ಪತ್ರಿಕೆಯೇ ಬಾರದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ಮಕ್ಕಳೇ ಬರೆದ ಸೃಜನಶೀಲ ಬರಹಗಳಿಗೆ ವೇದಿಕೆಯಾಗಿ ಮಕ್ಕಳಿಂದಲೇ ವರದಿ ಬರೆಸಿ ಮಕ್ಕಳಿಂದಲೇ ಸಂಪಾದಿಸಿ 20 ಪುಟಗಳ ಕಲರ್ ಪತ್ರಿಕೆಯನ್ನು ಸ್ವಂತ ಖರ್ಚಿನಲ್ಲಿ 2008 ರಿಂದ ಪ್ರಕಟಿಸುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಕಾಪುರದ ರವಿಚಂದ್ರ ಅವರು ತಮ್ಮ ಪತ್ರಿಕೆ ಮೂಲಕ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮೂಡಿಸಿ ಬರೆಯುವ ಕೌಶಲ ಮೂಡಿಸಲು ಶ್ರಮಿಸುತ್ತಿರುವುದಲ್ಲದೆ ತಮ್ಮ ಶಾಲೆಯ ಸಬಲೀಕರಣಕ್ಕೆ, ಸಮುದಾಯವನ್ನು ಒಳಗೊಳ್ಳಲು, ಶಾಲೆಬಿಟ್ಟ ಮಕ್ಕಳನ್ನು ಕರೆತರಲು, ಶಾಲೆಯನ್ನು ಕಲಿಕಾ ಆಕರ್ಷಕ ಕೇಂದ್ರವಾಗಿಸಲು, ಶಾಲಾ ಶೈಕ್ಷಣಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಸಹ ಮಕ್ಕಳ ಮಂದಾರ ಪತ್ರಿಕೆಯನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ.
ಪಾಲಕರ ಕೈಗೆ ಮಕ್ಕಳೇ ತಾವು ಬರೆದ ಬರಹಗಳ ತಮ್ಮದೇ ಸಂಪಾದನೆಯ ಪತ್ರಿಕೆಯನ್ನು ನೀಡಿ ಸಮುದಾಯದ ಮೆಚ್ಚುಗೆಗಳಿಸಿದ್ದಾರೆ . ಮಕ್ಕಳ ಕಾರ್ಯವನ್ನು ಶಿಕ್ಷಣ ಇಲಾಖೆಯು, ಮಕ್ಕಳ ಸಾಹಿತಿಗಳು, ಶಿಕ್ಷಕರು ಪ್ರಶಂಸಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಪ್ರಧಾನ ಸಂಪಾದಕರಾದ ಮಲ್ಕಾಪುರ ಶಾಲೆಯ ಶಿಕ್ಷಕ ರವಿಚಂದ್ರ ಅವರು ತಿಳಿಸಿದರು. ಹನ್ನೆರಡು ವರ್ಷಗಳನ್ನು ಪೂರೈಸಿದ್ದು ಐವತ್ತನೇ ಸಂಚಿಕೆಯತ್ತ ಇದೇ ವರ್ಷ ಸಾಗಲಿದ್ದು ಮಕ್ಕಳಿಗಾಗಿ ಒಂದಿಷ್ಟು ವಿಶೇಷ ಚಟುವಟಿಕೆಯಾಗಿ ಮಕ್ಕಳ ಬರಹಗಳನ್ನು ಟೈಪಿಸಿ ಮುದ್ರಿಸಲು ಪತ್ರಿಕೆಯಲ್ಲಿ ತೊಡಗಿಕೊಂಡ ಕ್ಷಣಗಳು ವೃತ್ತಿ ಸಂತೃಪ್ತಿ ತಂದಿದೆ ಎನ್ನುತ್ತಾರೆ.
ಸಮುದಾಯದ ಒಳಗೊಳ್ಳುವಿಕೆಗೂ ಶಾಲಾ ಪತ್ರಿಕೆಯ ಬಳಕೆ
ತಮ್ಮದೆ ಊರಿನ ವಿಶೇಷ ಸುದ್ದಿಗಳು, ಶಾಲಾ ಸುದ್ದಿಗಳ ವರದಿ ಜೊತೆಗೆ ಊರಿನ ಕಲಾವಿದರ ಸಂದರ್ಶನ, ಹಿರಿಯ ವಿದ್ಯಾರ್ಥಿಗಳ ಸಾಧನೆಗಳ ಪರಿಚಯ, ಮಕ್ಕಳ ಪಾಲಕರ ಜಾನಪದಗಳ ಸಂಗ್ರಹ , ಪತ್ರಿಕಾ ಬಳಗದ ಮಕ್ಕಳಿಂದ ಹಲವಾರು ಜಾಗೃತಿ ಅಭಿಯಾನಗಳು, ಮಕ್ಕಳ ನಾಟಕಗಳು, ಜಾನಪದ ಕ್ಷೇತ್ರಕಾರ್ಯಗಳ ಮೂಲಕ ಸಮುದಾಯವನ್ನು ಒಳಗೊಂಡು ಶಾಲಾ ಪತ್ರಿಕೆ ಮಕ್ಕಳ ಮನೆ ತಲುಪುತ್ತಿದೆ. ಶಾಲಾ ಮಕ್ಕಳೇ ಬರೆದ ಕಥೆ-ಕವನ ಜಾನಪದ ಸಂಗ್ರಹ, ಪ್ರಬಂಧ, ಚಿತ್ರಕಲೆ, ಪದಬಂಧ, ರಸಪ್ರಶ್ನೆಗಳು , ಜ್ಞಾನ-ವಿಜ್ಞಾನ ಮತ್ತಿತರ ಅಂಕಣಗಳನ್ನು ಮಕ್ಕಳಿಂದಲೇ ಬರೆಸುತ್ತಿದ್ದಾರೆ. ಮಕ್ಕಳ ಸಾಹಿತಿಗಳ ಸಂದರ್ಶನ, ಮಕ್ಕಳ ಸಾಹಿತ್ಯ ಪುಸ್ತಕ ಪರಿಚಯ, ಇಂಗ್ಲಿಷ್ ಭಾಷಾ ಅನುವಾದ ಮತ್ತಿತರ ವೈವಿಧ್ಯಮಯ ವಿಷಯವನ್ನು ಹೊತ್ತು ಪತ್ರಿಕೆ ಸಾಹಿತ್ಯ ವಲಯದಲ್ಲೂ ಗಮನಸೆಳೆದಿದೆ.
ಪ್ರತಿ ವರ್ಷ ಮಕ್ಕಳಿಗೆ ವರದಿಗಾರಿಕೆ, ಬರಹ ಕೌಶಲ್ಯಗಳ ತರಬೇತಿ ನೀಡುತ್ತಾ ಮಕ್ಕಳಲ್ಲಿ ಬರಹ ಕೌಶಲ ಬೆಳೆಸುತ್ತಿದ್ದಾರೆ. ಸಾಹಿತ್ಯ ಕಮ್ಮಟ, ಜಾನಪದ ಕಮ್ಮಟ ನಡೆಸುತ್ತಿದ್ದಾರೆ.
ಪತ್ರಿಕೆಯ ಫಲಶ್ರುತಿ
ಮಕ್ಕಳಿಂದಲೇ ಜಾನಪದ ಕ್ಷೇತ್ರ ಕಾರ್ಯ ನಡೆಸಿ ನಮ್ಮೂರ ಜಾನಪದ ಅನುಸಂಧಾನ ಎನ್ನುವ ವಿಶಿಷ್ಟ ಜಾನಪದ ಕೃತಿ ಪ್ರಕಟಿಸಿದ್ದಾರೆ. ತಮ್ಮ ಶಾಲಾ ಮಕ್ಕಳ ಬರಹಗಳ ಸಮಗ್ರ ಸಂಕಲನ ಪ್ರಕಟಿಸಿದ್ದಾರೆ. ಈ ಕೃತಿಗಳು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿಯು ವಿಶೇಷ ಗಮನ ಸೆಳೆದಿವೆ. ವಾರ್ಷಿಕ ವಿಶೇಷ ಸಂಚಿಕೆ ಸಹ ಮುದ್ರಿಸಿ ಮಕ್ಕಳಿಗೆ ವಿತರಿಸುತ್ತಿದ್ದಾರೆ.
ಶಾಲಾ ಮಕ್ಕಳ ಜೊತೆಗೆ ಊರಿನ ಸಮುದಾಯವನ್ನು ಸಹ ಒಳಗೊಳ್ಳುವ ಮೂಲಕ ಪತ್ರಿಕೆ ಮುಖೇನ ಪಾಲಕರಿಗೂ ಓದುವ ಅಭಿರುಚಿ ಬೆಳೆಸಿದ್ದಾರೆ. ತಮ್ಮ ಮಕ್ಕಳು ಸಹ ಸೃಜನಶೀಲ ಬರಹ ಬರೆಯಬಲ್ಲರು ಎಂದು ಪಾಲಕರು ಮನಗಂಡಿದ್ದಾರೆ. ಹಲವರು ಪತ್ರಿಕೆಯನ್ನು ಸಂಗ್ರಹಿಸಿ ಇಟ್ಟುಕೊಂಡು ಆಗೀಗ ಓದುತ್ತಿದ್ದಾರೆ.
ನಿರಂತರವಾಗಿ ಪತ್ರಿಕೆಯನ್ನು ಪ್ರಕಟಿಸುತ್ತಾ ತ್ರೈಮಾಸಿಕ ವಾಗಿ ಮುಂದುವರಿಸಿ ಇಡೀ ಗ್ರಾಮದ ಮಕ್ಕಳಲ್ಲಿ ಓದುವ ಬರೆಯುವ ಕೌಶಲ ಮೂಡಿಸಿದೆ. ರಾಜ್ಯದ ಹಲವಾರು ಬಾಲ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಬಾಲ ಸಾಹಿತಿಗಳನ್ನು ಪ್ರೋತ್ಸಾಹಿಸಿದೆ.
ಮಲ್ಕಾಪುರದ ಶಿವಶಂಕರಯ್ಯ ಸ್ವಾಮಿ ಈ ಪತ್ರಿಕೆ ಮೂಲಕ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡು ಪದಮಾಲೆ ಎನ್ನುವ ಸಾಹಿತ್ಯ ಕೃತಿ ಪ್ರಕಟಿಸಿದ್ದಾರೆ. ಧಾರವಾಡ, ಮಂಡ್ಯ, ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ, ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾರೆ. ರಾಜ್ಯದ ಹಲವು ಸಾಹಿತ್ಯ ಕಮ್ಮಟ , ಸಮ್ಮೇಳನಗಳಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಮಲ್ಕಾಪುರ ಶಾಲೆಯ ಹಲವು ವಿದ್ಯಾರ್ಥಿಗಳು ತಾಲೂಕು ಜಿಲ್ಲಾ ರಾಜ್ಯ ಹಂತದ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಆಕಾಶವಾಣಿ ನಾಟಕಗಳು, ಬೀದಿ ನಾಟಕಗಳು, ಜಾನಪದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವೆಲ್ಲ ನಮ್ಮ ಮಕ್ಕಳ ಮಂದಾರ ಪತ್ರಿಕೆಯ ಫಲಶ್ರುತಿಯೆಂದು ಮಕ್ಕಳು ಸ್ಮರಿಸುತ್ತಾರೆ.
ಶಾಲಾ ಪತ್ರಿಕೆಯಿಂದ ಶಾಲಾ ಸಬಲೀಕರಣ
ಮಕ್ಕಳ ಮಂದಾರ ಪತ್ರಿಕೆ ಮುಖೇನ ಮಲ್ಕಾಪುರ ಶಾಲಾ ಮಕ್ಕಳು ರಾಜ್ಯದ ಗಮನ ಸೆಳೆದಿದ್ದು ಮಕ್ಕಳ ಸೃಜನಶೀಲತೆ ಕಂಡು ಬೆಂಗಳೂರಿನ ಇಂಡಿಯಾ ಫೌಂಡೇಶನ್ ಪಾರ್ ದಿ ಆರ್ಟ್ಸ್ ಸಂಸ್ಥೆ , ಹಾಗೂ ರಾಜ್ಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಕಲಿ ಕಲಿಸು ಯೋಜನೆಯ ಕಲಾಂತರ್ಗತ ಬೋಧನಾ ವಿಧಾನ ಅಳವಡಿಸಲು ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿತ್ತು.
ವಿಮುಕ್ತಿ ಚಾರಿಟೆಬಲ್ ಟ್ರಸ್ಟ್ ಶಾಲಾ ಸಬಲೀಕರಣಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ಸ್ಮಾರ್ಟ್ ಕ್ಲಾಸ್ ಪೂರಕ ಬೋಧನಾ ವ್ಯವಸ್ಥೆ ಮಾಡಿದೆ. ಹಿರಿಯ ವಿದ್ಯಾರ್ಥಿಗಳು , ಪೋಷಕರು ಶಾಲೆಗೆ ನೆರವು ನೀಡುತ್ತಿದ್ದಾರೆ. ಈ ಶಾಲೆಯ ಕಲಾಂತರ್ಗತ ಗುಣಾತ್ಮಕ ಶಿಕ್ಷಣವನ್ನು ಶಿಕ್ಷಣ ಇಲಾಖೆ , ಹಲವಾರು ಸಂಘ-ಸಂಸ್ಥೆಗಳು, ಶಿಶ್ಲೆಪ್ ಕಮಿಟಿ ಶ್ಲಾಘಿಸಿದೆ.
ಆರಂಭದಲ್ಲಿ ರವಿಚಂದ್ರ ಶಿಕ್ಷಕರು ತಮ್ಮ ಶಾಲೆಗಾಗಿ ಆರಂಭಿಸಿದ ಪತ್ರಿಕೆಯನ್ನು ಇದೀಗ ರಾಜ್ಯದ ಹಲವು ಪ್ರತಿಭಾವಂತ ಮಕ್ಕಳ ಬರಹಗಳಿಗೂ ವಿಸ್ತರಿಸಿದ್ದಾರೆ.
ಸ್ವಂತ ಖರ್ಚಿನಲ್ಲಿ ಮುದ್ರಿಸುತ್ತಿದ್ದ ಅವರ ಜೊತೆಗೆ ಕೆಲವು ಶಿಕ್ಷಕರು, ಸ್ನೇಹಿತರು ಸಹ ಕೈಜೋಡಿಸಿದ್ದಾರೆ. ಪತ್ರಿಕೆಯ ವಿನ್ಯಾಸದಲ್ಲಿ ಸುಜಯ್ ಲಿಂಗಪ್ಪ ಅವರು ಸಹಕರಿಸುತ್ತಿದ್ದಾರೆ.
ಮುದ್ರಿತ ಪ್ರತಿಗಳನ್ನು ಪ್ರಕಟಿಸುವುದರ ಜೊತೆಗೆ ಮಕ್ಕಳ ಮಂದಾರ ಪತ್ರಿಕೆಯ ಆನ್ಲೈನ್ ಬ್ಲಾಗ್ ಆವೃತ್ತಿಯಲ್ಲಿ ಸಾವಿರಾರು ಓದುಗರಿಗೆ ತಲುಪಿಸುತ್ತಿದ್ದಾರೆ. ಪತ್ರಿಕೆಯ ಪಿಡಿಎಫ್ ಆವೃತ್ತಿಯನ್ನು ಸಾವಿರಾರು ಸಾಹಿತ್ಯಾಸಕ್ತರಿಗೆ ತಲುಪಿಸುತ್ತಿದ್ದಾರೆ.
ಇವರ ಪತ್ರಿಕೆಯಿಂದ ಸ್ಪೂರ್ತಿ ಪಡೆದು ರಾಜ್ಯದ ಹಲವಾರು ಶಾಲೆಗಳಲ್ಲಿ ಶಾಲಾ ಮಟ್ಟದ ಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ.ಮಕ್ಕಳ ಸಾಹಿತ್ಯಾಸಕ್ತರು ಇಂತಹ ಪತ್ರಿಕೆಗಳನ್ನು ಪೋಷಿಸಿದರೆ ಕನ್ನಡ ಸಾಹಿತ್ಯ ಪೋಷಿಸುವಲ್ಲಿ, ಮಕ್ಕಳ ಬರಹಗಳಿಗೆ ವೇದಿಕೆ ಒದಗಿಸುವಲ್ಲಿ ದೊಡ್ಡ ಆಸ್ತಿಯಾಗುತ್ತದೆ. ಮಕ್ಕಳೇ ಬರೆದ ಬರಹಗಳಿಗೆ ವೇದಿಕೆ ಒದಗಿಸುವ ಇವರ ಕಾರ್ಯ ಹೀಗೆ ನಿರಂತರವಾಗಿರಲಿ ಎನ್ನುವುದೇ ನಮ್ಮ ಹಾರೈಕೆ.
ಈವರೆಗಿನ ಮಕ್ಕಳ ಮಂದಾರ ಶಾಲಾ ಪತ್ರಿಕೆಯ ಪ್ರತಿಗಳಿಗಾಗಿ. ಮಕ್ಕಳ ಮಂದಾರ ಬ್ಲಾಗ್ಸ್ಪಾಟ್ ನೋಡಿ.ಮಕ್ಕಳ ಮಂದಾರ ಪತ್ರಿಕಾ ಪ್ರಧಾನ ಸಂಪಾದಕರಾದ ಶಿಕ್ಷಕ ರವಿಚಂದ್ರ ಇವರ ಸಂಪರ್ಕ – 9980952630.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.