News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
×
Home About Us Advertise With s Contact Us

ತಾಯಿ ಭಾರತೀಯ ವೀರ ಪುತ್ರ ಬಾಗಲಕೋಟೆಯ ಮಾರುತಿ ಸಿದ್ರಾಮಪ್ಪ ದಳವಾಯಿ

ತಂದೆ ತಾಯಿಯೊಂದಿಗೆ ನಾಲ್ಕು ಮಕ್ಕಳನ್ನು ಹೊಂದಿದ್ದ ಕಡು ಬಡತನವನ್ನೇ ಹಾಸಿ ಹೊದ್ದಿದ್ದ ಕುಟುಂಬವೊಂದರ ಅದೃಷ್ಟವು 2003ರಲ್ಲಿ ಬದಲಾದ ಕಥೆಯಿದು.

ಆದಾಗ ತಾನೇ ಹತ್ತನೇ ತರಗತಿಯನ್ನು ಮುಗಿಸಿ ಪದವಿ ಪೂರ್ವ ಶಿಕ್ಷಣಕ್ಕೆ ದಾಖಲಾತಿಯನ್ನು ಪಡೆಯಲು ಮಗ ಬಯಸಿದ್ದರೆ, ಪಟ್ಟಣಕ್ಕೆ ಓದಲು ಕಳುಹಿಸಲು ಹಾಗೂ ಶುಲ್ಕವನ್ನು ಹೊಂದಿಸುವ ಕುರಿತಾಗಿ ತಂದೆ ತಾಯಿ ಚಿಂತಿತರಾಗಿದ್ದರು, ಹೀಗಿದ್ದ ಸಂದರ್ಭದಲ್ಲಿ ಜುಲೈ 2003 ಭಾರತೀಯ ಸೇನೆಯ ರ‌್ಯಾಲಿಗೆ (ಬೆಂಗಳೂರು ಡೈರೆಕ್ಟ ರ‌್ಯಾಲಿ) ಅರ್ಜಿ ಆಹ್ವಾನವಾಗುತ್ತದೆ. ಚಿತ್ರದುರ್ಗದಲ್ಲಿ ದೈಹಿಕ ಪರೀಕ್ಷೆ ಹಾಗೂ ಮಂಗಳೂರಿನಲ್ಲಿನ ಪರೀಕ್ಷೆಯಲ್ಲಿ ಆಯ್ಕೆಯೂ ಆಗಿ, GD ಟ್ರೇಡ್‌ನಲ್ಲಿ ಗನ್‌‌ಮ್ಯಾನ್(ಬಫರ್ ಗನ್) ಹುದ್ದೆಗೆ ಈಗಷ್ಟೇ ಹತ್ತನೇ ತರಗತಿಯಲ್ಲಿ ಉತ್ತೀರ್ಣನಾಗಿದ್ದ ಮಗ ಆಯ್ಕೆಯಾಗುತ್ತಾನೆ. ಪಟ್ಟಣಕ್ಕೆ ಓದಲು ಕಳುಹಿಸಲೇ ಭಯಪಟ್ಟಿದ್ದ ತಂದೆ ತಾಯಿ ಮಗನ ಒತ್ತಾಯಕ್ಕೋ, ತಮ್ಮ ಬಡತನಕ್ಕೆ ಕೊಂಚ ಮಟ್ಟಿನ ಅಂತ್ಯವಾಗುವ ಭರವಸೆಯಿಂದಲೋ ಮಗನನ್ನು ಸೇನೆಗೆ ಕಳುಹಿಸಲು ಒಪ್ಪಿಕೊಳ್ಳುತ್ತಾರೆ. ಆದರೆ ಈಗ 17 ವರ್ಷ ಪೂರ್ಣವಾಗದೆ ಈ ಹುದ್ದೆಯು ಲಭಿಸುವುದು ಸಾಧ್ಯವಿಲ್ಲವೆಂಬ ಸತ್ಯದ ಅರಿವಾಗುತ್ತದೆ. ಆದರೆ ಸೇನೆಯ ನಿಯಮಗಳನ್ನು ಹುಡುಕಿದಾಗ ಹುದ್ದೆಯನ್ನು ಪಡೆದುಕೊಳ್ಳಲು ದಾರಿ ಕಾಣಿಸುತ್ತದೆ. ತಂದೆ ತಾಯಿ, ಗ್ರಾಮದಲ್ಲಿ ಪರಿಚಯದ ಹಿರಿಯರ ವಿಟ್‌ನೆಸ್ ಹಾಗೂ ಸರ್ಕಾರಿ ವಕೀಲರ ಅನುಮತಿಯ ಬಾಂಡ್ನಿಂದ ಕೈತಪ್ಪಬಹುದಾಗಿದ್ದ ಆ ಹುದ್ದೆಯನ್ನು ಪಡೆಯುವಲ್ಲಿ ಅವರು ಯಶಸ್ವಿಯಾಗುತ್ತಾರೆ. ಅವರೇ 17 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮಾತೃ ಮನೆಗೆ ಬಂದ 34 ವರ್ಷದ ಉತ್ಸಾಹಿ ತರುಣ ಮಾರುತಿ ಸಿದ್ರಾಮಪ್ಪ ದಳವಾಯಿ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಎನ್ನುವ ಗ್ರಾಮದವರು. ಮಾರುತಿಯವರು ನಿವೃತ್ತಿ ಸಮಯದಲ್ಲಿ ಹವಾಲ್ದಾರ ಹುದ್ದೆಯಲ್ಲಿದ್ದರು. ಸೈನ್ಯದಲ್ಲಿ ಅವರೊಬ್ಬರು ಕುಸ್ತಿ ಕ್ರೀಡಾಪಟುವಾಗಿದ್ದರು.

ಅಕ್ಟೋಬರ 2003 ರಲ್ಲಿ ಒಂದು ವರ್ಷದ ತರಬೇತಿಗೆ ಭಾರತದಲ್ಲಿನ ಏಕೈಕ ತರಬೇತಿ ಕೇಂದ್ರವಾದ Army defence center ಗೆ ತರಬೇತಿ ಪಡೆಯಲು ತೆರಳಿದರು. ಆ ಕೇಂದ್ರದಲ್ಲಿಯೇ ಭಾರತೀಯ ಸೇನೆಯ ದೊಡ್ಡ ದೊಡ್ಡ ಗನ್‌ಗಳು ಇದ್ದು, ಇವರ ಅರ್ಹತೆ ಅನುಸಾರ ಬೋಫರ್ ಗನ್‌ನಲ್ಲಿ ಕಾರ್ಯನಿರ್ವಹಿಸಲು ತರಬೇತಿ ಪ್ರಾರಂಭವಾಯಿತು. ಈ ಗನ್‌ ಗಳನ್ನು ನಿರ್ವಹಿಸಲು 6 ಜನರ ತಂಡ ಇರುತ್ತೆ. 5 ಟನ್ ಬಾರವಿರುವ ಈ ಗನ್ ಒಂದು ನಿಮಿಷಕ್ಕೆ 300 ಬುಲೇಟ್‌ಗಳನ್ನು ಹೊರ ಹಾಕುತ್ತದೆ. ಭಾರತೀಯ ಸೇನೆಯಲ್ಲಿಯೇ ಅತ್ಯಂತ ಶಕ್ತಿಶಾಲಿಯಾದ 40mm L 70 ಹೈಡ್ರೋಲಿಕ್ ಬಫರ್ ಗನ್, ZU 23mm ಡಬಲ್ ಬ್ಯಾರಲ್ ಗನ್ ಬಳಕೆಯಲ್ಲಿದೆ , ಹಾಗೂ ಸಾಕಷ್ಟು ಕಾರ್ಯಾಚಾರಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಒಂದು ಬಫರ್ ಗನ್ 15 km ದೂರವನ್ನು ಕ್ರಮಿಸಿ ಸಿಡಿಯುತ್ತದೆ. ಒಂದು ನಿಮಿಷದಲ್ಲಿ 300 ಬುಲೆಟ್ ಗಳನ್ನೂ ಸಿಡಿಸುತ್ತದೆ. ಮಜಲ್ ವೆಲ್ಯಾಸಿಟಿ 1km/sec. 100km ಗಿಂತ ಮುಂಚಿನ ಟಾರ್ಗೆಟ್ ಪತ್ತೆ ಹಚ್ಚಿ ಶತ್ರುಗಳ ಮೇಲೆ ಗುರಿ ಇರಿಸಬಲ್ಲದ್ದಾಗಿದೆ. ARMY AIR DEFENCE ಇದು ಇಡೀ ದೇಶದಲ್ಲಿ ಕೇವಲ 50 ರೆಜಿಮೆಂಟ್ ಗಳಿವೆ. ಒಂದು ರೆಜಿಮೆಂಟ್ ನಲ್ಲಿ 36 ಈ ಬಫರ್ ಗನ್ ಇರುತ್ತವೆ. 12-14 ಲಕ್ಷ ಮಾತ್ರ ಈ ರೆಜಿಮೆಂಟ್‌ನಲ್ಲಿ ಸೈನಿಕರಿದ್ದಾರೆ. ರೆಡಾರ್ ಜೊತೆಗೆ ಕಾರ್ಯ ನಿರ್ವಹಿಸುವ ಈ  ಗನ್‌ಗಳೆಲ್ಲವೂ ನಮ್ಮ ವಾಯುಸೇನೆಗೆ ಸಹಾಯಕವಾಗಿ ಕಾರ್ಯ ನಿರ್ವಹಿಸುತ್ತಾ ಶತ್ರುಗಳ ಮೇಲೆ ಗುರಿಯಿರಿಸುತ್ತವೆ. ವಾಯುಸೇನೆಯವರು ಸರಾಗವಾಗಿ ಯುದ್ಧ ಮಾಡಬೇಕಾದ ಸಂದರ್ಭದಲ್ಲಿ ಈ ಬಫರ್‌ ಗನ್‌ನವರು ದಾರಿ ಸುಗಮ ಮಾಡಿಕೊಡುತ್ತಾರೆ. ಇವರು ಭಾರತೀಯ ಭೂಸೇನೆಯ ಭಾಗವಾಗಿದ್ದರೂ ವಾಯುಸೇನೆಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತಾರೆ . ಎಲ್ಲಾ ವಾತಾವರಣದಲ್ಲಿಯೂ ಈ ಗನ್ ಕಾರ್ಯನಿರ್ವಹಿಸುತ್ತದೆ.

ಮಾರುತಿ ಸಿದ್ದರಾಮಪ್ಪ ದಳವಾಯಿ ಅವರು ಪಶ್ಚಿಮ್ ಬಂಗಾಳದ ಕೋಲ್ಕತ್ತದಲ್ಲಿ 5 ವರ್ಷ, ರಾಜಸ್ಥಾನ ಜೋದಪುರದಲ್ಲಿ 3 ವರ್ಷ, ಗುಜರಾತದ ರನ್‌ ಆಫ್ ಖಚ್ 3 ವರ್ಷ, ಶ್ರೀನಗರದಲ್ಲಿ 2 ವರ್ಷ, ಕಾಶ್ಮೀರದಲ್ಲಿ 2 ವರ್ಷ, ಮತ್ತೇ ಗುಜರಾತನಲ್ಲಿ, ಚೆನ್ನೈ, ಕೊನೆಗೆ ಜಾಮನಗರದಲ್ಲಿ 17 ವರ್ಷ ಪೂರೈಸಿ ನಿವೃತ್ತಿ ಹೊಂದಿದರು.

ಒಮ್ಮೆ ಫೈರಿಂಗ್ ಅಭ್ಯಾಸಕ್ಕೆ ಹೋದಾಗ ಇವರ ರೇಂಜ್‌ನಲ್ಲಿರುವ ಇವರ ಪಕ್ಕದಲ್ಲಿರುವ ಬಫರ್ ಗನ್ ತಾನಾಗಿಯೇ ಒಡೆದು ಇವರ 6 ಜನ ಸೈನಿಕರು ಹುತಾತ್ಮರಾಗಿದ್ದರು . ಅದೃಷ್ಟವಶಾತ್ ಇವರು ಆ ದುರ್ಘಟನೆಯಿಂದ ಪಾರಾಗಿದ್ದರು.

ಜಮ್ಮು ಕಾಶ್ಮೀರದಲ್ಲಿ ಇದ್ದಾಗ ಬಫರ್ ಜೊತೆಗೆ ಹಲವಾರು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಿಕೊಳ್ಳುತ್ತಾರೆ. ಒಂದು ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಅಂದು ಭಯೋತ್ಪಾದಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಭಾರತೀಯ ಸೇನೆಯ ಭಾಗವಾಗಬೇಕ್ಕಾದರೆ ಮೊದಲು ಎಲ್ಲಾ ರೀತಿಯಿಂದಲೂ ಕಷ್ಟಗಳನ್ನು ಸಹಿಸಿಕೊಳ್ಳುವ ಗುಣ ನಮ್ಮಲ್ಲಿರಬೇಕು. ಅಕಸ್ಮಾತ್ತಾಗಿ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ, ಯುದ್ಧ ಘೋಷಣೆಯಾದರೆ ಮೂರು ವರ್ಷದ ಒಳಗೆ ನಿವೃತ್ತಿಯಾದ ಎಲ್ಲ ಸೈನಿಕರನ್ನು ಮತ್ತೊಮ್ಮೆ ರಾಷ್ಟ್ರಕಾರ್ಯಕ್ಕಾಗಿ ಮತ್ತೆ ಕರೆ ನೀಡಲಾಗುತ್ತದೆ . 2006 ರಲ್ಲಿ ಇವರು ಗಣರಾಜ್ಯೋತ್ಸವದ ಪಥಸಂಚಲನದಲ್ಲೂ ಭಾಗಿಯಾಗಿದ್ದಾರೆ ಎಂಬುದು ಹೆಮ್ಮೆಯ ವಿಚಾರ.

2016 ರಿಂದ 2018ರ ವರೆಗೆ ಸಾಕಷ್ಟು ಕಷ್ಟ ಅನುಭವಿಸಿ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರೆ ಬಗ್ಗೆ ಹೇಳುತ್ತಾ ಹೋದ ಅವರ ಕಣ್ಣಂಚಲ್ಲಿ ನೀರಿತ್ತು. ಬದುಕಿದ್ದು, ಸಾವನ್ನು ಕಣ್ಣಾರೆ ನೋಡಿದ್ದು, ಶತ್ರುವನ್ನು ಮಟ್ಟಹಾಕುವ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ಘಟನೆಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. ಜಮ್ಮು ಕಾಶ್ಮೀರದಲ್ಲಿ ಆಪರೇಷನ್‌ಗೆ ಹೋದಾಗ ಎರಡೇರಡು ದಿನ ಊಟ ಇಲ್ಲದೇ ಆಪರೇಷನ್ ಪೂರ್ಣ ಮಾಡುವವರೆಗೂ ಉಪವಾಸವಿದ್ದ ದಿನಗಳು . ಅದೊಮ್ಮೆ ಕಾಶ್ಮೀರದ ದೊಡ್ಡ ಬೆಟ್ಟ ನಾಲೆಯ ಮೂಲಕ ಹಾಯ್ದು ಬೆಟ್ಟದ ತುದಿಯಲ್ಲಿದ್ದ ಶತ್ರುಗಳನ್ನು ಹೊಡೆದುರುಳಿಸಲು ಹೋದಾಗ ಇವರ ಜೊತೆಗೆ ಇದ್ದ ಸೈನಿಕ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪ್ರಾಣಾರ್ಪಣೆ ಮಾಡಿದ್ದ. ಬೆಳಿಗ್ಗೆ ಸತತ 6 ಗಂಟೆಗಳ ಕಾಲ ಶರೀರವನ್ನು ಹುಡುಕಿದರು ಶರೀರ ಸಿಗಲಿಲ್ಲ. ಶತ್ರುಗಳು ತೆಗೆದುಕೊಂಡು ಹೋದರೋ ಅಥವಾ ಅಲ್ಲಿನ ಕಾಡು ಪ್ರಾಣಿಗಳು ಆ ಸೈನಿಕನ ಶರೀರ ತೆಗೆದುಕೊಂಡು ಹೋದವೋ ಗೊತ್ತಿಲ್ಲ. ಊಟ ನಿದ್ದೆ ಇಲ್ಲದೇ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಹೋಗೋದು ಒಂದು ಅತ್ಯದ್ಭುತವೇ ಸರಿ. ಸಾಮಾನ್ಯವಾಗಿ ಎಲ್ಲಾ ಕಾರ್ಯಾಚರಣೆಗಳು ರಾತ್ರಿ ಸಮಯದಲ್ಲೆ ನಡೆಯುತ್ತವೆ ಎಂದು ಹೇಳುವಾಗ ಅವರ ಕಣ್ಣಲ್ಲಿ ದೇಶಪ್ರೇಮದ ಮಿಂಚು ಕಾಣಿಸುತ್ತಿತ್ತು.

2018 ರಲ್ಲಿ ಒಂದು ಕಾರ್ಯಾಚರಣೆಯಲ್ಲಿ ಭಯೋತ್ಪಾದಕರನ್ನು ಕೊಲ್ಲೋಕೆ ಹೋದಾಗ ನಡೆದ ಘಟನೆ, ಅಂಬೂಷ್ ಮೂಲಕ ಕಾರ್ಯಾಚರಣೆಗೆ ಹೋದ ಸೈನಿಕರು ಶತ್ರುಗಳನ್ನು ಸುತ್ತುವರೆದಿದ್ದರು. (ಅಂಬೂಷ್ ಅಂದರೆ ರಾತ್ರಿ ಸಮಯದಲ್ಲಿ ಕಾರ್ಯಾಚರಣೆ ಸ್ಥಳಕ್ಕೆ ಬಂದು ಶಸ್ತ್ರಾಸ್ತ್ರಗಳನ್ನ ಸಂಗ್ರಹಿಸಿ , ಶತ್ರುಗಳ ಚಲನವಲನಗಳ ಮೇಲೆ ನಿಗಾ ಇಟ್ಟು ಅವರು ಹೊರಗೆ ಬಂದ ತಕ್ಷಣ ಹೊಡೆದಾಕುವುದು) ಸಂದರ್ಭದಲ್ಲಿ ಮಾರುತಿ ಅಣ್ಣನ ಪಕ್ಕದಲ್ಲಿದ್ದ ಹಾಸನದ ವೀರ ಸೈನಿಕರೊಬ್ಬರು ಕಾಲು ಜಾರಿ ಶತ್ರುಗಳ ಸ್ಥಳದಲ್ಲಿಯೇ ಬಿದ್ದು ಬಿಟ್ಟ ಆವಾಗ ಅಲ್ಲಿನ ಶತ್ರುಗಳು ಹೊರಗಡೆ ಬಂದು ತಮ್ಮ ಜೀವ ರಕ್ಷಣೆಗೆ ಫೈರಿಂಗ್ ಮಾಡುತ್ತಾ, ಆ ಮನೆಯ ಸಾಮಾನ್ಯ ನಾಗರಿಕರನ್ನು ಒತ್ತೆಯಾಳಾಗಿಸಿಕೊಂಡು ತಪ್ಪಿಸಿಕೊಂಡಿದ್ದರು. ಆ ಫೈರಿಂಗ್‌ನಲ್ಲಿ ಆ ಮನೆಯ ಇಬ್ಬರು ಅಮಾಯಕರು ಸಾವನ್ನಪ್ಪಿದ್ದರು. ಆ ಸೈನಿಕ ತನ್ನ ಜೀವ ರಕ್ಷಣೆಯ ಸಲುವಾಗಿ ಗುಂಡು ಹಾರಿಸಿದ ಸೈನಿಕನ ಮೇಲೆ ಇನ್ನೂ ಕೇಸ್ ನಡೆಯುತ್ತಿದೆ.

ಒಂದ ಸಾರಿ ಇವರೆಲ್ಲರೂ ಶಸ್ತ್ರಾಸ್ತ್ರಗಳನ್ನು ಒಂದು ಕಡೆ ಇಟ್ಟು ಊಟಕ್ಕೆ ಹೋದಾಗ ಭಯೋತ್ಪಾದಕರ ಕಡೆಯಿಂದ ಬಾಂಬ್ ಬಂದು ಬಂಕರ್ ಮೇಲೆ ಸಿಡಿದಿದ್ದರ ಪರಿಣಾಮವಾಗಿ ಬಂಕರ್, 16 ರಿಂದ 17 AK 47ಗನ್‌ಗಳು, ಗೇನೇಡ್‌ಗಳು, ಸಾಕಷ್ಟು ಪ್ರಮಾಣದ ಬುಲೇಟ್‌ಗಳು, 04 LMG ಹೈ ಪವರ್ ಗನ್‌ಗಳು ಛಿದ್ರ ಛಿದ್ರವಾಗಿದ್ದವು.

long live petroling ಹೋದಾಗ ಮೂರು ಮೂರುದಿನ ಹೋಗುವುದಾಗಿದ್ದು, ಮೂರು ದಿನಕ್ಕಾಗುವ ಶಸ್ತ್ರಾಸ್ತ್ರ, ಊಟ, ನೀರು, ಒಲೆ ಎಲ್ಲವೂ ಸೇರಿ ಕೊಡೊಯ್ಯಲಾಗುತ್ತಿದ್ದು ಅದನ್ನು MRE ರೇಶನ್ ಎನ್ನಲಾಗುತ್ತದೆ. ಅದರಲ್ಲಿನ ಆಹಾರ ಒಂದು ವರ್ಷದವರೆಗೂ ಹಳಸುವುದಿಲ್ಲ.

ಕಳೆದ ವರ್ಷ ನಡೆದ ಘಟನೆ ಗುಜರಾತಿನ ಜಾಮನಗರದಲ್ಲಿ ದೊಡ್ಡ ಶಸ್ತ್ರಾಸ್ತ್ರ ಸಂಗ್ರಹಣಾ ಅಂಡರ್‌ ಗ್ರೌಂಡ್ ಕೊಠಡಿಯಲ್ಲಿ ಕಾಯುವಾಗ ನಿಧಾನವಾಗಿ ಮಳೆ ಸುರಿಯುತ್ತಿದ್ದು, ಮಾರುತಿಯವರು ಊಟಕ್ಕೆ ಹೋದ ಸಂದರ್ಭದಲ್ಲಿ ಅವರ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಹ ಸೈನಿಕನಿಗೆ ಸಿಡಿಲು ಬಡಿದು ಹುತಾತ್ಮರಾಗುತ್ತಾರೆ. ಹುಡುಗ ಮಹಾರಾಷ್ಟ್ರದ ಔರಂಗಾಬಾದ್‌ನ ಲೇರೆ ಎಂಬ ಈ ಹುತಾತ್ಮ ಯೋಧರ ಮೇಲಿನ ಅಭಿಮಾನದಿಂದ ಅಲ್ಲಿನ ಜನರು ಅಭಿಮಾನಕ್ಕೆ ಅವನ ಮೂರ್ತಿಯನ್ನು ನಿರ್ಮಿಸಿದ್ದಾರೆ.

ಇನ್ನೊಮ್ಮೆ ಕಾಶ್ಮೀರದಲ್ಲಿ ಇವರಿದ್ದ ಸ್ಥಳಗಳ ಮೇಲೆಯೇ ಭಯೋತ್ಪಾದಕರು ದಾಳಿ ನಡೆಸಿದ ಸಂದರ್ಭದಲ್ಲಿ ದಾಳಿಯನ್ನು ಎದುರಿಸಿ ಚಾಕಚಕ್ಯತೆಯಿಂದ ವಾಪಸ್ ಫೈರಿಂಗ್ ಮಾಡುತ್ತ ಎಲ್ಲರೂ ತಮ್ಮ ಜೀವಗಳನ್ನು ಉಳಿಸಿಕೊಂಡಾ ಘಟನೆಯನ್ನವರು ನೆನಪಿಸಿಕೊಳ್ಳುತ್ತಾರೆ.

ಮೊನ್ನೆ ಮೊನ್ನೆ ಚೀನಾದ ಘರ್ಷಣೆಯಲ್ಲಿ ಗುಜರಾತ್‌ನ ಜಾಮನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರ ತಂಡಕ್ಕೆ ಸನ್ನದ್ಧರಾಗಿರುವಂತೆ ಸೂಚನೆ ಲಭಿಸಿತ್ತು.

ಮಾರುತಿ ದಳವಾಯಿ ಅವರಿಗೆ ಮದುವೆ ಆಗಿದೆ. ಒಬ್ಬಳು ಮಗಳು ಇದ್ದಾಳೆ. ಅವಳನ್ನು ಸೈನ್ಯಕ್ಕೆ ಸೇರಿಸುವ ಕನಸನ್ನೂ ಹೊಂದಿದ್ದಾರೆ. ಇವರ ಸ್ವಂತ ಸಹೋದರನೂ ಸಹಿತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ 10 ವರ್ಷ ಪೂರೈಸಿದ್ದಾರೆ. ಮುಂದಿನ ಜೀವನವನ್ನು ಇಷ್ಟು ದಿನ ದೂರ ಇದ್ದ ಕುಟುಂಬಸ್ಥರು, ಸಂಬಂಧಿಕರು, ಹಾಗೂ ಊರಿನ ಎಲ್ಲರ ಜೊತೆಗೆ ಕಳೆಯುವ ಅಪೇಕ್ಷೆಯನ್ನು ಹೊಂದಿದ್ದಾರೆ. ಜೊತೆಗೆ ಅವಕಾಶ ಸಿಕ್ಕರೆ ಕನ್ನಡಾಂಬೆಯ ಕೆಲಸವನ್ನು ಮಾಡೋಕೆ ಉತ್ಸುಕರಾಗಿದ್ದಾರೆ. ಮುಂದೆ ಸೈನ್ಯ ಸೇರಲು ಬಯಸುವ ಅಭ್ಯರ್ಥಿಗಳಿಗೆ ಅಲ್ಲಿನ ವ್ಯವಸ್ಥೆಯ ಬಗ್ಗೆ ತಿಳಿಸಿ ತರಬೇತಿ ನೀಡಲೂ ಅವರು ಉತ್ಸುಕರಾಗಿದ್ದಾರೆ.

17 ವರ್ಷ ತಾಯಿ ಭಾರತ ಮಾತೆಯ ಸೇವೆ ಸಲ್ಲಿಸಿದ ಮಾರುತಿಯವರ ಜೀವನ ಒಂದು ಪ್ರೇರಣೆ. ಎರಡು ದಿನ ತಂದೆ ತಾಯಿ ಕುಟುಂಬ ಬಿಟ್ಟು ಜೀವನ ಸಾಗಿಸುವುದೇ ಕಷ್ಟವಾಗಿರುವಾಗ , 17 ವರ್ಷಗಳ ಕಾಲ ಮನೆಯವರನ್ನು ಬಿಟ್ಟು ದೇಶಸೇವೆ ಸಲ್ಲಿಸುವ ಯೋಧರಿಗೆ ಸಾವಿರ ನಮನಗಳು.

ಒಂದೆ ಮನೆಯಲ್ಲಿ ಇಬ್ಬರೂ ಸೈನಿಕರನ್ನು ದೇಶ ಸೇವೆಗೆ ನೀಡಿದ ತಾಯಿಯೇ ನಿಜವಾದ ದೇವರು. ತಂದೆ, ಹೆಂಡತಿ ಕುಟುಂಬದವರೆಲ್ಲರೂ ಈ ತ್ಯಾಗಕ್ಕೆ ಸಹಕರಿಸಿದವರೆಲ್ಲರೂ ದೇವರ ಸಮಾನರೇ.

ಸೈನಿಕರೆಂದರೆ ಗೌರವ, ಶ್ರದ್ಧೆ, ನಂಬಿಕೆ, ವಿಶ್ವಾಸ ನಿಷ್ಠೆ. ಸೈನಿಕರ ವೀರತ್ವ, ಅನುಭವಿಸಿದ ಕಷ್ಟಗಳನ್ನು ಕೇಳಿದಾಗ ಮೈಮನ ಎಲ್ಲವೂ ರೋಮಾಂಚನಗೊಳ್ಳುತ್ತದೆ . ನಮ್ಮ ನಮ್ಮ ಮಧ್ಯೆದಲ್ಲಿರುವ ಎಷ್ಟೋ ಸೈನಿಕರ ಸಾಹಸದ ಕಥೆಗಳ ನಮ್ಮಲ್ಲಿ ಒಂದು ಅದ್ಭುತ ಶಕ್ತಿಯನ್ನು ನೀಡಿ ಮತ್ತಷ್ಟು ದೇಶ ಸೇವೆ ಮಾಡೋಕೆ ಪ್ರೇರಣೆ ನೀಡುತ್ತವೆ. ಆ ತರಹ ಸಾಹಸಗಳನ್ನು ಸಮಾಜಕ್ಕೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರದು ಅನ್ನುವ ಭಾವದೊಂದಿಗೆ…

ಜೈ ಜವಾನ್ ,ಜೈ ಹಿಂದ್

✍️ದೀಪಶ್ರೀ ಭಟ್

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top