ವಿವೇಕಾನಂದರ ಪ್ರಭಾವದಿಂದಾಗಿ ಮಾರ್ಗರೆಟ್ ನೋಬಲ್ ಎಂಬ ಐರಿಶ್ ಮಹಿಳೆ ಸೋದರಿ ನಿವೇದಿತಾ ಆಗಿ ಬದಲಾದರು. ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಾಗಿ ಭಾರತದಲ್ಲಿ ಅವರು ದಣಿವರಿಯಿಲ್ಲದಂತೆ ಸೇವೆ ಸಲ್ಲಿಸಿದರು. ಇಂದು ಅಕ್ಕ ನಿವೇದಿತರ ಜನ್ಮದಿನ. ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ದಿನ.
ಬಾಲ್ಯದಿಂದಲೇ ಆಧ್ಯಾತ್ಮದ ನವಿರು ಭಾವನೆಗಳನ್ನು ಮನಸ್ಸಿನಲ್ಲಿ ಬೇರೂರಿಸಿಕೊಂಡ ಮಾರ್ಗರೆಟ್ ನೊಬೆಲ್ಲರಿಗೆ ಲಂಡನ್ನಿನಲ್ಲಿ ಮೊತ್ತಮೊದಲು ಸ್ವಾಮಿ ವಿವೇಕಾನಂದರ ದರ್ಶನವಾಯಿತು. ಅವರ ಭಾಷಣವನ್ನು ಆಲಿಸುವ ಸದವಕಾಶ ದೊರೆಯಿತು. ಅದು ಆಕೆಯ ಜೀವನದಲ್ಲಿ ಮಹತ್ವದ ಪರಿವರ್ತನೆಯನ್ನು ತಂದಿತು. ಆಕೆ ಭಾರತೀಯರ ಕಣ್ಮಣಿಯಾದಳು.
ಸ್ವತಂತ್ರ ಮನೋಭಾವದ ಆಕೆಗೆ ತನ್ನನ್ನು ಗುರು ವಿವೇಕಾನಂದರ ಪಾದದಲ್ಲಿ ತನ್ನನ್ನು ಸಮರ್ಪಿಸಿಕೊಂಡು, ಸಮಾಜಸೇವೆಗಾಗಿ ಭಾರತಕ್ಕೆ ಬರುವ ತೀವ್ರ ಹಂಬಲವಿತ್ತು. ಅದರಂತೆ ಆಕೆ ಭಾರತಕ್ಕೆ ಬಂದು ಸ್ತ್ರೀಯರ ಉದ್ಧಾರಕ್ಕೆ ಶ್ರಮಿಸಿದರು. ಸಮಾಜಸೇವೆ ಮಾಡಿದರು.
“ಇಂಗ್ಲೆಂಡ್ ಮತ್ತು ಭಾರತ ಪರಸ್ಪರ ಪ್ರೀತಿಸುವಂತೆ ಮಾಡುವುದು ನನ್ನ ಜೀವನದ ಕನಸು” ಎಂದು ಆಕೆ ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಹೇಳಿದ್ದರು. ಆದರೆ ಬ್ರಿಟಿಷ್ ಸಾಮ್ರಾಜ್ಯವು ಭಾರತವನ್ನು ಅಧೀನಕ್ಕೆ ತರುತ್ತದೆ ಎಂದು ಶೀಘ್ರದಲ್ಲೇ ಆಕೆ ಅರಿತುಕೊಂಡರು. ಹೀಗಾಗಿಯೇ ಅವರು ಸಂಪೂರ್ಣ ಭಾರತೀಯಳಾಗಲು ನಿರ್ಧರಿಸಿದರು. ವಸಾಹತುಶಾಹಿ ಭಾರತವನ್ನು ತನ್ನ ತಾಯಿನಾಡು ಎಂದು ಪರಿಗಣಿಸಲು ಬಿಳಿ ಮಹಿಳೆ ಬಂದಳು ಎಂದು ಹಲವರು ಅಂದುಕೊಂಡರು. ಈ ರಾಷ್ಟ್ರವು ಅದಾಗಲೇ ಅಸ್ತಿತ್ವದಲ್ಲಿತ್ತು, ಆದರೆ ಶತಮಾನಗಳ ಅಧೀನತೆ ಮತ್ತು ಬ್ರಿಟಿಷರ ಆಡಳಿತದ ಹಿನ್ನಲೆಯಲ್ಲಿ ಪರಿಸ್ಥಿತಿ ಶೋಚನೀಯವಾಗಿತ್ತು. ದಾಸ್ಯ ಜನರನ್ನು ಸಂಕಷ್ಟಕ್ಕೆ ದೂಡಿತ್ತು. ಆಳವಾದ ಮಟ್ಟದಲ್ಲಿ ಸಾಮಾಜಿಕ ಪರಿವರ್ತನೆ ತರಲು ಕೇವಲ ರಾಜಕೀಯ ಸ್ವಾತಂತ್ರ್ಯ ಸಾಕಾಗುವುದಿಲ್ಲ ಎಂದು ಅವರು ತಿಳಿದಿದ್ದರು. ಆದ್ದರಿಂದ ಅವರು ನಿರಂತರವಾಗಿ ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು ಪ್ರೇರೇಪಿಸಲು ಪ್ರಯತ್ನಿಸಿದರು.
ಇದು ತನ್ನ ಮುಂದೆ ಇರುವ ಪ್ರಮುಖ ಕಾರ್ಯವೆಂದೇ ಅವರು ಪರಿಗಣಿಸಿದ್ದರು. ಸ್ನೇಹಿತರಿಗೆ ಬರೆದ ಪತ್ರವೊಂದರಲ್ಲಿ, “ಈಗ ನಮ್ಮ ಮುಂದೆ ಇರುವ ಇಡೀ ಕಾರ್ಯವೆಂದರೆ ಭಾರತಕ್ಕೆ ‘ರಾಷ್ಟ್ರೀಯತೆ’ ಎಂಬ ಪದವನ್ನು ಸಂಪೂರ್ಣ ಅರ್ಥದಲ್ಲಿ ಕೊಡುವುದು. ಉಳಿದದ್ದು ತನ್ನಷ್ಟಕ್ಕೆ ನಡೆಯುತ್ತದೆ. ಈ ಮಹಾನ್ ಪರಿಕಲ್ಪನೆಯನ್ನು ಆಳವಾಗಿ ಹೊಂದಿರಬೇಕು. ಇದರರ್ಥ ಇತಿಹಾಸವನ್ನು ಹೊಸ ದೃಷ್ಟಿಯಿಂದ ನೋಡುವುದು, ರಾಮಕೃಷ್ಣ ವಿವೇಕಾನಂದರ ಧರ್ಮದ ಬಗೆಗಿನ ಕಲ್ಪನೆ, ಎಲ್ಲಾ ಧಾರ್ಮಿಕ ನಂಬಿಕೆಗಳ ಸಂಶ್ಲೇಷಣೆ. ಇದರರ್ಥ ರಾಜಕೀಯ ಪ್ರಕ್ರಿಯೆ ಮತ್ತು ಆರ್ಥಿಕ ವಿಪತ್ತುಗಳು ಕೇವಲ ಒಂದು ಬದಿಯ ಸಮಸ್ಯೆಗಳು. ರಾಷ್ಟ್ರವು ತನ್ನ ರಾಷ್ಟ್ರೀಯತೆಯನ್ನು ಅರಿತುಕೊಳ್ಳುವುದು ಅತ್ಯಂತ ಅನಿವಾರ್ಯ.”
ಅವರು ಕ್ರಾಂತಿಕಾರಿ ನಾಯಕಿ, ಶಿಕ್ಷಣ ತಜ್ಞೆ, ದಾದಿ, ಮಹಿಳೆಯರ ಸಬಲೀಕರಣಕ್ಕೆ ಹೋರಡಿದವರು, ಕಲೆ ಮತ್ತು ವಿಜ್ಞಾನಗಳ ಪೋಷಕರಾಗಿದ್ದರು. ಅವರ ಕೆಲಸದ ಆಯಾಮಗಳು ಎಣಿಸಲಾಗದಷ್ಟು ಸಂಖ್ಯೆಯಲ್ಲಿವೆ. ಆದರೆ ಈ ಎಲ್ಲ ಆಯಾಮಗಳನ್ನು ಒಟ್ಟಿಗೆ ಜೋಡಿಸುವ ಸಂಗತಿಯೆಂದರೆ ಅವರು ಭಾರತ ರಾಷ್ಟ್ರವನ್ನು ನಿರ್ಮಿಸಳು ಅನನ್ಯ ಕೊಡುಗೆ ನೀಡಿದರು ಎಂಬುದು.
ನಿವೇದಿತಾ ನಮಗೆ ನೀಡಿದ್ದು ಭಾರತದ ಸಕಾರಾತ್ಮಕ ದೃಷ್ಟಿ. ಅವರು ವಿದೇಶಿ ಆಡಳಿತದಿಂದ ಬಳಲುತ್ತಿರುವ ದೇಶಕ್ಕೆ ಬಂದರು, ಬಡತನ, ಆಳವಾದ ಸಾಮಾಜಿಕ ಅಸಮಾನತೆಗಳನ್ನು, ಶ್ರೀಮಂತ ಸಂಸ್ಕೃತಿಯೊಂದು ಬಡವಾಗುತ್ತಿರುವುದನ್ನು ಅವರು ಕಂಡರು. ಆದರೆ ಅವರು ಎಲ್ಲವೂ ಬದಲಾಗುತ್ತದೆ ಎಂಬ ಅಚಲವಾದ ನಂಬಿಕೆಯನ್ನು ಹೊಂದಿದ್ದರು. ಅದಕ್ಕಾಗಿ ಅವರು ಶ್ರಮಿಸಿದರು. ಭಾರತೀಯರ ಮನದಲ್ಲಿ ಪ್ರೀತಿಯ ಅಕ್ಕ ಆಗಿ ಉಳಿದುಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.