News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನಾ 2ನೇ ಅಲೆ ಬಗ್ಗೆ ಮೋದಿ ಎಚ್ಚರಿಸಿದ್ದರು: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

ಕೊರೋನಾವೈರಸ್‌ನ ಎರಡನೇ ಅಲೆ ಸದ್ಯ ಭಾರತವನ್ನು ತೀವ್ರ ಸ್ವರೂಪದ ಬಿಕ್ಕಟ್ಟಿಗೆ ದೂಡಿದೆ. ಜನಸಾಮಾನ್ಯರು ತಮ್ಮ ಜೀವ ಉಳಿಸಿಕೊಳ್ಳಲು ಒದ್ದಾಟ ನಡೆಸುತ್ತಿದ್ದಾರೆ. ವೈದ್ಯಕೀಯ ಮೂಲ ಸೌಕರ್ಯವನ್ನು ಹೆಚ್ಚಿಸಲು ಸರ್ಕಾರಗಳೂ ಶ್ರಮಿಸುತ್ತಿವೆ. ಆದರೆ ಇಂತಹ ಸಂದರ್ಭದಲ್ಲೂ ರಾಜಕೀಯ ಕೆಸರೆರೆಚಾಟಗಳು ನಡೆಯುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಿಪಕ್ಷಗಳ ವರ್ತನೆ ಕೂಡ ಜನರಲ್ಲಿ ಆಕ್ರೋಶ ಸೃಷ್ಟಿಸಿದೆ.

ಸೋಂಕಿನ ಎರಡನೇ ಅಲೆ ಅಪ್ಪಳಿಸುವ ಬಗ್ಗೆ ಸರ್ಕಾರ ನಿರ್ಲಕ್ಷಿಸಿದೆ ಎಂಬ ಪ್ರತಿಪಕ್ಷದ ಆರೋಪ ಮಾಡುತ್ತಿದ್ದರೆ, ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಮೊದಲೇ ಎಲ್ಲಾ ರಾಜ್ಯಗಳ ಸಿಎಂಗಳಿಗೆ ಎರಡನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂದಿದೆ.

ಪಿಎಂ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಂವಾದದಲ್ಲಿ, ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಸೋಂಕುಗಳ ವಿಷಯವನ್ನು ಪದೇ ಪದೇ ಎತ್ತಿದ್ದರು ಮತ್ತು ಸೋಂಕು ಉಲ್ಬಣವನ್ನು ನಿಭಾಯಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದರು ಎಂದು ಬಿಜೆಪಿ ಹೇಳಿದೆ.

ಅಷ್ಟೇ ಅಲ್ಲದೇ ಮಾರ್ಚ್ 17 ರಂದು ಮೋದಿಯವರು ಸಿಎಂಗಳೊಂದಿಗೆ ನಡೆಸಿದ ಸಭೆಗಳ ವೀಡಿಯೊವನ್ನು ಬಿಜೆಪಿ ಹಂಚಿಕೊಂಡಿದ್ದು, ಅಲ್ಲಿ ಅವರು ಸೋಂಕುಗಳು ಹೆಚ್ಚಾಗುವುದರ ಬಗ್ಗೆ ಎಚ್ಚರಿಕೆ ನೀಡಿರುವುದು ಮತ್ತು ತಡವಾಗುವ ಮೊದಲೇ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿರುವುದನ್ನು ಕಾಣಬಹುದು.

“ನಮ್ಮ ಕೋವಿಡ್ ನಿರ್ವಹಣೆಯ ಬಗ್ಗೆ ನಮಗೆ ವಿಶ್ವಾಸವಿದೆ ಆದರೆ ನಮ್ಮ ಆತ್ಮವಿಶ್ವಾಸವು ಅತಿಯಾದ ಆತ್ಮವಿಶ್ವಾಸವಾಗಬಾರದು ಮತ್ತು ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯಗಳು ಪೂರ್ವಭಾವಿಯಾಗಿ ಕಾರ್ಯೋನ್ಮುಖರಾಗಬೇಕು. ಸೋಂಕು ಹೆಚ್ಚಿರುವಲ್ಲಿ ಕಂಟೋನ್ಮೆಂಟ್‌ ವಲಯ ರಚಿಸಬೇಕು” ಎಂದು  ಮೋದಿ ಇಲ್ಲಿ ಹೇಳಿದ್ದರು.

ವಾಸ್ತವವಾಗಿ, ಸೆಪ್ಟೆಂಬರ್ 2020 ರಿಂದ ಈ ವರ್ಷದ ಏಪ್ರಿಲ್ ವರೆಗೆ ಪ್ರಧಾನಿ ಮುಖ್ಯಮಂತ್ರಿಗಳೊಂದಿಗೆ ಆರು ಸಂವಾದಗಳನ್ನು ನಡೆಸಿದ್ದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೂ ಹೆಚ್ಚಿನ ಪ್ರಕರಣಗಳು ಇರುವ 60 ಜಿಲ್ಲೆಗಳತ್ತ ಗಮನಹರಿಸಿ ಪರೀಕ್ಷೆಯನ್ನು ಗಣನೀಯವಾಗಿ ಹೆಚ್ಚಿಸುವಂತೆ ಪ್ರಧಾನಿ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದರು ಎಂದು ಬಿಜೆಪಿ ಹೇಳಿದೆ. ಅದೇ ಸಭೆಯಲ್ಲಿ, ಕೋವಿಡ್-ನಿರ್ದಿಷ್ಟ ಮೂಲಸೌಕರ್ಯಕ್ಕಾಗಿ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯನ್ನು ಬಳಸುವ ಮಿತಿಯನ್ನು 35% ರಿಂದ 50% ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಧಾನಿ ಮುಖ್ಯಮಂತ್ರಿಗಳಿಗೆ ತಿಳಿಸಿದ್ದರು ಎಂದಿದೆ.

“ಮಾರ್ಚ್ 17 ರಂದು ಸಿಎಂಗಳೊಂದಿಗೆ ಪ್ರಧಾನಮಂತ್ರಿಯವರು ನಡೆಸಿದ ಸಭೆಯ ಸಂದರ್ಭದಲ್ಲಿ ಭಾರತದಲ್ಲಿ ದಿನಕ್ಕೆ 30,000 ಹೊಸ ಪ್ರಕರಣಗಳನ್ನು ಮಾತ್ರ ಇತ್ತು” ಎಂದು ಪಕ್ಷವು ಹೇಳಿದೆ. “ಸುಳ್ಳು ಮತ್ತು ಸತ್ಯ” ಚಾರ್ಟ್ ಅನ್ನು ಕೂಡ ಪ್ರಟಕಗೊಳಿಸಿ ಬಿಜೆಪಿ ಕಾಂಗ್ರೆಸ್‌ ಆರೋಪವನ್ನು ಅಲ್ಲಗೆಳೆದಿದೆ.

ಪ್ರತಿಪಕ್ಷ ಸಿಎಂಗಳಾದ ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ) ಮತ್ತು ಭೂಪೇಶ್ ಬಾಗೆಲ್ (ಛತ್ತೀಸ್‌ಗಢ) ವಿಧಾನಸಭಾ ಚುನಾವಣೆಯಲ್ಲಿ ನಿರತರಾಗಿದ್ದರಿಂದ ಮೋದಿ ಸಭೆಗೆ ಹಾಜರಾಗಿರಲಿಲ್ಲ ಎಂದು ಪಕ್ಷ ಆರೋಪಿಸಿದೆ. ಮಹಾರಾಷ್ಟ್ರ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಸೋಂಕು ಸ್ಥಿರವಾದ ಹೆಚ್ಚಳವನ್ನು ತೋರಿಸಲು ಪ್ರಾರಂಭಿಸಿದ ಕೂಡಲೇ ಕೇಂದ್ರವು ಅಲ್ಲಿಗೆ ತಂಡಗಳನ್ನು ರವಾನಿಸಿದೆ ಎಂದು ಅದು ಹೇಳಿದೆ.

ವ್ಯಾಕ್ಸಿನೇಷನ್ ನೀತಿಯನ್ನು ಟೀಕಿಸಿದ್ದಕ್ಕಾಗಿಯೂ ಬಿಜೆಪಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದೆ, ವಿರೋಧ ಪಕ್ಷದ ನಾಯಕರಾದ ಲೋಕಸಭಾ ಸಂಸದ ಮನೀಶ್ ತಿವಾರಿ, ವಕ್ತಾರ ರಂದೀಪ್ ಸುರ್ಜೆವಾಲಾ ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯಗಳ ಆರೋಗ್ಯ ಮಂತ್ರಿಗಳಾದ ಟಿ.ಎಸ್. ಸಿಂಗ್ ದಿಯೋ  “ನಿರ್ಮಿತ ಭಾರತ” ಕೊವಾಕ್ಸಿನ್‌ನ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು ಎಂದು ಬಿಜೆಪಿ ಹೇಳಿದೆ.

“ಭಾರತವು ಸಾಂಕ್ರಾಮಿಕ ರೋಗದ ಕೆಟ್ಟ ಪರಿಸ್ಥಿತಿಯಲ್ಲಿ ಇದೆ,   ವಿಜ್ಞಾನಿಗಳು ಲಸಿಕೆ ತಯಾರಿಸಲು ಅವಿರತ ಶ್ರಮಿಸಿದ್ದಾರೆ. ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವ ಮೊದಲು ಅವುಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಲಾಗಿದೆ. ಇದರಿಂದ ಜೀವಗಳನ್ನು ಉಳಿಸಬಹುದು ಎಂದು ಖಾತ್ರಿಪಡಿಸಲಾಗಿದೆ. ಆದರೆ ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಇದನ್ನು ಅಪಹಾಸ್ಯ ಮಾಡಿತು. ಫಲಿತಾಂಶ: ಜನರು ಸತ್ತರು ”ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ಟ್ವೀಟ್ ಮಾಡಿದ್ದಾರೆ. ಕೊವಾಕ್ಸಿನ್ ಬಳಕೆಯ ಬಗ್ಗೆ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಯ ವೀಡಿಯೊಗಳನ್ನು ಅವರು ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ ಎಂಬ ಹೇಳಿಕೆಯನ್ನೂ ಉಲ್ಲೇಖಿಸಿರುವ ಬಿಜೆಪಿಯು, ಇದು ತಪ್ಪು ಹೇಳಿಕೆ ಎಂದು ಸ್ಪಷ್ಟಪಡಿಸಿದೆ. “ಭಾರತವು ಯುರೋಪ್ ಮತ್ತು ಉತ್ತರ ಅಮೆರಿಕಾಕ್ಕಿಂತ ಹೆಚ್ಚಿನ ಜನರನ್ನು ಹೊಂದಿದೆ. ಆದ್ದರಿಂದ, ಸಂಪೂರ್ಣ ಸಂಖ್ಯೆಯಲ್ಲಿ, ಭಾರತವು ಸ್ಪಷ್ಟವಾಗಿ ಹೆಚ್ಚಿನ ಸೋಂಕನ್ನು ಹೊಂದಿದೆ. ಆದರೆ ಪ್ರತಿ ಮಿಲಿಯನ್ ಜನಸಂಖ್ಯೆಗೆ ಪ್ರಕರಣಗಳು ಮತ್ತು ಸಾವುಗಳ ವಿಷಯದಲ್ಲಿ, ಭಾರತ ಇದುವರೆಗೆ ವಿಶ್ವದ 110 ನೇ ಸ್ಥಾನದಲ್ಲಿದೆ” ಎಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top