ಭಾರತ ಪುಣ್ಯ ಭೂಮಿ, ವೀರ ಪುತ್ರರು ಜನಿಸಿದ ನಾಡು. ಭಾರತದಿಂದ ವಿಭಜಿತ ಪಾಕಿಸ್ತಾನ ಕಾಶ್ಮೀರದ ಮೇಲೆ ಕಣ್ಣಿರಿಸಿರುವ ವಿಚಾರ ನಮ್ಮೆಲ್ಲರಿಗೂ ತಿಳಿದಿದೆ. ಆದರೆ ಅದರ ಕಣ್ಣು ಈಶಾನ್ಯ ರಾಜ್ಯಗಳ ಮೇಲೂ ಇದ್ದದ್ದು ಸುಳ್ಳಲ್ಲ.
ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ ಎಂಬ ಪರಮ ವೀರ ಯೋಧ ಡಿಸೆಂಬರ್ 27, 1942 ರಂದು ಇಂದಿನ ಜಾರ್ಖಂಡ್ ನ ಗುಂಲಾ ಜಿಲ್ಲೆಯ ಜಾರಿ ಗ್ರಾಮದಲ್ಲಿ ಜನಿಸಿದರು. ಶ್ರೀ ಜೂಲಿಯಸ್ ಎಕ್ಕಾ ಮತ್ತು ಶ್ರೀಮತಿ ಮರಿಯಮ್ ಎಕ್ಕಾ ಅವರ ಪುತ್ರ ಆಲ್ಬರ್ಟ್ ಚಿಕ್ಕ ವಯಸ್ಸಿನಿಂದಲೇ ಭಾರತೀಯ ಸೇನೆಯನ್ನು ಸೇರಿ ದೇಶಸೇವೆಯನ್ನು ಮಾಡುವ ಕನಸನ್ನು ಹೊಂದಿದ್ದರು. 1962 ರ ಡಿಸೆಂಬರ್ 27 ರಂದು ತಮ್ಮ 20 ನೇ ವಯಸ್ಸಿನಲ್ಲಿ ಸೈನ್ಯವನ್ನು ಸೇರಿಕೊಳ್ಳುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡರು. ನಿರ್ಭೀತ ಸೈನಿಕರ ತಂಡವೆಂದೇ ಹೆಸರುವಾಸಿಯಾದ ಬಿಹಾರ್ ರೆಜಿಮೆಂಟ್ ನಲ್ಲಿ ಅವರ ಸೇವೆಯು ಪ್ರಾರಂಭವಾಯಿತು. ಅತ್ಯುತ್ತಮ ಹಾಕಿ ಪಟುವಾಗಿದ್ದ ಆಲ್ಬರ್ಟ ಉತ್ತಮ ಸಾಧನೆಯನ್ನೂ ಮಾಡಿದ್ದರು. 1971 ರ ಸಮಯವಾಗುವಷ್ಟರಲ್ಲಿ ಆಲ್ಬರ್ಟ್ ಎಕ್ಕಾ ಸುಮಾರು 9 ವರ್ಷಗಳ ಸೇವೆಯನ್ನು ಸೈನ್ಯದಲ್ಲಿ ಸಲ್ಲಿಸಿದ್ದರು. ಈಶಾನ್ಯ ಪ್ರದೇಶಗಳಲ್ಲಿ ಬಂಡಾಯಗಳನ್ನು ಹತ್ತಿಕ್ಕುವ ಹಲವಾರು ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಮೂಲತಃ ಜಾರ್ಖಂಡ್ನ ಆಲ್ಬರ್ಟ್ ಅವರಿಗೆ ಕಾಡುಗಳಲ್ಲಿ ಸಂಚರಿಸುವುದು ಮತ್ತು ಈಶಾನ್ಯ ಪ್ರದೇಶಗಳಲ್ಲಿ ಲೀಲಾಜಾಲವಾಗಿ ಕಾರ್ಯ ನಿರ್ವಹಿಸುವುದು ಎಳವೆಯಿಂದಲೇ ಬಂದ ಕಲೆಯಾಗಿತ್ತು.
1971 ರ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಪ್ರಾರಂಭವಾದ ಸಂದರ್ಭದಲ್ಲಿ ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ ಅವರ ತಂಡವು ಗಂಗಾಸಾಗರ್ ಯುದ್ಧದಲ್ಲಿ ಭಾಗಿಯಾಯಿತು. ತಮ್ಮ ಗುರಿಯತ್ತ ಸಾಗುವ ಭಾರತೀಯ ಸಶಸ್ತ್ರ ಪಡೆಗಳ ಸಾಗುವಿಕೆಗೆ ಹಾದಿ ನಿರ್ಮಾಣ ಕಾರ್ಯದಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಿತ್ತು.
ಈ ಸಮಯದಲ್ಲಿ 14 ಯೋಧರನ್ನು ಗಂಗಾಸಾಗರದಲ್ಲಿ ಪಾಕಿಸ್ತಾನದ ಪ್ರದೇಶವನ್ನು ವಶಪಡಿಸಿಕೊಳ್ಳಲು ನಿರ್ದೇಶಸಲಾಯಿತು. ಈ ಸ್ಥಳವು ರಾಜ್ಯರಾಜಧಾನಿಯಾದ ಅಗರ್ತಲಾದಿಂದ ಕೆಲವೇ ಕಿಲೋಮೀಟರ್ಗಳಷ್ಟು ದೂರವಿತ್ತು ಮತ್ತು ಇಲ್ಲಿಂದ ಢಾಕಾಗೆ ರೈಲ್ವೆ ಸಂಪರ್ಕವೂ ಇದ್ದ ಕಾರಣ ಯುದ್ಧದಲ್ಲಿ ಭಾರತೀಯ ಸೈನ್ಯಕ್ಕೆ ಈ ಸ್ಥಳವು ನಿರ್ಣಾಯಕವಾಗಿತ್ತು. ಆದ್ದರಿಂದ ಸೈನ್ಯದ 14 ಯೋಧರು 1971 ಡಿಸೆಂಬರ್ 1 ರ ರಾತ್ರಿ ಶತ್ರುಗಳ ಸ್ಥಾನದ ಮೇಲೆ ದಾಳಿಯನ್ನು ನಡೆಸಿದರು. ಲ್ಯಾನ್ಸ್ ನಾಯಕ ಆಲ್ಬರ್ಟ್ ಎಕ್ಕಾ ಈ ದಾಳಿಯಲ್ಲಿ ಬೆಟಾಲಿಯನ್ ನ ಲೆಫ್ಟ್ ಫಾರ್ವರ್ಡ್ ಕಂಪನಿಯೊಂದಿಗೆ ಮುನ್ನಡೆದರು. ಭಾರತೀಯ ಸೈನಿಕರು ಶತ್ರುಗಳಿಂದ ತೀವ್ರವಾದ ಶೆಲ್ ದಾಳಿ ಮತ್ತು ಗುಂಡಿನ ದಾಳಿಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಆಲ್ಬರ್ಟ್ ಎಕ್ಕಾ ಶತ್ರುಗಳು ಬಂಕೆರನಿಂದ ಮಷಿನ್ ಗನ್ ಬಳಸಿ ಗುಂಡುಹಾರಿಸುತ್ತಿದ್ದುದನ್ನು ಗಮನಿಸಿದರು. ಇದರಿಂದಾಗಿ ಅನೇಕ ಭಾರತೀಯ ಸೈನಿಕರು ಗುಂಡೇಟಿಗೆ ಬಲಿಯಾಗುತ್ತಾರೆಂಬುದನ್ನು ಮನಗಂಡ ಎಕ್ಕಾ ಅವರು ತಮ್ಮ ವಯ್ಯಕ್ತಿಕ ಸುರಕ್ಷತೆಯನ್ನು ಪಕ್ಕಕ್ಕಿರಿಸಿ ಶತ್ರುಗಳ ಬಂಕರ್ ನತ್ತ ಮುನ್ನುಗ್ಗಿದರು. ತಮ್ಮ ಬಾಯೊನೆಟ್ನಿಂದಲೇ ಇಬ್ಬರು ಶತ್ರು ಸೈನಿಕರನ್ನು ಕೊಂದು ಅವರ ಬಂಕರ್ ಪೋಸ್ಟ್ ಅನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಕ್ಕಾ ತಮಗಾದ ಗಾಯಗಳನ್ನು ಲೆಕ್ಕಿಸದೆ ತನ್ನ ರೆಜಿಮೆಂಟ್ ನ ಧ್ಯೇಯವಾಕ್ಯವಾದ “ಪೆಹೆಲ ಹಮೇಶಾ ಪೆಹೇಲಾ” ಎಂಬಂತೆ ತನ್ನ ತಂಡದೊಂದಿಗೆ ಮುಂದುವರೆಯುತ್ತಾ ಒಂದರ ಹಿಂದೊಂದರಂತೆ ಬಂಕರ್ಗಳನ್ನು ವಶಪಡಿಸಿಕೊಂಡರು.
ಇನ್ನೇನು ತಮ್ಮ ಗುರಿಯನ್ನು ತಲುಪುವ ಸಂದರ್ಭದಲ್ಲಿ ಶತ್ರುಗಳ ಮಷಿನ್ ಗನ್ವೊಂದರಿಂದ ಸಿಡಿದ ಗುಂಡುಗಳು ಅವರ ತಂಡದಲ್ಲಿ ಅನೇಕ ಸಾವುನೋವಿಗೆ ಕಾರಣವಾಯಿತು. ಈ ಸಂದರ್ಭದಲ್ಲೂ ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ ಗ್ರೆನೇಡ್ ಒಂದನ್ನು ಬಂಕರ್ಗೆ ಎಸೆದು ಉಳಿದ ಶತ್ರುಗಳನ್ನು ಬಾಯೊನೆಟ್ ಉಪಯೋಗಿಸಿ ಕೊಂದು ಶತ್ರುಗಳ ಶಸ್ತ್ರಾಸ್ತ್ರಗಳನ್ನು ಸುಮ್ಮನಾಗಿಸಿದರು. ಈ ನಿಕಟ ಮುಖಾಮುಖಿಯಲ್ಲಿ ಆಲ್ಬರ್ಟ್ ತೀವ್ರವಾಗಿ ಗಾಯಗೊಂಡಿದ್ದರೂ ಪಟ್ಟು ಬಿಡದೆ ತನ್ನ ತಂಡವನ್ನು ಮುನ್ನಡೆಸಿ ಶತ್ರುಗಳನ್ನು ಗಂಗಾಸಾಗರದಿಂದ ಓಡಿಸುವಲ್ಲಿ ಯಶಸ್ವಿಯಾದರು. ಇದರ ಪರಿಣಾಮವಾಗಿ ಭಾರತೀಯ ಸೈನ್ಯವು ಶೀಘ್ರದಲ್ಲೇ ಢಾಕಾದ ಕಡೆಗೆ ವಿಜಯದ ಮೆರವಣಿಗೆಯಲ್ಲಿ ಸಾಗುವಂತೆ ಮಾಡಿತು.
ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ ಹುತಾತ್ಮರಾದರು ಮತ್ತು ಅವರ ಸಾಹಸದಿಂದ ಗಂಗಾಸಾಗರ್ ಯುದ್ಧವನ್ನು ಭಾರತೀಯ ಸೈನ್ಯವು ಗೆದ್ದುಕೊಂಡಿತ್ತು. ಇದನ್ನು ಗುರುತಿಸಿದ ಭಾರತೀಯ ಸರಕಾರ ಲ್ಯಾನ್ಸ್ ನಾಯಕ ಆಲ್ಬರ್ಟ್ ಎಕ್ಕ ಅವರನ್ನು ಪರಮವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
✍️ದೀಪಾ ಜಿ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.