https://chat.whatsapp.com/BKucwX3HbX4J90X4VL22yG
News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
×
Home About Us Advertise With s Contact Us

350 ರೈತರಿಗೆ ಪ್ರೇರಣೆಯಾಯಿತು ಶಿಕ್ಷಕನ ಪಾರ್ಟ್‌ಟೈಮ್ ಕೃಷಿ

ಪ್ರೀತಿಯಿಂದ ಮಾಡುವ ಕೃಷಿ ಫಲ ನೀಡದೆ ಬಿಡುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ್ ಗ್ರಾಮದ ಅಮರೇಂದರ್ ಪ್ರತಾಪ್ ಸಿಂಗ್.

ಶಿಕ್ಷಕರಾಗಿ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಜ್ಞಾನವನ್ನು ಪಸರಿಸಿದ ಅವರು, ಇಂದು ಪಾರ್ಟ್ ಟೈಮ್ ಕೃಷಿ ಕಾರ್ಯ ಮಾಡುತ್ತಾ ತಮ್ಮ ಸುತ್ತಮುತ್ತಲ ಅನೇಕ ರೈತರಿಗೆ ಪ್ರೇರಣೆಯಾಗಿದ್ದಾರೆ. ಕೃಷಿ ಮಾಡಲು ಪ್ರಯತ್ನ ಹಾಗೂ ದೃಢ ನಿಶ್ಚಯವಿದ್ದರೆ ಪ್ರಗತಿಪರ ರೈತನಾಗಿ ಹೊರಹೊಮ್ಮಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ ಅವರು, ಶಿಕ್ಷಕ ಹುದ್ದೆಯಿಂದ ವಾರ್ಷಿಕ 1.20 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಆದರೆ ಕೃಷಿಯಿಂದ ಅವರಿಗೆ ಸಿಗುವ ವಾರ್ಷಿಕ ಸಂಪಾದನೆ 30 ಲಕ್ಷ ರೂಪಾಯಿ. ಇಡೀ ದಿನ ಅವರು ಶಿಕ್ಷಕನಾಗಿ ದುಡಿಯುತ್ತಾರೆ. ಇದಕ್ಕಾಗಿ ಕುಟುಂಬದೊಂದಿಗೆ ಲಕ್ನೋದಲ್ಲಿ ಅವರು ವಾಸ ಮಾಡುತ್ತಿದ್ದಾರೆ. ಆದರೆ ತಮ್ಮ ಮನೆಯಿಂದ ಕೆಲವು ಗಂಟೆ ದೂರ ಇರುವ ತಮ್ಮ ಪಿತ್ರಾರ್ಜಿತ 30 ಎಕರೆ ಆಸ್ತಿಯಲ್ಲಿ ಅವರು ಕೃಷಿಯನ್ನು ಮಾಡುತ್ತಿದ್ದಾರೆ. ಅವರು ಕೃಷಿಯಲ್ಲಿ ತಜ್ಞತೆಯನ್ನು ಹೊಂದಿರುವುದು ಮಾತ್ರವಲ್ಲ, ಇತರರಿಗೂ ಕೃಷಿಯನ್ನು ಮಾಡಲು ಎಲ್ಲಾ ಸಲಹೆ ಮತ್ತು ನಿರ್ದೇಶನಗಳನ್ನು ನೀಡುತ್ತಾರೆ.

ಕೇವಲ ಯೂಟ್ಯೂಬ್ ನೋಡಿ ಅವರು ತಮ್ಮ ಒಂದು ಎಕರೆ ಪ್ರದೇಶದಲ್ಲಿ ಬಾಳೆಗಿಡವನ್ನು ಬೆಳೆಸಿದ್ದಾರೆ. ಈ ಪ್ರದೇಶದಲ್ಲಿ ರೈತರು ಹೆಚ್ಚಾಗಿ ಗೋಧಿ, ಧಾನ್ಯ ಅಥವಾ ಕಬ್ಬು ಬೆಳೆಸುತ್ತಾರೆ. ಆದರೆ ಇವುಗಳು ರೈತರಿಗೆ ಹೆಚ್ಚಿನ ಆದಾಯವನ್ನು ತಂದುಕೊಡುವುದಿಲ್ಲ. ಹೀಗಾಗಿ ಬೇರೆ ಬೆಳೆಗಳನ್ನು ರೈತರು ಬೆಳೆಸುವತ್ತ ಮುಂದಾಗಬೇಕು ಎಂಬುದು ಅಮರೇಂದರ್ ಅವರ ಸಲಹೆಯಾಗಿದೆ.

ಅವರು ತಮ್ಮ ಭೂಮಿಯಲ್ಲಿ ನಾನಾ ವಿಧದ ಕೃಷಿಯನ್ನು ಪ್ರಯೋಗ ಮಾಡಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ಹಳದಿ, ಶುಂಠಿ, ಕಾಲಿಫ್ಲವರ್, ಬಾಳೆ ಹೀಗೆ ಹಲವಾರು ಬೆಳೆಗಳನ್ನು ಬೆಳೆದು ಅವರು ಲಕ್ಷಾಂತರ ಸಂಪಾದನೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಕಲ್ಲಂಗಡಿ, ಮಸ್ಕ್ ಮೆಲನ್, ಬಟಾಟೆ, ಕ್ಯಾಪ್ಸಿಕಂ, ಹಣಬೆ ಹೀಗೆ ನಾನಾ ವಿಧದ ಕೃಷಿಯನ್ನು ಅವರು ಮಾಡುತ್ತಿದ್ದಾರೆ. ಈ ಎಲ್ಲಾ ಬೆಳೆಗಳನ್ನು ಬೆಳೆಯಲು ಅವರು ಕಲಿತಿದ್ದು ಯೂಟ್ಯೂಬ್ ನೋಡಿ ಎಂಬುದು ವಿಶೇಷ.

ಆರಂಭದಲ್ಲಿ ಕೃಷಿ ಕಾರ್ಯದಿಂದ ಅವರಿಗೆ ಸ್ವಲ್ಪ ನಷ್ಟವಾಗಿದ್ದು ನಿಜ, ಆದರೆ ನಂತರ ಅವರು ಸಾಕಷ್ಟು ಆದಾಯವನ್ನು ಗಳಿಸಲು ಆರಂಭಿಸಿದ್ದಾರೆ. ಇದಕ್ಕೆ ಕಾರಣ ಅವರು ಸರಿಯಾದ ವಿಧಾನವನ್ನು ಅನುಸರಿಸಿದ್ದು. ಕೃಷಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಕೃಷಿಗೆ ಪೌಷ್ಟಿಕತೆಯನ್ನು ನೀಡುವಂತೆ ಅವರು ಮಾಡುತ್ತಿದ್ದಾರೆ. ಕೃಷಿ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಅವರು ಗಿಡಗಳಿಗೆ ಹಾಕುತ್ತಾರೆ. ಇದರಿಂದ ಮಣ್ಣಿನ ಫಲವತ್ತತೆ ಕೂಡ ಉಳಿಯುತ್ತದೆ ಮತ್ತು ಉತ್ತಮ ಇಳುವರಿ ಕೂಡ ಬರುತ್ತದೆ. ಹನಿ ನೀರಾವರಿ ಮತ್ತು ಸ್ಪಿಂಕ್ಲರ್ ಪದ್ಧತಿಯನ್ನು ಅವರು ಅನುಸರಿಸುತ್ತಿದ್ದಾರೆ.

ಅಮರೇಂದರ್ ಅವರು ಕೃಷಿಯಲ್ಲಿ ಮಾಡಿದ ಸಾಧನೆಯನ್ನು ಕಂಡು ಇತರ 350 ರೈತರು ಕೂಡ ಅವರೊಂದಿಗೆ ಸೇರಿ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಬದಲಾಯಿಸಿ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಯಶಸ್ಸನ್ನು ಕಂಡಿದ್ದಾರೆ.

ಇಷ್ಟೆಲ್ಲಾ ಕೃಷಿಯಲ್ಲಿ ಸಾಧನೆ ಮಾಡಿದರೂ ಅಮರೇಂದರ್ ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಬಿಟ್ಟಿಲ್ಲ. ಮಕ್ಕಳಿಗೆ ಜ್ಞಾನವನ್ನು ಪಸರಿಸುವ ಕಾರ್ಯವನ್ನು ಅವರು ಮಾಡುತ್ತಲೇ ಕೃಷಿಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಈಗಾಗಲೇ ಅವರು ಆಹಾರ ಸಂಸ್ಕರಣೆಗೆ ಪರವಾನಗಿ ಪಡೆದುಕೊಂಡಿದ್ದು, ಶೀಘ್ರದಲ್ಲಿ ಹಣ್ಣುಗಳ ಜ್ಯೂಸ್ ತಯಾರಿಸಲು ಆರಂಭಿಸುತ್ತಿದ್ದಾರೆ. ಅವರ ಸಾಧನೆ ನಿಜಕ್ಕೂ ಪ್ರೇರಣೆಯಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

 

Recent News

Back To Top