ಕೊರೋನಾವೈರಸ್ನ ಎರಡನೇ ಅಲೆ ಮತ್ತೆ ದೇಶದಲ್ಲಿ ಭೀತಿಯನ್ನು ಸೃಷ್ಟಿ ಮಾಡಿದೆ. ಮಹಾಮಾರಿ ದೇಶದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವ್ಯಾಪಿ ಲಾಕ್ಡೌನ್ ಘೋಷಿಸಿ ವರ್ಷ ಮುಗಿಯುದರೊಳಗೆ ಮತ್ತೆ ವೈರಸ್ ಕಾಣಿಸಿಕೊಂಡಿರುವುದು ಸಹಜವಾಗಿ ಎಲ್ಲರಲ್ಲೂ ಆತಂಕವನ್ನು ಸೃಷ್ಟಿ ಮಾಡಿದೆ. 2020 ರ ಮಾರ್ಚ್ 24 ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿಯವರು ದೇಶವನ್ನು ಸಾಂಕ್ರಾಮಿಕದಿಂದ ಕಾಪಾಡುವ ಸಲುವಾಗಿ ಲಾಕ್ಡೌನ್ ಘೋಷಿಸಿದ್ದರು. 2020 ರ ಮಾರ್ಚ್ 25 ರಂದು ಭಾರತದಲ್ಲಿ ಇದ್ದ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ 519. ಪ್ರಸ್ತುತ ದೇಶದಲ್ಲಿ 1,17,87,534 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 3,95,192 ಸಕ್ರಿಯ ಪ್ರಕರಣಗಳು.
ಸಾಂಕ್ರಾಮಿಕ ಕಾಣಿಸಿಕೊಂಡ ಸಂದರ್ಭದಲ್ಲಿ ಭಾರತದಂತಹ ದೊಡ್ಡ ಜನಸಂಖ್ಯೆಯ ಅದರಲ್ಲೂ ವಲಸಿಗರನ್ನು ಹೆಚ್ಚಾಗಿ ಹೊಂದಿರುವ ದೇಶಕ್ಕೆ ಲಾಕ್ಡೌನ್ ಅನ್ನು ನಿರ್ವಹಣೆ ಮಾಡುವುದು ಅಸಾಧ್ಯ ಎಂಬ ಅಭಿಪ್ರಾಯವನ್ನು ಇತ್ತು. ಆದರೆ ಭಾರತ ಈ ಅಭಿಪ್ರಾಯವನ್ನು ಸುಳ್ಳು ಮಾಡಿ, ಕಷ್ಟಗಳ ನಡುವೆಯೂ ಲಾಕ್ಡೌನ್ ಅನ್ನು ಯಶಸ್ವಿಗೊಳಿಸಿತ್ತು. ಬಡವರು, ವಲಸಿಗರು ಮತ್ತು ಸಣ್ಣ ಉದ್ಯಮಗಳ ಮೇಲೆ ಲಾಕ್ಡೌನ್ ಬೀರಿದ ಪರಿಣಾಮ ಸಾಮಾನ್ಯದ್ದಲ್ಲ ಎಂಬುದು ನಿಜ. ಇದರಿಂದಾಗಿ ಭಾರತದ ಆರ್ಥಿಕತೆ ಕೂಡ ಸಾಕಷ್ಟು ಕುಸಿತವನ್ನು ಕಾಣಬೇಕಾಯಿತು. ಆದರೂ ಜನರ ಜೀವದ ಎದುರು ಈ ಕಷ್ಟ ಕೋಟಿಗಳು ಸಾಮಾನ್ಯ ಅನಿಸಿ ಬಿಟ್ಟವು. ಲಾಕ್ಡೌನ್ ಅಂತ್ಯವಾದ ಬಳಿಕ ದೇಶವಾಸಿಗಳು ಹುಮ್ಮಸ್ಸಿನಿಂದಲೇ ಮತ್ತೆ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಮುಂದಾದರು, ಸಾಂಕ್ರಾಮಿಕ ಕೊಟ್ಟ ಏಟನ್ನು ನಿವಾರಿಸಿಕೊಂಡು ದೇಶದ ಆರ್ಥಿಕತೆಯನ್ನು ಮತ್ತೆ ಕಟ್ಟಲು ಟೊಂಕಕಟ್ಟಿ ನಿಂತರು. ಕುಗ್ಗುತ್ತಿದ್ದ ಕೊರೋನಾ ಪ್ರಕರಣ ಅವರ ಹುಮ್ಮಸ್ಸಿಗೆ ಕಾರಣವಾಗಿತ್ತು. ಆದರೆ ಈಗ ಕೊರೋನಾದ ಎರಡನೇ ಅಲೆ ಮತ್ತೆ ಜನರನ್ನು ತತ್ತರಿಸುವಂತೆ ಮಾಡಿದೆ. ಮತ್ತೊಂದು ಲಾಕ್ಡೌನ್ ಅನ್ನು ಊಹೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲೂ ಜನರು ಇಲ್ಲ. ಆದರೆ ಪರಿಸ್ಥಿತಿಗೆ ನಾವು ತಲೆಬಾಗಲೇ ಬೇಕು, ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು.
ಭಾರತ ಪ್ರಸ್ತುತ ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆ ಅಭಿಯಾನವನ್ನು ಮುನ್ನಡೆಸುತ್ತಿದೆ. ಈಗಾಗಲೇ ತನ್ನ ನಾಗರಿಕರಿಗೆ 5 ಕೋಟಿ ಡೋಸ್ ಲಸಿಕೆಯನ್ನು ನೀಡಿದೆ. ಮಾತ್ರವಲ್ಲದೆ 70ಕ್ಕೂ ಅಧಿಕ ರಾಷ್ಟ್ರಗಳಿಗೆ ಲಸಿಕೆಯನ್ನು ಪೂರೈಕೆ ಮಾಡಿದೆ. ಸಂಕಷ್ಟದ ಸಂದರ್ಭದಲ್ಲೂ ಭಾರತ ಜಗತ್ತಿಗೆ ಸಹಾಯ ಮಾಡುವ ತನ್ನ ಮಾನವೀಯ ಗುಣವನ್ನು ಮರೆತಿಲ್ಲ. ಇಂದಿಗೂ ಭಾರತದ ಲಸಿಕೆಯನ್ನು ನೆಚ್ಚಿಕೊಂಡು ಅನೇಕ ರಾಷ್ಟ್ರಗಳು ಲಸಿಕೆ ಅಭಿಯಾನವನ್ನು ಮುನ್ನಡೆಸುತ್ತಿದೆ. ತನ್ನ ನಾಗರಿಕರನ್ನು ಕಾಪಾಡಲು ಭಾರತದ ಲಸಿಕೆ ಅನಿವಾರ್ಯ ಎಂಬ ಪರಿಸ್ಥಿತಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇದೆ. ಭಾರತವೂ ಅವುಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹೆಚ್ಚು ಪರಿಶ್ರಮಪಡುತ್ತಿದೆ.
ಆದರೆ ಇಂತಹ ಸಂದರ್ಭದಲ್ಲಿ ಮತ್ತೆ ಎರಡನೇ ಅಲೆ ಕಾಣಿಸಿಕೊಂಡು ಭಾರತ ಸೇರಿದಂತೆ ಜಗತ್ತನ್ನು ತತ್ತರ ಗೊಳ್ಳುವಂತೆ ಮಾಡಿದೆ. ಇದರಿಂದ ಲಸಿಕ ಅಭಿಯಾನವನ್ನು ಇನ್ನಷ್ಟು ತೀವ್ರಗತಿಯಲ್ಲಿ ನಡೆಸಬೇಕಾದ ಅನಿವಾರ್ಯತೆ ಬಂದೊದಗಿದೆ. ಲಸಿಕೆಗಳ ಉತ್ಪಾನೆಯೂ ತೀವ್ರಗೊಳ್ಳಬೇಕಾಗಿದೆ. ಎರಡನೇ ಅಲೆಯ ನಡುವೆಯೂ ಜಗತ್ತಿಗೆ ಭರವಸೆ ನೀಡಿರುವ ಭಾರತ, ಹಂತ ಹಂತವಾಗಿ ಲಸಿಕೆಗಳನ್ನು ಬೇರೆ ರಾಷ್ಟ್ರಗಳಿಗೆ ಪೂರೈಕೆ ಮಾಡುವುದನ್ನು ಮುಂದುವರೆಸುತ್ತೇವೆ ಎಂದಿದೆ.
ಈ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ. ಒಂದು ವೇಳೆ ಪ್ರಕರಣಗಳು ಇನ್ನಷ್ಟು ಹೆಚ್ಚಾದರೆ ಮತ್ತೆ ಸಂಪೂರ್ಣವಾಗಿ ಲಾಕ್ಡೌನ್ ಘೋಷಣೆ ಮಾಡುವುದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಬಹುದು. ಹೀಗಾಗಿ ಜನರೇ ಎಚ್ಚರಿಕೆವಹಿಸಿ ಸಾಂಕ್ರಾಮಿಕ ತಮ್ಮನ್ನು ಬಾಧಿಸದಂತೆ ನೋಡಿಕೊಳ್ಳಬೇಕಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಾವಳಿಗಳನ್ನು ತಪ್ಪದೇ ಪಾಲನೆ ಮಾಡಬೇಕಾಗಿದೆ. ಅನಗತ್ಯ ಓಡಾಟ, ಅನಗತ್ಯವಾಗಿ ಸಭೆ ಮತ್ತು ಸಮಾರಂಭಗಳ ಆಯೋಜನೆಗಳು ನಿಲ್ಲಬೇಕಾಗಿದೆ. ಕೇವಲ ಸರ್ಕಾರದಿಂದ ಮಾತ್ರ ಇದು ಸಾಧ್ಯವಿಲ್ಲ, ಜವಾಬ್ದಾರಿಯುತ ಸಮಾಜವಾಗಿ ನಮ್ಮ ಕೊಡುಗೆಯೂ ಅಪಾರವಿದೆ. ಭಾರತ ಜಗತ್ತಿಗೆ ಸಹಾಯ ಮಾಡುತ್ತಿದೆ, ಹೀಗಾಗಿ ಭಾರತೀಯನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆ ಜವಾಬ್ದಾರಿಯನ್ನು ನಾವು ಅರಿತು ನಡೆದುಕೊಳ್ಳಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.