ನಂಬಿಕೆ ಎನ್ನುವ ಪದವೇ ಪ್ರತಿದಿನದ ಪ್ರಮುಖ ಆಧಾರವಾಗಿ ಜೀವನ ಪಯಣದಲ್ಲಿ ನಮ್ಮನ್ನು ಮುಂದಕ್ಕೆ ತಳ್ಳುತ್ತಿರುತ್ತದೆ. ಒಂದು ವಾರದ ಹಿಂದೆ ರಸ್ತೆಯ ಬದಿಯಲ್ಲಿ ಬಸ್ ಒಂದಕ್ಕೆ ಕಾಯುತ್ತಾ ನಿಂತಿದ್ದೆ. ಅದೇ ಸಮಯಕ್ಕೆ ನಾನು ನಿಂತಲ್ಲಿಗೆ ಗಂಡ ಹೆಂಡತಿ ಇಬ್ಬರೂ ಬಂದರು. ನೋಡುವಾಗ ನಮ್ಮೂರು ಕರಾವಳಿಯವರಂತೆ ಇರಲಿಲ್ಲ. ಅವರು ಉತ್ತರ ಕರ್ನಾಟಕದವರು ಎಂಬುದು ಅವರ ಮುಖದಲ್ಲೇ ಸ್ಪಷ್ಟವಾಗಿತ್ತು.
ಹೊಲದಲ್ಲಿ ಬಿಸಿಲ ಬೇಗೆಗೆ ಮೈಮುರಿದು ದುಡಿದು ದುಡಿದು ಕಪ್ಪಾದ ಮುಖ, ಗಟ್ಟಿಯಾದ ಕೈ ಕಾಲುಗಳು, ಬಲವಾದ ದೇಹ ಇವೆಲ್ಲವೂ ಚೆನ್ನಾಗಿ ಅವರ ಊರು, ಅವರ ಕಸುಬಿನ ಬಗ್ಗೆ ಹೇಳುತ್ತಿತ್ತು. ಹತ್ತಿರ ಬಂದ ಆ ದಂಪತಿ “ಅಯ್ಯ ಹಣ ಕೊಟ್ಟು ಸಹಕರಿಸಿ ತುಂಬಾ ಉಪಕಾರವಾಗುತ್ತದೆ” ಎಂದು ಎರಡು ಬಾರಿ ಹೇಳಿದರು. ನನಗೆ ಆಶ್ಚರ್ಯವಾಗಿತ್ತು. ಜೊತೆಗೆ ಇವರು ಮೊದಲ ಬಾರಿಗೆ ಹೀಗೆ ಹಣ ಕೇಳುತ್ತಿದ್ದಾರೆ ಎಂಬುದನ್ನು ಅವರು ಕಾರಣ ಹೇಳದೆ ಹಣ ಕೇಳುವಾಗ ಮತ್ತು ಅವರ ಉಡುಗೆ ತೊಡುಗೆಯಿಂದಲೇ ಅರ್ಥ ಮಾಡಿಕೊಂಡೆ.
ಆದರೆ, ಅವರ ಮಾತು ಕೇಳಿ ನನ್ನ ಅಕ್ಕಪಕ್ಕದಲ್ಲಿ ನಿಂತಿದ್ದ ಯಾರೊಬ್ಬರೂ ಹಣ ನೀಡಲೇ ಇಲ್ಲ. ಈಗಿನ ಕಾಲದಲ್ಲಿ ಕಾರಣ ಹೇಳದೆ, ಅದಕ್ಕೆ ಸರಿಯಾದ ಆಧಾರ ನೀಡದೆ ಜನ ಯಾವುದನ್ನು ನಂಬುತ್ತಾರೆ ಹೇಳಿ? ನಾನು ಮಾತ್ರ ಹಣ ಕೇಳಲು ಎನೋ ಒಂದು ಬಲವಾದ ಕಾರಣವಿದೆ. ಅದನ್ನು ಕಂಡು ಹಿಡಿಯಲೇ ಬೇಕು ಎಂಬ ಹಠದಿಂದ ಅವರಲ್ಲಿ ಕೇಳಿಯೇ ಬಿಟ್ಟೆ. ಏನಾಯಿತು? ಏಕೆ ಹಣ ಕೇಳುತ್ತಿದ್ದಿರಿ ಎಂದೆ.
ಕೂಡಲೇ ನಿಧಾನವಾಗಿ ಆ ತಾಯಿ ನನ್ನ ಹತ್ತಿರ ಬಂದು ನಮ್ಮ ಸಣ್ಣ ಮಗನ ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆಗೆ ಸೇರಿಸಿದ್ದೆವು. ಹೊಲ ಗದ್ದೆಯಿಂದ ದುಡಿದ ಹಣವೆಲ್ಲ ಹಾಕಿ ಆಪರೇಷನ್ ಮಾಡಿ ಈಗ ಮಗ ಸರಿಯಾಗಿದ್ದಾನೆ. ಹೌದು, ಆದರೆ ಪುನಃ ನಮ್ಮೂರು ರಾಯಚೂರಿಗೆ ಹೋಗಲು ಹಣವಿಲ್ಲ. ಎಲ್ಲವೂ ಆಸ್ಪತ್ರೆಗೆ ಖರ್ಚಾಗಿದೆ. ನಾವು ಇಷ್ಟರವರೆಗೆ ಬೇಡಿದವರಲ್ಲ, ಆದರೆ ಮಗನಿಗಾಗಿ ಬೇಡಿಯಾದರು ಊರಿಗೆ ಕರೆದುಕೊಂಡು ಹೋಗಿ, ಅಲ್ಲಿ ಹೇಗಾದರೂ ಮಾಡಿ ಅವನನ್ನು ಬೆಳೆಸಬೇಕು. ಹಾಗಾಗಿ ಊರಿಗೆ ಹೋಗಲು ಹಣ ಬೇಕಿತ್ತು ಎನ್ನುತ್ತಾ ತಾಯಿ ಮಗನ ಮೇಲಿನ ಆ ಪ್ರೀತಿ ಕಾಳಜಿಯನ್ನು ಒಂದೇ ಮಾತಿನಲ್ಲಿ ತೋರಿಸಿ ಬಿಟ್ಟರು.
ಕೂಡಲೇ ಅಕ್ಕಪಕ್ಕ ಇದ್ದವರ ಕಿವಿಗೂ ಈ ಕಥೆ ಬಿದ್ದು ಹಣ ನೀಡಿದರು. ಯಾಕೋ ಒಂದು ಸಮಾಧಾನ ಹಾಗೂ ನೆಮ್ಮದಿಯ ಭಾವನೆ ಮೂಡಿತು. ನಂತರ ನಾನು ಕೂಡ ಕೈಲಾದಷ್ಟು ಸಹಾಯ ಮಾಡಿದೆ. ಕೊನೆಗೆ ಹಣವನ್ನು ಸಂಗ್ರಹಿಸಿ ಹೋಗುವಾಗ, ನಿಮ್ಮಂತ ಮಕ್ಕಳಿಗೆ ನಾವು ಹಣ ನೀಡ ಬೇಕಿತ್ತು. ಆದರೆ ನಿಮ್ಮಿಂದ ತೆಗೆದುಕೊಳ್ಳುತ್ತಿದ್ದೇವೆ ಕ್ಷಮಿಸಿ ಎಂದು ಆ ತಾಯಿ ಹೇಳಿ ಅಲ್ಲಿಂದ ಮುಂದೆ ಹೊರಟು ಬಿಟ್ಟರು. ನಾನು ಮಾತ್ರ ಆ ತಾಯಿ ಹೇಳಿದ ಮಾತಿನಲ್ಲೇ ಉಳಿದುಬಿಟ್ಟಿದ್ದೆ.
ಒಬ್ಬಳು ತಾಯಿ ತಾನು ತನ್ನ ಮಗುವಿಗಾಗಿ ಏನು ಮಾಡಲೂ ಸಿದ್ಧ. ಬೇಡಿಯಾದರು ಮಗನಿಗೆ ಸಂತೋಷ ನೀಡಬೇಕೆಂಬ ಆ ನಿಸ್ವಾರ್ಥ ಪ್ರೀತಿ ಇವೆಲ್ಲ ಕಣ್ಣಮುಂದೆ ಕಟ್ಟುವಂತಿತ್ತು. ಮಗುವಿನ ಸಂತೋಷದಲ್ಲಿ ತನ್ನ ಸಂತೋಷ ಕಾಣುವ ಮಹಾ ತ್ಯಾಗಮಯಿ ತಾಯಿ. ಪ್ರತಿ ತಾಯಿಯ ಹೋರಾಟ ತನ್ನ ಮಕ್ಕಳಿಗಾಗಿ, ಕುಟುಂಬದ ನೆಮ್ಮದಿ ಸಂತೋಷಕ್ಕೆ ಎಂಬುದು ಪದೇ ಪದೇ ನೆನಪಾಗುತ್ತಿತ್ತು. ಕೊನೆಗೆ ಅವಳು ಹೇಳಿದ ಮಾತು, ಪ್ರತಿಯೊಬ್ಬರನ್ನೂ ಮಕ್ಕಳಂತೆ ಕಾಣುವ ಮನೋಭಾವ ಪ್ರತಿ ತಾಯಿಯ ದೊಡ್ಡ ಗುಣ ಇದೆಲ್ಲಾ ಒಂದೊಂದಾಗಿ ಗರಿಬಿಚ್ಚುತ್ತಾ ಆ ಘಟನೆಯಿಂದ ಹೊರಬರಲಾಗದೆ “ಪೋಂ ಪೋಂ” ಎಂಬ ಸದ್ದು ಕೇಳಿ ಬಂದು ನಿಂತ ಬಸ್ಸನ್ನು ಅದೇ ಗುಂಗಿನಲ್ಲಿ ಹತ್ತಿದೆ.
ಬಸ್ಸು ಮುಂದೆ ಸಾಗಿತು, ಆದರೆ ಮನಸ್ಸು ಮಾತ್ರ ಅದೇ ಬಸ್ಸಿಗೆ ಕಾಯುತ್ತಿದ್ದ ಸ್ಥಳದಲ್ಲಿ ಆ ತಾಯಿಯ ಮಾತಿನಲ್ಲಿ ನಿಂತು ಹೋಗಿತ್ತು. ಈ ಘಟನೆಯ ಹಿಂದೆ ನಂಬಿಕೆ ಎಂಬ ಸೂತ್ರ ಹೆಣೆದುಕೊಂಡ ರೀತಿಯೇ ತುಂಬಾ ಸುಂದರವಾದದ್ದು. ಈಗ ಅವರ ಮಾತನ್ನು ನಂಬಿರದಿದ್ದರೆ ಎಷ್ಟು ಅದ್ಭುತವಾದ ತಾಯಿಯ ಮಹಾಗುಣ, ಆ ಮಗನ ಮೇಲಿನ ಪ್ರೀತಿ ಇವೆಲ್ಲ ತಿಳಿಯುತ್ತಿರಲಿಲ್ಲ. ಜೀವನಕ್ಕೊಂದು ಪಾಠವೂ ಆಗುತ್ತಿರಲಿಲ್ಲ ಹಾಗಾಗೀ ನಂಬಿಕೆಯ ಹಿಂದೆ ಅಡಗಿರುವ ಕಾರಣ ಹೊರತೆಗೆದು ನೋಡಿದರೆ ಅದುವೇ ಜೀವನಕ್ಕೊಂದು ಪಾಠವಾಗಬಹುದು. ಬಹುಶಃ ಇದೇ ಕಾರಣಕ್ಕೆ ಹಿರಿಯರು “ನಂಬಿ ಕೆಟ್ಟವರಿಲ್ಲ” ಎಂದಿದ್ದು. ಏನೇ ಆಗಲಿ ನಂಬಿಕೆ ಎಂಬ ದಾರವು ಜೀವನವೆಂಬ ಗೊಂಬೆಯನ್ನು ಕುಣಿಸಲು ಆಧಾರವಾಗಿ ಸುತ್ತಿಕೊಂಡಿದೆ. ಹಾಗಾಗಿ ನಂಬಿಕೆಯೊಂದಿಗೆ ದಿನ ಸಾಗುವುದು, ಕನಸು ಕಾಣುವುದು.
✍️ ಪ್ರಣವ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.