೆಲಕ್ಕೆ ದ್ರೋಹ ಬಗೆವ ನೀಚ ಮನಸ್ಸುಗಳು ತಮ್ಮ ಕೃತ್ಯಕ್ಕಾಗಿ ತಲೆ ತಗ್ಗಿಸಬೇಕಾಗಿದೆ. ತಾವು ಮಾಡಿದ ಹೇಯ ಕೃತ್ಯಕ್ಕೆ ಕಿಂಚಿತ್ತೂ ಪಶ್ಚಾತಾಪವಿಲ್ಲದೆ ಬದುಕುತ್ತಿರುವವರನ್ನು ಕಣ್ಮುಚ್ಚಿ ಬೆಂಬಲಿಸಲು ಹೊರಟವರು ತಲೆ ತಗ್ಗಿಸಬೇಕಾಗಿದೆ. ಸ್ಟಾನ್ ಸ್ವಾಮಿಯನ್ನು ವಯಸ್ಸಿನ ಕಾರಣವನ್ನು ಮುಂದಿಟ್ಟುಕೊಂಡು , ಆರೋಗ್ಯದ ಕಾರಣಗಳನ್ನು ಮುಂದಿಟ್ಟುಕೊಂಡು ಜೈಲಿನಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಬೇಕಾಗಿತ್ತು ಎನ್ನುವ ಬುದ್ದಿಗೇಡಿಗಳು ಜಗತ್ತಿನ ಯಾವ ಸಾರ್ವಭೌಮ ದೇಶ ತಾನೇ ತನ್ನ ನೆಲವನ್ನು ಭಂಜನೆಗೈಯುವ ಸಂಚು ನಡೆಸಿದವರನ್ನು ಇಷ್ಟೊಂದು ಉದಾರವಾಗಿ ನಡೆಸಿಕೊಂಡಿದೆ ಎನ್ನುವುದನ್ನು ದೇಶವಾಸಿಗಳಿಗೆ ತಿಳಿಸಿಕೊಡಬೇಕಾಗಿದೆ. ಜೈಲು ಸೇರಿದ ಸಂಚುಕೋರರ ಮಾನವ ಹಕ್ಕಿನ ಬಗ್ಗೆ ಮಾತನಾಡುವ ಸ್ವಯಂಘೋಷಿತ ಮಾನವ ಹಕ್ಕಿನ ಹೋರಾಟಗಾರರಿಗೆ, ಮಾವೋವಾದಿಗಳ ಸಂಚಿಗೆ ಬಲಿಯಾದ ಅಮಾಯಕರ ಸಾವಿನ ಚಿತ್ರಣ ಎಂದಾದರೂ ಬಾಧಿಸುತ್ತದೆಯೇ? ಅದೇ ಮಹಾರಾಷ್ಟ್ರದಲ್ಲಿ ಹಿಂದೂ ಸಾಧುಗಳಿಬ್ಬರನ್ನು ಮನಬಂದಂತೆ ಬಡಿದು ಕೊಂದಾಗ ಮಾನವ ಹಕ್ಕುಗಳು ನೆನಪಾಗಿತ್ತೆ? ಕಾಶ್ಮೀರದಿಂದ ಪಂಡಿತರನ್ನು ಏಕಾಏಕಿ ಅವರ ಮನೆಗಳಿಂದಲೇ ಹೊರಗಟ್ಟಿ ಬೀದಿಪಾಲು ಮಾಡಿದಾಗ ನೆನಪಾಗಿತ್ತೇ? ನಕ್ಸಲರು ಇಟ್ಟ ಬಾಂಬ್ಗೆ ಅಮಾಯಕ ಸೈನಿಕರು, ಪೋಲಿಸರು ಬರ್ಭರವಾಗಿ ಹತ್ಯೆಗೊಳಗಾದಾಗ ಮಾನವಹಕ್ಕುಗಳನ್ನು ಯಾವ ಕಸದ ತೊಟ್ಟಿಗೆ ಎಸೆಯಲಾಗಿತ್ತು ಎಂದು ಹೇಳಬಹುದೇ? ಹಾಗಾದರೆ ನಿಷೇಧಿತ ಮಾವೋವಾದಿ, ನಕ್ಸಲ್ ಸಿದ್ಧಾಂತವನ್ನು ಪ್ರಚಾರ ಮಾಡುವ, ದೇಶದ ವಿರುದ್ಧ ಸಮರ ಸಾರುವ ಕೃತ್ಯಗಳಲ್ಲಿ ಭಾಗಿಯಾದವರನ್ನು ದಂಡಿಸಬಾರದೇ?
ಪಾದ್ರಿಯೊಳಗಿನ ಕಾಮ್ರೇಡ್ ದೇಶದ ವಿರುದ್ಧ ಸಮರ ಸಾರಿದ್ದ. ದೇಶದ ವಿರುದ್ಧ ಹೋರಾಟ ಮಾಡುವುದಕ್ಕಾಗಿಯೇ ತರಬೇತಿ ನೀಡುವ ಕನಸು ಕಂಡಿದ್ದ. ಅಂತಹ ಹತ್ತಾರು ಸಂವಹನಗಳಲ್ಲಿ ನೇರವಾಗಿಯೆ ಸ್ಟಾನ್ ಭಾಗಿಯಾಗಿದ್ದ. ಭಾರತದೊಳಗೆ ಮಾವೋ ವಿಚಾರದ ರೆಡ್ ಕಾರಿಡಾರ್ ರೂಪುಗೊಳ್ಳುವ ಯೋಜನೆಯ ಭಾಗವಾಗಿಯೇ ಬುಡಕಟ್ಟು ಜನರ ನಡುವೆ ಸೇರಿಕೊಂಡಿದ್ದ ಈತನಿಗೆ ಅದು ಗೆಲ್ಲಬೇಕಾದ ಯುದ್ಧ ಭೂಮಿಯಾಗಿತ್ತೇ ಹೊರತು ತಾಯ್ನೆಲವಾಗಿರಲಿಲ್ಲ. ಅಂತಹ ಭಾವನೆ ಯಾವತ್ತೂ ಅವರಲ್ಲಿ ಕಾಣಲಿಲ್ಲ. ಮಾನವ ಹಕ್ಕು, ಬುಡಕಟ್ಟು ಜನರ ಬದುಕಿಗಾಗಿ ಹೋರಾಟ ಎನ್ನುವ ಮುಸುಕಿನೊಳಗೆ ದೇಶ ಭಂಜನೆಯ ಕ್ರಿಯಾಶೀಲ ಯೋಜನೆಯೊಂದು ನಿರಂತರವಾಗಿ ನಡೆಯುತ್ತಿತ್ತು. ಗೌತಮ್ ನವಲಕ, ವರವರರಾವ್,ಸುಧಾ ಭಾರದ್ವಾಜ್, ಅರುಣ್ ಫೆರಿರಾ, ಆನಂದ್ ತೇಲ್ತುಂಬ್ಡೆ ಮೊದಲಾದ ಪ್ರತಿಷ್ಠಿತ ವ್ಯಕ್ತಿಗಳು ಜೈಲು ಸೇರಿದ್ದು ಸ್ವಾತಂತ್ರ್ಯ ಹೋರಾಟಕ್ಕಾಗಿ ಅಲ್ಲ. ಅನ್ನ ಕೊಟ್ಟ ನೆಲಕ್ಕೆ ಬಗೆದ ದ್ರೋಹಕ್ಕಾಗಿ. ಅಮಾಯಕರ ಸಾವಿಗೆ ಸಂಚು ರೂಪಿಸಿದ್ದಕ್ಕಾಗಿ. ಇದನ್ನು ದೇಶವಿಂದು ಅರ್ಥಮಾಡಿಕೊಂಡಿದೆ. ಅರ್ಬನ್ ನಕ್ಸಲರ ಜಾಡು ಇಂದು ಬಯಲಾಗಿದೆ. ಈ ದೇಶದ್ರೋಹಿಗಳಿಗೆ ಆಶ್ರಯ ನೀಡಿದ, ಅವರ ಹೋರಾಟಕ್ಕೆ ಹಣಕಾಸಿನ ಸಹಾಯ ಮಾಡಿದ್ದು ಅಪರಾಧವಾದಂತೆ, ಸಮಾಜದೊಳಗೆ ಅವರುಗಳ ಬಗೆಗೆ ಸಹಾನುಭೂತಿಯನ್ನು ರೂಪುಗೊಳಿಸಿದ ಬುದ್ದೀಜೀವಿಗಳ ಬೌದ್ಧಿಕತೆ ವ್ಯಭಿಚಾರಕ್ಕಿಂತ ಬೇರೆಯಲ್ಲ. ನ್ಯಾಯಾಲಯ ಈ ಪ್ರಕರಣದ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಲಿ. ಅಪರಾಧಿಗಳಿಗೆ ನಿಜಾರ್ಥದ ಕಾನೂನಿನ ದಂಡನೆಯಾಗಲಿ.
ನಮ್ಮ ಕಾಲೇಜು, ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳ ಒಳಗೆ ಸ್ಟಾನ್ ಎಂಬ ಭಯೋತ್ಪಾದಕನ ಹೆಸರು ಟ್ರೈಬಲ್ ಆಕ್ಟಿವಿಸ್ಟ್ ಎಂಬ ಮುಸುಕಿನೊಳಗೆ ಪ್ರವೇಶಿಸುವ ಮೊದಲೇ ಅಂತಹ ಭಂಜಕ ಪ್ರವೃತ್ತಿಗಳನ್ನು ಚಿಗುರಿನಲ್ಲೇ ಚಿವುಟಿಹಾಕಬೇಕಾಗಿದೆ. ಇಲ್ಲವಾದರೆ ಮತ್ತೆ ಯುವಜನರ ಮನಸ್ಸು ಕೆಡಿಸುವ, ದೇಶ ಒಡೆಯುವ ಸಂಘಟನೆಗಳು ಈ ಮೂಲಕ ಕ್ರಿಯಾಶೀಲವಾಗುವ ಅಪಾಯವಿದೆ. ನಾಡಿಗೆ ದ್ರೋಹಬಗೆದ ಇಂತಹ ಪಾತಕಿಗಳ ವೈಭವೀಕರಣ ಕೊನೆಗೊಳ್ಳಲಿ.
✍️ ಡಾ.ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕ,
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.