ಭಾರತ ಪುಣ್ಯ ಭೂಮಿ. ತಾಯಿ ಭಾರತಿಯು ಅನೇಕ ವೀರ ಪುತ್ರರಿಗೆ ಜನ್ಮ ನೀಡಿದ ಮಹಾ ಮಹಿಮೆ. ಭಾರತ ಸಾವಿರಾರು ವರ್ಷಗಳಿಂದಲೂ, ಸಾಂಸ್ಕೃತಿಕವಾಗಿಯೂ, ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ, ಸುಸಂಸ್ಕೃತ ಮತ್ತು ಸಂಪದ್ಭರಿತ ರಾಷ್ಟ್ರ. ಭಾರತಕ್ಕೆ ಆಗಮಿಸಿದ ಪ್ರತಿಯೊಬ್ಬ ಯಾತ್ರಿಯೂ ತನ್ನ ಇತಿಹಾಸ ಮತ್ತು ಪ್ರವಾಸ ಕಥನಗಳಲ್ಲಿ ಭಾರತ ದೇಶದ ಸಮೃದ್ಧಿಯ ಕುರಿತಾಗಿ ಬಹಳ ಉತ್ತಮ ವಿಚಾರಗಳನ್ನೂ, ಅವರು ಬೇರೆಲ್ಲೂ ಕಾಣದಷ್ಟು ಉತ್ತಮ ವಿಚಾರಗಳನ್ನು ಭಾರತದಲ್ಲಿ ಕಂಡುದಾಗಿಯೂ ದಾಖಲಿಸಿದ್ದಾರೆ, ಮಾತ್ರವಲ್ಲದೆ ತಮ್ಮ ದೇಶಗಳಿಗೆ ಹಿಂತಿರುಗಿ ಭಾರತದ ಕುರಿತಾದ ಹೊಗಳಿಕೆಯ ಮಾತುಗಳನ್ನೂ ಹೇಳುತ್ತಿದ್ದರು. ಇದರಿಂದ ಅನೇಕ ವಿದೇಶೀ ರಾಜರ ಕೆಟ್ಟ ದೃಷ್ಟಿಯು ಭಾರತ ಸಂಪತ್ತಿನ ಹಾಗೂ ಜ್ಞಾನ ಭಂಡಾರದ ಮೇಲೆ ಬಿದ್ದು ಅವುಗಳನ್ನು ತಮದಾಗಿಸಿಕೊಳ್ಳಬೇಕೆನ್ನುವ ಬಯಕೆಯನ್ನು ಹೊಂದಿದ ರಾಜರುಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಭಾರತದ ಮೇಲೆ ಪರಕೀಯರ ದಾಳಿ ನಡೆದ ಸಂದರ್ಭದಲ್ಲೆಲ್ಲಾ, ತನ್ನ ಮಾತೃಭೂಮಿಯ ರಕ್ಷಣೆಗಾಗಿ ತನ್ನೆಲ್ಲವನ್ನೂ ನೀಡಿ ಹುತಾತ್ಮರಾದ ಅನೇಕ ವೀರ ಪರಾಕ್ರಮಿಗಳು ತಮ್ಮ ಹೆಸರನ್ನು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆದು ಹೋರಾಡಿದರು.
ಅಂತಹಾ ಅಪ್ರತಿಮ ವೀರರಲ್ಲೊಬ್ಬ “ಲಚಿತ್ ಡೆಕಾ”. 17 ನೇ ಶತಮಾನದಲ್ಲಿ ಅಹೋಮ್ ಸಾಮ್ರಾಜ್ಯದ ರಾಜಾ ಪ್ರತಾಪ್ ಸಿಂಘರ ಸೈನ್ಯದ ನಾಯಕರಾಗಿದ್ದ ಮೊಮಾಯಿ ತಮುಲಿ ಬಾರ್ಬುರವಾ ಅವರ ಪುತ್ರನಾಗಿ ಜನಿಸಿದ್ದ ಲಚಿತ್, ಎಳವೆಯಲ್ಲೇ ಅಹೋಮ್ ಸಾಮ್ರಾಜ್ಯದ ದೊರೆ ಜಯಧ್ವಜ ಸಿಂಘರ ಸೈನ್ಯದಲ್ಲಿ ಅವರ ಅಂಗರಕ್ಷಕರಾಗಿ ಭರ್ತಿಗೊಂಡರು.
ಮುಂದೆ ಅವರ ಯುದ್ಧ ವಿದ್ಯೆ ಮತ್ತು ಪರಾಕ್ರಮಗಳನ್ನು ಗಮನಿಸಿದ ರಾಜ ಅವರಿಗೆ ಪದೋನ್ನತಿಯನ್ನು ನೀಡಿ ಅಧೀಕ್ಷರನ್ನಾಗಿಸಿದರು, ಮುಂದೆ ಅವರು ಬ್ರಹ್ಮಪುತ್ರ ನದಿಯ ದಕ್ಷಿಣ ತಟದ ಕೋಟೆಯ ಸೈನ್ಯಾಧಿಕಾರಿಯಾಗಿಯೂ ನಿಯುಕ್ತಗೊಂಡರು. ಮುಂದೆ 1662 ರಲ್ಲಿ ರಾಜಾ ಚಕ್ರಧ್ವಜರು ಅಹೋಮ್ ಸಾಮ್ರಾಜ್ಯದ ಗದ್ದುಗೆಯನ್ನೇರಿದಾಗ ಅವರು ಲಚಿತ್ರನ್ನು ರಾಜಕುಟುಂಬದ ಅಂಗರಕ್ಷಕರ ಅಧಿಕಾರಿಯನ್ನಾಗಿ ನೇಮಿಸಿ ಪದೋನ್ನತಿಯನ್ನು ನೀಡಿದರು. ಲಚಿತ್ ಡೆಕಾನಾ ಸಾಹಸ ಗಾಥೆಯ ಪ್ರಾರಂಭ ಮಾತ್ರವಾಗಿತ್ತು. ಮುಂದೆ ಅಹೋಮ್ ಸಾಮ್ರಾಜ್ಯದ 5 ಪ್ರಮುಖ ಸಚಿವ ಸ್ಥಾನಗಳಲ್ಲಿ ಒಂದಾದ ಬೊರ್ಫುಕನ್ ಸ್ಥಾನಕ್ಕೂ ಲಚಿತ್ ಡಿಕಾನನ್ನು ಆಯ್ಕೆಗೊಳಿಸಲಾಯಿತು. ಬಳಿಕ ಲಚಿತ್ ಡಿಕಾನನ್ನು ಲಚಿತ್ ಬೊರ್ಫುಕನ್ ಎಂದೇ ಕರೆಯಲಾಯಿತು.ಇದರ ಬಳಿಕ ಲಚಿತ್ ತಮ್ಮ ಪ್ರಧಾನ ಕಾರ್ಯಸ್ಥಾನವನ್ನು ಗುವಾಹಾಟಿಗೆ ಸ್ಥಳಾಂತರಿಸಿದರು.
ಭಾರತದ ನೆಲದ ಮೇಲೆ ಮೊಘಲರ ಆಕ್ರಮಣ ಹೊಸ ವಿಚಾರವೇನಲ್ಲ. 1662 ರ ಜನವರಿಯಿಂದ ಅಸ್ಸಾಮ್ ನಿರಂತರವಾಗಿ ಇಸ್ಲಾಮಿಕ ಆಕ್ರಮಣವನ್ನು ಎದುರಿಸುತ್ತಿತ್ತು. ಮೊವಾಲ್ ಜನರಲ್ಎರಡನೇ ಮೀರ್ ಜುಮ್ಲಾ ಅಹೋಮ್ ರಾಜಧಾನಿ ಗಾರ್ಗಾವ್ನ ಮೇಲೆ ದಾಳಿಯನ್ನು ನಡೆಸಿದಾಗ, ರಾಜ ಹಿಮ್ಮೆಟ್ಟಿ ಗೆರಿಲ್ಲಾ ಯುದ್ಧ ತಂತ್ರದ ಮುಖಾಂತರ ಹೋರಾಟವನ್ನು ಮುಂದುವರೆಸಿದ. ಇದರಿಂದಾಗಿ ಮೀರ್ ಜುಮ್ಲಾನಿಗೆ ಜಯಧ್ವಜ ಸಿಂಘನನ್ನು ಸೋಲಿಸುವುದು ಸಾಧ್ಯವಾಗಲಿಲ್ಲ. ಆದರೂ ರಾಜ ಜಯಧ್ವಜ ಸಿಂಘನು ತನಗಾದ ಅವಮಾನಕ್ಕೆ ಮೊಘಲರ ಮೇಲೆ ಪ್ರತೀಕಾರ ತೀರಿಸುವಂತೆ ತನ್ನ ಉತ್ತರಾಧಿಕಾರಿ ಚಕ್ರವಾನ್ ಸಿಂಘಣ ಬಳಿ ಕೇಳಿಕೊಂಡನು. 1662 ರಲ್ಲಿ ಉತ್ತರಾಧಿಕಾರಿಯಾಗಿ ಪಟ್ಟಕ್ಕೇರಿದ ಚಕ್ರಧ್ವಜ ಸಿಂಘನು ಲಚಿತ್ ಬೊರ್ಫುಕನ್ನನ್ನು ಸೇನಾಧಿಕಾರಿಯಾಗಿ ನೇಮಿಸಿ ಆದೇಶವನ್ನು ಹೊರಡಿಸಿದನು. ಕಳೆದುಕೊಂಡ ಗವಾಹಾಟಿಯನ್ನು ಮರಳಿ ಮೊಘಲರಿಂದ ಹಿಂಪಡೆಯಲು ನಡೆಸಿದ ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಲಚಿತ್ ಅಸ್ಸಾಮ್ನಿಂದ ಮೊಘಲರನ್ನು ಹೊರತಳ್ಳಲು ಯಶಸ್ವಿಯಾದ.
ಸೋಲಿನಿಂದ ಅಪಮಾನಿತನಾದ ಮೊಘಲ ದೊರೆ ಔರಂಗಜೇಬನು ಜನವರಿ 1668 ರಲ್ಲಿ ಲಚಿತ್ ಮತ್ತವರ ಸಂಗಡಿಗರನ್ನು ಸೋಲಿಸಲು ಅಂಬರ್ನ ರಾಜ ರಾಮ ಸಿಂಗ್ ಕೂಚ್ವಾಹಾ ನೇತೃತ್ವದಲ್ಲಿ ಬೃಹತ್ ಮೊಘಲ ಸೈನ್ಯದ ತುಕಡಿಯನ್ನು ಕಳುಹಿಸಿದನು. ಈ ಬಾರಿಯೂ ಮೊಗಲರಿಗೆ ಅಹೀಮ್ ಸಾಮ್ರಾಜ್ಯದ ವಿರುದ್ಧ ಜಯ ಸಾಧಿಸಲು ಸಾಧ್ಯವಾಗಲಿಲ್ಲ, ಬದಲಾಗಿ ಅವರು ಸೋಲನ್ನೊಪ್ಪುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಈ ಸಂದರ್ಭದಲ್ಲಿ ಔರಂಗಜೇಬ್ ತನ್ನ ಅಧಿಕಾರಿಯನ್ನು ಕಳುಹಿಸಿ ರಾಜ ತಾಂತ್ರಿಕ ಒಪ್ಪಂದವನ್ನು ಮಾಡಲು ಕೇಳಿಕೊಳ್ಳುತ್ತಾನೆ, ಮೊಘಲರ ವಿಶ್ವಾಸಾರ್ಹತೆಯ ಬಗ್ಗೆ ಲಚಿತ್ ಮತ್ತವರ ವಿಶ್ವಾಸಾರ್ಹ ಯೋಧ ಅಟಾನ್ ಸಂಶಯವನ್ನು ವ್ಯಕ್ತಪಡಿಸುತ್ತಾರೆ. ಮುಂದೆ ನಡೆದದ್ದು ಸಾರೈಘಾಟ್ನ ಅಂತಿಮ ಯುದ್ಧ. 1671 ರಲ್ಲಿ ಪ್ರಾರಂಭವಾದ ಈ ಯುದ್ಧದ ದಿನದಂದು ಲಚಿತ್ ಸ್ವತಃ ಭೀಕರ ಅನಾರೋಗ್ಯದಿಂದ ಬಳಲುತ್ತಿದ್ದರೂ ಪ್ರಚಂಡ ಧೈರ್ಯ, ಸಾಹಸ ಮತ್ತು ಅನುಕರಣೀಯ ನಾಯಕತ್ವವನ್ನು ಪ್ರದರ್ಶಿಸಿದರು. ಈ ನಡೆಯಿಂದ ಉತ್ಸಾಹವನ್ನು ಪಡೆದ ಅವರ ಸೈನ್ಯವು ಅತ್ಯಂತ ವೀರೋಚಿತವಾಗಿ ಹೋರಾಡಿ ಮೊಘಲರಿಗೆ ಸೋಲಿನ ರುಚಿಯನ್ನು ತೋರಿಸಿತು. 1672 ರಲ್ಲಿ ಸಾರೈಘಾಟ್ ಯುದ್ಧದ ಒಂದು ವರ್ಷ ನಂತರ ಲಚಿತ್ ತಮ್ಮ ಪ್ರಧಾನ ಕಚೇರಿಯಲ್ಲಿ ಅನಾರೋಗ್ಯದ ಕಾರಣದಿಂದ ನಿಧನರಾದರು.
ತಮ್ಮ ಅಪ್ರತಿಮ ಸಾಹಸ, ಶೌರ್ಯ ಹಾಗೂ ಅಪೂರ್ವ ನಾಯಕತ್ವದ ಗುಣದಿಂದ ಲಚಿತ್ ನಾಯಕ ಇಂದಿಗೂ ಅಸ್ಸಾಮ್ನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. “ಆತ ಒಬ್ಬ ಅದ್ಭುತ ಸೈನ್ಯಾಧಿಕಾರಿ, ಏಕ ವ್ಯಕ್ತಿ ಎಲ್ಲಾ ಪಡೆಗಳನ್ನು ಅಪೂರ್ವವಾಗಿ ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದ. ನಾನೂ ಕೂಡಾ ಆತನ ಯುದ್ಧ ತಂತ್ರಗಳಲ್ಲಿ ಯಾವುದೇ ಲೋಪ ದೋಷವನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ” ಎಂದು ಅವನಿಂದ ಸೋಲಲ್ಪಟ್ಟ ರಾಜಾ ರಾಮ ಸಿಂಗ್ ಲಚಿತ್ ನಾಯಕನನ್ನು ಹೊಗಳುತ್ತಾನೆ. ಶತ್ರುವಿನಿಂದ ಪ್ರಶಂಶಿಸಲ್ಪಟ್ಟ ಇವರ ಸಾಧನೆ, ಅಪೂರ್ವ ಸಾಧನೆಯೇ ಸರಿ.
ಶತ್ರುವಿನಿಂದ ಹೊಗಳಿಸಿಕೊಳ್ಳುವುದು ಸಾಮಾನ್ಯ ಸಾಧನೆಯೇನಲ್ಲ…
…”ಆತ ಒಬ್ಬ ಅದ್ಭುತ ಸೈನ್ಯಾಧಿಕಾರಿ, ಏಕ ವ್ಯಕ್ತಿ ಎಲ್ಲಾ ಪಡೆಗಳನ್ನು ಅಪೂರ್ವವಾಗಿ ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದ. ನಾನೂ ಕೂಡಾ ಆತನ ಯುದ್ಧ ತಂತ್ರಗಳಲ್ಲಿ ಯಾವುದೇ ಲೋಪ ದೋಷವನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ” ಎಂದು ಅವನಿಂದ ಸೋಲಲ್ಪಟ್ಟ ರಾಜಾ ರಾಮ ಸಿಂಗ್ ಲಚಿತ್ ನಾಯಕನನ್ನು ಹೊಗಳುತ್ತಾನೆ. ಎಂದರೆ ಲಚಿತ್ ನಾಯಕನ ಸಾಮರ್ಥ್ಯ, ಶೌರ್ಯ ಎಂತಹಾ ಉನ್ನತ ಮಟ್ಟದ್ದು ಎಂದು ಊಹಿಸಬಹುದು.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.