ಆತ್ಮನಿರ್ಭರ ಭಾರತದ ಸಂಕಲ್ಪವನ್ನು ಇಂದು ಪ್ರತಿ ಭಾರತೀಯನೂ ತೊಟ್ಟಿದ್ದಾನೆ. ಆದರೆ ಹಲವು ವರ್ಷಗಳ ಹಿಂದೆಯೇ ಸ್ವಾವಲಂಬನೆಯ ಸಂಕಲ್ಪದ ದ್ಯೋತಕವಾಗಿ ಹುಟ್ಟಿಕೊಂಡು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆ ಕ್ಯಾಂಪ್ಕೋ. ಈ ಸಂಸ್ಥೆ ರೈತರ ಸ್ವಾವಲಂಬನೆಯ ಪ್ರತೀಕ, ದೇಶದ ಹೆಮ್ಮೆಯ ಪ್ರತೀಕ. ಗ್ರಾಮಸ್ವರಾಜ್ಯದ ಹೆಗ್ಗುರುತು. ಸಹಕಾರಿ ಧುರೀಣ ಎಂದೇ ಕರೆಸಿಕೊಳ್ಳುವ ಶ್ರೀ ವಾರಣಾಸಿ ಸಬ್ರಾಯ್ ಭಟ್ ಅವರ ಕನಸಿಕ ಕೂಸಾಗಿ ಹಲವಾರು ಹಿರಿಯರ ದೂರದೃಷ್ಟಿಯೊಂದಿಗೆ ಬೆಳೆದು ಹೆಮ್ಮೆರವಾಗಿರುವ ಕ್ಯಾಂಪ್ಕೋ ಇಂದು 47ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ.
ವೋಕಲ್ ಫಾರ್ ಲೋಕಲ್ ಧ್ಯೇಯಕ್ಕೆ ಆರಂಭದಿಂದಲೂ ಬದ್ಧತೆಯನ್ನು ತೋರಿಸಿಕೊಂಡು ಬಂದಿರುವ ಕ್ಯಾಂಪ್ಕೋ, ಸ್ಥಳೀಯ ರೈತರಿಗೆ ಆಶಾಕಿರಣವಾಗಿದೆ, ಸ್ಥಳೀಯ ಜನರಿಗೆ ಉದ್ಯೋಗವಕಾಶ ಒದಗಿಸುತ್ತಿದೆ. ಅಡಿಕೆಗೆ ಸ್ಥಿರ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಅಡಿಕೆ ಬೆಳಗಾರರಿಗೆ ಬೆನ್ನೆಲುಬಾಗಿ ನಿಂತಿದೆ. ಕೊಕ್ಕೊ ಬೆಳೆಗಾರರನ್ನು ಪ್ರೋತ್ಸಾಹಿಸಲೆಂದೇ ಪುತ್ತೂರಿನಲ್ಲಿ ಬೃಹತ್ ಚಾಕೋಲೇಟ್ ಕಾರ್ಖಾನೆಯನ್ನು ಸ್ಥಾಪನೆ ಮಾಡಿರುವ ಕ್ಯಾಂಪ್ಕೋ ಚಾಕೋಲೇಟ್ಗಳು ಇಂದು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದುಕೊಂಡಿವೆ. ರಬ್ಬರ್ ಬೆಳೆಗಾರರಿಗೆ, ಕಾಳು ಮೆಣಸು ಬೆಳಗಾರರಿಗೆ ಸ್ಥಿರ ಮಾರುಕಟ್ಟೆಯನ್ನು, ಮೌಲ್ಯಯುತ ಮಾರುಕಟ್ಟೆಯನ್ನು ಒದಗಿಸಿದ ಕೀರ್ತಿಯೂ ಕ್ಯಾಂಪ್ಕೋಗೆ ಸೇರುತ್ತದೆ.
ರೈತರ ಹೆಮ್ಮೆಯ ಸಹಕಾರಿ ಸಂಸ್ಥೆಯಾಗಿ ಬೆಳೆದು ನಿಂತಿರುವ ಕ್ಯಾಂಪ್ಕೋ 47 ವರ್ಷಗಳ ಕಾಲ ಸದಸ್ಯ ಕೃಷಿಕರ ಸೇವೆಯಲ್ಲಿ ಹೊಸ ಹೊಸ ದಾಖಲೆಗಳನ್ನು ನಿರ್ಮಾಣ ಮಾಡಿದೆ, ಮಾತ್ರವಲ್ಲದೇ ಅಡಿಕೆಯ ಖರೀದಿಯ ಪ್ರಮಾಣವನ್ನೂ ನಿರಂತರವಾಗಿ ಹೆಚ್ಚಿಸುತ್ತಲೇ ಬಂದಿದೆ. ಕ್ಯಾಂಪ್ಕೋದ ವೈವಿಧ್ಯಮಯ ಚಾಕೋಲೇಟ್ ಉತ್ಪನ್ನಗಳು, ಕೊಕ್ಕೋ ಕೈಗಾರಿಕೋತ್ಪನ್ನಗಳನ್ನು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುವ ಸಲುವಾಗಿ ಪುತ್ತೂರು ಮತ್ತು ಬೆಂಗಳೂರಿನಲ್ಲಿನ ಕ್ಯಾಂಪ್ಕೋ ಚಾಕೋಲೇಟ್ ಕಿಯೋಸ್ಕ್ ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿದೆ.
ರೈತರನ್ನು ಪ್ರೋತ್ಸಾಹಿಸುವ, ಉತ್ತೇಜಿಸುವ ಸಲುವಾಗಿ ಕ್ಯಾಂಪ್ಕೋ ಹಲವಾರು ಯೋಜನೆಗಳನ್ನು, ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಬಂದಿದೆ. ಬೃಹತ್ ಕೃಷಿ ಯಂತ್ರ ಮೇಳ, ಹೈನುಗಾರಿಕೆ ಪ್ರದರ್ಶನಗಳನ್ನು ನಡೆಸಿ, ಲಕ್ಷಾಂತರ ಕೃಷಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಡಲಾಗಿದೆ. ಅಡಿಕೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಕ್ರಮಗಳನ್ನು ಕೈಗೊಂಡಿದೆ. ಅಡಿಕೆ ಮರ ಏರುವ ಮತ್ತು ಕೊಯ್ಲು ನಡೆಸುವ ಬಗ್ಗೆ ಶಿಬಿರಗಳನ್ನು ನಡೆಸಿದೆ. ಅಡಿಕೆ ಉತ್ಪಾದನೆಯನ್ನು ಹೆಚ್ಚಿಸಿ ರೈತರ ಆದಾಯ ದ್ವಿಗುಣಗೊಳ್ಳುವಂತೆ ಮಾಡಲು ಯೋಜನೆಗಳನ್ನು ರೂಪಿಸಿದೆ. ತನ್ನ ಸಂಸ್ಥೆಯ ಸದಸ್ಯರು ಅಪಘಾತದಲ್ಲಿ ಮೃತಪಟ್ಟಂತಹ ಸಂದರ್ಭದಲ್ಲಿ ಅವರ ಕುಟುಂಬಸ್ಥರಿಗೆ ಪರಿಹಾರಧನವನ್ನೂ ಕ್ಯಾಂಪ್ಕೋ ನೀಡುತ್ತಾ ಬಂದಿದೆ.
ರೈತರ ಕಲ್ಯಾಣದ ಧ್ಯೇಯದೊಂದಿಗೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಾ ಬಂದಿರುವ ಕ್ಯಾಂಪ್ಕೋ, ಆಧುನಿಕ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಯಾಂತ್ರೀಕರಣ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಲು ಉತ್ತೇಜನವನ್ನು ನೀಡುತ್ತಿದೆ. ಗುಣಮಟ್ಟವನ್ನು ಕಾಯ್ದುಕೊಳ್ಳುವುದರೊಂದಿಗೆ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಹೊಂದಿರುವುದು ಸಂಸ್ಥೆಯ ಹೆಗ್ಗಳಿಕೆ.
ರೈತರ ಹಿತರಕ್ಷಣೆಯ ಸಂಕಲ್ಪ ಸಿದ್ಧಿಗಾಗಿ ಕಟಿಬದ್ಧವಾಗಿ 47 ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ಕ್ಯಾಂಪ್ಕೋ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಅದರ ಕೀರ್ತಿ ಜಗದಗಲಕ್ಕೂ ಪಸರಿಸಲಿ ಹಾಗೂ ಮತ್ತಷ್ಟು ರೈತರ ಏಳ್ಗೆಗೆ ಅದು ಕಾರಣೀಭೂತವಾಗಲಿ ಎಂದು ಆಶಿಸೋಣ.
✍️ ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.