ರಕ್ಷಾ ಬಂಧನದ ಆಚರಣೆಗೆ ಭಾರತದ ಸನಾತನ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಸಹೋದರ ಸಹೋದರಿಯರ ನಡುವಿನ ಭ್ರಾತೃತ್ವವನ್ನು ಗಟ್ಟಿಗೊಳಿಸುವ ನೆಲೆಯಲ್ಲಿಯೂ ರಕ್ಷಾ ಬಂಧನ ಮುಖ್ಯವಾಗುತ್ತದೆ. ಶ್ರಾವಣದ ಹಬ್ಬಗಳ ಸಾಲಿನಲ್ಲಿ ಬರುವ ರಕ್ಷಾ ಬಂಧನಕ್ಕೆ ನಮ್ಮ ಸಮಾಜದಲ್ಲಿ ಬಹಳಷ್ಟು ಮಾನ್ಯತೆ ಇದೆ. ಸಹೋದರಿಯೊಬ್ಬಳು ತನ್ನ ರಕ್ಷಣೆಯ ಜವಾಬ್ದಾರಿಯನ್ನು ಸಹೋದರನ ಮೇಲೆ ಹೊರಿಸಿ, ಆತನ ಕೈಗೆ ರಕ್ಷೆ ಕಟ್ಟುತ್ತಾಳೆ. ಬಳಿಕ ಆತನಿಗೆ ಆರತಿ ಬೆಳಗಿ, ಸಿಹಿ ತಿನ್ನಿಸುವ ಮೂಲಕ ಭ್ರಾತೃತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಬ್ಬವಾಗಿದೆ ಈ ರಕ್ಷಾ ಬಂಧನ.
ಶ್ರಾವಣ ಮಾಸದ ಹುಣ್ಣಿಮೆಯಂದು ಭಾರತದೆಲ್ಲೆಡೆ ರಕ್ಷಾ ಬಂಧನದ ಸಂಭ್ರಮ. ಈ ಹಬ್ಬವನ್ನು ಆಚರಿಸಲು ಒಡಹುಟ್ಟಿರಬೇಕೆಂದೇ ಇಲ್ಲ. ಬದಲಾಗಿ ಮಾನಸಿಕವಾಗಿ, ಜಾತಿ ಧರ್ಮದ ಎಲ್ಲೆಯನ್ನು ಮೀರಿ ಬಂಧ ಬೆಸೆದ ಸಹೋದರಿಯೊಬ್ಬಳು, ತನ್ನ ತಾಯಿಯ ಹೊಟ್ಟೆಯಲ್ಲಿ ಹುಟ್ಟದ, ತನ್ನ ಸಮುದಾಯಕ್ಕೆ ಸೇರದ ಸಹೋದರನ ಜೊತೆಗೂ ಆಚರಿಸಬಹುದಾಗಿದೆ. ಜಾತಿ ಧರ್ಮದ ಚೌಕಟ್ಟನ್ನು ಮೀರಿ ಸಹೋದರತ್ವದ ಬಂಧವನ್ನು ಬೆಸೆಯುವ ಶಕ್ತಿ ರಕ್ಷಾ ಬಂಧನಕ್ಕಿದೆ.
ರಕ್ಷಾ ಬಂಧನದ ಐಹಿತ್ಯವನ್ನು ಗಮನಿಸುವುದಾದರೆ, ಪುರಾಣದ ಕಥೆಯೊಂದು ನೆನಪಾಗುತ್ತದೆ. ಹಿಂದೆ ದೇವತೆಗಳು ಮತ್ತು ರಾಕ್ಷಸರ ನಡುವೆ ಕಠೋರ ದೀರ್ಘಕಾಲದ ಯುದ್ಧವಾಗುತ್ತದೆ. ಈ ಸಂದರ್ಭದಲ್ಲಿ ರಾಕ್ಷಸರ ಕೈ ಮೇಲಾಗಿ ಮೂರು ಲೋಕವೂ ಅವರ ಪಾಲಾಗುತ್ತದೆ. ಇಂದ್ರನ ರಾಜ ಸಿಂಹಾಸನವೂ ರಾಕ್ಷಸರಿಗೇ ದಕ್ಕುತ್ತದೆ. ಈ ಸಂದರ್ಭದಲ್ಲಿ ದಾರಿ ಕಾಣದ ದೇವತೆಗಳು, ದೇವತೆಗಳ ಗುರು ಬೃಹಸ್ಪತಿಯ ಬಳಿಗೆ ತೆರಳಿ ಪರಿಹಾರವನ್ನು ಕೇಳುತ್ತಾರೆ. ಇಂದ್ರನಿಗೆ ರಕ್ಷಣೆ ದೊರೆಯುವ ಸಲುವಾಗಿ ಬೃಹಸ್ಪತಿಯ ನೇತೃತ್ವದಲ್ಲಿ ಮಂತ್ರ ಪಠಣಗಳು ನಡೆಯುತ್ತದೆ. ಈ ವೇಳೆ ಇಂದ್ರನ ಪತ್ನಿ ಶಚಿ ದೇವಿ ಇಂದ್ರನ ಕೈಗೆ ಹತ್ತಿಯ ಪವಿತ್ರ ದಾರವನ್ನು ಕಟ್ಟುತ್ತಾಳೆ. ಇದಾದ ಬಳಿಕ ಇಂದ್ರ ರಾಕ್ಷಸರ ಜೊತೆಗೆ ಯುದ್ಧ ಮಾಡಿ ತಾನು ಕಳೆದುಕೊಂಡಿದ್ದನ್ನು ಮರಳಿ ಪಡೆಯುತ್ತಾನೆ ಎಂಬುದಾಗಿಯೂ ಪುರಾಣಗಳು ತಿಳಿಸುತ್ತವೆ.
ಇನ್ನು ಇತಿಹಾಸದ ಹಿನ್ನೆಲೆಯಲ್ಲಿನ ರಕ್ಷಾ ಬಂಧನದ ಕಥೆಗಳನ್ನು ಗಮನಿಸುವುದಾದರೆ, ಅಲೆಕ್ಸಾಂಡರ್ನು ಭಾರತದ ಮೇಲೆ ದಾಳಿ ಮಾಡಿದಂತಹ ಸಂದರ್ಭದಲ್ಲಿ, ಪೋರಸ್ನು ಅವನೊಂದಿಗೆ ಯುದ್ಧ ಮಾಡುತ್ತಾನೆ. ಈ ಸಂದರ್ಭದಲ್ಲಿ ಅಲೆಕ್ಸಾಂಡರ್ನ ಮಡದಿ ರೊಕ್ಸಾನ ತನ್ನ ಪತಿ ಅಲೆಕ್ಸಾಂಡರ್ನನ್ನು ಹತ್ಯೆ ಮಾಡದಂತೆ ಮನವಿ ಮಾಡಿ, ಪವಿತ್ರ ದಾರವೊಂದನ್ನು ಕಳುಹಿಸುತ್ತಾಳೆ. ಅವಳ ಮನವಿಯಂತೆ ಯುದ್ಧದಲ್ಲಿ ಅಲೆಕ್ಸಾಂಡರ್ನನ್ನು ಪೋರಸ್ ಕೊಲ್ಲದೆ ಉಳಿಸುತ್ತಾನೆ. ಇದಕ್ಕೆ ಕಾರಣ ರೊಕ್ಸಾನ ಕಳುಹಿಸಿದ ರಕ್ಷಾ ಬಂಧನ(ಪವಿತ್ರ ದಾರ) ಎಂಬುದಾಗಿಯೂ ಹೇಳಲಾಗುತ್ತದೆ. ಇನ್ನೊಂದು ಕಥೆಯನ್ನು ಗಮನಿಸುವುದಾದರೆ, ಚಿತ್ತೂರಿನ ರಾಣಿ ಕರ್ಣಾವತಿ ಪತಿಯನ್ನು ಕಳೆದುಕೊಂಡು ಬದುಕು ಸಾಗಿಸುತ್ತಿರುತ್ತಾಳೆ. ಈ ಸಂದರ್ಭದಲ್ಲಿ ಈಕೆಯ ರಾಜ್ಯದ ಮೇಲೆ ಬಹದ್ದೂರ್ ಷಾ ದಾಳಿ ಮಾಡುವ ವಿಚಾರ ಆಕೆಗೆ ತಿಳಿದು, ಆಕೆ ತನ್ನ ರಾಜ್ಯದ ರಕ್ಷಣೆಗೆ ಸಹಾಯ ಮಾಡುವಂತೆ ಕೋರಿ ಹುಮಾಯೂನನಿಗೆ ರಕ್ಷೆ ಕಳುಹಿಸುತ್ತಾಳೆ. ಅದರಂತೆ ಹುಮಾಯೂನನೂ ಆಕೆಯ ರಕ್ಷಣೆಗೆ ತನ್ನ ಸೇನೆಯನ್ನು ಕಳುಹಿಸಿ ಕೊಡುತ್ತಾನೆ. ಆದರೆ ಈ ಸಂದರ್ಭದಲ್ಲಿ ಬಹದ್ದೂರ್ ಷಾ ನ ಸೈನ್ಯ ದಾಳಿ ನಡೆಸಿರುತ್ತದೆ. ರಾಣಿ ಕರ್ಣಾವತಿ ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಂಡಿರುತ್ತಾಳೆ. ಆದರೆ ಹುಮಾಯೂನನಿಗೆ ಆಕೆ ರಕ್ಷಣೆ ಕೋರಿ ಕಳುಹಿಸಿದ್ದ ರಕ್ಷೆಯ ಕಾರಣದಿಂದ ಮುಂದೆ ಆತ ಬಹದ್ದೂರ್ ಷಾನನ್ನು ಕರ್ಣಾವತಿಯ ರಾಜ್ಯದಿಂದ ಹೊರ ಹಾಕಿ ಆಕೆಯ ಪುತ್ರ ವಿಕ್ರಮಜೀತ ನನ್ನು ಪಟ್ಟದಲ್ಲಿ ಕೂರಿಸುತ್ತಾನೆ.
ಈ ಮೂರೂ ಕಥೆಗಳನ್ನು ಗಮನಿಸಿದಾಗಲೂ ರಕ್ಷೆಯ ಮಹತ್ವ ನಮ್ಮ ಅರಿವಿಗೆ ಬರುತ್ತದೆ. ಹಾಗೆಯೇ ರಕ್ಷೆ ಎಷ್ಟು ಶಕ್ತಿಶಾಲಿ, ಸಂಬಂಧಗಳನ್ನು ಬೆಸೆಯುವ ವಿಚಾರ ಎಂಬುದೂ ಮನವರಿಕೆಯಾಗುತ್ತದೆ. ರಕ್ಷಣೆ ಮತ್ತು ಸಂಬಂಧಗಳ ಪವಿತ್ರ ಬೆಸುಗೆಯನ್ನು ಸೂಚಿಸುವ ಮಹತ್ವದ ಹಬ್ಬವೇ ರಕ್ಷಾ ಬಂಧನ ಎನ್ನಬಹುದು. ಓರ್ವ ಹೆಣ್ಣು ತನ್ನೆಲ್ಲಾ ರಕ್ಷಣೆಯ ಜವಾಬ್ದಾರಿಯನ್ನು ಒಬ್ಬ ಗಂಡಿನ ಮೇಲೆ ವಹಿಸಿ, ಆ ಮೂಲಕ ಸಂಬಂಧವನ್ನು ರೂಪಿಸಿಕೊಳ್ಳುವ ಹಬ್ಬವಾಗಿಯೂ ರಕ್ಷಾ ಬಂಧನವನ್ನು ನಾವು ಗಮನಿಸಬಹುದಾಗಿದೆ.
ಪ್ರಸ್ತುತ ದಿನಗಳಲ್ಲಿ ಗಮನಿಸಿದರೆ ಬಣ್ಣ ಬಣ್ಣದ ತರಹೇವಾರಿ ರಕ್ಷೆಗಳು ರಕ್ಷಾ ಬಂಧನದ ಸವಿಯನ್ನು ಹೆಚ್ಚಿಸುವಲ್ಲಿ ಮಾರುಕಟ್ಟೆಗಳನ್ನು ಪ್ರವೇಶಿಸಿರುತ್ತದೆ. ಆದರೆ ಇವೆಲ್ಲಕ್ಕಿಂತಲೂ ಪ್ರಾಮುಖ್ಯತೆ ಇರುವುದು ಕೇಸರಿ ಬಣ್ಣದ ನೂಲಿನಿಂದ ಕೈಯಿಂದಲೇ ತಯಾರಾದ ರಕ್ಷೆಗೆ ಎಂಬುದು ಗಮನಾರ್ಹ ಸಂಗತಿ. ಕೇಸರಿ ಬಣ್ಣದ ಹಲವು ಬಣ್ಣಗಳ ನೂಲಿನ ಎಸಳುಗಳನ್ನು ಏಕತೆಯ ಸಂಕೇತ ಎಂಬಂತೆ ಒಂದು ದಾರದ ಮೂಲಕ ಪೋಣಿಸಿ ರಕ್ಷೆ ಸಿದ್ಧಪಡಿಸಿ ಹೆಣ್ಣು ಗಂಡಿನ ಕೈಗೆ ಶ್ರಾವಣದ ಈ ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ಕಟ್ಟುತ್ತಾಳೆ. ಆ ಮೂಲಕ ತನ್ನ ರಕ್ಷಣೆಯ ಹೊಣೆಯನ್ನು ಅವನ ಜವಾಬ್ದಾರಿಯನ್ನಾಗಿ ಮಾಡುತ್ತಾಳೆ. ಜೊತೆಗೆ ಆತನಿಗೆ ಆಯುರಾರೋಗ್ಯ, ಸಕಲ ಸೌಭಾಗ್ಯಗಳನ್ನು ದೇವರು ಕರುಣಿಸುವಂತಾಗಲಿ ಎಂದು ಪ್ರಾರ್ಥಿಸುತ್ತಾಳೆ.
ರಕ್ಷಾ ಬಂಧನವು ನಂಬಿಕೆ, ಶ್ರದ್ಧೆ ಮತ್ತು ಬದುಕಿನ ಭರವಸೆಗಳ ದ್ಯೋತಕವಾಗಿದೆ ಎಂದರೂ ತಪ್ಪಾಗಲಾರದು. ಜೊತೆಗೆ ಸಹೋದರತೆಯ ಸಂಬಂಧಕ್ಕೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿಯೂ ಈ ಹಬ್ಬ ಹೆಚ್ಚು ಪ್ರಸ್ತುತ. ಬಾಂಧವ್ಯ ಬೆಸೆಯುವ ಈ ಹಬ್ಬ ಎಲ್ಲರಿಗೂ ಶುಭವನ್ನುಂಟು ಮಾಡಲಿ. ದುಷ್ಟ ಶಕ್ತಿಗಳ ವಿರುದ್ಧ ಈ ರಕ್ಷಾ ಬಂಧನದ ಹಬ್ಬ ವಿಜಯವನ್ನಾಚರಿಸಲಿ. ಭ್ರಾತೃತ್ವದ ಬಂಧ ಮತ್ತಷ್ಟು ಬಿಗಿಯಾಗಲಿ ಎಂಬ ಶುಭ ಹಾರೈಕೆಯೊಂದಿಗೆ, ಎಲ್ಲರಿಗೂ ರಕ್ಷಾ ಬಂಧನದ ಶುಭ ಕಾಮನೆಗಳು.
ಭುವನ ಬಾಬು✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.