ನಿವೃತ್ತ ಸಿವಿಲ್ ಇಂಜಿನಿಯರ್ ಆಗಿರುವ 82 ವರ್ಷದ ಬದ್ರಿನಾಥ್ ವಿಠಲ್ ಅವರು ಐಐಟಿ ಬಾಂಬೆಯ ಪದವೀಧರರು ಕೂಡ ಹೌದು. 6 ವರ್ಷಗಳ ಹಿಂದೆ ಅವರ ಮನೆ ಕೆಲಸದ ಮಹಿಳೆಯ 6ನೇ ತರಗತಿ ಓದುತ್ತಿದ್ದ ಮಗಳಿಗೆ ಟ್ಯೂಷನ್ ನೀಡುವ ಅಗತ್ಯವಿದೆ ಎಂಬುದು ಅವರ ಗಮನಕ್ಕೆ ಬಂದಿತ್ತು. ಇದಕ್ಕಾಗಿ ಹಣಕಾಸಿನ ನೆರವನ್ನು ನೀಡುವ ಬದಲು ಅವರು ಮತ್ತು ಅವರ ಪತ್ನಿ ಸ್ವತಃ ಆಕೆಗೆ ಟ್ಯೂಷನ್ ನೀಡಲು ಆರಂಭಿಸಿದರು.
“ನನ್ನ ಮನೆ ಕೆಲಸದವಳಿಗೆ ಮಗಳನ್ನು ಟ್ಯೂಷನ್ಗೆ ಕಳಿಸಲು ಹಣಕಾಸು ನೆರವು ನೀಡುವ ಬದಲು ನಾನು ಮತ್ತು ನನ್ನ ಪತ್ನಿ ಸ್ವತಃ ಆಕೆಗೆ ಟ್ಯೂಷನ್ ನೀಡಲು ಆರಂಭಿಸಿದೆವು. ಇದಕ್ಕಾಗಿ ಯಾವುದೇ ಶುಲ್ಕವನ್ನು ನಾವು ವಿಧಿಸುತ್ತಿರಲಿಲ್ಲ. ನಾನು ಆಕೆಗೆ ವಿಜ್ಞಾನ ಮತ್ತು ಗಣಿತ ಕಲಿಸುತ್ತಿದೆ. ನನ್ನ ಪತ್ನಿ ಆಕೆಗೆ ಭಾಷಾ ವಿಷಯಗಳನ್ನು ಮತ್ತು ಸಮಾಜ ಅಧ್ಯಯನಗಳನ್ನು ಕಲಿಸುತ್ತಿದ್ದಳು. ಕೆಲವೇ ವಾರಗಳಲ್ಲಿ ಆಕೆಯ ಎರಡನೇ ಮಗಳು ಕೂಡ ಟ್ಯೂಷನ್ ಸೇರಿಕೊಂಡಳು. ಆಗ ಆಕೆ ಕೆಜಿಗೆ ಹೋಗುತ್ತಿದ್ದಳು” ಎಂದು ಹೇಳುವ ಬದ್ರಿನಾಥ್ ಅವರಿಗೆ ತನ್ನ ಈ ಸಣ್ಣ ಕಾರ್ಯ ಶೀಘ್ರದಲ್ಲೇ ಕರ್ನಾಟಕದಾದ್ಯಂತ ನೂರಾರು ಮಕ್ಕಳಿಗೆ ಟ್ಯೂಷನ್ ನೀಡುವಂತೆ ಮಾಡುತ್ತದೆ ಎಂಬ ಕಲ್ಪನೆ ಇರಲಿಲ್ಲ.
2014ರಲ್ಲಿ ಸುತ್ತಮುತ್ತಲ ಪ್ರದೇಶದ ಕೆಲವರು ತಮ್ಮ ಮಕ್ಕಳಿಗೂ ಟ್ಯೂಷನ್ ನೀಡುವಂತೆ ದಂಪತಿಯನ್ನು ಮನವಿ ಮಾಡಿಕೊಂಡರು. ಹೀಗಾಗಿ ಇವರ ಇಬ್ಬರು ಮಕ್ಕಳ ತರಗತಿ ಕ್ಷಿಪ್ರವಾಗಿ ಎಂಟು ಮಕ್ಕಳಿಗೆ ಏರಿತು.
“ಟ್ಯೂಷನ್ ತೆಗೆದುಕೊಳ್ಳುತ್ತಿದ್ದ ಮಕ್ಕಳು ಬಡವರ್ಗದವರು ಆಗಿದ್ದರು. ಅವರ ತಂದೆ ತಾಯಿ ಮನೆ ಕೆಲಸ ಮಾಡುತ್ತಿದ್ದವರು ಅಥವಾ ದಿನಗೂಲಿ ಕಾರ್ಮಿಕರಾಗಿದ್ದರು. ಲಾಕ್ಡೌನ್ ಸಮಯದಲ್ಲಿ ಮಕ್ಕಳಿಗೆ ಮನೆಗೆ ಬರಲು ಸಾಧ್ಯವಾಗಲಿಲ್ಲ, ಆದರೂ ನಾನು ಈ ಮಕ್ಕಳಿಗೆ ಆನ್ಲೈನ್ ತರಗತಿಯನ್ನು ಪ್ರಾರಂಭಿಸಿದೆ. ಎಲ್ಲಾ ಮಕ್ಕಳ ಮನೆಯಲ್ಲಿ ಕನಿಷ್ಠ ಒಂದು ಸ್ಮಾರ್ಟ್ ಫೋನ್ ಇತ್ತು” ಎಂದು ಬದ್ರಿನಾಥ್ ಹೇಳುತ್ತಾರೆ.
ಇವರ ಟ್ಯೂಷನ್ ಬಗ್ಗೆ ಎಲ್ಲಾ ಕಡೆ ಮಾಹಿತಿ ಹರಡಿ ದಿನಪತ್ರಿಕೆಗಳಲ್ಲಿ ಕೂಡ ಲೇಖನ ಪ್ರಕಟವಾಯಿತು. ಇವರ ಕಾರ್ಯ ಕರ್ನಾಟಕದಾದ್ಯಂತ ಹರಡಿತು ಮತ್ತು ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಬೋಧಿಸುವಂತೆ ಈ ದಂಪತಿಯನ್ನು ವಿನಂತಿಸಿಕೊಂಡರು.
8 ವಿದ್ಯಾರ್ಥಿಗಳ ಟ್ಯೂಷನ್ ಕ್ಲಾಸ್ ಬಳಿಕ 100 ಮಕ್ಕಳಿಗೆ ಏರಿತು. ಈಗ 170 ಮಕ್ಕಳಿಗೆ ಬಂದು ನಿಂತಿದೆ. ಬದ್ರಿನಾಥ್ ಅವರು ತಮ್ಮ ಇಡೀ ದಿನವನ್ನು ಟ್ಯೂಷನ್ ಗಾಗಿ ಮೀಸಲಿಟ್ಟರು. ಮಕ್ಕಳ ಶಾಲೆ ಮತ್ತು ಟ್ಯೂಷನ್ ಕ್ಲಾಸ್ ನಡುವೆ ಘರ್ಷಣೆ ಉಂಟಾಗದಂತೆ ಅವರು ನೋಡಿಕೊಂಡರು.
ಮಾತ್ರವಲ್ಲದೇ, ಸ್ಮಾರ್ಟ್ಫೋನ್ ಇಲ್ಲದ ಮಕ್ಕಳಿಗೆ ಸ್ನೇಹಿತರು, ಸಂಬಂಧಿಗಳಿಗೆ ಮನವಿ ಮಾಡಿ ಸ್ಮಾರ್ಟ್ಫೋನ್ ಅನ್ನು ಕೂಡ ಇವರು ತೆಗೆಸಿಕೊಟ್ಟಿದ್ದಾರೆ. ರಾಜ್ಯದ ಗ್ರಾಮೀಣ ಭಾಗಗಳಾದ ಹಾವೇರಿ, ದೊಡ್ಡಬಳ್ಳಾಪುರ ಅಥವಾ ಗಂಗಾವತಿಯ ಮಕ್ಕಳು ಕೂಡ ಇವರ ಟ್ಯೂಷನ್ ಕ್ಲಾಸಿಗೆ ಹಾಜರಾಗುತ್ತಿದ್ದಾರೆ.
ಮಾತ್ರವಲ್ಲದೇ, ಇವರ ಜೊತೆ ಸೇರಿ ಮಕ್ಕಳಿಗೆ ಉಚಿತ ಟ್ಯೂಷನ್ ಕ್ಲಾಸ್ ನೀಡಲು ಶಿಕ್ಷಕರು, ವಿದ್ಯಾರ್ಥಿಗಳು, ನಿವೃತ್ತ ಪ್ರಾಧ್ಯಾಪಕರುಗಳು ಕೂಡ ಮುಂದೆ ಬಂದಿದ್ದಾರೆ. ಇಸ್ರೋದ ನಿವೃತ್ತ ವಿಜ್ಞಾನಿಯೊಬ್ಬರು ಕೂಡ ಇವರೊಂದಿಗೆ ಸೇರಿ ಮಕ್ಕಳಿಗೆ ಕಲಿಸುತ್ತಿದ್ದಾರೆ. ಹೀಗೆ ಕಲಿಸುವ ಸ್ವಯಂಸೇವಕರ ತಂಡವೇ ಸಿದ್ಧವಾಗಿದೆ.
“ಬದ್ರಿನಾಥ್ ಅವರು ಪ್ರಾರಂಭಿಸಿದ ಉಪಕ್ರಮವು ಕಲಿಸುವ ಉತ್ಸಾಹವನ್ನು ಹಂಚಿಕೊಳ್ಳುವ ಸಮಾನ ಮನಸ್ಕ ವ್ಯಕ್ತಿಗಳ ಗುಂಪನ್ನು ಒಟ್ಟುಗೂಡಿಸಿದೆ. ಒಂದು ತಿಂಗಳ ಹಿಂದೆ, ನಾನು 6, 7 ಮತ್ತು 8 ತರಗತಿ ಮಕ್ಕಳಿಗೆ ಇಂಗ್ಲೀಷ್ ಮಾತನಾಡುವ ಕ್ಲಾಸ್ ನಡೆಸಲು ಪ್ರಾರಂಭಿಸಿದೆ. ಈಗ, ಮೂರು ವಿಭಿನ್ನ ಸೆಷನ್ಗಳನ್ನು ನಡೆಸುತ್ತೇನೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಗೃಹಿಣಿಯರಿಗೆ ಹೀಗೆ ಮೂರು ಕ್ಲಾಸ್ ತೆಗೆದುಕೊಳ್ಳುತ್ತೇನೆ. ಈ ಕ್ಲಾಸ್ ಇಂಗ್ಲಿಷ್ ವ್ಯಾಕರಣವನ್ನು ಕಲಿಯುವುದರ ಮೇಲೆ ಕೇಂದ್ರೀಕರಿಸಿಲ್ಲ, ಮಾತನಾಡುವಾಗ ಭಾಷೆಯನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಹೆಚ್ಚು ಗಮನ ನೀಡಲಾಗುತ್ತದೆ” ಎಂದು ಬೆಂಗಳೂರು ನಿವಾಸಿ ಹಾಗೂ ಬದ್ರಿನಾಥ್ ತಂಡದ ಸದಸ್ಯೆ ಜ್ಯೋತಿ ರಮೇಶ್ ಹೇಳುತ್ತಾರೆ.
ಇಲ್ಲಿಯವರೆಗೆ, 170 ಜನರು ಬದ್ರಿನಾಥ್ ಅವರ ಆನ್ಲೈನ್ ತರಗತಿಗಳಿಗೆ ಸೇರ್ಪಡೆಯಾಗಿದ್ದಾರೆ.
ವೃದ್ಧಾಪ್ಯದಲ್ಲೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಬಡ ಮಕ್ಕಳಿಗೆ ಉಚಿತ ಟ್ಯೂಷನ್ ನೀಡುತ್ತಿರುವ ಬದ್ರಿನಾಥ್ ದಂಪತಿಯ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.