ದೇಗುಲಗಳು ಭಕ್ತರ ಮನಸ್ಸಿಗೆ ನೆಮ್ಮದಿಯನ್ನು ಕರುಣಿಸುವ ಪುಣ್ಯಧಾಮಗಳು. ದೇವರ ದರ್ಶನದಿಂದ ಪುನೀತನಾಗುವ ಭಕ್ತ ತನ್ನೆಲ್ಲಾ ಭಾರವನ್ನು ದೇವರಿಗೆ ಹಾಕಿ ನಿರಾಳನಾಗುತ್ತಾನೆ. ದೇಗುಲಗಳು ಜಾತಿ, ಲಿಂಗದ ಭೇದವಿಲ್ಲದೆ ಎಲ್ಲರಿಗೂ ಸಮಾನ ಪ್ರವೇಶವನ್ನು ನೀಡುತ್ತವೆ. ಆದರೆ ವಿಶಿಷ್ಟ ಎಂಬಂತೆ ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯ ರಾಮಪೂರ್ವ ಗ್ರಾಮದ ಮಿಲ್ಕಿಪುರದಲ್ಲಿನ ಒಂದು ಪ್ರಾಚೀನ ಶಿವ ದೇಗುಲ ಪೂಜಾಕೈಂಕರ್ಯ ನೆರವೇರಿಸುವುದರಲ್ಲೂ ಸಮಾನತೆಯನ್ನು ಪ್ರತಿಪಾದಿಸುತ್ತಿದೆ.
ಮಿಲ್ಕಿಪುರದ ವಿಘ್ನೇಶ್ವರ ಮಹಾದೇವ್ ದೇವಸ್ಥಾನ ಒಂದು ವಿಶಿಷ್ಟ ಆಚರಣೆಗೆ ಸಾಕ್ಷಿಯಾಗುತ್ತಿದೆ. ಎಲ್ಲಾ ಜಾತಿಯ ಜನರು ಇಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮುಖ್ಯ ಅರ್ಚಕನಾಗುವ ಅವಕಾಶವನ್ನು ಪಡೆಯುತ್ತಾರೆ.
ಈ ಪದ್ಧತಿ ಎರಡು ವರ್ಷಗಳ ಹಿಂದೆ ಈ ದೇಗುಲದಲ್ಲಿ ಪ್ರಾರಂಭವಾಗಿದ್ದು, ಜಾತಿ ತಾರತಮ್ಯವನ್ನು ಸೋಲಿಸುವ ಗುರಿಯನ್ನು ಹೊಂದಿದೆ. ಇಲ್ಲಿನ ಜನರು ಪೂಜೆ ನೆರವೇರಿಸಲು ತಮ್ಮ ಸರದಿಗಾಗಿ ಕಾಯುತ್ತಾರೆ. ಅರ್ಚಕರಾಗು ತಮ್ಮ ಕರ್ತವ್ಯ ಮಾಡಲು ಐದು ಗ್ರಾಮಗಳಿಂದ ಜನರು ಇಲ್ಲಿಗೆ ಬಂದಿದ್ದಾರೆ. ವಿವಿಧ ಜಾತಿಗಳನ್ನು ಪ್ರತಿನಿಧಿಸುವ ಜನರು ಪ್ರತಿದಿನ ಸೇವೆ ಸಲ್ಲಿಸುತ್ತಾರೆ.
500 ವರ್ಷಗಳ ಹಿಂದೆ ಅಯೋಧ್ಯೆಯ ರಾಜ ಕುಟುಂಬದೊಂದಿಗೆ ಸಂಬಂಧ ಹೊಂದಿದ್ದ ಜನರು ಈ ದೇವಾಲಯವನ್ನು ನಿರ್ಮಿಸಿದ್ದಾರೆ ಎಂಬ ಪ್ರತೀತಿ ಇದೆ.
ಒಂದು ದಶಕದ ಹಿಂದೆ ಈ ದೇವಾಲಯವು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು, ಆದರೆ 2010 ರಲ್ಲಿ ಜನರು ದೇವಾಲಯ ಸೇವಾ ಸಮಿತಿಯಡಿಯಲ್ಲಿ ಅದರ ಪುನರುಜ್ಜೀನವನದ ಉಸ್ತುವಾರಿ ವಹಿಸಿಕೊಂಡರು. ಆ ವೇಳೆ ಕಾಣೆಯಾಗಿದ್ದ ದೇವಾಲಯದ ಕಲಶ ಪತ್ತೆಯಾಗಿತ್ತು. ಈ ಘಟನೆಯು ಜನರನ್ನು ದೇವಾಲಯದತ್ತ ಇನ್ನಿಲ್ಲದಂತೆ ಆಕರ್ಷಿಸಿತು, ದೇವರ ಮೇಲೆ ಭಕ್ತಿ ಹೆಚ್ಚಾಯಿತು. ದೇವಾಲಯದ ಆಚರಣೆಗಳನ್ನು ಪುನರುಜ್ಜೀವನಗೊಳಿಸಲಾಯಿತು ಮತ್ತು ದೇವಾಲಯದ ಭೂಮಿಯನ್ನು ಪ್ರದೇಶದ ಜನರು ಕಾವಲು ಕಾಯಲು ಆರಂಭಿಸಿದರು.
ಈ ದೇವಾಲಯದ ಕಾರಣ ಇಂದು ಅಲ್ಲಿನ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇಲ್ಲಿ ಧಾರ್ಮಿಕ ಆಚರಣೆಗಳ ಜೊತೆಗೆ ಈ ಪ್ರದೇಶದ ಜನರಿಗೆ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಕೂಡ ಆಯೋಜಿಸಲಾಗುತ್ತಿದೆ. ಇದರ ಪ್ರಯೋಜನ ಜನರಿಗೆ ಸಿಗುತ್ತಿದೆ.
ದಿನನಿತ್ಯದ ಚಟುವಟಿಕೆಗಳು ಮತ್ತು ಆಚರಣೆಗಳಿಗಾಗಿ ವಾರದಲ್ಲಿ ಏಳು ಜನರು ದೇವಾಲಯದ ಉಸ್ತುವಾರಿ ವಹಿಸುತ್ತಾರೆ. ಅವರನ್ನು ದಿವಸಾಧಿಕಾರರು ಎಂದು ಕರೆಯಲಾಗುತ್ತದೆ. ಅಂದರೆ ಒಂದು ದಿನದ ಆಡಳಿತಗಾರರು. ದೇವಾಲಯದ ಶುಚಿಗೊಳಿಸುವಿಕೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುವ ಐದು ಸೇವಾ ದಳಗಳು (ದೇವಾಲಯಕ್ಕೆ ಸೇವೆ ಸಲ್ಲಿಸುವ ಗುಂಪುಗಳು) ಇವೆ. ಆಚರಣೆಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ದಿವಸಾಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ.
ಬೆಳಿಗ್ಗೆ ಮತ್ತು ಸಂಜೆ ಆರತಿ, ಅಭಿಷೇಕ, ಶಕ್ತಿ ಮಂತ್ರದ ಅರ್ಪಣೆ ಮತ್ತು ಇತರ ಆಚರಣೆಗಳನ್ನು ಈ ಗ್ರಾಮದ ಜನರ ನೇತೃತ್ವದಲ್ಲಿ ನಿತ್ಯ ನಡೆಯುತ್ತದೆ.
ದೇಗುಲವೊಂದು ಜನರ ನಡುವಿನ ತಾರತಮ್ಯವನ್ನು ದೂರ ಮಾಡಿ ಯಾವ ರೀತಿಯಲ್ಲಿ ಅವರ ಜೀವನದಲ್ಲಿ ಬದಲಾವಣೆ ತರಬಲ್ಲದು ಎಂಬುದಕ್ಕೆ ಈ ದೇಗುಲ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.