ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಹಿನ್ನೆಲೆಯನ್ನಿಟ್ಟುಕೊಂಡು ಗಮನಿಸಿದಾಗ ಕೈಮಗ್ಗ ತಯಾರಿಕೆ ಮುಖ್ಯ ವೃತ್ತಿಯಾಗಿ ಕಂಡುಬರುತ್ತದೆ. ಇದರಲ್ಲಿ 70% ಮಹಿಳೆಯರೂ ಕಾರ್ಯ ನಿರ್ವಹಿಸುತ್ತಾರೆ ಎಂಬುದು ಗಮನಾರ್ಹ. ಕೈಮಗ್ಗ ಉದ್ಯಮದ ಬಗ್ಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಮತ್ತು ಕೈಮಗ್ಗ ನೇಕಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯೂ ಈ ದಿನ ಮಹತ್ವ ಪಡೆದಿದೆ. ಕೈಮಗ್ಗ ಕಾರ್ಮಿಕರಿಗೆ ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸುವ ಸಲುವಾಗಿ ಆಗಸ್ಟ್ 7, 2015 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆರಂಭಿಸಿತು.
ಹಿಂದೆ ಬ್ರಿಟಿಷರು ಭಾರತವನ್ನಾಳುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷರನ್ನು ವಿರೋಧಿಸಿ ಸ್ವದೇಶಿ ಚಳುವಳಿಯೊಂದು ನಡೆಯುತ್ತದೆ. ಈ ಚಳುವಳಿಯ ನೆನಪಿಗಾಗಿಯೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ 6 ವರ್ಷಗಳ ಹಿಂದೆ ಆಗಸ್ಟ್ 7 ನ್ನು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಎಂದು ಘೋಷಿಸಿದೆ. ದೇಶದ ಅನೇಕ ಜನರ ಜೀವನೋಪಾಯದ ಮೂಲವಾಗಿದ್ದ ಕೈ ಮಗ್ಗಗಳನ್ನು, ನೇಕಾರರನ್ನು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಹಚ್ಚೆ ಹಾಕುವ ಕೆಲಸವನ್ನು ಆ ಮೂಲಕ ಕೇಂದ್ರ ನಮೋ ಸರ್ಕಾರ ಮಾಡಿದೆ ಎನ್ನಬಹುದು.
ಕೈಮಗ್ಗ ದೇಶದ ನೇಕಾರರ ಜೀವನದ ಭಾಗವಷ್ಟೇ ಅಲ್ಲ. ಬದಲಾಗಿ ಭಾರತದ ಭವ್ಯ ಪರಂಪರೆಯೂ ಹೌದು. ನೇಕಾರರ ಕೈಚಳಕದಲ್ಲಿ ಅರಳುವ ಅದೆಷ್ಟೋ ಬಟ್ಟೆ ಬರೆಗಳು ನಮ್ಮ ದೇಶದ ಭವ್ಯ ಸಂಸ್ಕೃತಿಯನ್ನು ಜಗತ್ತಿನೆದುರು ತೆರೆದಿಡುವಲ್ಲಿಯೂ ಪೂರಕವಾಗಿ ಕೆಲಸ ಮಾಡಿದೆ. ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಒಟ್ಟು ಕೆಲಸಗಾರರಲ್ಲಿ 70% ಕ್ಕೂ ಅಧಿಕ ಮಹಿಳೆಯರಿದ್ದು, ಈ ಕ್ಷೇತ್ರವನ್ನು ಮಹಿಳಾ ಸಬಲೀಕರಣವಾಗಿರುವ ಕ್ಷೇತ್ರ ಎಂದೂ ಪರಿಗಣಿಸಬಹುದಾಗಿದೆ. ಬ್ರಿಟಿಷ್ ಭಾರತದಲ್ಲಿ ಸ್ವದೇಶಿ ಉತ್ಷನ್ನಗಳ ಉತ್ಪಾದನೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಮಾಡಲಾದ ಚಳುವಳಿಯೊಂದನ್ನು ಪುನರುಜ್ಜೀವನಗೊಳಿಸಿ, ಆ ಮೂಲಕ ಕೈಮಗ್ಗ ಕಾರ್ಮಿಕರನ್ನು ಮತ್ತು ಕೈಮಗ್ಗವನ್ನು ಮುಖ್ಯ ಭೂಮಿಕೆಗೆ ತರಲು ಮೋದಿ ಸರ್ಕಾರ ತೆಗೆದುಕೊಂಡ ಮಹತ್ವಾಕಾಂಕ್ಷಿ ನಿಲುವು ಇದೆಂದರೂ ತಪ್ಪಾಗಲಾರದು.
ಇಂದು 6 ನೇಯ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಾಗಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕೈಮಗ್ಗ ಕಾರ್ಮಿಕರೂ ಸಂಕಷ್ಟ ಅನುಭವಿಸುವಂತಾಗಿದ್ದು, ಇದನ್ನರಿತ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮಯೋಚಿತ ಪರಿಹಾರವನ್ನು ಒದಗಿಸಿದೆ. ಆ ಮೂಲಕ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ನಡೆಸುವುದಕ್ಕೂ ಅಗತ್ಯ ನೆರವನ್ನು ಸರ್ಕಾರ ನೀಡಿದೆ.
ದೇಶದ ಕೈಮಗ್ಗ ಕಾರ್ಮಿಕರ ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ದಿನವನ್ನು ಆಚರಣೆಗೆ ತಂದಿದೆ. ದೇಶದ ಅಭಿವೃದ್ಧಿ ವಿಚಾರದಲ್ಲಿ ಕೈಮಗ್ಗ ನೇಕಾರರ ಪಾತ್ರವನ್ನು ಸಮಾಜದ ಜನರಿಗೆ ತಿಳಿಸುವಲ್ಲಿ, ಆ ಮೂಲಕ ಕೈಮಗ್ಗ ನೇಕಾರರನ್ನು ಜನರತ್ತ ತಲುಪಿಸುವ ಜೊತೆಗೆ, ಅವರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿಯೂ ಈ ಆಚರಣೆ ಅರ್ಥಪೂರ್ಣವಾಗಿದೆ. ಈ ದಿನದಂದು ಕೈಮಗ್ಗ ನೇಕಾರರನ್ನು ಗುರುತಿಸಿ ಗೌರವಿವ ಕೆಲಸವನ್ನು ಕೇಂದ್ರ ಮೋದಿ ಸರ್ಕಾರ ಮಾಡುತ್ತಿದೆ.
ದೇಶದ ವಿವಿಧ ರಾಜ್ಯಗಳಲ್ಲಿನ 28 ಕೈಮಗ್ಗ ನೇಕಾರರ ಸೇವಾ ಕೇಂದ್ರಗಳು ಮತ್ತು 16 ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಗಳು ಸೇರಿದಂತೆ ಇನ್ನೂ ಹಲವು ಸಂಘ ಸಂಸ್ಥೆಗಳಲ್ಲಿಯೂ ಈ ದಿನವನ್ನು ಆಚರಿಸಲಾಗುತ್ತಿದೆ.
ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಉತ್ಪನ್ನಗಳನ್ನು ಬಹಿಷ್ಕರಿಸಿ, ಸ್ವದೇಶೀ ಉತ್ಪಾದನೆಗೆ, ಖರೀದಿಗೆ ಒತ್ತು ನೀಡುವ ನಿಟ್ಟಿನಲ್ಲಿ ಸ್ವದೇಶೀ ಚಳುವಳಿ ನಡೆಯಿತು. ಆಧುನಿಕ ಭಾರತದಲ್ಲಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿ, ಸ್ವದೇಶಿ ಆತ್ಮನಿರ್ಭರದ ಕನಸು ಸಾಕಾರವಾಗುವಲ್ಲಿಯೂ ಮುಂದಿನ ದಿನಗಳಲ್ಲಿ ಕೈಮಗ್ಗ ನೇಕಾರರ ಪಾತ್ರವೂ ಮುಂಚೂಣಿಯಲ್ಲಿರಲಿದೆ. ಸ್ವರಾಜ್ಯ, ಸ್ವದೇಶೀ ಕಲ್ಪನೆಯ ಭಾಗವಾಗಿಯೂ ಕೈಮಗ್ಗ ಕ್ಷೇತ್ರ ಗುರುತಿಸಿಕೊಳ್ಳಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಕೈಮಗ್ಗದಲ್ಲಿ ತಯಾರಾದ ಸ್ವದೇಶೀ ವಸ್ತ್ರಗಳ ಖರೀದಿಯತ್ತ ನಮ್ಮೆಲ್ಲರ ಚಿತ್ತ ಹರಿಯಲಿ. ಆ ಮೂಲಕ ನೇಕಾರರ ಬದುಕಿಗೆ ಹೊಸ ಆಯಾಮ ದೊರೆಯುವುದರ ಜೊತೆಗೆ, ಭಾರತದ ಸ್ವದೇಶಿ, ಸ್ವಾವಲಂಬಿ ಅಭಿಯಾನದ ದೃಷ್ಟಿಯಿಂದಲೂ ಕೈಮಗ್ಗ ಮಹತ್ವದ ಪಾತ್ರ ವಹಿಸಲಿ. ಆತ್ಮನಿರ್ಭರ ಭಾರತದ ನಾಡಿಮಿಡಿತವಾಗಿ ಕೈಮಗ್ಗ ಕ್ಷೇತ್ರ ಮೂಡಿ ಬರುವಂತಾಗಲಿ ಎಂಬ ಆಶಯ ನಮ್ಮದು.
ಭುವನ ಬಾಬು✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.