ದೇಶಪ್ರೇಮಕ್ಕೊಂದು ಅನ್ವರ್ಥ ನಾಮದಂತೆ ಬದುಕಿದವರು ಸಾವರ್ಕರ್. ಅವರು ಜನಿಸಿದ್ದು 1883 ರ ಮೇ 28 ರಂದು. ನಾಸಿಕ್ ನ ಭಗೂರಿನಲ್ಲಿ ಜನಿಸಿದ ವಿನಾಯಕ ದಾಮೋದರ ಸಾವರ್ಕರ್ ತಮ್ಮ ಚಿಕ್ಕ ವಯಸ್ಸಿನಲ್ಲೇ ದೇಶದ ಗುಲಾಮಿತನಕ್ಕೆ ಮರುಗಿದವರು, ಭೀಕರ ಕ್ಷಾಮ ಮತ್ತು ಪ್ಲೇಗ್ ರೋಗಕ್ಕೆ ನರಳುತ್ತಿದ್ದ ತಮ್ಮ ಸ್ವಗ್ರಾಮದಲ್ಲಿ ಬ್ರಿಟಿಷ್ ಅಧಿಕಾರಿ ರ್ಯಾಂಡ್ ನಾ ದುಷ್ಟತನಕ್ಕೆ, ಅಂತಹ ಧೇನ್ಯೇಸಿ ಸ್ಥಿತಿಯನ್ನು ಬಳಸಿಕೊಂಡು ಆಹಾರ ಬೇಕಾದರೆ ಮತಾಂತರವಾಗಬೇಕೆಂಬ ಅಲಿಖಿತ ನಿಯಮ ಜಾರಿಗೊಳಿಸಿ ಬಡವರನ್ನು ಕ್ರಿಶ್ಚಿಯನ್ನರನ್ನಾಗಿಸಿದ್ದನ್ನು ಕಂಡು ಒಳಗೆ ಕುದಿದವರು. ಭಾರತೀಯರನ್ನು ಬಹುವಾಗಿ ಹಿಂಸಿಸಿದ ರ್ಯಾಂಡನ ವಧೆಯ ಕಾರಣಕ್ಕಾಗಿ ಚಾಪೇಕರ ಸಹೋದರರನ್ನು ಗಲ್ಲಿಗೇರಿಸಿದ್ದನ್ನು ಕಂಡು ಮಮ್ಮಲ ಮರುಗಿ ದೇಶದ ದಾಸ್ಯದ ಮುಕ್ತಿಗಾಗಿ ಆತ್ಮಾಹುತಿಗೂ ತಯಾರಾದ ಮಹಾನ್ ರಾಷ್ಟ್ರಭಕ್ತ ಈ ಸಾವರ್ಕರ್!!
ಚಿಕ್ಕವಯಸ್ಸಿನಲ್ಲೇ ತನ್ನ ಸ್ನೇಹಿತ ವಲಯಕ್ಕೂ ದೇಶಪ್ರೇಮದ ಕಿಡಿಯನ್ನು ಹೊತ್ತಿಸಿದ್ದ ಈ ಚೇತನ ಪುರುಷ ಕಿಡಿಗೇಡಿ ಆಬಾ ಧರೇಕರ್ ಎಂಬ ಅಂಗವಿಕಲ ಸ್ನೇಹಿತನಿಗೆ ದೇಶದ ಬಗೆಗೆ ಕವನಗಳನ್ನು ಬರೆಯುವಂತೆ ಪ್ರೇರೇಪಿಸಿ ಇಂದಿಗೂ ಮಹಾರಾಷ್ಟ್ರದ ಸ್ವಾತಂತ್ರ್ಯ ಕವಿಯೆಂಬ ಹೆಸರಾಗುವಂತೆ ಹುರಿದುಂಬಿಸಿದವರು ಈ ಸಾವರ್ಕರ್. ಮಿತ್ರಮೇಳ ಸಂಘಟನೆ ಸ್ಥಾಪಿಸಿ ಆ ಮೂಲಕ ತನ್ನ ಮೆಟ್ರಿಕ್ ಶಿಕ್ಷಣದ ಮುಂಚೆಯೇ ಕ್ರಾಂತಿಯಿಂದಲೇ ಸ್ವಾತಂತ್ರ್ಯ ಗಳಿಸಬೇಕೆಂಬ ದೀಕ್ಷೆಯನ್ನು ತಾವು ತೆಗೆದುಕೊಂಡು ತಮ್ಮ ಸ್ನೇಹಿತರಿಗೂ ಹಂಚಿದರು. ಪುಣೆಯ ಫರ್ಗುಸನ್ ಕಾಲೇಜು ಸೇರಿ ತನ್ನ ಗ್ರಾಮಕ್ಕಷ್ಟೇ ಹೊತ್ತಿಸಿದ್ದ ಕ್ರಾಂತಿಯ ಕಿಡಿಯನ್ನು ಇಡಿಯಾ ಪ್ರಾಂತಕ್ಕೆ ಹಂಚಬಹುದೆಂಬ ಕನಸು ಹೊತ್ತ ಸ್ವಾತಂತ್ರ್ಯ ಪ್ರೇಮಿ ಈ ಸಾವರ್ಕರ್. ಈ ನಾಡಿಗೆ ಗಾಂಧಿಯ ಆಗಮನಕ್ಕೂ ಸುಮಾರು ಹನ್ನೆರಡು ವರುಷ ಮೊದಲೇ ವಿದೇಶಿ ಬಟ್ಟೆಗಳನ್ನು ದಹಿಸಿ ಸ್ವದೇಶಿ ಚಳುವಳಿಯನ್ನು ಹುಟ್ಟುಹಾಕಿ ಬಾಲ ಗಂಗಾಧರ ತಿಲಕರಿಂದ ಅತ್ಯುಗ್ರ ಸ್ವಾತಂತ್ರ್ಯ ಪ್ರೇಮಿ ಎಂಬ ಹೆಸರನ್ನು ಗಳಿಸಿದರು.
ಬ್ರಿಟಿಷರು ನಮ್ಮ ದೇಶಕ್ಕೆ ಬಂದು ನಮ್ಮನ್ನು ಆಳುತ್ತಿರುವಂತೆ ನಾವು ಅವರ ದೇಶಕ್ಕೆ ನುಗ್ಗಿ ಅಲ್ಲಿಂದಲೇ ಕ್ರಾಂತಿಕಿಡಿಗೆ ಸ್ಪರ್ಶ ನೀಡಬಯಸಿದ ಸಾವರ್ಕರ್ ಬ್ಯಾರಿಸ್ಟರ್ ಪದವಿಯ ನೆಪವಿಟ್ಟುಕೊಂಡು ಇಂಗ್ಲೇಂಡಿಗೆ ಪ್ರಯಾಣ ಬೆಳೆಸಿ ಪಂ. ಶ್ಯಾಮಕೃಷ್ಣ ವರ್ಮ ಸ್ಥಾಪಿಸಿದ್ದ ಭಾರತ ಭವನವನ್ನು ಪ್ರವೇಶಿಸಿ ಭಾರತದಿಂದ ಇಂಗ್ಲೆಂಡಿಗೆ ವಿಧ್ಯಾಭ್ಯಾಸಕ್ಕಾಗಿ ಬರುತ್ತಿದ್ದ ಅನೇಕ ಶ್ರೀಮಂತ ಕುಟುಂಬದ ಯುವಕರಲ್ಲಿ ದೇಶಪ್ರೇಮದ ಜ್ಯೋತಿ ಬೆಳಗಿಸಿದವರು. ಅವರಲ್ಲಿ ಪ್ರಮುಖರಾದವರೆಂದರೆ ಮದನಲಾಲ ಧಿಂಗ್ರಾ. ಲಾರ್ಡ್ ಕರ್ಜನ್ ವಾಯಿಲಿ ಎಂಬ ಭಾರತದ ಸಚಿವಾಲಯದ ಬ್ರಿಟಿಷ್ ಅಧಿಕಾರಿಯನ್ನು ಅವರದೆ ನೆಲದಲ್ಲಿ ಭಾರತದಲ್ಲಿ ಭಾರತೀಯರ ಮೇಲಿನ ದೌರ್ಜನ್ಯಕ್ಕಾಗಿ ಸಾವರ್ಕರರ ಸೂಚನೆಯ ಮೇರೆಗೆ ಮದನಲಾಲ ಧಿಂಗ್ರಾನಿಂದ ಹತನಾದದ್ದು ಭಾರತೀಯರ ದೃಷ್ಟಿಯಿಂದ ಮಹಾನ್ ಸಾಧನೆ ಸರಿ.
ಇವೇ ಇನ್ನು ಅನೇಕ ಸ್ವಾತಂತ್ರ್ಯ ಗಳಿಕೆಯ ಕಾರ್ಯಕ್ಕಾಗಿ ಗಾಂಧಿಜೀ ಭಾರತದ ಸ್ವಾತಂತ್ರ್ಯಕ್ಕಾಗಿ ಭಾರತದಲ್ಲಿ ರಂಗಪ್ರವೇಶ ಮಾಡುವ ಮುಂಚೆಯೇ ಬ್ರಿಟಿಷರಿಂದ ಬಂಧನಕ್ಕೊಳಪಟ್ಟು ಕ್ರೂರತೀಕ್ರೂರ ಶಿಕ್ಷೆಯಾದ ಕರಿನೀರ ಶಿಕ್ಷೆಗೊಳಗಾಗವರು ಈ ಸಾವರ್ಕರ್!! ಅಂಡಮಾನಿನ ಜೈಲಿನಲ್ಲೂ ಕೂಡ ಹಿಂದುಗಳ ಮೇಲೆ ನಡೆಯುತ್ತಿದ್ದ ದಮನ ನೀತಿಯನ್ನು ವಿರೋಧಿಸಿ ಅಲ್ಲಿಯೂ ಮುಸ್ಲಿಮರು, ಕ್ರಿಶ್ಚಿಯನ್ನರು ಮಾಡುತ್ತಿದ್ದ ಮೋಸದ ಮತಾಂತರವನ್ನು ತಡೆದರು. ಮತಾಂತರಕ್ಕೆ ಬಲಿಯಾದವರನ್ನು ಶುದ್ಧಿ ಕಾರ್ಯದಡಿ ವಾಪಸ್ಸು ಮಾತೃ ಧರ್ಮಕ್ಕೆ ಕರೆತಂದರು. ಅಂಬೇಡ್ಕರರಿಗಿಂತ ಮುಂಚೆಯೇ ಪತಿತ ಪಾವನ ಮಂದಿರವನ್ನು ಕಟ್ಟಿ ಅದರಲ್ಲಿ ಜಾತಿ ಭೇದವಿಲ್ಲದೆ ಎಲ್ಲ ಮತದವರಿಗೂ ಮುಕ್ತ ಅವಕಾಶ ಕಲ್ಪಿಸಿಕೊಟ್ಟರು. ಸುಭಾಷ್ ಚಂದ್ರ ಬೋಸರು ಭಾರತದಿಂದ ಜರ್ಮನಿಗೆ ಪ್ರಯಾಣ ಬೆಳೆಸಿ ಅಲ್ಲಿ ದಾಸ್ ಬಿಹಾರಿ ಬೋಸರು ಸಂಘಟಿಸಿದ್ದ ಭಾರತೀಯ ಸೈನಿಕರನ್ನು ಕೂಡಿಕೊಂಡು ಭಾರತೀಯ ರಾಷ್ಟ್ರೀಯ ಸೇನೆಯನ್ನು ತಯಾರಿಸಿ ಭಾರತದಲ್ಲಿ ಬ್ರಿಟಿಷರ ವಿರುದ್ಧ ಹೋರಾಡುವಲ್ಲಿ ಆ ಮೂಲಕ ಅವರಿಗೆ ಮರ್ಮಾಘಾತ ನೀಡಿ ಕೆಂಪುಮೂತಿಗಳ ಎದೆ ನಡುಗಿಸಿದ ಸುಭಾಷ್ ಚಂದ್ರ ಬೋಸರಿಗೆ ಈ ಕಾರ್ಯವನ್ನು ಮಾಡುವಂತೆ ಮಾರ್ಗದರ್ಶನ ಮಾಡಿದವರು ಸಾವರ್ಕರ್!!
ಇಂತಹ ಉತ್ಕಟ ದೇಶಭಕ್ತಿಯ ಸಾವರ್ಕರರು ಸ್ವಾತಂತ್ರ್ಯ ನಂತರದ ಭಾರತದಲ್ಲೇ ಭಾರತದ ಸರ್ಕಾರದಿಂದ ಎರಡೆರಡು ಬಾರಿ ಬಂಧನಕ್ಕೊಳಗಾಗಿದ್ದು ಈ ದೇಶದ ದುರಂತ ಮತ್ತು ಅಂದಿನ ಸರ್ಕಾರದ ಹೇಡಿತನ ಮತ್ತು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯುವ ತಂತ್ರ ಎಂದರೆ ಅತಿಶಯೋಕ್ತಿಯಲ್ಲ. ಸಾವರ್ಕರರ ಕುರಿತು, ಅವರ ತ್ಯಾಗದ ಕುರಿತು ಇಂದಿನ ಯುವ ಜನಾಂಗ ತಿಳಿಯುವ ತುರ್ತು ಬಹಳಷ್ಟಿದೆ. ಇತಿಹಾಸದಲ್ಲಿ ಅವರಿಗಾದ ಅನ್ಯಾಯ ಭವಿಷ್ಯದಲ್ಲಿ ಸರಿ ಹೋಗಲಿ ಎಂಬ ಆಶಯವೂ ಈ ಲೇಖನದಲ್ಲಿ ಅಡಗಿದೆ.
✍️ ಅಜಯ್ ಭಾರತೀಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.