ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ , ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ವಾತಂತ್ರ್ಯ ದಿನದಂದೇ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಧೋನಿ ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ ಆಟ ನಿಲ್ಲಿಸಿದ್ದು, ಇವರ ಈ ವರೆಗಿನ ಪರ್ಫಾರ್ಮೆನ್ಸ್ಗೆ ಜನ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ತಮ್ಮ ನೆಚ್ಚಿನ ನಾಯಕನ ಮುಂದಿನ ಬದುಕಿಗೆ ಶುಭ ಹಾರೈಸಿ ಅಭಿಮಾನಿಗಳು ಸಾಲು ಸಾಲು ಟ್ವೀಟ್ಗಳ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ.
ತಮ್ಮ ನಿವೃತ್ತಿಯ ಬಗ್ಗೆ ಧೋನಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು ‘ತಮ್ಮ ವೃತ್ತಿ ಜೀವನದ ಸಂದರ್ಭದಲ್ಲಿ ನೀವು ತೋರಿದ ಪ್ರೀತಿ ಬೆಂಬಲಗಳಿಗೆ ಧನ್ಯವಾದಗಳು. 1929 ಗಂಟೆಗಳ ಬಳಿಕ ನನ್ನನ್ನು ನಿವೃತ್ತನೆಂದು ಪರಿಗಣಿಸಿ’ ಎಂದು ಹೇಳಿದ್ದಾರೆ. ಧೋನಿ ಅವರಿಗೆ ಅವರ ಅಗಣಿತ ಅಭಿಮಾನಿಗಳು ನಿವೃತ್ತಿ ಜೀವನಕ್ಕೆ ಶುಭ ಹಾರೈಸಿರುವುದು ಒಂದು ಕಡೆಯಾದರೆ, ಇನ್ನೊಂದೆಡೆಯಲ್ಲಿ ಭಾರತೀಯ ರೈಲ್ವೆ, ವಿಮಾನಯಾನ ಸಂಸ್ಥೆಗಳು ನಿವೃತ್ತಿ ಜೀವನಕ್ಕೆ ಶುಭ ಹಾರೈಸಿ ಟ್ವೀಟ್ ಮಾಡಿವೆ. ಆ ಮೂಲಕ ತಮ್ಮ ನೆಚ್ಚಿನ ಕ್ಯಾಪ್ಟನ್ ಕೂಲ್ ಧೋನಿಗೆ ಗೌರವವನ್ನು ಸಲ್ಲಿಸಿವೆ.
ಈ ಸಂದರ್ಭದಲ್ಲಿ ಜನರು ಕ್ಯಾಪ್ಟನ್ ಧೋನಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿಯೂ ಅಭಿನಂದನೆಯ, ಶುಭಹಾರೈಕೆಯ ಮಹಾಪೂರವನ್ನೇ ಹರಿಸುವ ಮೂಲಕ ನಿವೃತ್ತ ಜೀವನಕ್ಕೆ ಶುಭಾಶಯ ಸಲ್ಲಿಸಿದ್ದಾರೆ. ಭಾರತ ಟಿ-20 ವಿಶ್ವಕಪ್, 2011 ವಿಶ್ವ ಕಪ್, ಹಲವಾರು ಚಾಂಪಿಯನ್ ಟ್ರೋಫಿಗಳನ್ನು ಧೋನಿ ಅವಧಿಯಲ್ಲಿ ಗೆದ್ದುಕೊಟ್ಟಿದ್ದು, ಆ ಮೂಲಕ ದೇಶದ ಕೀರ್ತಿ ಮತ್ತಷ್ಟು ಎತ್ತರಕ್ಕೆ ಏರುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಆದರೆ ಕ್ರಿಕೆಟ್ ಜೀವನಕ್ಕೆ ಕಾಲಿಡುವ ಮೊದಲು ಧೋನಿ ಅವರು ಖರಗ್ಪುರ, ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಟಿಸಿ ಆಗಿ ಕೆಲಸ ಮಾಡುತ್ತಿದ್ದರು.
ಈ ಸಂಬಂಧ ಟ್ವೀಟ್ ಮಾಡಿರುವ ರೈಲ್ವೆ ಸಚಿವಾಲಯ, ‘ಭಾರತೀಯ ರೈಲ್ವೆಯ ಜೊತೆಗೆ ವೃತ್ತಿ ಜೀವನ ಆರಂಭಿಸಿ, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿ, ನಿವೃತ್ತಿ ಹೊಂದಿರುವ ವ್ಯಕ್ತಿಗೆ ಅಭಿನಂದನೆಗಳು. ನಿಮ್ಮ ಅತ್ಯದ್ಭುತ ಆಟದ ವೈಖರಿಯನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಬರೆದುಕೊಂಡಿದ್ದು, ಆ ಮೂಲಕ ತಮ್ಮ ನೆಚ್ಚಿನ ಕ್ರಿಕೆಟರ್ ಮೇಲಿನ ಅಭಿಮಾನವನ್ನು ಹೊರಹಾಕಿದೆ.
ಕೇವಲ ರೈಲ್ವೆ ಸಚಿವಾಲಯವಷ್ಟೇ ಅಲ್ಲದೆ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ಗೋ ಏರ್, ಸ್ಪೈಸ್ ಜೆಟ್ಗಳೂ ಕ್ಯಾಪ್ಟನ್ ಕೂಲ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿವೆ.
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾವೂ ಧೋನಿಗೆ ಗೌರವ ಸಲ್ಲಿಸಿದ್ದು, ‘ಎಂ. ಎಸ್. ಧೋನಿ ಅವರ ಎರಡನೇ ಇನ್ನಿಂಗ್ಸ್ಗೆ ಶುಭ ಹಾರೈಕೆಗಳು. ಭಾರತೀಯ ಕ್ರಿಕೆಟ್ಗೆ ಅವರು ನೀಡಿರುವ ಕೊಡುಗೆಗಳನ್ನು ಮರೆಯಲಾಗದು. ಕಳೆದ ವರ್ಷ ಅವರು ಜೈಪುರದ ಎಎಐ ಗೆ ಭೇಟಿ ನೀಡಿದಾಗ ಮಾತನಾಡಿದ ಮಾತುಗಳು ಮರೆಯಲಾರದು. ಧೋನಿ ಭಾರತದ ಹೆಮ್ಮೆ’ ಎಂದು ಬರೆದುಕೊಂಡಿದೆ.
ಎಎಐ ಡೆಲ್ಲಿ ಏರ್ಪೋರ್ಟ್ ‘ 7 ನೇ ನಂಬರ್ ರನ್ ವೇ ನಲ್ಲಿ ಹೆಲಿಕಾಪ್ಟರ್ ಇಳಿಸುವುದಾಗಿ ಕ್ಯಾಪ್ಟನ್ ಘೋಷಣೆ ಮಾಡಿದ್ದಾರೆ. ದೆಹಲಿಯ ಏರ್ಪೋರ್ಟ್ ವತಿಯಿಂದ ಧೋನಿ ಅವರಿಗೆ ಧನ್ಯವಾದಗಳು. ಕ್ರಿಕೆಟ್ ಜಗತ್ತಿಗೆ ಹೊಸ ತಿರುವು ಕೊಟ್ಟ, ಜಗತ್ತಿಗೆ ಸ್ಪೂರ್ತಿ ತುಂಬಿದ ನಿಮ್ಮ ಎಲ್ಲಾ ಕಾರ್ಯಗಳಿಗೂ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದೆ.
ಧೋನಿ ನಿವೃತ್ತ ಜೀವನಕ್ಕೆ ಶುಭಾಶಯ ತಿಳಿಸಿರುವ ಇಂಡಿಗೋ, ‘ ನಮ್ಮವರೇ ಆದ ಕ್ಯಾಪ್ಟನ್ ಕೂಲ್ ಅವರ ಪ್ರಯಾಣ ಅದ್ಭುತ. ನಮ್ಮನ್ನು ದೊಡ್ಡ ದೊಡ್ಡ ಕನಸುಗಳನ್ನು ಕಾಣುವಂತೆ ಪ್ರೇರೇಪಿಸಿದ್ದಾರೆ ಮತ್ತು ಕ್ರಿಕೆಟ್ ಅನ್ನು ಕೇವಲ ಆಟವಲ್ಲ, ಅದಕ್ಕಿಂತಲೂ ಹೆಚ್ಚು ಎಂಬಂತೆ ಪರಿಗಣಿಸಲು ಸಾಧ್ಯವಾಗಿಸಿದ್ದಾರೆ. ನಿಮ್ಮ ಜೀವನದ ಮುಂದಿನ ಇನ್ನಿಂಗ್ಸ್ಗೆ ನಮ್ಮ ಶುಭ ಹಾರೈಕೆಗಳು. ನಿಮ್ಮ ಜೀವನದ ಉತ್ತಮ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ’ ಎಂದು ಟ್ವೀಟ್ ಮಾಡಿದೆ.
ಫಾಸ್ಟ್ ಸ್ಟಂಪಿಂಗ್ಸ್ನಿಂದ ಹಿಡಿದು ಕೊನೆಯ ಚೆಂಡಿನ ವರೆಗೆ ಮಿಂಚಿನ ವೇಗದಲ್ಲಿ ವೃತ್ತಿ ಮುಗಿಸಿದ್ದೀರಿ. ನಿಮ್ಮದೇ ಶೈಲಿಯಲ್ಲಿ ಪಂದ್ಯ ಮುಗಿಸುವಲ್ಲಿ ನೀವು ದಿ ಬೆಸ್ಟ್. ಧನ್ಯವಾದಗಳು ಧೋನಿ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಗೋ ಏರ್ ಟ್ವೀಟ್ ಮಾಡಿ, ನೆಚ್ಚಿನ ಆಟಗಾರನ ಮುಂದಿನ ಜೀವನಕ್ಕೆ ಶುಭ ಹಾರೈಸಿದೆ.
ಸ್ಪೈಸ್ ಜೆಟ್, ನೆನಪುಗಳನ್ನು ಸೃಷ್ಟಿಸಿದ್ದಕ್ಕೆ ಧನ್ಯವಾದಗಳು ಧೋನಿ ಮತ್ತು ಸುರೇಶ್ ರೈನಾ. ಆಟವನ್ನು ಉತ್ತಮವಾಗಿ ಮುಗಿಸಿದ್ದೀರಿ ಎಂದು ಟ್ವೀಟ್ ಮಾಡಿದೆ.
ಕ್ಯಾಪ್ಟನ್ ಕೂಲ್ಗೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರೂ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ‘ಕ್ಯಾಪ್ಟನ್ ಕೂಲ್ ತಮ್ಮ ಕೈಗವಸುಗಳನ್ನು ನೇತು ಹಾಕಿದ್ದಾರೆ. ಮೈದಾನ ಮತ್ತು ಹೊರಗೂ ಶಾಂತವಾಗಿರುವ ಕ್ರಿಕೆಟಿಗರಲ್ಲಿ ಒಬ್ಬರಾದ ಧೋನಿ, ಅನೇಕ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಆದರ್ಶವಾಗಿದ್ದಾರೆ. ಇದೀಗ ಅವರು ನಿವೃತ್ತಿ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಕ್ರಿಕೆಟ್ ತಂಡದ ಅಭಿಮಾನಿಗಳು ಅವರ ಕೈಚಳಕವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.
ಕೇವಲ ಸಾಮಾನ್ಯ ಜನರಷ್ಟೇ ಧೋನಿ ಆಟಕ್ಕೆ ಮನಸೋತಿದ್ದಲ್ಲ. ಬದಲಾಗಿ ಹರ್ದೀಪ್ ಸಿಂಗ್ ಪುರಿ ಅವರಂತಹ ದೊಡ್ಡ ದೊಡ್ಡ ಹುದ್ದೆಗಳಲ್ಲಿರುವವರು, ವಿಮಾನಯಾನ, ರೈಲ್ವೆ ಸಚಿವಾಲಯದ ಸಿಬ್ಬಂದಿಗಳು ಸೇರಿದಂತೆ ದೇಶದ ಕೋಟ್ಯಂತರ ಜನರ ಮನಸ್ಸಿನಲ್ಲಿ ಕ್ರಿಕೆಟ್ ಎಂದರೆ ಧೋನಿ ಮುಖ ಎದುರು ಬರುವಂತಹ ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂಬುದಕ್ಕೆ ಈ ಮೇಲಿನ ಟ್ವೀಟ್ ಗಳೇ ಸಾಕ್ಷಿಯಾಗಿವೆ.
ವಯಸ್ಸಿನ, ಲಿಂಗದ ಅಂತರವಿಲ್ಲದೆ ಎಲ್ಲರಿಗೂ ಪ್ರಿಯವಾದ ಕ್ರಿಕೆಟ್ ತಾರೆ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಅದೆಷ್ಟೋ ಯುವಕರಲ್ಲಿ ತಮ್ಮ ಆಟ, ಕ್ರಿಕೆಟ್ ಹೊರತಾದ ಜೀವನದ ಮೂಲಕವೂ ಆದರ್ಶವಾಗಿ ಮೆರೆದ, ಆದರ್ಶವಾಗಿ ಉಳಿದ ದೇಶದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿಗೆ ಮತ್ತು ಮುಂದಿನ ಬದುಕಿಗೆ ಆಲ್ ದಿ ಬೆಸ್ಟ್.
Cheers to the man who started his career with Indian Railways and ended with making India proud. We will miss you as a great performer.@msdhoni#MSDhoni#MSDhoni7 pic.twitter.com/qV5QpUa7og
— Ministry of Railways (@RailMinIndia) August 16, 2020
#AAI wishes the best to MS Dhoni @msdhoni in his second innings. His immense contribution to Indian cricket shall never be forgotten. A snapshot of his kind words when he visited AAI’s Jaipur airport @aaijprairport last year. #DhoniThePrideOfIndia pic.twitter.com/mYEvr8FzWX
— Airports Authority of India (@AAI_Official) August 16, 2020
Captain has announced that the Helicopter has landed on runway number 7, and #DelhiAirport wants to say #ThankyouDhoni. Thank you @msdhoni for everything you brought to the world of cricket and to the universe of inspiration.#DhoniRetires #MSDhoni pic.twitter.com/eXQR876QR1
— Delhi Airport (@DelhiAirport) August 16, 2020
To an incredible journey of our very own captain cool. Thank you for inspiring us to dream big and making cricket more than just a game for all of us. We wish you the best in your next innings. Share with us your best moments of @msdhoni . 🏏 #Dhoni #mahi #LetsIndiGo #Cricket pic.twitter.com/chKC5Sw7Dj
— IndiGo (@IndiGo6E) August 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.