ಕೊರೋನಾ ಸೋಂಕಿನಿಂದ ಜಗತ್ತಿನ ಹಲವು ರಾಷ್ಟ್ರಗಳು ಆರಂಭದಲ್ಲಿ ತತ್ತರಿಸಲಾರಂಭಿಸಿದಾಗ ಅತಿ ಹೆಚ್ಚು ಜನಸಾಂದ್ರತೆ ಇರುವ ನಮ್ಮ ದೇಶಕ್ಕೆ ಕೊರೋನಾ ನಿಯಂತ್ರಿಸುವುದು ಕಠಿಣ ಸವಾಲಾಗಿತ್ತು, ಅಪಾರ ಪ್ರಾಣಹಾನಿಯ ನಷ್ಟದ ಸಾಧ್ಯತೆಯು ಹೆಚ್ಚಾಗಿತ್ತು. ಪ್ರಪಂಚದ ಹಲವು ರಾಷ್ಟ್ರಗಳು ಭಾರತದಲ್ಲಿ ಮುಂದೆ ನಡೆಯಲಿರುವ ಮಾರಣಹೋಮದ ಕುರಿತು ಯೋಚಿಸುತ್ತಿರುವಾಗಲೇ ಪ್ರಧಾನಿ ಮೋದಿ ಅವರು ಆರಂಭಿಕ ಹಂತದಲ್ಲಿ ಅರ್ಥಿಕತೆ ಕುರಿತು ಯೋಚಿಸದೆ, ಲಾಕ್ ಡೌನ್ ಹೇರಿ, ಸೊಂಕು ಹರಡುವಿಕೆಯ ವೇಗವನ್ನು ತಗ್ಗಿಸಿದರು. ಮುಂದೆ ಈ ನಡೆ ಪ್ರಪಂಚದ ಇತರ ರಾಷ್ಟ್ರಗಳಿಗೆ ಪ್ರೇರಣೆಯಾಯಿತು.
ವಿವಿಧ ಅಭಿಯಾನದ ರೂಪದಲ್ಲಿ ಜನರಲ್ಲಿ ಪ್ರಧಾನಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು. ಮೋದಿಯವರ ಪ್ರತಿಯೊಂದು ಕರೆಗೂ ದೇಶದ ಜನತೆ ಅದ್ಭುತವಾಗಿ ಸ್ಪಂದಿಸಿತು. ಅದಕ್ಕೆ ಸಾಕ್ಷಿ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂ! ದೀಪ ಬೆಳಗಿಸುವಿಕೆ, ಚಪ್ಪಾಳೆ ಇತ್ಯಾದಿ ವಿಪಕ್ಷಗಳಿಗೆ ಮೂದಲಿಕೆ ವಿಷಯವಾದರೂ, ಆ ಕಠಿಣ ಸಂದರ್ಭದಲ್ಲಿ ಕೊರೋನಾ ಯೋಧರಿಗೆ ಅದು ವಿಶ್ವಾಸ ತುಂಬಿಸುವಲ್ಲಿ ನೆರವಾಯಿತು. ಸಾವಿರಾರು ಕೊರೋನಾ ವಾರಿಯರ್ಸ್ ನಮಗಾಗಿ ನಿಸ್ವಾರ್ಥದಿಂದ ತಮ್ಮ ಕರ್ತವ್ಯ ನಿರ್ವಹಿಸಿದರು. ಪ್ರಪಂಚದ ಅನೇಕ ಕೊರೋನಾ ಪೀಡಿತ ದೇಶಗಳಲ್ಲಿ ಸಿಲುಕಿಕೊಂಡಿದ್ದ ತಮ್ಮ ನಾಗರಿಕರನ್ನು ಅಲ್ಲಿಯೇ ಬಿಟ್ಟಿದ್ದ ಸಂದರ್ಭದಲ್ಲಿ, ಭಾರತವು ಭಾರತೀಯರು ಮಾತ್ರವಲ್ಲದೆ ಇತರ ದೇಶಗಳ ನಾಗರಿಕರನ್ನು ಸಹ ಅಂದು ಸ್ಥಳಾಂತರಿಸಿ, ಜಗತ್ತಿಗೆ ಮಾದರಿ ಸಂದೇಶ ನೀಡಿತು.
ಒಂದು ಕೊರೋನಾ ಪ್ರಯೋಗಾಲಯದಿಂದ ಆರಂಭವಾಗಿ ಮುಂದೆ ಸಾವಿರಾರು ಪ್ರಯೋಗಾಲಯಗಳು ದೇಶದಲ್ಲಿ ತೆರೆಯಲ್ಪಟ್ಟಿತು. ಪಿಪಿಐ ಕಿಟ್ ಕೊರತೆ ಅನುಭವಿಸಿದ್ದ ರಾಷ್ಟ್ರ ಸ್ವಾವಲಂಬಿಯಾಗಿ ನಂತರದ ದಿನದಲ್ಲಿ ಇತರ ರಾಷ್ಟ್ರಗಳಿಗೆ ರಫ್ತು ಮಾಡಲು ಆರಂಭಿಸಿತು. ಇದೇ ಸಮಯದಲ್ಲಿ ದೇಶದ ಜನತೆಗೆ ಆತ್ಮನಿರ್ಭರ ಭಾರತದ ಕರೆ ನೀಡಿ ಭಾರತೀಯರಲ್ಲಿ ಸ್ವಾಭಿಮಾನ ಜಾಗೃತಗೊಳಿಸಿ, ಸ್ವದೇಶಿ ಬಳಕೆಗೆ ಪ್ರೇರಣೆಯನ್ನು ನೀಡಿದರು. ಜನತೆಯ ಆಹಾರಕ್ಕೆ ಕೊರತೆ ಉಂಟಾಗದಂತೆ ಉಚಿತವಾಗಿ ಪಡಿತರ ನಿರಂತರ ವಿತರಿಸಿದರು. ವಿವಿಧ ಸಂಘ – ಸಂಸ್ಥೆಗಳ ನೇತೃತ್ವದಲ್ಲಿ ಪಡಿತರ, ಮಾಸ್ಕ್, ಸ್ಯಾನಿಟೈಸರ್ ವಿತರಣೆಗಳು ನಡೆಯಿತು.
ಕೊರೋನಾ ನಿಯಂತ್ರಣಕ್ಕೆ ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರ ಜತೆ ಖುದ್ದಾಗಿ ಸರಣಿ ವಿಡಿಯೋ ಸಂವಾದವನ್ನು ಮೋದಿ ನಡೆಸಿದರು. ಲಸಿಕೆ ವಿಚಾರದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಿ, ಆದರ ಪ್ರಕ್ರಿಯೆಗಳ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದರು, ಸ್ವತಃ ಲಸಿಕಾ ತಯಾರಿಕ ಕೇಂದ್ರಗಳಿಗೆ ತೆರಳಿ ದೇಶೀಯ ಲಸಿಕಾ ಸಂಶೋಧನೆಯಲ್ಲಿ ನಿರತರಾಗಿದ್ದ ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡಿದರು. ಡ್ರೈ ರನ್ ನಡೆಸಿ ಲಸಿಕೆ ವಿತರಣೆಯಲ್ಲಿ ಲೋಪಗಳು ಉಂಟಾಗದಂತೆ ನೋಡಿಕೊಂಡು, ವಿಶ್ವದಲ್ಲಿಯೇ ಅತಿದೊಡ್ಡ ಲಸಿಕಾ ವಿತರಣಾ ಅಭಿಯಾನದಲ್ಲಿ ಯಶಸ್ವಿಯಾದರು. ಇಂದು ಅತಿ ಕಡಿಮೆ ಬೆಲೆಯ, ಪರಿಣಾಮಕಾರಿ ಎರಡು ಸ್ವದೇಶಿ ಲಸಿಕೆ ಲಭ್ಯವಾಗಿದೆ. ವಿಶ್ವದ ಅನೇಕ ರಾಷ್ಟ್ರಗಳು ಭಾರತದ ಲಸಿಕೆಗೆ ಕಾತರದಿಂದ ಕಾಯುತ್ತಿದೆ.
ಇಂದು ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣವು ಗಣನೀಯವಾಗಿ ತಗ್ಗಿದೆ. ಸುರಕ್ಷಿತ ಭಾವನೆ ಜನರಲ್ಲಿ ಮೂಡಲಾರಂಭಿಸಿದೆ. ದೇಶದ ಅರ್ಥಿಕತೆಯೂ ಚೇತರಿಕೆಯ ಹಾದಿಯಲ್ಲಿದೆ. ಅಮೇರಿಕಾ, ಬ್ರಿಟನ್ ನಂತಹ ಮುಂಚೂಣಿ ರಾಷ್ಟ್ರಗಳು ಕೊರೋನಾ ನಿರ್ವಹಣೆಯಲ್ಲಿ ವಿಫಲವಾಗಿರುವಾಗ, ಭಾರತ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಇದು ಸಮಸ್ತ ಭಾರತೀಯರಿಗೂ ಅತ್ಯಂತ ಹೆಮ್ಮೆಯ ಕ್ಷಣ.
✍️ ಪ್ರಶಾಂತ್ ಎಂ. ಉಪ್ಪಿನಂಗಡಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.