ಕೇಂದ್ರದ ರಕ್ಷಣಾ ಮಂತ್ರಿಯಾಗಿ ಮತ್ತು ಗೋವಾದ ಮುಖ್ಯಮಂತ್ರಿಯಾಗಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿ ಜನಮಾನಸದಲ್ಲಿ ಹೆಸರು ಮಾಡಿದ್ದವರು ಮನೋಹರ ಪರಿಕ್ಕರ್. ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಇಹಲೋಕ ತ್ಯಜಿಸಿ ಸ್ವರ್ಗಸ್ಥರಾದ ಇವರ ಮೊದಲ ಪುಣ್ಯತಿಥಿ ಇಂದು.
ಡಿಸೆಂಬರ್ 13, 1955 ರಲ್ಲಿ ಜನಿಸಿದ ಇವರು ಆರ್ಎಸ್ಎಸ್ನ ನಿಷ್ಠಾವಂತ ಕಾರ್ಯಕರ್ತರಾಗಿದ್ದವರು. ಜೊತೆಗೆ ಬಿಜೆಪಿ ಪಕ್ಷದ ಮಹಾನ್ ನಾಯಕರ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದ್ದವರು. ಗೋವಾದಿಂದ ಚುನಾಯಿತರಾಗಿ 4 ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಇವರು ,ಗೋವಾದ ಪುತ್ರ (Son of Goa) ಎಂದೇ ಖ್ಯಾತ ನಾಮರು. ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ತಮ್ಮ ಕೊನೆಯ ದಿನಗಳಲ್ಲಿಯೂ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿ ಆ ಮೂಲಕ ಎಲ್ಲರಿಗೂ ಆದರ್ಶವಾಗಿದ್ದವರು ಎಂದರೂ ಅತಿಶಯೋಕ್ತಿಯಾಗಲಾರದು.
ಪರಿಕ್ಕರ್ ಅವರು 1978 ರಲ್ಲಿ ಮುಂಬೈನ ಆಸ್ಕರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಿಂದ ಪದವಿ ಪಡೆದಿದ್ದು ,ವಿಧಾನಸಭೆಗೆ ಆಯ್ಕೆಯಾದ ಶಾಸಕರಲ್ಲಿಯೇ ಮೊದಲ ಐಐಟಿ ಪದವೀಧರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಆರ್ಎಸ್ಎಸ್ನ ಕಾರ್ಯಕರ್ತರಾಗಿದ್ದ ಇವರನ್ನು ಸಂಘವೇ ಬಿಜೆಪಿಗೆ ಸೇರುವಂತೆ ನಿರ್ದೇಶಿಸಿತು. ತಮ್ಮ 26ನೇಯ ವಯಸ್ಸಿನಲ್ಲಿಯೇ ಮಾಪುಸಾ ಜಿಲ್ಲೆಯ ಸರಸಂಚಾಲಕ್ ಆಗಿಯೂ ಪರಿಕ್ಕರ್ ಅವರನ್ನು ನೇಮಿಸಲಾಯಿತು.
1994 ರಲ್ಲಿ ಪಣಜಿ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಗೋವಾದ ವಿಧಾನ ಸಭೆ ಪ್ರವೇಶಿಸುತ್ತಾರೆ.
ಮೊದಲ ಬಾರಿಗೆ ಆಯ್ಕೆಯಾದ ಇವರನ್ನು ಪಕ್ಷ ಆ ವರ್ಷವೇ ವಿಪಕ್ಷ ನಾಯಕನ ಸ್ಥಾನಕ್ಕೂ ನಾಮ ನಿರ್ದೇಶನ ಮಾಡುತ್ತದೆ.
ಮುಂದಿನ ಚುನಾವಣೆಯ ಹೊತ್ತಿನಲ್ಲಿ ಗೋವಾ ರಾಜಕೀಯದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿ ಹೊರಹೊಮ್ಮಿದ ಪರಿಕ್ಕರ್ ,2000ನೇ ಇಸವಿಯಲ್ಲಿ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ.
2002 ಫೆಬ್ರವರಿ 27ರ ವರಗೆ ಆಡಳಿತ ನಡೆಸಿದ ಇವರು, ನಂತರ ಮತ್ತೆ ಚುನಾವಣೆ ಎದುರಿಸಬೇಕಾಯಿತು. 2002 ಜೂನ್ 5 ರಂದು ಮತ್ತೆ ಗೋವಾದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆ. ಈ ಸಂದರ್ಭ ಮೂರು ವರ್ಷಗಳ ಕಾಲ ಯಶಸ್ವಿ ಆಡಳಿತವನ್ನು ನೀಡಿದರು.
2007 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ 2012 ರಲ್ಲಿ ಬಿಜೆಪಿ ಚುನಾವಣೆ ಜಯಿಸಿ ಮತ್ತೆ ಗೋವಾದ ಗದ್ದುಗೆ ಏರಿತು. ಈ ಸಂದರ್ಭ ಪಾರಿಕ್ಕರ್ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ, ರಾಜ್ಯದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾರೆ.
ಅವರ ಆಡಳಿತ ವೈಖರಿಯ ಕಾರಣಕ್ಕೆ 2014ರಲ್ಲಿ ಮೋದಿ ಆಡಳಿತದಲ್ಲಿ ತಮ್ಮ ಸಂಪುಟವನ್ನು ಸೇರುವಂತೆ ಸೂಚಿಸುತ್ತಾರೆ. ಅವರಿಗೆ ಗೋವಾದಲ್ಲಿಯೇ ಮತ್ತಷ್ಟು ಕೆಲಸ ಮಾಡುವ ಆಶಯವಿದ್ದರೂ, ಕೇಂದ್ರದ ಮನವಿಯನ್ನು ಪುರಸ್ಕರಿಸುತ್ತಾರೆ. ಮೋದಿ ಅವರ ಮಾತಿಗೆ ಬೆಲೆ ಕೊಟ್ಟು ಕೇಂದ್ರ ರಕ್ಷಣಾ ಸಚಿವಾಲಯದ ಮುಖ್ಯಸ್ಥರಾಗಿ, ರಕ್ಷಣಾ ಮಂತ್ರಿಯಾಗಿ ಅಧಿಕಾರ ವಹಿಸುತ್ತಾರೆ.
ಸೆಪ್ಟೆಂಬರ್ 2016 ರಲ್ಲಿ ಪಾರಿಕ್ಕರ್ ನೇತೃತ್ವದಲ್ಲಿ ಯಶಸ್ವಿ ಉರಿ ದಾಳಿಯನ್ನು ನಡೆಸಲಾಯಿತು. ಆ ಮೂಲಕ ಭಯೋತ್ಪಾದಕ ದಾಳಿಯಲ್ಲಿ ಮಡಿದ 19 ಸೈನಿಕರ ಸಾವಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
2017ರಲ್ಲಿ ಗೋವಾದ ರಾಜಕೀಯ ಅಸ್ಥಿರತೆಯ ಸಂದರ್ಭ, ಪರಿಕ್ಕರ್ ಅವರನ್ನು ಮುಖ್ಯಮಂತ್ರಿ ಮಾಡುವುದಾದರೆ ತಾವು ಬಿಜೆಪಿಗೆ ಬೆಂಬಲ ನೀಡುವುದಾಗಿ ಪ್ರಾದೇಶಿಕ ಪಕ್ಷಗಳು ತಿಳಿಸಿದವು. ಈ ಕಾರಣದಿಂದ ಮತ್ತೆ ಪರಿಕ್ಕರ್ ಅವರು ರಾಜ್ಯ ರಾಜಕಾರಣಕ್ಕೆ ಮತ್ತೆ ಹಿಂದಿರುಗುತ್ತಾರೆ.
ನಾಲ್ಕನೇಯ ಬಾರಿಗೆ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಆದರೆ ಈ ವೇಳೆಗಾಗಲೇ ಮಾರಕ ಕ್ಯಾನ್ಸರ್ ಅವರನ್ನು ಹೆಚ್ಚೂ ಕಡಿಮೆ ಬಾಧಿಸಿತ್ತು. ಮುಖ್ಯಮಂತ್ರಿಯಾಗಿ ಅವಧಿ ಪೂರ್ಣವಾಗುವ ಮುನ್ನವೇ 2019ರ ಮಾರ್ಚ್ 17 ರಂದು ಚಿಕಿತ್ಸೆ ಫಲಕಾರಿಯಾಗದೆ ಸ್ವರ್ಗಸ್ಥರಾದರು.
ನಿಧನ ಹೊಂದುವ ಕೆಲವು ದಿನಗಳ ಮೊದಲೂ ತಮ್ಮ ಕರ್ತವ್ಯ ಗಳನ್ನು ನಿಭಾಯಿಸುವ ಮೂಲಕವೇ ಇಡೀ ದೇಶದ ಜನರ ಗಮನ ಸೆಳೆದಿದ್ದರು ಪರಿಕ್ಕರ್. ಆಡಳಿತ ನಡೆಸಿದರೆ ಹೀಗೆ ನಡೆಸಬೇಕು ಎಂಬ ಪಾಠವನ್ನು ಇವರ ಕಾರ್ಯವೈಖರಿಯೇ ಇತರ ರಾಜಕಾರಣಿಗಳಿಗೆ ತಿಳಿಸಿಕೊಡುವಂತಿತ್ತು.
ಇವರ ನಿಧನ ನಂತರ ಇವರ ಕಾರ್ಯಪರತೆ, ದಕ್ಷತೆಯನ್ನು ಪ್ರಧಾನಿ ಮೋದಿ ಅವರು ಹಾಡಿಹೊಗಳಿದ್ದರು, ಪರಿಕ್ಕರ್ ಓರ್ವ ಸಮರ್ಥ, ಅಸಾಧಾರಣ ಆಡಳಿತಗಾರ ಮತ್ತು ನಿಜವಾದ ದೇಶಭಕ್ತ ಎಂದು ಹೊಗಳಿದ್ದರು.
ಎಲ್ಲಾ ರಾಜಕಾರಣಿಗಳೂ ದೇಶದ ಹಿತಕ್ಕಿಂತ, ಸ್ವಹಿತಕ್ಕಾಗಿಯೇ ಹೆಚ್ಚು ಶ್ರಮ ಪಡುತ್ತಾರೆ. ಆದರೆ ಪರಿಕ್ಕರ್ ಹಾಗಲ್ಲ. ದಕ್ಷ, ಜನಸ್ನೇಹಿ ಆಡಳಿತದ ಮೂಲಕವೇ ಜನಸಾಮಾನ್ಯರ ಮನಗೆದ್ದವರು. ಆ ಮೂಲಕ ತನ್ನನ್ನು ಸಮಾಜಕ್ಕಾಗಿ ಸಮರ್ಪಿಸಿದ ಸಂಘದ ಧ್ಯೇಯೋದ್ದೇಶಗಳನ್ನು ನೈಜಾರ್ಥದಲ್ಲಿ ಪಾಲಿಸಿದವರು. ಪಾರಿಕ್ಕರ್ ಬದುಕು ಎಲ್ಲರಿಗೂ ಬೆಳಕು ಎಂಬುದರಲ್ಲಿ ಎರಡು ಮಾತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.