ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ. ಅಕ್ಟೋಬರ್ 7ರಂದು ಅವರು ರಾಜಕೀಯ ನಾಯಕನಾಗಿ ಹೊರಹೊಮ್ಮಿ 20 ವರ್ಷಗಳು ಪೂರೈಕೆಯಾಗುತ್ತಿವೆ. ಮುಖ್ಯಮಂತ್ರಿಯಾದಾಗಿನಿಂದ ಅವರು ಸೋಲಿಲ್ಲದ ಸರದಾರನಾಗಿ ಯಶಸ್ಸಿನ ಉತ್ತುಂಗವನ್ನು ಏರುತ್ತಲೇ ಬರುತ್ತಿದ್ದಾರೆ. ಇಂದು ಅವರು ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವದ ಚುಕ್ಕಾಣಿ ಹಿಡಿದಿದ್ದಾರೆ. ಇಂದು ಅವರನ್ನು ವಿಶ್ವ ವೇದಿಕೆಯಲ್ಲಿ ವಿಶ್ವ ನಾಯಕನಾಗಿ ನೋಡಲಾಗುತ್ತಿದೆ.
ಗುಜರಾತ್ ಬಿಜೆಪಿಯಲ್ಲಿ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಭುಗೆಲೆದ್ದ ಸಂದರ್ಭದಲ್ಲಿ ಅವರನ್ನು ಅಲ್ಲಿನ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಯಿತು. ಪಕ್ಷವನ್ನು ಬಲಪಡಿಸಲು ಮೋದಿ ಅವರು ಗುಜರಾತ್ ಸಿಎಂ ಆಗಿ ತಮ್ಮ 3 ಅವಧಿಗಳನ್ನೂ ಬಳಸಿಕೊಂಡರು ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಕೊನೆಗೊಳಿಸಲು ಬಿಜೆಪಿಗೆ ಸಹಾಯ ಮಾಡಿದರು ಎಂದು ಹೇಳುವುದು ಅತಿಶಯೋಕ್ತಿಯಲ್ಲ. ಗುಜರಾತಿನಲ್ಲಿ ಇಂದಿಗೂ ಬಿಜೆಪಿ ಪ್ರಬಲ ಪಕ್ಷವಾಗಿ ಆಡಳಿತ ನಡೆಸುತ್ತಿದೆ ಎಂದರೆ ಅದಕ್ಕೆ ಕಾರಣ ಮೋದಿ. ಅಲ್ಲಿ ಕಾಂಗ್ರೆಸ್ ಸೇರಿದಂತೆ ಯಾವುದೇ ವಿಪಕ್ಷಗಳಿಗೆ ತಲೆ ಎತ್ತಲೂ ಬಿಡದಂತೆ ಮೋದಿ ತಮ್ಮ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ.
ಭುಜ್ ಪ್ರದೇಶವನ್ನು ಬೆಚ್ಚಿಬೀಳಿಸಿದ ಭೀಕರ ಭೂಕಂಪದ ನಂತರ 2001ರ ಅಕ್ಟೋಬರ್ 7 ರಂದು ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಸವಾಲುಗಳ ನಡುವೆಯೂ ಅವರು ರಾಜ್ಯದ ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಸಹಾಯ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡರು. ಮೋದಿಯವರ ನಾಯಕತ್ವದಲ್ಲಿ ಗುಜರಾತ್ ಹಲವಾರು ರಂಗಗಳಲ್ಲಿ ಸ್ವಾವಲಂಬಿಯಾಯಿತು ಮತ್ತು ‘ಗುಜರಾತ್ ಮಾದರಿ’ ದೇಶಾದ್ಯಂತ ಜನಪ್ರಿಯವಾಯಿತು. ಗುಜರಾತ್ ಸಿಎಂ ಆಗಿ ಪಿಎಂ ಮೋದಿ ಅವರು ಮಾಡಿದ ಬೃಹತ್ ಅಭಿವೃದ್ಧಿ ಕಾರ್ಯಗಳು ದೇಶಾದ್ಯಂತ ಅವರ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ ಮತ್ತು 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಇದನ್ನು ಚೆನ್ನಾಗಿ ಬಳಸಿಕೊಂಡು ಯಶಸ್ವಿಯಾಯಿತು.
2007ರಲ್ಲಿ ಮೋದಿ ಎರಡನೇ ಬಾರಿಗೆ ಗುಜರಾತ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ವೇಳೆಯೂ ಗುಜರಾತ್ ಅಭಿವೃದ್ಧಿಯಲ್ಲಿ ನಂಬರ್ 1 ಆಗಿತ್ತು. ಇದೇ ಕಾರಣದಿಂದ ಅವರು ಮತ್ತೊಮ್ಮೆ ಜನರ ಆಶೀರ್ವಾದ ಪಡೆದರು, ಸತತ ಮೂರನೇ ಬಾರಿಗೆ 2012 ರಲ್ಲಿ ಸಿಎಂ ಆದರು. ಈ ವೇಳೆ ಮೋದಿಯವರ ಜನಪ್ರಿಯತೆ ದೇಶವ್ಯಾಪಿಯಾಗಿತ್ತು. ಅವರ ಅಭಿವೃದ್ಧಿ ಮಾದರಿ ಎಲ್ಲರ ಬಾಯಲ್ಲೂ ಓಡಾಡುತ್ತಿತ್ತು. ಇದೇ ಕಾರಣಕ್ಕೆ ಅವರನ್ನು ಬಿಜೆಪಿ ರಾಷ್ಟ್ರ ಮಟ್ಟಕ್ಕೆ ಕರೆತರಲು ಚಿಂತನೆ ನಡೆಸಿತು. ಅವರನ್ನು 2014ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಯಿತು. ಇದರ ಬಳಿಕ ಇಡೀ ದೇಶದಲ್ಲಿ ಮೋದಿ ಅಲೆ ಎಬ್ಬಿತು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಜಯಗಳಿಸಿದ ನಂತರ 2014ರ ಮೇ ತಿಂಗಳಲ್ಲಿ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ಮೊದಲ ಅವಧಿ ಹಿಂದಿನ ಯುಪಿಎ ಸರ್ಕಾರ ಮಾಡಿದ ಎಡವಟ್ಟುಗಳನ್ನು ಸರಿಪಡಿಸುವಲ್ಲಿ, ಆಡಳಿತ ವ್ಯವಸ್ಥೆಯನ್ನು ಹಳಿಗೆ ತರುವಲ್ಲಿ, ಭ್ರಷ್ಟಾಚಾರ ನಿರ್ಮೂಲನೆ ಉಪಕ್ರಮ ರೂಪಿಸುವಲ್ಲಿ, ಜನ ಕಲ್ಯಾಣ ಯೋಜನೆಗಳನ್ನು ತರುವಲ್ಲಿ ಕಳೆದು ಹೋಯಿತು. 2019 ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ದೇಶದ ಅಭಿವೃದ್ಧಿಗೆ, ಏಕೀಕರಣಕ್ಕೆ ಪೂರಕವಾದ ಹತ್ತು ಹಲವು ಕಾನೂನುಗಳನ್ನು ರೂಪಿಸಿದ್ದಾರೆ. ಅವರ ಕಠಿಣ ನಿಲುವು , ನಿರ್ಧಾರಗಳು ಅವರ ರಾಜಕೀಯ ವಿರೋಧಿಗಳಲ್ಲಿ ಹತಾಶೆಯ ಭಾವವನ್ನು ಮೂಡಿಸಿರುವುದಂತು ನಿಜ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.