ಮಹಾನ್ ದೇಶಭಕ್ತ, ಭಾರತದ ಏಕತೆ ಹಾಗೂ ಸಮಗ್ರತೆಯ ದೃಷ್ಟಿಯನ್ನಿಟ್ಟುಕೊಂಡು ಏಕ್ ವಿಧಾನ್, ಏಕ್ ನಿಶಾನ್, ಏಕ್ ಪ್ರಧಾನ್ ಎಂಬ ಕರೆಯ ಮೂಲಕ ಭಾರತದ ಸಾರ್ವಭೌಮತೆಯನ್ನು ಎತ್ತಿ ಹಿಡಿದ ಭಾರತದ ಜನಸಂಘದ ಸ್ಥಾಪಕ ಮತ್ತು ಅದರ ಮೊದಲ ಅಧ್ಯಕ್ಷ ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಭಾರತೀಯರಿಗೆ ಚಿರಪರಿಚಿತರು. ರಾಷ್ಟ್ರದ ಏಕೀಕರಣಕ್ಕಾಗಿ ದುಡಿದ ಮಹಾತ್ಮ ಮುಖರ್ಜಿ ಅವರು ಎಂದರೂ ತಪ್ಪಾಗಲಾರದು. ದೇಶದ ಉಳಿವು, ಏಕತೆಗಾಗಿ ಅದೆಷ್ಟೋ ರಾಷ್ಟ್ರ ಭಕ್ತರಿಗೆ ತಮ್ಮ ಜೀವನ ಕ್ರಮದ ಮೂಲಕವೇ ಉತ್ಸಾಹ ತುಂಬುತ್ತಿದ್ದ ಪ್ರೇರಕ ಶಕ್ತಿ ಎಂದೂ ಇವರನ್ನು ಕರೆಯಬಹುದಾಗಿದೆ. ಅಂತಹ ಮಹಾನ್ ವ್ಯಕ್ತಿಯ ಜನುಮದಿನ ಇಂದು. ಮುಖರ್ಜಿ ಅವರ ಕಲ್ಪನೆಯ ಏಕ್ ವಿಧಾನ್, ಏಕ್ ನಿಶಾನ್, ಏಕ್ ಪ್ರಧಾನ್ ಗೆ ಪ್ರಸ್ತುತ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜೀವ ನೀಡಿದ್ದು, ಆ ಮೂಲಕ ಅವರ ಜನುಮ ದಿನಕ್ಕೆ ಈ ಬಾರಿ ಸರಿಯಾದ ಗೌರವವನ್ನು ಸಲ್ಲಿಸಿದೆ ಎಂದೇ ಹೇಳಬಹುದು.
ಜುಲೈ 6, 1901 ರಂದು ಕೋಲ್ಕತ್ತಾ ದಲ್ಲಿ ಜನಿಸಿದ ಮುಖರ್ಜಿ ಅವರು, ಕೋಟ್ಯಂತರ ಭಾರತೀಯರ ಮನಸ್ಸಿನಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದವರು. 1947 ರಿಂದ 1950 ರಲ್ಲಿ ಮೊದಲ ಭಾರತೀಯ ಸಂಪುಟದಲ್ಲಿ ಕೈಗಾರಿಕೆ ಮತ್ತು ಸರಬರಾಜು ಸಚಿವರಾಗಿದ್ದು, ಬಳಿಕ ನೆಹರೂ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸುತ್ತಾರೆ. 1951 ರಲ್ಲಿ ಆರೆಸ್ಸೆಸ್ ನ ಸಹಕಾರದಿಂದ ಭಾರತೀಯ ಜನಸಂಘವನ್ನು ಆರಂಭ ಮಾಡುತ್ತಾರೆ. 1952ರ ಉಪ ಚುನಾವಣೆಯಲ್ಲಿ ಮುಖರ್ಜಿ ಅವರ ನೇತೃತ್ವದಲ್ಲಿ ಭಾರತೀಯ ಜನಸಂಘ ಲೋಕಸಭೆಯಲ್ಲಿ 3 ಸ್ಥಾನಗಳನ್ನೂ ಗೆದ್ದುಕೊಂಡಿತು. ಅವರು 1950ರಲ್ಲಿ ನೆಹರೂ ಅವರ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ, ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಜೊತೆಗೆ ದೇಶವಿರೋಧಿ ಶಕ್ತಿಗಳ ವಿರುದ್ಧ ಹೋರಾಟ, ವಿರೋಧಗಳನ್ನು ವ್ಯಕ್ತಪಡಿಸುವ ಮೂಲಕವೇ ಅನೇಕ ದೇಶಭಕ್ತರನ್ನು ಹುಟ್ಟು ಹಾಕುವಲ್ಲಿಯೂ ಕೆಲಸ ಮಾಡುತ್ತಾರೆ.
ಆ ಸಂದರ್ಭದಲ್ಲಿ ಪಾಕಿಸ್ಥಾನ ಮತ್ತು ಕಾಶ್ಮೀರದಲ್ಲಿ ನಡೆಯುತ್ತಿದ್ದ ಉಗ್ರಗಾಮಿಗಳ ವಿರುದ್ಧವೂ ಮುಖರ್ಜಿ ಅವರ ಹೋರಾಟ ನಡೆದಿತ್ತು. ಅಲ್ಲದೆ ನೆಹರೂ ಅವರ ಕಾಲದಲ್ಲಿ ನಡೆದ ಕಾಶ್ಮೀರದ ವಿಶೇಷ ಸ್ಥಾನಮಾನದ ವಿರುದ್ಧವೂ ಮುಖರ್ಜಿ ಅವರು ಧ್ವನಿ ಎತ್ತಿದ್ದರು. ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ಭಾರತದ ಏಕತೆಗೆ ಹಾನಿಯುಂಟಾಗುತ್ತದೆ ಎಂಬ ದೃಷ್ಟಿಯಿಂದ ಆ ಕಾಲದಲ್ಲಿಯೇ ಪ್ರತಿರೋಧ ವ್ಯಕ್ತಪಡಿಸಿದ್ದರು. ಆ ಮೂಲದ ಒಂದೇ ರಾಷ್ಟ್ರದಲ್ಲಿ ಇನ್ನೊಂದು ರಾಷ್ಟ್ರ ಅಥವಾ ರಾಷ್ಟ್ರದೊಳಗೊಂದು ರಾಷ್ಟ್ರ ಎಂಬ ನೆಹರೂ ಅವರ ಅತ್ಯಂತ ದೊಡ್ಡ ಕೆಲಸಕ್ಕೆ ಅವರು ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆಯಾಗುವ 370 ನೇ ವಿಧಿಯನ್ನು ಜಾರಿಗೊಳಿಸದಂತೆ ನೆಹರೂ ಸರ್ಕಾರಕ್ಕೆ ಎಚ್ಚರವನ್ನೂ ನೀಡಿದ್ದರು.
ನೆಹರೂ ಅವರ 370 ನೇ ವಿಧಿಯಿಂದಾಗಿ ಭಾರತ ಎಂಬ ಅಖಂಡ ರಾಷ್ಟ್ರದಲ್ಲಿ ಭಾರತಕ್ಕೊಂದು ಸಂವಿಧಾನ, ಕಾಶ್ಮೀರಕ್ಕೆ ಬೇರೆಯದೇ ಆದ ನೀತಿ ನಿಯಮಗಳು ಅನ್ವಯವಾಗುವಂತಾಯಿತು. ಒಂದೇ ರಾಷ್ಟ್ರ ಇಬ್ಬರು ಪ್ರಧಾನಿಗಳು, ಎರಡು ಬಾವುಟಗಳು, ಪ್ರತ್ಯೇಕ ಸಂವಿಧಾನ ವ್ಯವಸ್ಥೆ ಬಂತು. ಇದು ಏಕತೆಯನ್ನು ಒಡೆಯುವ ಕೆಲಸವನ್ನು ಮಾಡಿತು. ಇದರಿಂದಾಗಿ ಭಾರತದೊಳಗೇ ಇರುವ ಕಾಶ್ಮೀರಕ್ಕೆ ತೆರಳಬೇಕಾದರೆ ವಿಶೇಷ ಅನುಮತಿ ಪಡೆಯುವ ಸ್ಥಿತಿಯೂ ಉಂಟಾಯಿತು. ನೆಹರೂ ಅವರ ಅಧಿಕಾರದ ಆಸೆಯ ಮುಂದೆ ಭಾರತದ ಸೌರ್ವಭೌಮತೆಗಾಗಬಹುದಾದ ಹಾನಿಯನ್ನು ತಡೆಯಲು ಮುಖರ್ಜಿ ಇನ್ನಿಲ್ಲದ ಪ್ರಯತ್ನ ಪಟ್ಟರು. ಆದರೆ ಅದು ಫಲ ನೀಡಲಿಲ್ಲ. ಅಂತಹ ಮಹಾತ್ಮ ಮುಖರ್ಜಿ ಅವರ ಕನಸಿಗೆ ಫಲ ನೀಡುವ ಮೂಲಕ ಅವರಿಗೆ ಗೌರವ ಸೂಚಿಸುವ ಕೆಲಸವನ್ನು ಇಂದಿನ ಮೋದಿ ಸರ್ಕಾರ ಮಾಡಿದೆ.
ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಅಂದರೆ 370 ನೇ ವಿಧಿಯನ್ನು ರದ್ದು ಮಾಡುವ ಮೂಲಕ ಅವರ ಕನಸನ್ನು ನನಸು ಮಾಡುವ ಕೆಲಸವನ್ನು ಇಂದಿನ ಕೇಂದ್ರ ಸರ್ಕಾರ ಮಾಡಿತು. ಆ ಮೂಲಕ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಬಾವುಟದ ನೆಹರೂ ಅವರ ತಪ್ಪನ್ನು ಅತ್ಯಂತ ನುಣುಪಾಗಿ ರದ್ದುಗೊಳಿಸಿತು. ಎಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಿಸಬೇಕೆಂಬ ಕನಸನ್ನು ಮುಖರ್ಜಿ ಅವರು ಹೊಂದಿದ್ದರೋ ಅಂತಹ ಕಾಶ್ಮೀರದಲ್ಲಿ ಸದ್ಯ ತ್ರಿವರ್ಣ ಧ್ವಜವನ್ನು ಹಾರಾಡಿಸುವ ಮೂಲಕ, ಭಾರತದ ಇತರ ರಾಜ್ಯಗಳಿಗೆ ಅನ್ವಯವಾಗುವ ಸಂವಿಧಾನವೇ ಕಾಶ್ಮೀರಕ್ಕೂ ಅನ್ವಯವಾಗುವಂತೆ ಮಾಡುವ ಮೂಲಕ ಭಾರತದ ಏಕತೆಯನ್ನು ಎತ್ತಿ ಹಿಡಿಯುವ ಮೂಲಕ ಮುಖರ್ಜಿ ಅವರಿಗೆ ಇಂದಿನ ನಮೋ ನೇತೃತ್ವದ ಕೇಂದ್ರ ಸರ್ಕಾರ ನಿಜವಾದ ಗೌರವವನ್ನು ಸಲ್ಲಿಸಿದೆ. ಆ ಮೂಲಕ ಏಕ್ ವಿಧಾನ್, ಏಕ್ ನಿಶಾನ್, ಏಕ್ ಪ್ರಧಾನ್ ಎಂಬ ಮುಖರ್ಜಿ ಅವರ ಕರೆಗೆ ನಿಜಾರ್ಥವನ್ನು ತಂದು ಕೊಡಲಾಗಿದೆ.
ಸುಮಾರು 7 ದಶಕಗಳ ಬಳಿಕ ದೇಶವನ್ನು ಇಬ್ಭಾಗ ಮಾಡಿದ ನೆಹರೂ ಮತ್ತು ಶೇಕ್ ಅಬ್ದುಲ್ಲಾ ಅವರ ತಪ್ಪನ್ನು ಸರಿಪಡಿಸಲಾಗಿದೆ. ಆ ಮೂಲಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಏಕತೆಯ ಕಿಚ್ಚು ಮತ್ತೆ ದೀಪವಾಗಿ ಕೋಟ್ಯಂತರ ಭಾರತೀಯರ ಮನಸ್ಸಿನಲ್ಲಿಂದು ಪ್ರಾಜ್ವಲ್ಯಮಾನವಾಗಿ ಬೆಳಗುತ್ತಿದೆ. ಭಾರತದೊಳಗೇ ಇದ್ದ ಕಾಶ್ಮೀರ, ಭಾರತದಿಂದ ಬೇರೆಯಾಗದಂತೆ ನೋಡಿಕೊಳ್ಳಲು ಮುಖರ್ಜಿ ಅವರು ಅಂದು ನೀಡಿದ ಕರೆ ಇಂದು ಮೋದಿ ಮತ್ತು ಅಮಿತ್ ಶಾ ಅವರ ಸಮರ್ಥ ನಾಯಕತ್ವದ ಫಲವಾಗಿ ಸಕಾರಗೊಂಡಿದೆ. ಆ ಮೂಲಕ ಮುಖರ್ಜಿ ಅವರ ಈ ಬಾರಿಯ ಜನುಮ ದಿನಕ್ಕೆ ಕೇಂದ್ರ ಸರ್ಕಾರ ಉಚಿತವಾದ ಉಡುಗೊರೆ ನೀಡಿದೆ ಎಂದರೂ ತಪ್ಪಾಗಲಾರದು.
ಹೀಗೆ ಭಾರತದ ಏಕತೆಗಾಗಿ ದುಡಿದ ಮುಖರ್ಜಿ ಅವರು ಜೂನ್ 23, 1953 ರಂದು ಕೊನೆಯುಸಿರೆಳೆಯುತ್ತಾರೆ. ಇವರು ಸ್ಥಾಪಿಸಿದ ಭಾರತೀಯ ಜನಸಂಘ ಇಂದು ಭಾರತೀಯ ಜನತಾ ಪಕ್ಷ ಎಂಬ ಹೆಸರಿನಲ್ಲಿ ರಾಜಕೀಯ ರಂಗದಲ್ಲಿ ಗುರುತಿಸಿಕೊಳ್ಳುತ್ತಿದೆ. ದೇಶಸೇವೆಯನ್ನು ಮಾಡುತ್ತಿದೆ. 370 ನೇ ವಿಧಿಯ ರದ್ಧತಿ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಕೇಂದ್ರ ಬಿಜೆಪಿ ಸರ್ಕಾರ ಮುಖರ್ಜಿ ಅವರ ಕನಸನ್ನು ಸಾಕಾರಗೊಳಿಸಿದೆ. ಈ ಜನುಮ ದಿನವನ್ನು ಅವರ ಆತ್ಮವೂ ಸಂತೋಷಿಸುತ್ತಿರಬಹುದು ಎಂಬುದರಲ್ಲಿ ಎರಡು ಮಾತಿಲ್ಲ.
✍️ಭುವನಾ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.