ದೇಶದ ಬೆನ್ನೆಲುಬು ರೈತ ಇಂದು ದಯನೀಯ ಸ್ಥಿತಿಗೆ ತಲುಪಿದ್ದಾನೆ. ಅಂಕಿ-ಅಂಶಗಳ ಪ್ರಕಾರ 1995 ರಿಂದ ಈವರೆಗೆ ದೇಶಾದ್ಯಂತ 3 ಲಕ್ಷ ರೈತರು ಬಡತನದ ಬೇಗೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಹೊಟ್ಟೆ ತುಂಬಿಸುವ ರೈತನಿಗೆ ತನ್ನ ಕುಟುಂಬದ ಹೊಟ್ಟೆ ಹೊರೆಯುವ ಶಕ್ತಿಯಿಲ್ಲ. ಸರ್ಕಾರದ ಸಹಾಯ ಫಸಲು ಕಳೆದುಕೊಂಡ ಇವರ ಬದುಕನ್ನು ಅರಳಿಸುತ್ತಿಲ್ಲ. ಜನರಿಗೂ ರೈತನ ಬಗ್ಗೆ ನಿರ್ಲಕ್ಷ್ಯ. ಇದರಿಂದಾಗಿಯೇ ಪ್ರತಿ ವರ್ಷ ಸಾವಿರಾರು ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ರೈತ ಕಾಲಕಾಲಕ್ಕೆ ಸರಿಯಾಗಿ ಹವಮಾನದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಸ್ಕೈಮೆಟ್ ವೆದರ್ ಅಭಿಯಾನವೊಂದನ್ನು ಆರಂಭಿಸಿದೆ. ಹವಮಾನದ, ಮಳೆಯ ಬಗೆಗಿನ ಸರಿಯಾದ ಮಾಹಿತಿಯಿಂದ ರೈತ ಸರಿಯಾದ ಬೆಳೆ ಬೆಳೆಯುತ್ತಾನೆ, ಉತ್ತಮ ಫಸಲನ್ನು ಪಡೆಯುತ್ತಾನೆ, ಆತನ ಬದುಕೂ ಚೆನ್ನಾಗಿರುತ್ತದೆ ಎಂಬ ಆಶಯ ಇದರ ಹಿಂದಿದೆ.
ರೈತರು ಮತ್ತು ಅವರ ಕುಟುಂಬದ ಆತಂಕ, ದುಗುಡಗಳನ್ನು ಜನತೆಗೆ ತೋರಿಸುವ ನಿಟ್ಟಿನಲ್ಲಿ ಸ್ಕೈಮೆಟ್ ವೆದರ್ ಒಂದು ಮನಮಿಡಿಯುವ ಕಿರು ಚಿತ್ರವನ್ನು ನಿರ್ಮಿಸಿದೆ.
ಇತರ ರೈತರಂತೆ ತನ್ನ ತಂದೆಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂಬ ಭಯದಿಂದಾಗಿ ಪುಟ್ಟ ಬಾಲೆ ಪ್ರತಿದಿನ ತನ್ನ ತಂದೆ ಜಮೀನಿಗೆ ಹೋಗುವಾಗ ಆತನ ಹಿಂದೆಯೇ ಹೋಗುತ್ತಾಳೆ. ಆತ ಅಲ್ಲೇನು ಮಾಡುತ್ತಾನೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಾಳೆ. ಅಲ್ಲಿ ಆತ ಬೇಸರದಿಂದ ಆಗಸದತ್ತ ನೋಡುವುದನ್ನು ಕಂಡು ಮರುಕಪಡುತ್ತಾಳೆ. ಇದೇ ಸಂಕಟದಲ್ಲಿ ತನ್ನ ತಂದೆ ಜೀವ ಕಳೆದುಕೊಂಡರೆ ಎಂಬ ಭಯ ಅವಳನ್ನು ಮತ್ತಷ್ಟು ಆವರಿಸುತ್ತದೆ. ಇದಕ್ಕಾಗಿ ಮನೆಯಲ್ಲಿದ್ದ ಹಗ್ಗವನ್ನು ತಂದೆಗೆ ಕಾಣದಂತೆ ಬಚ್ಚಿಡುತ್ತಾಳೆ. ಒಂದು ದಿನ ಬಚ್ಚಿಟ್ಟ ಹಗ್ಗ ಕಾಣೆಯಾದಾಗ ತನ್ನ ತಂದೆ ಆತ್ಮಹತ್ಯೆಯನ್ನೇ ಮಾಡಿಕೊಂಡ ಎಂದು ಆಕೆ ದುಃಖ ಮತ್ತು ದುಗುಡದಿಂದ ಜಮೀನಿನತ್ತ ಓಡುತ್ತಾಳೆ, ಅಲ್ಲಿ ಆತ ಆ ಹಗ್ಗದಿಂದ ತನಗಾಗಿ ಜೋಕಾಲಿ ಕಟ್ಟುತ್ತಿರುವುದನ್ನು ಕಂಡು ಭಾವುಕಳಾಗುತ್ತಾಳೆ.
ರೈತನ ಮಕ್ಕಳು, ಕುಟುಂಬವರ್ಗ ಈ ದೇಶದಲ್ಲಿ ಎಷ್ಟು ದುಗುಡ ಮತ್ತು ಆತಂಕದಿಂದ ಬದುಕುತ್ತಿದೆ ಎಂಬುದನ್ನು ಈ ಕಿರುಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ.
ಸ್ಕೈಮೆಟ್ ವೆದರ್ರವರ #HelpTheFarmer ಅಭಿಯಾನದಡಿ ರೈತರಿಗೆ ಸಹಾಯ ಮಾಡಲು ಈ ವಿಡಿಯೋವನ್ನು ಚಿತ್ರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.