ಬರವಣಿಗೆ ಮೂಲಕ ಮನಸ್ಸು ಗೆದ್ದವರು, ಪರೋಪಕಾರಕ್ಕೆ ಜೀವಂತ ಉದಾಹರಣೆಯಾದವರು, ಸರಳ ಸಜ್ಜನಿಕೆಯಿಂದಲೇ ಎಲ್ಲರ ಗಮನ ಸೆಳೆದವರು, ವೃತ್ತಿಯನ್ನು ಮತ್ತು ಜವಾಬ್ದಾರಿಯನ್ನು ಸರಿದೂಗಿಸುತ್ತಲೇ ಸಮಾಜಸೇವೆಯನ್ನು ತಮ್ಮ ಉಸಿರಾಗಿಸಿಕೊಂಡವರು ಡಾ. ಸುಧಾಮೂರ್ತಿ. ನೆರೆ ಸಂಭವಿಸಲಿ, ಬರ ಅಪ್ಪಳಿಸಲಿ, ಸಾಂಕ್ರಾಮಿಕ ರೋಗ ಬಾಧಿಸಲಿ, ಎಲ್ಲರಿಗಿಂತಲೂ ಮೊದಲು ಜನಸೇವೆಗೆ ಎದ್ದು ನಿಲ್ಲುವವರು ಸುಧಾಮೂರ್ತಿ. ಇದೇ ಕಾರಣದಿಂದ ಅವರು ಕನ್ನಡಿಗರ ಪ್ರೀತಿಯ ಅಮ್ಮ ಆಗಿದ್ದಾರೆ, ಭಾರತೀಯರ ಹೆಮ್ಮೆ ಎನಿಸಿಕೊಂಡಿದ್ದಾರೆ.
ಸಮಾಜದಲ್ಲಿ ದೊಡ್ಡ ಪ್ರತಿಷ್ಠೆ ಅವರಿಗಿದೆ. ಆದರೆ ಅವರೆಂದೂ ಪ್ರತಿಷ್ಠೆಯ ಅಮಲನ್ನು ತಲೆಗತ್ತಿಸಿಕೊಂಡವರಲ್ಲ. ಅವರ ನಡೆ-ನುಡಿ, ಧಿರಿಸು ಎಲ್ಲದರಲ್ಲೂ ಸರಳತೆ, ಸಜ್ಜನಿಕೆ ಎದ್ದು ಕಾಣುತ್ತದೆ. ಅಪ್ಪಟ ಭಾರತೀಯ ಸ್ತ್ರೀಯ ಮಾನವೀಯ ಗುಣಗಳ ಸಾಕಾರ ಮೂರ್ತಿಯಂತೆ ಸುಧಾಮೂರ್ತಿ ನಮಗೆ ಕಾಣುತ್ತಾರೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆಯಾಗಿ ಅವರು ಸಮಾಜದ ವಿವಿಧ ವರ್ಗಗಳ ಜನರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಸಿರಿವಂತರಿಂದ ಹಿಡಿದು ಬಡವರವರೆಗೂ ಜನರೊಂದಿಗೆ ಸದಾ ಅವರು ಬೆಸೆದುಕೊಂಡಿರುತ್ತಾರೆ. ಸೇವೆಯೇ ಜೀವನದ ಉದ್ದೇಶ ಎಂಬುದನ್ನು ಅವರು ಬಲವಾಗಿ ನಂಬಿದ್ದಾರೆ.
ಶಿಕ್ಷಣ, ಬಡತನ ನಿರ್ಮೂಲನೆ, ಆರೋಗ್ಯ, ಸಾರ್ವಜನಿಕ ನೈರ್ಮಲ್ಯ, ಕಲೆ ಮತ್ತು ಸಂಸ್ಕೃತಿ ಹೀಗೆ ಎಲ್ಲಾ ವಲಯದಲ್ಲೂ ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ಅವರು ಅಗಣಿತ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹಿಂದುಳಿದವರ, ಬಡವರ ಸೇವೆ ಮಾಡುತ್ತಿದ್ದಾರೆ. ತಮ್ಮ ಜೀವನವನ್ನೇ ಅವರು ಸೇವೆಗಾಗಿ ಮುಡಿಪಾಗಿಟ್ಟುಕೊಂಡಿದ್ದಾರೆ.
1996 ರಲ್ಲಿ ಸ್ಥಾಪನೆಯಾದ ಇನ್ಫೋಸಿಸ್ ಫೌಂಡೇಶನ್ ಅಡಿಯಲ್ಲಿ ಆದ ಸೇವೆಗಳು ಒಂದೋ ಎರಡೋ ಅಲ್ಲ. ಸಾವಿರಾರು ಇದೆ. ಆಸ್ಪತ್ರೆಗಳ ನಿರ್ಮಾಣ, ಶಾಲೆಗಳ ನಿರ್ಮಾಣ, ಆಶ್ರಮಗಳ, ಪುನರ್ವಸತಿ ಕೇಂದ್ರಗಳ ನಿರ್ಮಾಣ ಎಲ್ಲದರಲ್ಲೂ ಇನ್ಫೋಸಿಸ್ ಫೌಂಡೇಶನ್ ಮಹತ್ವದ ಮೈಲಿಗಲ್ಲು ಸಾಧಿಸಿದೆ. 14000 ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಮಾತ್ರವಲ್ಲ, ಸಮಾಜದ ಬಡವರ್ಗದ ಜನರಿಗೆ ಜ್ಞಾನಾರ್ಜನೆಯನ್ನು ನೀಡುವ ಸಲುವಾಗಿ 60,000 ಗ್ರಂಥಾಲಯಗಳನ್ನು ಸ್ಥಾಪನೆ ಮಾಡಿದೆ.
ಇಂಜಿನಿಯರ್ ಪದವೀಧರೆಯಾಗಿರುವ ಸುಧಾಮೂರ್ತಿಯವರು ತಮ್ಮ ಪತಿ ನಾರಾಯಣಮೂರ್ತಿ ಅವರಿಗೆ ಇನ್ಫೋಸಿಸ್ ಸಂಸ್ಥೆಯನ್ನು ಸ್ಥಾಪನೆ ಮಾಡಲು ನೀಡಿದ ಕೊಡುಗೆ ಅಪಾರವಾದುದು. ಇನ್ಫೋಸಿಸ್ ಸಂಸ್ಥೆ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಇದನ್ನು ಸ್ವತಃ ನಾರಾಯಣಮೂರ್ತಿಯವರು ಹಲವಾರು ಬಾರಿ ಹೇಳಿಕೊಂಡಿದ್ದಾರೆ.
ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುವ ಸುಧಾಮೂರ್ತಿ ಅವರು, ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡ ಭಾಷೆ ಬಗ್ಗೆ ವಿಶೇಷವಾದ ಅಭಿಮಾನ ಅವರಿಗೆ ಇದೆ. ಲೈಂಗಿಕ ಕಾರ್ಯಕರ್ತ ಮಹಿಳೆಯರಿಗೆ ಸಹಾಯ ಮಾಡುವ ಸಲುವಾಗಿ ಅವರು 18 ವರ್ಷಗಳ ಕಾಲ ಸುದೀರ್ಘ ಸೇವೆ ಮಾಡಿದ್ದಾರೆ. ಅವರ ಜೀವನವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅವರೆಲ್ಲರೂ ಸೇರಿ ಸುಧಾಮೂರ್ತಿ ಅವರಿಗೆ ಅಭಿನಂದನಾ ಸಮಾರಂಭವನ್ನು ಕೂಡ ಏರ್ಪಡಿಸಿದ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಲೇಬೇಕು.
“ಓ ದೇವರೇ, ನನಗೆ ಸಿರಿತನ ಬೇಡ, ಸೌಂದರ್ಯ ಬೇಡ, ನನ್ನನ್ನು ರಾಣಿಯಾಗಿಸಬೇಡ. ನಿನಗೇನಾದರೂ ನೀಡಬೇಕೆಂದು ಎನಿಸಿದರೆ, ಬೇರೆಯವರು ಕಣ್ಣೀರು ಒರೆಸುವಂತಹ ಮೃದು ಹೃದಯ ಮತ್ತು ಅಷ್ಟೇ ಕಠಿಣ ಹೃದಯವನ್ನು ಕೊಡು” ಎನ್ನುವ ರಾಮಾಯಣದ ಶ್ಲೋಕವನ್ನು ಸುಧಾಮೂರ್ತಿ ಆಗಾಗ ನೆನಪಿಸಿಕೊಳ್ಳುತ್ತಾರೆ. ಅವರ ಸರಳತೆ, ಅವರ ಸಜ್ಜನಿಕೆಗೆ ಅವರೇ ಸಾಟಿ. ಇಂದು ಅವರ ಜನ್ಮದಿನ.ಅವರು ಕರುನಾಡಿನಲ್ಲಿ ಜನಿಸಿ, ಕರುನಾಡಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದೇ ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆ. ಇನ್ನಷ್ಟು ಸುದೀರ್ಘ ವರ್ಷಗಳ ಸೇವೆ ಅವರಿಂದ ನಮಗೆ ಸಿಗಲಿ ಎಂಬ ಆಶಯ ನಮ್ಮದಾಗಲಿದೆ.
✍️ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.