ಯೋಗ, ಜನರನ್ನು ಆರೋಗ್ಯಪೂರ್ಣರನ್ನಾಗಿರಿಸುವಲ್ಲಿ, ನಮ್ಮೊಳಗಿನ ರೋಗ ನಿರೋಧಕ ಶಕ್ತಿ, ದೈಹಿಕಾರೋಗ್ಯದ ಜೊತೆಗೆ ಮಾನಸಿಕ ಸದೃಢತೆಯನ್ನು ಹೆಚ್ಚಿಸುವಲ್ಲಿ ಪೂರಕವಾಗಿ ಕೆಲಸ ಮಾಡುವ ಬಹುಮುಖ್ಯ ವಿಚಾರ. ದಿನನಿತ್ಯದ ಬದುಕಿನಲ್ಲಿ ನಾವು ಯೋಗವನ್ನು ಅಳವಡಿಸಿಕೊಳ್ಳುವುದರಿಂದ ನಮ್ಮೊಳಗಿನ ಅಂತಃಶಕ್ತಿಯ ಜೊತೆಗೆ ಆತ್ಮಶಕ್ತಿಯೂ ವೃದ್ಧಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಯೋಗಕ್ಕೆ ಅಂತಹ ಶಕ್ತಿ ಇದೆ. ಈ ಎಲ್ಲಾ ಕಾರಣಗಳಿಂದ ಭಾರತದ ಯೋಗ ಇಂದು ಸರ್ವವ್ಯಾಪಿ ಎಂಬಂತೆ ಜಗತ್ತನ್ನೇ ಆವರಿಸಿದೆ ಎಂದರೂ ತಪ್ಪಾಗಲಾರದು.
2015 ಕ್ಕೂ ಮೊದಲು ಯೋಗ ಕೇವಲ ಭಾರತದ ಕೆಲವರಷ್ಟೇ ಅನುಸರಿಸುತ್ತಿದ್ದ ವಿಚಾರ. ಆದರೆ ನಮ್ಮ ದೇಶದ ಹೆಮ್ಮೆ, ವಿಶ್ವ ನಾಯಕನಂತೆ ಗುರುತಿಸಿಕೊಳ್ಳುತ್ತಿರುವ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಭಾರತದಲ್ಲಿ ಆಡಳಿತವನ್ನು ಕೈಗೆ ತೆಗೆದುಕೊಂಡ ಬಳಿಕ ಯೋಗ ಜಗದ್ವಿಖ್ಯಾತಿಯನ್ನು ಪಡೆಯಿತು. 2015 ಜೂನ್ 21 ರಿಂದ ತೊಡಗಿದಂತೆ ಇಂದಿನವರೆಗೆ ಅಂದರೆ ಈ ಆರು ವರ್ಷಗಳಿಂದಲೂ ಯೋಗ ಅಂತರಾಷ್ಟ್ರೀಯ ವಿಚಾರವಾಗಿ ಆಚರಿಸಲ್ಪಡುತ್ತಿದೆ. ಮೋದಿ ಅವರು ಭಾರತೀಯ ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆಯನ್ನು ತಂದುಕೊಡುವ ಮೂಲಕ ಅದರಿಂದಾಗುವ ಉಪಯೋಗಗಳ ಬಗೆಗೂ ಜನರಲ್ಲಿ ಅರಿವು ಮೂಡಿಸಿದ್ದಾರೆ ಎಂದರೆ ಅತಿಶಯವಾಗಲಾರದು.
ಭಾರತೀಯ ಪದ್ಧತಿಯಲ್ಲಿ ಯೋಗಕ್ಕೆ ತನ್ನದೇ ಆದ ಇತಿಹಾಸವಿದೆ. ಯೋಗ ವಿಜ್ಞಾನದ ಹಿರಿಮೆಯ ಬಗ್ಗೆ ಹೇಳುವುದಾದರೆ ಆದಿ ಯೋಗಿ ಎಂದೇ ಕರೆಯಲ್ಪಡುವ ಶಿವನೇ ಯೋಗವನ್ನು ಪರಿಚಯಿಸಿದವನು ಎಂಬುದಾಗಿಯೂ ನಂಬಿಕೆ ಇದೆ. ಪ್ರಪಂಚದ ಎಲ್ಲಾ ಯೋಗ, ಯೋಗಿಗಳ ಗುರುವೆಂದೂ ಯೋಗಶಿವನನ್ನು ಕರೆಯಲಾಗುತ್ತದೆ. ಜೊತೆಗೆ ಭಾರತದಲ್ಲಿ ಋಷಿ ಮುನಿಗಳೂ ಯೋಗ ಪ್ರಾವಿಣ್ಯತೆ ಪಡೆದಿದ್ದರು. ಇಂದು ಬಳಕೆಯಲ್ಲಿ ಇರುವ ಯೋಗ ಚಿಕಿತ್ಸೆ ಭಾರತೀಯ ಪುರಾತನರಲ್ಲಿ ಅನಾದಿ ಕಾಲದಿಂದಲೂ ಬಳಕೆಯಲ್ಲಿತ್ತು ಎಂಬುದಕ್ಕೆ ಪುರಾಣಗಳು, ಇತಿಹಾಸಗಳೂ ನಮಗೆ ಸಾಕ್ಷಿ ನೀಡುತ್ತವೆ. ಅದೇನೇ ಇದ್ದರೂ ಯೋಗ ಇಂದಿನ ದಿನಮಾನಗಳಲ್ಲಿ ವಿದೇಶೀಯರಿಂದಲೂ ಆಕರ್ಷಿತವಾಗಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಎಂಬುದು ನಿಸ್ಸಂಶಯ.
2014 ರ ಸೆಪ್ಟೆಂಬರ್ನಲ್ಲಿ ಯುನೈಟೆಡ್ ನೇಶನ್ಸ್ನ ಜನರಲ್ ಅಸೆಂಬ್ಲಿಯಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಅವರು ಜೂನ್ 21 ನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ತಮ್ಮ ಆಲೋಚನೆಯನ್ನು ಜಗತ್ತಿನ ಮುಂದಿಡುತ್ತಾರೆ. ಇದನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳೂ ಒಪ್ಪಿಕೊಂಡು ಕಳೆದ ಆರು ವರ್ಷಗಳಿಂದಲೂ ಆಚರಿಸಿಕೊಂಡು, ಅನುಸರಿಸಿಕೊಂಡು ಬರುತ್ತಿರುವುದು ಭಾರತ ವಿಶ್ವಮಾನ್ಯವಾಗುತ್ತಿದೆ ಎಂಬುದಕ್ಕೆ ಸಾಕ್ಷಿ. ಆ ಮೂಲಕ ಭಾರತೀಯರಲ್ಲಿ ಕೆಲವರಿಗೆ ಅಪರಿಚಿತ ಎನಿಸಿದ್ದ ಯೋಗವನ್ನು ಮಹಾ ಯೋಗಿ ಮೋದಿ ಅವರು ಜಗತ್ತಿಗೆ ಪರಿಚಯಿಸುತ್ತಾರೆ. ಯೋಗದ ಮಹತ್ವ, ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯದ ಮೇಲಾಗುವ ಸತ್ಪರಿಣಾಮಗಳ ಬಗೆಗೂ ತಿಳಿದುಕೊಳ್ಳುವ ಕುತೂಹಲವನ್ನು ಅವರು ಜನರ ಮನಸ್ಸಿನೊಳಗೆ ಹುಟ್ಟು ಹಾಕಿದ್ದಾರೆ ಎಂದರೂ ತಪ್ಪಾಗಲಾರದು.
ಇನ್ನು ಯೋಗ ಮಾಡುವುದೇ ಒಂದು ಸುಯೋಗ. ಯಾವ ಔಷಧಗಳೂ ಪರಿಹರಿಸಲಾರದ ಹಲವು ಕಾಯಿಲೆಗಳು ಬಳಿಗೆ ಸುಳಿಯದಂತೆ ಯೋಗ ರಕ್ಷಣೆ ನೀಡುತ್ತದೆ. ಇದಕ್ಕೆ ನಾವು ಮಾಡಬೇಕಾದದ್ದು ದಿನ ನಿತ್ಯ ಯೋಗಾಭ್ಯಾಸ ಮಾಡುವುದು. ಭಾರತೀಯ ಪರಂಪರೆಯೇ ಯೋಗದ ಮಹತ್ವವನ್ನು ಸಾರಿ ಹೇಳಿದೆ. ಪ್ರಕೃತಿ ಮತ್ತು ಯೋಗದ ಸಂಬಂಧ, ಯೋಗ ಮತ್ತು ಆಧ್ಯಾತ್ಮ, ಯೋಗ ಮತ್ತು ಮನಸ್ಸು, ಯೋಗ ಹಾಗೂ ಆರೋಗ್ಯ ಹೀಗೆ ಮಾನವನಿಗೆ ಅತಿಮುಖ್ಯ ಎನಿಸಿದ ಎಲ್ಲಾ ಅಂಶಗಳು ಹೆಚ್ಚು ಪ್ರಾಜ್ವಲ್ಯಮಾನವಾಗಬೇಕಾದರೆ ಯೋಗವನ್ನು ಅನುಸರಿಸುವುದು ಎಷ್ಟು ಮುಖ್ಯ ಎಂಬುದನ್ನೂ ನಮ್ಮ ಪೂರ್ವಿಕರ ಜೀವನ ಪದ್ಧತಿಗಳ ಬಗ್ಗೆ ತಿಳಿದುಕೊಂಡಾಗ ನಮಗೆ ಅರಿವಾಗುತ್ತದೆ. ಇದು ಕೇವಲ ದೈಹಿಕ ವ್ಯಾಯಾಮ ಅಥವಾ ಶ್ರಮ ಅಲ್ಲ. ಬದಲಾಗಿ ಮಾನಸಿಕ ಸ್ಥಿಮಿತವನ್ನು ಹಿಡಿತದಲ್ಲಿಟ್ಟುಕೊಳ್ಳಲು ಮತ್ತು ಮನಸ್ಸಿನ ಆರೋಗ್ಯದ ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಪೂರಕ ಕೆಲಸ ಮಾಡುತ್ತದೆ. ಯೋಗವನ್ನು ಜೀವನದ ಭಾಗವಾಗಿ, ಅಭ್ಯಾಸವಾಗಿ ರೂಢಿಸಿಕೊಳ್ಳುವುದರಿಂದ ದೇಹ ಪ್ರಕೃತಿ ಮತ್ತು ನಿಸರ್ಗದ ನಡುವಿನ ಸಮತೋಲನ ಕಾಪಾಡಿಕೊಳ್ಳುವುದಕ್ಕೂ ಸಹಾಯವಾಗುತ್ತದೆ. ಹವಾಮಾನ ಬದಲಾದಂತೆ ನಮ್ಮ ಮನಸ್ಸನ್ನು ಸುಲಭವಾಗಿ ಅದಕ್ಕೆ ಒಗ್ಗಿಸಿಕೊಳ್ಳುವುದಕ್ಕೂ ಯೋಗ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.
ಇಂದು ಯೋಗ ವಿಜ್ಞಾನವನ್ನು ಅಳವಡಿಸಿಕೊಂಡಿರುವ ಹಲವು ದೇಶಗಳು ಅದರಿಂದ ಪರಿಣಾಮಕಾರಿ ಪ್ರಯೋಜನವನ್ನು ಪಡೆದುಕೊಂಡಿವೆ. ದೇಶ ವಿದೇಶಗಳ ಶಾಲೆಗಳಲ್ಲಿ ಮಕ್ಕಳಿಗೆ ಯೋಗ ತರಗತಿಗಳನ್ನು ನಡೆಸಲಾಗುತ್ತಿದೆ. ಹೆಚ್ಚೆಚ್ಚು ಜನರು ಯೋಗವನ್ನು ಬದುಕಿನ ಭಾಗ ಮಾಡಿಕೊಳ್ಳುವುದರ ಜೊತೆಗೆ ಅದನ್ನೇ ಶಿಕ್ಷಣವನ್ನಾಗಿಯೂ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯ ಮಹಾಭಾಗ್ಯದ ವಿಚಾರದಲ್ಲಿ ಯೋಗ ಥೆರಪಿ ಭಾರತದ ಜೊತೆಗೆ ಇತರ ರಾಷ್ಟ್ರಗಳಲ್ಲಿಯೂ ಪ್ರಸಿದ್ಧಿ ಪಡೆಯುತ್ತಿದೆ. ಯೋಗ ಚಿಕಿತ್ಸಾ ಪದ್ಧತಿಯ ಮೂಲಕವೇ ಹಲವಾರು ದೈಹಿಕ, ಮಾನಸಿಕ ಕಾಯಿಲೆಗಳಿಗೆ ಸೂಕ್ತ ಪರಿಹಾರವೂ ಸಿಗುತ್ತಿದೆ. ಯೋಗ ಪ್ರಸ್ತುತ ದಿನಮಾನಗಳಲ್ಲಿ ಬಹುಯೋಗ್ಯ ವಿಚಾರವಾಗಿ ಗುರುತಿಸಲ್ಪಟ್ಟ ಬಹುಮುಖ್ಯ ಅಂಶ ಎಂಬುದೇ ಭಾರತೀಯರಾದ ನಮ್ಮ ಹೆಮ್ಮೆ ಎನ್ನಬಹುದು.
ಈ ವರ್ಷ ಕೊರೋನಾ ಎಂಬ ಮಹಾಮಾರಿಯ ಕಪಿಮುಷ್ಟಿಗೆ ಇಡೀ ಜಗತ್ತು ನಡುಗಿದೆ. ಇಂತಹ ಸಂದರ್ಭದಲ್ಲಿ ಯೋಗ ಮನುಷ್ಯನ ಆರೋಗ್ಯ ಮತ್ತು ಮಾನಸಿಕತೆಯ ಮೇಲೆ ಪೂರಕ ಪರಿಣಾಮ ಬೀರಬಲ್ಲ, ಮನುಷ್ಯನನ್ನು ಮಾನಸಿಕವಾಗಿ ಕೊರೋನಾವನ್ನು ಎದುರಿಸುವುದಕ್ಕೆ ಬೇಕಾದ ಶಕ್ತಿಯನ್ನು ನೀಡಬಲ್ಲ ಅಂತಃಶಕ್ತಿಯಾಗಿ ಕೆಲಸ ಮಾಡಬಲ್ಲದು ಎಂಬುದರಲ್ಲಿ ಸಂದೇಹವಿಲ್ಲ. ಮಾನಸಿಕ ಚೈತನ್ಯದ ಮೂಲಕ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಯೋಗ ಪೂರಕ ಕೆಲಸ ಮಾಡುತ್ತದೆ. ಇದಕ್ಕೆ ನಾವು ಮಾಡಬೇಕಾಗಿರುವುದು ಇಷ್ಟೇ, ದಿನನಿತ್ಯದ ಬದುಕಿನ ಆರಂಭವನ್ನು ಯೋಗದೊಂದಿಗೆ ಆರಂಭಿಸುವ ಕೆಲಸ.
ಇಂದು ಆರನೇ ಅಂತರಾಷ್ಟ್ರೀಯ ಯೋಗ ದಿನ. Yoga At Home, Yoga With Family ಈ ಬಾರಿಯ ಯೋಗ ದಿನದ ಘೋಷಣೆ. ಪ್ರಧಾನಿ ಮೋದಿ ಅವರು ಮನೆಯಲ್ಲಿ, ನಮ್ಮ ನಮ್ಮ ಕುಟುಂಬಗಳ ಜೊತೆಗೆ ಈ ಸಂಕಷ್ಟ ಸಮಯದಲ್ಲಿ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಕರೆ ಕೊಟ್ಟಿದ್ದಾರೆ. ಅದರಂತೆ ಮನೆಯಲ್ಲಿಯೇ ಯೋಗ ಮಾಡೋಣ, ಕುಟುಂಬದೊಂದಿಗೆ ಯೋಗ ಮಾಡೋಣ. ನಾವು, ನಮ್ಮವರ ಆರೋಗ್ಯವನ್ನು ಯೋಗದ ಮೂಲಕವೂ ವೃದ್ಧಿ ಮಾಡಿಕೊಳ್ಳುವತ್ತ ಗಮನ ಹರಿಸೋಣ. ಆ ಮೂಲಕ ಯೋಗದ ಮೂಲಕ ಆರೋಗ್ಯ ಭಾಗ್ಯ, ನಮ್ಮೊಳಗಿನ ಶಕ್ತಿಯನ್ನು ವೃದ್ಧಿಸಿಕೊಳ್ಳೋಣ. ಯೋಗ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಲಿ. ಯೋಗಾಭ್ಯಾಸದ ಮೂಲಕ ನಮ್ಮ ಬದುಕನ್ನು ನಾವು ಹೆಚ್ಚು ಗಟ್ಟಿಗೊಳಿಸೋಣ. ಯೋಗದ ಮೂಲಕ ಪ್ರಕೃತಿ ಮತ್ತು ನಮ್ಮ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವ ಯೋಗ ಎಲ್ಲರದಾಗಲಿ. ಎಲ್ಲರಿಗೂ ಅಂತರರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.
✍️ ಭುವನಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.