News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಹಾಡ್ ಸತ್ಯಾಗ್ರಹ: ಸಮಾನತೆಗಾಗಿ ಮೊಳಗಿದ ಮೊದಲ ಧ್ವನಿ

ಅದು 1927, ಮಾರ್ಚ್ 20. ಈ ದೇಶದ ಚರಿತ್ರೆಯ ಪುಟಗಳಲ್ಲಿ ಅಪೂರ್ವ ಘಟನೆಯೊಂದು ದಾಖಲಾದ ದಿನ. ಆ ಘಟನೆ ಉಂಟುಮಾಡಿದ ಪರಿಣಾಮ ಊಹಿಸಲಾರದಷ್ಟು ದೊಡ್ಡದು. ಅಸ್ಪೃಶ್ಯರಲ್ಲಿ ನವಚೈತನ್ಯವನ್ನು, ಸ್ವಾಭಿಮಾನದ ಜಾಗೃತಿಯನ್ನು ನಿರ್ಮಾಣ ಮಾಡಿದ ಆ ಘಟನೆಯೇ ಮಹಾಡ್‍ನ ಚವ್‍ದಾರ್ ಕೆರೆಯ ನೀರನ್ನು ಕುಡಿಯಲು ಮಾಡಿದ ಸತ್ಯಾಗ್ರಹ. ಜಾತಿಯ  ಕಾರಣದಿಂದ ಅಸ್ಪೃಶ್ಯರಿಗೆ ನಿಷೇಧಿಸಲ್ಪಟ್ಟ ಕೆರೆಯ ನೀರನ್ನು ಮುಟ್ಟಲು ಹುಟ್ಟಿದ ಆಂದೋಲನ ಪ್ರಾಣಿಗಳಿಗಿಂತ ಕೀಳಾಗಿ ನಡೆಸಲ್ಪಡುತ್ತಿದ್ದವರ ಸಂಘಟಿತ ಧ್ವನಿಯಾಗಿತ್ತು. ನೀರು ಮುಟ್ಟುವ ಮೂಲಕ ಶತಮಾನಗಳ ಅಮಾನವೀಯ ನಡವಳಿಕೆಯೊಂದನ್ನು ದಿಕ್ಕರಿಸಿದ್ದಷ್ಟೆ ಅಲ್ಲ, ಸಮಾನತೆಯು ಬೆಸೆಯಲು ಸಾಧ್ಯವಾಗದಂತಿದ್ದ ದೊಡ್ಡ ಕಂದಕದ ನಿವಾರಣೆಗಾಗಿ ನಡೆಸಿದ ಮೌನಕ್ರಾಂತಿಗೆ ಬರೆದ ಮುನ್ನುಡಿಯಾಗಿತ್ತು. ಜಡ್ಡುಗಟ್ಟಿದ್ದ ಸನಾತನ ಸವರ್ಣಿಯ ಮನಸುಗಳಿಗೆ ಬ್ರಾತೃತ್ವದ ಚಿಕಿತ್ಸೆ ನೀಡಲು ನಡೆಸಿದ ಪ್ರಯತ್ನದ ಮೊದಲ ಮೆಟ್ಟಿಲಾಗಿತ್ತು. ಅಂಬೇಡ್ಕರ್ ಜೀವನ ಚರಿತ್ರೆಕಾರ ಧನಂಜಯ ಕೀರ್ ಗುರುತಿಸುವಂತೆ “ 20ನೇ ಶತಮಾನದಲ್ಲಿ ಅಸ್ಪೃಶ್ಯರು ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕವಾಗಿ ತಮ್ಮ ನಾಗರಿಕ ಹಕ್ಕುಗಳನ್ನು ಪ್ರತಿಪಾದಿಸಿದ ಪ್ರಥಮ ಪ್ರಸಂಗ ಅದಾಗಿತ್ತು. ಬ್ರಿಟಿಷ್ ಆಳ್ವಿಕೆಯಿದ್ದರೂ ಹಿಂದೂ ಸವರ್ಣಿಯರೇ ಅಧಿಕ ಸಂಖ್ಯೆಯಲ್ಲಿರುವ ಶಾಸನ ಸಭೆ ತಾನೆ ಕೈಗೊಂಡ ನಿರ್ಣಯವನ್ನು ಕಾರ್ಯಗತಗೊಳಿಸದೇ, ಸ್ವಹಿತಾಸಕ್ತ ನೀತಿ ಅನುಸರಿಸಬಲ್ಲುದೆಂಬುದನ್ನು ಮಹಾಡ್ ಸಮಾವೇಶ ಜಗಜ್ಜಾಹೀರುಗೊಳಿಸಿತ್ತು .ಅಸ್ಪೃಶ್ಯರ ಹಿತವನ್ನು ಗುತ್ತಿಗೆ ಹಿಡಿದವರಂತೆ ವರ್ತಿಸುತ್ತಿದ್ದ ಕಾಂಗ್ರೆಸ್ ಬಣ್ಣ ಬಯಲಾಗಿತ್ತು; ಅಸ್ಪೃಶ್ಯರ ನೇತಾರರಾಗಿ ಅಂಬೇಡ್ಕರ್ ಅಪೂರ್ವ ಪ್ರಭಾವಶಾಲಿ ಎಂಬುದು ಬ್ರಿಟಿಷರಿಗೆ ಮನವರಿಕೆಯಾಗಿತ್ತು”.

ಆದರೆ ಯಾವ ಸತ್ಯಾಗ್ರಹವು ಸವರ್ಣಿಯ ಮತ್ತು ಅಸ್ಪೃಶ್ಯ ಮನಸ್ಸುಗಳು ಬೆಸೆಯಲು ಮುನ್ನುಡಿಯಾಗಬೇಕಾಗಿತ್ತೋ, ಆ ಸತ್ಯಾಗ್ರಹದಲ್ಲಿ ಭಾಗವಹಿಸಿದ ಅಸ್ಪೃಶ್ಯರಿಗೆ ಸಿಕ್ಕಿದ್ದು ಲಾಠಿ ಮತ್ತು ಕತ್ತಿಯ ಏಟುಗಳು ಮಾತ್ರ! ಹೆಜ್ಜೆ ಹೆಜ್ಜೆಗೂ ನಡೆದ ದೌರ್ಜನ್ಯದ ಸರಮಾಲೆಯು ಚರಿತ್ರೆಯ ಪುಟದ ಕಪ್ಪುಚುಕ್ಕೆಯಾಯಿತು. 1923ರಲ್ಲೇ ಮಹಾಡ್‍ನ ಮುನ್ಸಿಪಲ್ ಸಂಸ್ಥೆಯು ಚವ್‍ದಾರ್ ಕೆರೆಯನ್ನು ಸಾರ್ವಜನಿಕ ಕೆರೆಯೆಂದು ಗುರುತಿಸಿ ಮುಕ್ತ ಪ್ರವೇಶ ನೀಡುವ “ಭೋಲೆ ನಿರ್ಣಯ “ ಕಚೇರಿಯ ಕಪಾಟಿನ ಅಡಿಯಲ್ಲಿ ದೂಳುತಿನ್ನುತ್ತಿದ್ದಾಗ ಡಾ. ಅಂಬೇಡ್ಕರ್ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯ ದಲಿತರು ವಿಮೋಚನೆಯ ಕನಸಿನೊಂದಿಗೆ ಕೆರೆಯ ನೀರನ್ನು ಮುಟ್ಟಿದ್ದರು. ಈ ಸತ್ಯಾಗ್ರಹ ಸವರ್ಣಿಯ ಮತ್ತು ಅಸ್ಪೃಶ್ಯ ಸಮಾಜದ ಸಂಬಂಧ ಬೆಸೆಯಲು ನಡೆಸಿದ ತಪಸ್ಸಾಗಿತ್ತು. ಭೇದವಳಿದು ಸಹಬಾಳ್ವೆ- ಸಾಮರಸ್ಯದ ಸ್ಥಾಪನೆಗಾಗಿ ನಡೆಸಿದ ಬಹುದೊಡ್ಡ ಪ್ರಯತ್ನವಾಗಿತ್ತು. ಹಿಂದು ಸಮಾಜದ ಅವಿಭಾಜ್ಯ ಅಂಗವಾಗಿ, ಹಿಂದು ತತ್ವಜ್ಞಾನವೇ ಬದುಕಿನ ದರ್ಶನವಾಗಿ, ಹಿಂದು ದೇವರುಗಳೆ ಆರಾಧನೆಯ ಶಕ್ತಿಗಳಾಗಿ, ಸಮಾಜ ರಕ್ಷಣೆಯ ಕ್ಸಾತ್ರ ಪರಂಪರೆಯ ಕೊಂಡಿಯಾಗಿದ್ದ ಅಸ್ಪೃಶ್ಯರನ್ನು ಹೊರಗಿಟ್ಟಿದ್ದ ಹಿಂದೂ ಸಮಾಜಕ್ಕೆ ಅವರ ತಪ್ಪಿನ ಅರಿವುಂಟುಮಾಡಲು ನಡೆಸಿದ ಹೋರಾಟವಾಗಿತ್ತು.

ಯಾವ ಚವ್‍ದಾರ್ ಕೆರೆಯ ನೀರನ್ನು ಸವರ್ಣಿಯ ಹಿಂದೂ ಸಮಾಜ, ಕ್ರೈಸ್ತ, ಮುಸಲ್ಮಾನರಾದಿಯಾಗಿ ಅನ್ಯಧರ್ಮಿಯರೂ ಮುಟ್ಟಬಹುದಾಗಿತ್ತೋ, ಅಸ್ಪೃಶ್ಯರ ಮನೆಯ ಪಶುಪಕ್ಷಿಗಳೂ ಸೇರಿದಂತೆ ಎಲ್ಲರಿಗೂ ಮುಕ್ತವಾಗಿತ್ತೋ, ಆ ನೀರನ್ನು ಅಸ್ಪೃಶ್ಯರು ಮುಟ್ಟಬಾರದೆನ್ನುವುದು ಕಾಲದ ವ್ಯಂಗ್ಯವೇ ಆಗಿತ್ತು. ಹಿಂದೂ ಸಮಾಜದ ಅವಿಬಾಜ್ಯ ಭಾಗವಾಗಿದ್ದವರು ಕುರುಡುಗಣ್ಣಿನ ಸವರ್ಣಿಯ ಸಮಾಜಕ್ಕೆ ಹೊರಗಿನವರಾಗಿ ಕಾಣಿಸಿಕೊಂಡಿದ್ದ ಕಾಲಕ್ಕೆ ಅಂಬೇಡ್ಕರ್ ನೇತೃತ್ವದಲ್ಲಿ ನಡೆದ ಈ ಸತ್ಯಾಗ್ರಹ ಶತಮಾನಗಳಿಂದ ಆತ್ಮಗೌರವ ವಂಚಿತರಾಗಿ ಬದುಕು ನಡೆಸುತ್ತಿದ್ದ ಸಮಾಜದ, ಸ್ವಾಭಿಮಾನದ ಮರುಸ್ಥಾಪನೆಗಾಗಿ ನಡೆಸಿದ ಹೋರಾಟವಾಗಿತ್ತು. ಧರ್ಮದ ಹೆಸರಿನಲ್ಲಿ ಅಧರ್ಮದ ಮುಸುಕು ಹೊದ್ದವರ ನಡುವೆ ಬಾಬಾಸಾಹೇಬ್ ಅಂಬೇಡ್ಕರ್ ಸ್ವಧರ್ಮೊದ್ದಾರದ ಮಹಾನ್ ಕಾರ್ಯಕ್ಕೆ ಮುನ್ನುಡಿ ಬರೆದಿದ್ದರು. ಧಮನಿತ ಸಮುದಾಯದ ಒಳಗಿನಿಂದ ಪುಟಿದ ಸ್ವಾಭಿಮಾನದ ಧ್ವನಿಯೇ ಕೆರೆಯ ನೀರನ್ನು ಕೇಳಿದ್ದು, ಸ್ಪರ್ಶಿಸಿದ್ದು. ಸಾವಿರಾರು ಅಸ್ಪೃಶ್ಯರು ತಮ್ಮ ಸಮಾನಹಕ್ಕಿಗಾಗಿ ಎದ್ದು ನಿಂತಾಗ ಮಲಗಿದ್ದ ಭಾರತ ತನ್ನ ಕುಬ್ಜತೆಯನ್ನು ಕಳೆದು ಮೈಕೊಡಹಿ ಮೇಲೆದ್ದಂತಾಗಿತ್ತು. ಶತಮಾನಗಳ ಜಡತೆಗೆ ಸಿಡಿಲಾಘಾತದ ವಿದ್ಯುತ್ ಸಂಚಾರವಾದಂತಾಗಿತ್ತು.

ಅಸ್ಪೃಶ್ಯತೆಯು ಮೊದಲು ಅಸ್ಪೃಶ್ಯರನ್ನು ಸರ್ವನಾಶ ಮಾಡಿದೆ, ನಂತರ ಹಿಂದೂ ಸವರ್ಣಿಯರನ್ನು ನಾಶಮಾಡಿದೆ, ಅಂತಿಮವಾಗಿ ಅದು ಇಡೀ ದೇಶವನ್ನೇ ನಾಶಮಾಡಿದೆ ಎನ್ನುತ್ತಿದ್ದ ಅಂಬೇಡ್ಕರ್ “ಚವ್‍ದಾರ್ ಕೆರೆಯ ನೀರು ಕುಡಿಯಲು ಸಿಗದಿದ್ದಲ್ಲಿ ಅಸ್ಪೃಶ್ಯ ವರ್ಗ ಬಾಯಾರಿ, ಗಂಟಲು ಒಣಗಿಕೊಂಡು ಸಾಯಬೇಕಾಗುತ್ತಿತ್ತೆಂದೆನೂ ಅಲ್ಲ. ಆದರೆ ತಾವು ಹಿಂದೂ ಸಮಾಜದ ಅವಿಭಾಜ್ಯ ಅಂಗ, ಹಿಂದು ಧರ್ಮದ ನಿಷ್ಠಾವಂತ ಅನುಯಾಯಿಗಳು ತಾವು, ಹೀಗಾಗಿ ಒಂದು ಸಾರ್ವಜನಿಕ ಕೆರೆಯ ನೀರನ್ನು ಕುಡಿಯಲು ಸ್ವಾಭಾವಿಕವಾದ ಸಮಾನ ಅಧಿಕಾರ ತಮಗೂ ಇದೆ. ಇದನ್ನು ಸಾಧಿಸುವ ಸಲುವಾಗಿ ಕೈಗೊಳ್ಳಲಾಗಿದ್ದ ಸತ್ಯಾಗ್ರಹ ಅದು. ಅದಕ್ಕಾಗಿ ಅಸ್ಪೃಶ್ಯತೆಯ ನಿವಾರಣೆಯ ನಿಟ್ಟಿನಲ್ಲಿ ಅವರು ಆರಂಭಿಸಿದ ಧರ್ಮಯುದ್ಧದ ಮೊದಲ ಹೆಜ್ಜೆ ಆಗಿತ್ತದು” ಎಂದು ಚಿಂತಕ ದತ್ತೋಪಂತ್ ಠೇಂಗಡಿಯವರು ಗುರುತಿಸುತ್ತಾರೆ.

ಪ್ರತಿವರ್ಷ ಮಹಾಡ್ ಸತ್ಯಾಗ್ರಹದ ನೆನಪನ್ನು ಮಾಡುವ ಕಾಮ್ರೇಡ್‍ಗಳು ಮತ್ತು ಸ್ವಘೋಷಿತ ಅಂಬೇಡ್ಕರ್ ವಾದಿಗಳು ಈ ಹೋರಾಟವನ್ನು ಅಂಬೇಡ್ಕರ್ ಅವರು ಹಿಂದೂ ಧರ್ಮದ ವಿರುದ್ಧ ನಡೆಸಿದ ಸಮರ ಎಂಬಂತೆ ಬಿಂಬಿಸುತ್ತಾ ಬಂದಿದ್ದಾರೆ. ವಾಸ್ತವದಲ್ಲಿ ಡಾ. ಬಾಬಾಸಾಹೇಬರಿಗೆ ಈ ಸತ್ಯಾಗ್ರಹ ಹಿಂದೂ ಧರ್ಮದ ಸುಧಾರಣೆಯ ʼಧರ್ಮಯುದ್ಧʼವೇ ಆಗಿತ್ತು ಎನ್ನುವುದನ್ನು ಮರೆಮಾಚಲಾಗಿದೆ. ಅವರ ‘ಮಹಾಡ್‍ನ ಧರ್ಮಯುದ್ಧ ಹಾಗೂ ವರಿಷ್ಠ ಹಿಂದೂಗಳ ಜವಾಬ್ದಾರಿ’ ಎಂಬ ಲೇಖನವನ್ನು ಬಹುತೇಕವಾಗಿ ಯಾರು ಉಲ್ಲೇಖಿಸುವುದಿಲ್ಲ. ಯಾಕೆಂದರೆ ಆ ಲೇಖನ ಇಡೀ ಹೋರಾಟದ ಹಿಂದಿನ ಆಶಯವನ್ನು ವ್ಯಕ್ತಪಡಿಸುತ್ತದೆ. ಅಂಬೇಡ್ಕರ್ ಹೇಳುವಂತೆ “ಚವ್‍ದಾರ್ ಕೆರೆ ಒಂದು ಸಾರ್ವಜನಿಕ ಕೆರೆಯಾಗಿತ್ತು. ಕೆರೆಯ ನೀರನ್ನು ಮುಟ್ಟಿದ ಕಾರಣಕ್ಕೆ ದಲಿತರ ಮೇಲೆ ನಡೆದ ಹಲ್ಲೆ ಕೇವಲ ದಂಗೆ ಅಥವಾ ಹೋರಾಟವಲ್ಲ.ಅದು ಧರ್ಮಯುದ್ಧ ಎಂದರೆ ಯಥಾರ್ಥ. ಹಿಂದೂ ಧರ್ಮದ ಘಟಕ ಹಾಗೂ ಹಿಂದೂ ಧರ್ಮದ ಅನುಯಾಯಿಗಳು ಎನ್ನುವ ಸಂಬಂಧದಿಂದ ಇತರ ಹಿಂದುಗಳಿಗಿಂತ ನಾವು ಸಮಾನ ಯೋಗ್ಯತೆಯುಳ್ಳ ಅಧಿಕಾರಿಗಲಾಗಿದ್ದು ನಮ್ಮೆಲ್ಲರ ಹಕ್ಕುಗಳಲ್ಲಿ ಸಮಾನತೆಯಿದೆಯೋ? ಇಲ್ಲವೋ? ಎಂದು ನಿರ್ಧರಿಸುವ ಪ್ರಶ್ನೆಯೇ ಈ ನೀರಿನ ಹಿಂದಿದ್ದುದು. ಆದರೆ ಮಹಾಡ್‍ನ ಮೇಲ್ಜಾತಿಯವರು ನಮ್ಮನ್ನು ಸಾಮಾಜಿಕ ದೃಷ್ಟಿಯಲ್ಲಿ ಅವರಿಗಿಂತ ಕೀಳು ಮತ್ತು ನಮ್ಮ ಸ್ಪರ್ಶದಿಂದ ಅವರಿಗೆ ಅದೋಗತಿ ಯಾಗುತ್ತದೆ ಎಂಬಂತೆ ನಡೆದುಕೊಂಡರು”. ಈ ಕ್ರಿಯೆ ಅಸ್ಪೃಶ್ಯತೆಯು ಎಂಥಾ ಘೋರ ಪಾಪ ಎನ್ನುವುದನ್ನು ಸವರ್ಣಿಯರಿಗೆ ಮನವರಿಕೆ ಮಾಡಿಕೊಡಲು , ಅದರಿಂದ ಅಸ್ಪೃಶ್ಯ ಸಮುದಾಯ ಅನುಭವಿಸುತ್ತಿರುವ ನೋವನ್ನು ತಿಳಿಸಿಕೊಡುವ ಪ್ರಯತ್ನವಾದರೂ ಅಂದಿನ ಸವರ್ಣಿಯ ಕಲ್ಲು ಹೃದಯಗಳು ಕರಗಲಿಲ್ಲ ಎನ್ನುವುದನ್ನು ವಿಷಾದದಿಂದಲೇ ನುಡಿಯುತ್ತಾರೆ.

ಅಂಬೇಡ್ಕರ್ ಹಿಂದೂ ಧರ್ಮಲ್ಲಿರುವ ಅಸಮಾನತೆಯನ್ನು ವಿರೋಧಿಸುವಾಗ ಇಸ್ಲಾಂ ಮತ್ತು ಕ್ರೈಸ್ತ ಧರ್ಮದಲ್ಲಿರುವ ಸಮಾನತೆಯ ಬಗೆಗೆ ಮೆಚ್ಚುಗೆಯ ಭಾವನೆಯನ್ನು ಹೊಂದಿದ್ದರೆನ್ನುವಂತೆ ಬಿಂಬಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಅಂಬೇಡ್ಕರ್ ಅವರು ಕ್ರೈಸ್ತ ಮತ್ತು ಮೊಹಮ್ಮದೀಯ ಧರ್ಮಗಳು ಸಮಾನತೆಯನ್ನೇ ಒಪ್ಪುವುದಿಲ್ಲ ಎನ್ನುತ್ತಾರೆ. ಅವರ ತತ್ವಜ್ಞಾನದ ಮಿತಿ ಬಹಳ ಸಂಕುಚಿತವಾಗಿರುವುದನ್ನು ಗುರುತಿಸುತ್ತಾರೆ. ಎಲ್ಲರೂ ದೇವರ ಮಕ್ಕಳೇ, ಆದ್ದರಿಂದ ಎಲ್ಲರೂ ಒಂದೇ ಎಂದಷ್ಟೇ ಅವರು ಹೇಳುತ್ತಾರೆಯೇ ಹೊರತು ಮನುಷ್ಯರು ಮನುಷ್ಯರ ದೃಷ್ಟಿಯಲ್ಲಿ ಸಮಾನ ಎಂದು ಹೇಳುವಷ್ಟು ಸಾಮಥ್ರ್ಯ ಅವರಿಗಿಲ್ಲ ಎಂದು ವಿಶ್ಲೇಷಿಸುತ್ತಾ, ಹಿಂದೂ ಧರ್ಮ ಮಾತ್ರ ಸಮಾನತೆಯ ತತ್ವಕ್ಕೆ ಪೋಷಕವಾಗಿದೆ,ಯಾಕೆಂದರೆ ಎಲ್ಲರೂ ದೇವರ ಮಕ್ಕಳೇ ಎಂದಷ್ಟೇ ಹೇಳಿ ಸುಮ್ಮನಾಗದೆ ಎಲ್ಲರೂ ದೇವರ ಪ್ರತಿರೂಪ ಎಂದು ಧೈರ್ಯದಿಂದ ಹೇಳುತ್ತದೆ. ಸಮಾನತೆಯ ಸಾಮ್ರಾಜ್ಯ ಸ್ಥಾಪಿತವಾಗಲು ಇದಕ್ಕಿಂತಲೂ ದೊಡ್ಡ ಆಧಾರ ಸಿಗಲಾರದು. ಮಹಾಡ್‍ನಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಧರ್ಮ ಜ್ಞಾನವಿಲ್ಲದ ಸವರ್ಣಿಯರ ಹೇಯ ಕೃತ್ಯ ಎಂದು ಗುರುತಿಸುತ್ತಾರೆ.

ಹಿಂದೂ ಧರ್ಮದ ತತ್ವಜ್ಞಾನದ ಪ್ರಕಾರ ಎಲ್ಲರೂ ಸಮಾನರು, ಆದರೆ ಅಜ್ಞಾನಿಗಳ ಆಚಾರದ ದೃಷ್ಟಿಯಿಂದ ದಲಿತರು ಅಪವಿತ್ರರು. ಧರ್ಮದ ಆಚಾರಾತ್ಮಕ ಅಂಗವು ಧರ್ಮದ ತತ್ವಜ್ಞಾನವನ್ನೇ ಅವಲಂಬಿಸರಬೇಕು. ಆದರೆ ಇವುಗಳು ಒಂದಕ್ಕೊಂದು ಬೆಸೆಯದಿದ್ದರೆ, ದಿಕ್ಸೂಚಿಯಿಲ್ಲದ ಹಡಗನ್ನು ಸಮುದ್ರದಲ್ಲಿ ಬಿಟ್ಟಂತೆ. ಅದು ಎಲ್ಲೋ ಬಂಡೆಗೆ ಅಪ್ಪಳಿಸಿ ನಾಶವಾಗಬಹುದು. ಅಸ್ಪೃಶ್ಯತೆಯ ಆಚರಣೆ ವೇದಾಂತದ ಧರ್ಮವನ್ನು ವ್ಯವಹಾರದಲ್ಲಿ ತರಲು ಧೈರ್ಯವಿಲ್ಲದ ಅಸಮರ್ಥ ಜನರು ನಡೆಸುವ ಕೃತ್ಯ ಎನ್ನುತ್ತಾರೆ. ಆಚಾರ ಮತ್ತು ವಿಚಾರಗಳಲ್ಲಿ ಪರಸ್ಪರ ವಿರೋಧವಿದ್ದಾಗ ಧರ್ಮದ ಆಚಾರಗಳಲ್ಲಿ ಬದಲಾವಣೆ ತರಬೇಕಾಗುತ್ತದೆ. ಅಸ್ಪೃಶ್ಯತೆಯನ್ನು ದಿಕ್ಕರಿಸಿ ತಮ್ಮ ಉಜ್ವಲ ಧರ್ಮಕ್ಕೆ ಮಸಿ ಬಳಿಯುತ್ತಿರುವ ಪಾಪಿ ಹಾಗೂ ಧರ್ಮಾಂದರ ಅಧರ್ಮವನ್ನು ತಡೆಯಬೇಕಾಗಿತ್ತು. ಆದರೆ ಮತಿಮಂದ ಜನರು ಚವ್‍ದಾರ್ ಕೆರೆಗೆ ಗೋಮೂತ್ರ ಸುರಿದು ಶುದ್ಧೀಕರಣವನ್ನು ನಡೆಸಿದ್ದರು! ಆ ಮೂಲಕ ದಲಿತರು ಅಪವಿತ್ರರು, ಅವರು ಮುಟ್ಟಿದ್ದು ಭ್ರಷ್ಟಗೊಳ್ಳುತ್ತದೆ ಎಂದು ತಮ್ಮ ಮಾನಗಳೆದ ಸವರ್ಣಿಯರು ಹಿಂದು ಧರ್ಮಕ್ಕೆ ಕಳಂಕ ಎಂದು ನಿರ್ಭೀತಿಯಿಂದ ಸಾರುತ್ತಾರೆ. ಹಿಂದು ಸಮಾಜದ ಘೋರ ವಿಸ್ಮೃತಿಯನ್ನು ನೋವಿನಿಂದಲೇ ಹೇಳಿಕೊಳ್ಳುವ ಅಂಬೇಡ್ಕರ್‌ಗೆ ದಲಿತರು ಮುಸಲ್ಮಾನರಾಗಿ ಮತಾಂತರಗೊಂಡು ಕೆರೆಯ ನೀರನ್ನು ಮುಟ್ಟಿದರೆ ಮೈಲಿಗೆಯಾಗದ ಸವರ್ಣಿಯರಿಗೆ, ದಲಿತರು ಹಿಂದುಗಳಾಗಿಯೇ ಬಂದಾಗ ಮೈಲಿಗೆಯಾಗುತ್ತದೆ ಎಂಬ ಮಾನಸಿಕತೆಯನ್ನು ಧರ್ಮದ್ರೋಹ ಎನ್ನುತ್ತಾರೆ.

ಇಂತಹ ನೋವುಂಡ ಅಂಬೇಡ್ಕರ್‌ಗೆ ಹಿಂದು ಧರ್ಮದ ಸುಧಾರಣೆಯೇ ಕನಸಾಗಿತ್ತು. ಆಚರಣೆಯ ದೋಷವನ್ನು ಪರಿಹರಿಸಿ ತತ್ವಜ್ಞಾನದ ಉದಾತ್ತತೆಯೇ ಬದುಕಾಗಬೇಕೆಂಬ ಆಸೆಯಿತ್ತು. “ಅಸ್ಪೃಶ್ಯತೆ  ಹಿಂದು ಧರ್ಮಕ್ಕಿರುವ ಕಳಂಕ ಎಂದು ಕೊಂಡಿದ್ದೆವು. ಆದರೆ ಈಗ ಅಸ್ಪೃಶ್ಯತೆ ನಮ್ಮ ನರದೇಹಕ್ಕಿರುವ ಕಳಂಕ ಎಂದೆನಿಸುತ್ತದೆ. ಅದನ್ನು ಹಿಂದು ಧರ್ಮಕ್ಕಿರುವ  ಕಳಂಕ ಎಂದು ಅದನ್ನು ತೊಡೆದು ಹಾಕುವ ಕೆಲಸವನ್ನು ನಾವು ನಿಮಗೆ ವಹಿಸಿದ್ದೆವು. ಆದರೆ ಅದು ನಮ್ಮ ಕಳಂಕ ಎಂದು ತಿಳಿದ ಮೇಲೆ ಈ ಕಳಂಕವನ್ನು ತೊಡೆದುಹಾಕುವ ಕೆಲಸವನ್ನು ನಾವೇ ಮಾಡಲಿದ್ದೇವೆ. ಈ ಕಾರಣಕ್ಕಾಗಿ ನಮ್ಮ ಕೆಲವು ಜನರಿಗೆ ʼಆತ್ಮಯಜ್ಞʼ ಮಾಡಿಕೊಳ್ಳುವ ಅಗತ್ಯವಿದ್ದಲ್ಲಿ ನಾವು ಹಿಮ್ಮೆಟ್ಟುವವರಲ್ಲ. ಕೆರೆಯ ನೀರನ್ನು ಶುದ್ಧೀಕರಿಸಿ ನೀವು ನಮ್ಮ ಅಪವಿತ್ರತೆಯನ್ನು ಸಿದ್ಧಪಡಿಸಿದಿರಿ, ಆದರೆ ನಾವು ಕೂಡ ಪವಿತ್ರರು ಎನ್ನುವುದನ್ನು ನಿಮ್ಮ ಬಾಯಿಯಿಂದ ಕೇಳದೆ ಸುಮ್ಮನಿರುವುದಿಲ್ಲ”ಎನ್ನುತ್ತಲೇ “ನೀವು ಹಿಂದು ಧರ್ಮಕ್ಕಂಟಿರುವ ಕಳಂಕವನ್ನು ನಿಮ್ಮ ರಕ್ತದಿಂದ ತೊಳೆದುಹಾಕಬೇಕು ಎಂದೇನಾದರೂ ದೈವಚಿತ್ತವಿದ್ದರೆ, ನಾವು ಭಾಗ್ಯವಂತರು ಅಂದುಕೊಂಡು ಈ ಪವಿತ್ರ ಕಾರ್ಯಕ್ಕೆ ನಾವು ಧೂತರಾಗಲಿದ್ದೇವೆ”ಎಂದಿದ್ದ ಅಂಬೇಡ್ಕರ್‍ಗೆ ಸವರ್ಣಿಯ ಸಮಾಜದಿಂದ ಸಿಕ್ಕಿದ್ದು ಮಾತ್ರ ಅವಮಾನ, ಯಾತನೆ ಮಾತ್ರ.

ಅವರು ಕೆರೆಯ ನೀರಿಗೆ ಬೊಗಸೆಯೊಡ್ಡಿದ್ದು ಬಾಯಾರಿದ ತನ್ನ ಸಮುದಾಯದ ಜನರ ಬಾಯಾರಿಕೆ ತಣಿಸಲಲ್ಲ. ಮುಚ್ಚಿದ ದೇಗುಲದ ಬಾಗಿಲ ಮುಂದೆ ಕೈಮುಗಿದು ಪ್ರಾರ್ಥಿಸಿದ್ದು ಗುಡಿಯೊಳಗಿನ ಕಲ್ಲಿನ ವಿಗ್ರಹದ ದರ್ಶನ ಮಾತ್ರದಿಂದ ತಾವು ಪುನೀತರಾಗುತ್ತೇವೆ ಎಂಬ ಭಾವದಿಂದಲೂ ಅಲ್ಲ. ಕೆರೆಯ ನೀರಿನ ಸ್ಪರ್ಶದಿಂದ, ದೇಗುಲದ ವಿಗ್ರಹದ ದರ್ಶನದಿಂದ ಸಾಧ್ಯವಾಗಬೇಕಾದುದು ಸವರ್ಣಿಯ ಹೃದಯದೊಳಗೆ ಪ್ರವೇಶ. ಸವರ್ಣಿಯ ಮನಸುಗಳು  ಸಂವೇದನಾಶೀಲಗೊಳ್ಳಬೇಕು, ಅಸ್ಪೃಶ್ಯ ಬಂಧುಗಳನ್ನು ತಮ್ಮವರೆಂದು ಅಪ್ಪಿಕೊಂಡು , ನಾಗರಿಕ ಹಕ್ಕುಗಳನ್ನು ಅವರಿಗೂ ಸಮಾನವಾಗಿ ಒದಗಿಸಿಕೊಡಬೇಕು ಎಂಬ ಕಾರಣಕ್ಕಾಗಿ. ಆದರೆ ಅಂಬೇಡ್ಕರ್‌ಗೆ ಅರಿವಾದ ಸತ್ಯವೆಂದರೆ ಜಾತ್ಯಾಂಧ ಹೃದಯಗಳು ಸಮರಸತೆಯ ಕೂಗಿಗೆ ದ್ರವಿಸದ ಬಂಡೆಗಲ್ಲುಗಳು ಎಂದು. ತಾವು ಸಹ ಉಳಿದವರಂತೆ ಮನುಷ್ಯರು ಎಂದು ಸಾಬೀತು ಪಡಿಸುವ ಅವರ ಕನಸಿಗೆ ಬೆಲೆಯೇ ಸಿಗಲಿಲ್ಲ.

ಅಂಬೇಡ್ಕರ್ ಕಟ್ಟಿದ ಸಮಾನತೆಯ ಆಶಯದ ಈ ಚಳವಳಿ ಅಂದು ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಷ್ಟೆ ಮಹತ್ವದ್ದಾಗಿತ್ತು. ಬ್ರಿಟಿಷರ ವಿರುದ್ಧ ಸಂಘಟಿಸುವ ಹೋರಾಟಕ್ಕಿಂತಲೂ ಹೆಚ್ಚು ಸವಾಲಿನದ್ದಾಗಿತ್ತು.ಇಂತಹ ಸವಾಲನ್ನು ಸ್ವೀಕರಿಸಿದ್ದ ಅಂಬೇಡ್ಕರ್ ಅಂದು ಸಂಘಟಿತ ಸತ್ಯಾಗ್ರಹವೊಂದನ್ನು ರೂಪಿಸುವಲ್ಲಿ ಯಶಸ್ವಿಯಾದರು. ಇದು ಅಕಸ್ಮಿಕವಾದ ಅಥವಾ ಸಾಂಕೇತಿಕವಾದ ಚಳವಳಿಯಾಗಿರಲಿಲ್ಲ. ಒಂದು ಪ್ರಜ್ಞಾಪೂರ್ವಕ ಸಂದೇಶವನ್ನು ಈ ದೇಶದ ಸವರ್ಣೀಯ ಸಮಾಜಕ್ಕೆ ಮತ್ತು ಅಸ್ಪೃಶ್ಯ  ಸಮುದಾಯಕ್ಕೆ ರವಾನಿಸುವುದಕ್ಕಾಗಿಯೇ ರೂಪಿಸಿದ ಸತ್ಯಾಗ್ರಹವಾಗಿತ್ತು. ನಾಗರಿಕ ಹಕ್ಕುಗಳನ್ನು ಮರಳಿ ಪಡೆಯಲು ನಡೆಸಿದ ಧರ್ಮಯುದ್ಧವೇ ಆಗಿತ್ತು. ಅಂದು ಮೊಳಗಿದ ಧರ್ಮಯುದ್ಧದ ರಣಕಹಳೆ ಕಾಲಾನಂತರದಲ್ಲಿ ಫಲ ಕೊಡಲಾರಂಬಿಸಿತು. ಸಮಾನತೆಯ ಕನಸು ಸಂವಿಧಾನದ ಆಶಯದ ರೂಪದಲ್ಲಿ ಪ್ರಕಟವಾಗುತ್ತದೆ. ಆದರೂ ಭಾರತ ಈ ಆಶಯವನ್ನು ಸಾಧಿಸಲು ಇನ್ನೂ ಸಾಕಷ್ಟು ದೂರದ ಹಾದಿಯಲ್ಲಿ ಹೆಜ್ಜೆಗಳನ್ನು ಇಡಬೇಕಾಗಿದೆ.

✍️ ಡಾ. ರೋಹಿಣಾಕ್ಷ ಶಿರ್ಲಾಲು

Tags:

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top