ಹಿಂದೂ ರಾಷ್ಟ್ರ ಪುನರ್ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವ ಅಖಿಲ ಭಾರತ ಮಟ್ಟದ ಮಹಿಳಾ ಸಂಘಟನೆ ’ರಾಷ್ಟ್ರ ಸೇವಿಕಾ ಸಮಿತಿ’. ರಾಷ್ಟ್ರ ಸೇವಿಕಾ ಸಮಿತಿಯು ವಿಶ್ವದ ಅತಿ ದೊಡ್ಡ ಮಹಿಳಾ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಸ್ಥಾಪಿಸಿದವರು ವಂದನೀಯ ಲಕ್ಷ್ಮೀಬಾಯಿ ಕೇಳ್ಕರ್ (ಪ್ರೀತಿಯಿಂದ ಮೌಶೀಜೀ ಎಂದೇ ಕರೆಯಲ್ಪಡುತ್ತಾರೆ). ಪ್ರಖರವಾದ ದೇಶಭಕ್ತಿ ಇವರಿಗೆ ತಾಯಿಯಿಂದಲೇ ಬಂದ ಬಳುವಳಿ. ಜನಿಸಿದ್ದು ಸಾಮಾನ್ಯ ಕುಟುಂಬದಲ್ಲಾದರೂ ಚಿಂತನೆ ಮಾತ್ರ ಉನ್ನತ ಮಟ್ಟದ್ದು.
ಸ್ತ್ರೀ ಮತ್ತು ಪುರುಷರು ರಥದ ಎರಡು ಗಾಲಿಗಳು ಎಂದು ಎಂದು ಸಾಮಾನ್ಯರೆಲ್ಲಾ ಭಾವಿಸುತ್ತಿದ್ದಾಗ, ಸ್ತ್ರೀ ರಾಷ್ಟ್ರದ ಸಾರಥಿ, ಆಕೆ ರಾಷ್ಟ್ರದ ಆಧಾರಶಕ್ತಿ ಎಂಬ ಪೂರ್ಣ ವಿಶ್ವಾಸ ಅವರದ್ದಾಗಿತ್ತು. ವೈವಾಹಿಕ ಜೀವನದ ತಾರುಣ್ಯದಲ್ಲೇ ವೈಧವ್ಯವೂ ಪ್ರಾಪ್ತಿಯಾಯಿತು. ಮನೆಯಲ್ಲಿ 7 ಮಕ್ಕಳ ಜವಾಬ್ದಾರಿ ಹಾಗೂ ವೈಧವ್ಯ. ಈ ಪರಿಸ್ಥಿತಿಯಲ್ಲೂ ರಾಷ್ಟ್ರದ ಆಗಿನ ಪರಿಸ್ಥಿತಿ ಅವರ ಮನಸ್ಸನ್ನು ಗೊಂದಲಕ್ಕೀಡು ಮಾಡುತ್ತಿತ್ತು. ಭಾರತದ ಪ್ರಗತಿಗೆ ಹಿಂದೂ ಮಹಿಳೆಯರ ಹಿಂದೂ ಮಹಿಳೆಯರ ಸಂಘಟನೆಯೇ ಸೂಕ್ತವಾದ ಉತ್ತರ ಎಂಬುದನ್ನು ಮನಗಂಡು ಸಂಘಸ್ಥಾಪಕ ಪ. ಪೂ. ಡಾಕ್ಕರ್ಜೀಯವರ ಸಲಹೆ, ಮಾರ್ಗದರ್ಶನದ ಮೇರೆಗೆ 1936 ರ ವಿಜಯದಶಮಿಯಂದು ನಾಗಪುರದ ವಾರ್ಧಾದಲ್ಲಿ ಸಮಿತಿಯನ್ನು ಪ್ರಾರಂಭಿಸಿದರು. ಸ್ತ್ರೀಯ ಜೀವನಕ್ಕೆ ಪ್ರೇರಣಾಸ್ರೋತವಾಗಬಲ್ಲ ದೇವಿ ಅಷ್ಟಭುಜೆ, ಕರ್ತೃತ್ವಕ್ಕೆ ದೇವಿ ಅಹಲ್ಯಾಬಾಯಿ ಹೋಳ್ಕರ್, ಮಾತೃತ್ವಕ್ಕೆ ಜೀಜಾಬಾಯಿ ಹಾಗೂ ನೇತೃತ್ವಕ್ಕೆ ಝಾನ್ಸಿರಾಣಿ ಲಕ್ಷ್ಮೀಬಾಯಿಯರನ್ನು ಸಮಿತಿಯ ಸೇವಿಕೆಯರೆದುರು ಆದರ್ಶವಾಗಿರಿಸಿದರು.
ಮೌಶೀಜೀ ಅಂದು ಇಟ್ಟ ಒಂದು ದಿಟ್ಟ ಹೆಜ್ಜೆ ಇಂದು ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಶಾಖೆಗಳನ್ನು ಹೊಂದಿದೆ. ಸಮಿತಿ ಈ ಮಟ್ಟಕ್ಕೆ ತಲುಪಲು ಕಾರಣವಾದ ಅಪೂರ್ವ ಸಾಧನವೇ ದೈನಂದಿನ ಅಥವಾ ಸಾಪ್ತಾಹಿಕ ಶಾಖೆ. ಒಂದು ಗಂಟೆಯ ಈ ಅವಧಿಯಲ್ಲಿ ದೇಶಭಕ್ತಿಗೀತೆ ಸುಭಾಷಿತ, ಕಥೆ, ಯೋಗಾಸನ ಮತ್ತು ಬುದ್ಧಿ ಶರೀರಕ್ಕೆ ಕಸರತ್ತು ನೀಡುವ ಆಟಗಳಿರುತ್ತವೆ. ಹೀಗೆ ನಮ್ಮ ಅರಿವಿಗೆ ಬರದೇ ಹೃದಯ ಹೃದಯಗಳನ್ನು ಜೋಡಿಸುವ ಕೆಲಸ ಶಾಖೆಯಲ್ಲಿ ನಡೆಯುತ್ತದೆ. ಇಲ್ಲಿ ತಯಾರಾದ ಸೇವಿಕೆಯರು ಸಮಾಜದ ಅನ್ಯಾನ್ಯ ಕಾರ್ಯಗಳಲ್ಲಿ ಜೋಡಿಸಿಕೊಳ್ಳುತ್ತಾರೆ. ಈಗ ದೇಶದಲ್ಲಿ ಸಮಿತಿಯ ಕಾರ್ಯಕ್ಕೆ ಜೀವನವನ್ನು ಮುಡಿಪಾಗಿಟ್ಟ ಅನೇಕ ಪ್ರಚಾರಿಕೆಯರಿದ್ದಾರೆ. ದೇಶಾದ್ಯಂತ ಸಾವಿರಾರು ಶಾಖೆಗಳಿವೆ ಹಾಗೂ ಸಂಸ್ಕಾರ ಕೇಂದ್ರಗಳಿವೆ. ಶಾಖೆಗಳನ್ನು ಮೂಲವಾಗಿಟ್ಟುಕೊಂಡು ಸಮಿತಿಯು ಹಲವಾರು ರಚನಾತ್ಮಕ ಕೆಲಸಗಳನ್ನು ನಡೆಸುತ್ತದೆ.
ಮುಂಬೈಯಲ್ಲಿ ಗೃಹಿಣೀ ವಿದ್ಯಾಲಯ : ಕಡಿಮೆ ವಿದ್ಯಾಭ್ಯಾಸ ಹೊಂದಿರುವ ಗೃಹಿಣಿಯರನ್ನು ಗಮನದಲ್ಲಿಟ್ಟು ಪಠ್ಯಕ್ರಮವನ್ನು ರಚಿಸಿ ಸ್ತ್ರೀಯರು ಉತ್ತಮ ಗೃಹಿಣಿಯರಾಗಲು ಬೇಕಾಗುವ ಶಿಕ್ಷಣ ನೀಡಲಾಗುತ್ತದೆ. ನಾಸಿಕದ ರಾಣಿ ಲಕ್ಷ್ಮೀಭವನದಲ್ಲಿ ಕೈಕೆಲಸದ ತರಗತಿಗಳು, ಉದ್ಯೋಗ ಮಂದಿರ, ಬಾಲಕ ಮಂದಿರ, ಸಾಂಸ್ಕೃತಿಕ ವರ್ಗಗಳನ್ನು ನಡೆಸಲಾಗುತ್ತದೆ.
ನಾಗಪುರದಲ್ಲಿ ದೇವಿ ಅಹಲ್ಯಾಮಂದಿರ : ಇಲ್ಲಿ ಒಂದು ಶಿಶುವಿಹಾರ, ಹುಡುಗಿಯರ ವಸತಿಗೃಹ, ವಾಚನಾಲಯವಿದೆ. ಗುಜರಾತ್ನಲ್ಲಿ ಬಡವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪುಸ್ತಕಗಳು ಹಾಗೂ ಶುಲ್ಕವನ್ನು ನೀಡಲಾಗುತ್ತಿದೆ. ನಾಗಪುರದಲ್ಲಿ ಶಕ್ತಿಪೀಠದಲ್ಲಿ ಉಚಿತ ಆರೋಗ್ಯ ಕೇಂದ್ರ ಮತ್ತು ಉದ್ಯೋಗಮಂದಿರಗಳಿವೆ. ದಿಲ್ಲಿಯ ಕೊಳಚೆ ಪ್ರದೇಶಗಳಲ್ಲಿ ಶಿಶುವಿಹಾರಗಳನ್ನು ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಹೊಲಿಗೆ ಹಾಗೂ ಕಂಪ್ಯೂಟರ್ ಶಿಕ್ಷಣವನ್ನು ಉಚಿತವಾಗಿ ನೀಡಿ ಅನಂತರ ಸ್ವ-ಉದ್ಯೋಗಕ್ಕೆ ಅವಶ್ಯಕವಿರುವ ಎಲ್ಲಾ ಸಹಕಾರ ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದವರ ಶಸ್ತ್ರ ಚಿಕಿತ್ಸೆಗಳಿಗೂ ನೆರವು ನೀಡಲಾಗುತ್ತದೆ. ನೆರೆ, ಭೂಕಂಪ, ಬರಗಾಲ ಮುಂತಾದ ಪ್ರಾಕೃತಿಕ ವಿಕೋಪಗಳ ಸಂಧರ್ಭಗಳಲ್ಲಿ ಗ್ರಾಮಗಳನ್ನು ದತ್ತು ಪಡೆದು ಮಾದರಿ ಗ್ರಾಮಗಳ ನಿರ್ಮಾಣ ನಡೆಯುತ್ತದೆ. ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ಪ್ರಾಂಶುಪಾಲರ ಅನುಮತಿ ಪಡೆದು ವಾರದಲ್ಲಿ ಒಂದು ಗಂಟೆಯಷ್ಟು ಕಾಲ ಹೆಣ್ಣು ಮಕ್ಕಳಿಗೆ ಲವ್ ಜಿಹಾದ್ನಂತಹ ಸಾಂಸ್ಕೃತಿಕ ದಾಳಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಸಮಿತಿಯಲ್ಲಿ ವರ್ಷಂಪ್ರತಿ ಗುರುಪೂಜೆ, ರಕ್ಷಾಬಂಧನ, ವಿಜಯದಶಮಿ, ಯುಗಾದಿ, ಸಂಕ್ರಾಂತಿ ಮುಂತಾದ ರಾಷ್ಟ್ರೀಯ ಉತ್ಸವಗಳನ್ನು ಆಚರಿಸಲಾಗುತ್ತದೆ. ಪ್ರತೀವರ್ಷ ದೇಶದ ಎಲ್ಲಾ ಪ್ರಾಂತಗಳಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಪ್ರಥಮ ವರ್ಷ ಹಾಗೂ ದ್ವಿತೀಯ ವರ್ಷದ ಶಿಕ್ಷಾವರ್ಗಗಳು (15 ದಿನ) ಹಾಗೂ ನಾಗಪುರದಲ್ಲಿ ತೃತೀಯ ವರ್ಷದ ಶಿಕ್ಷಾವರ್ಗವು ನಡೆಯುತ್ತದೆ. ಈ ಶಿಬಿರಗಳಲ್ಲಿ 14 ವರ್ಷ ಮೇಲ್ಪಟ್ಟ ಹುಡುಗಿಯರು ಮಹಿಳೆಯರು ಭಾಗವಹಿಸಬಹುದು. ಇಲ್ಲಿ ರಾಷ್ಟ್ರ ಜಾಗೃತಿಗೆ ಪೂರಕವಾದ ಶಾರೀರಿಕ, ಬೌದ್ಧಿಕ ಶಿಕ್ಷಣ ನೀಡಲಾಗುತ್ತದೆ. ಹೀಗೆ ಸಮಿತಿಯ ಉತ್ಸವಗಳು, ಶಿಬಿರಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಮಹಿಳೆಯರು ರಾಷ್ಟ್ರಕ್ಕೆ ತಾನೇನು ಕೊಡಬಲ್ಲೆ ಎಂಬುವುದರ ಬಗ್ಗೆ ಯೋಚಿಸಲಾರಂಭಿಸುತ್ತಾರೆ.
ಮಾತೃತ್ವ, ಕತೃತ್ವ ಮತ್ತು ನೇತೃತ್ವದ ತತ್ತ್ವವು ಮಹಿಳೆಯರಲ್ಲಿ ಧನಾತ್ಮಕ ರೂಪದಲ್ಲಿ ಉದ್ದೀಪನಗೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಹಿನ್ನೆಲೆಯಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಸ್ಥಾಪಿಸಿದ ಎಲ್ಲರ ಪ್ರೀತಿಯ ಮೌಶಿಜೀ ಎಂದೇ ಕರೆಯಲ್ಪಡುತ್ತಿದ್ದ ವಂದನೀಯ ಲಕ್ಷ್ಮೀಬಾಯಿ ಕೇಳ್ಕರ್ ಅವರ ಜಯಂತಿಯಂದು ನಮ್ಮ ಪ್ರಣಾಮಗಳು.
ಕೃಪೆ : ಸಂವಾದ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.