ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಇತ್ತೀಚಿನ ದಿನಗಳಲ್ಲಿ ತನ್ನ ಹಿಂದಿನ ಮರಾಠಾ ಕೇಂದ್ರಿತ ದೃಷ್ಟಿಕೋನವನ್ನು ಹಿನ್ನಲೆಗೆ ಸರಿಸಿ ಹಿಂದುತ್ವಕ್ಕೆ ಬದ್ಧವಾಗಿರುವ ಪಕ್ಷವಾಗಿ ಹೊರಹೊಮ್ಮುವ ಪ್ರಯತ್ನಗಳನ್ನು ಮಾಡುತ್ತಿದೆ. ಜನವರಿ 23 ರಿಂದ ಪಕ್ಷವು ಧ್ವಜದ ಬಣ್ಣವನ್ನು ಸಂಪೂರ್ಣವಾಗಿ ಕೇಸರಿಗೆ ಬದಲಾಯಿಸಿದೆ. ಇನ್ನೊಂದೆಡೆ ರಾಜ್ ಠಾಕ್ರೆ ಅವರು ತಮ್ಮ ಸಭೆ, ಸಮಾವೇಶಗಳಲ್ಲಿ “ಮರಾಠಿ ಸಹೋದರ, ಸಹೋದರಿಯರೇ” ಎನ್ನುವುದಕ್ಕಿಂತ “ಹಿಂದೂ ಸಹೋದರರು ಮತ್ತು ಸಹೋದರಿಯರೇ” ಎಂದು ಹೆಚ್ಚಾಗಿ ಸಂಬೋಧಿಸುತ್ತಿದ್ದಾರೆ.
ಸಿಎಂ ಕುರ್ಚಿಯನ್ನು ತಮ್ಮದಾಗಿಸಿಕೊಳ್ಳುವ ಸಲುವಾಗಿ ಶಿವಸೇನೆ ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಅದರ ಅನೇಕ ಕಾರ್ಯಕರ್ತರು ಅಸಂತೋಷಗೊಂಡಿದ್ದಾರೆ. ಹೀಗಾಗಿಯೇ ಶಿವಸೇನೆಯ ಅನೇಕ ನಾಯಕರು, ಹಿಂದುತ್ವ ಪರವಾದ ನಿಲುವನ್ನು ಸ್ವೀಕರಿಸುತ್ತಿರುವ ಎಂಎನ್ಎಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಈ ನಾಯಕರು ರಾಜ್ ಠಾಕ್ರೆ ಅವರನ್ನು ಭಾಳ್ ಠಾಕ್ರೆ ಮತ್ತು ಮುಂದಿನ ಹಿಂದುತ್ವ ಉತ್ತರಾಧಿಕಾರಿ ಎಂಬಂತೆ ನೋಡುತ್ತಿದ್ದಾರೆ.
ಶಿವಸೇನೆಯ ಮಾಜಿ ಶಾಸಕ ಹರ್ಷವರ್ಧನ್ ಜಾಧವ್ ಮತ್ತು 38 ವರ್ಷಗಳ ಕಾಲ ಶಿವಸೇನೆಯಲ್ಲಿದ್ದ ಪಕ್ಷದ ಔರಂಗಬಾದ್ ನಾಯಕ ಸುಹಾಸ್ ದಶಾಥೆ ಕೆಲವು ದಿನಗಳ ಹಿಂದೆ ಎಂಎನ್ಎಸ್ಗೆ ಸೇರಿದ್ದಾರೆ. ಮಾಜಿ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಅವರ ಸಹೋದರ ಪ್ರಕಾಶ್ ಮಹಾಜನ್ ಸಹ ರಾಜ್ ಠಾಕ್ರೆ ಜೊತೆ ಸೇರಿದ್ದಾರೆ. ಮಹಾಜನ್ ಅವರ ಪ್ರಕಾರ, “ರಾಜ್ ಠಾಕ್ರೆ ಮುಂದಿನ ದಿನಗಳಲ್ಲಿ ಹಿಂದುತ್ವದ ಅಪ್ರತಿಮ ನಾಯಕನಾಗಿ ಹೊರಹೊಮ್ಮುತ್ತಾರೆ ಮತ್ತು ಹಿಂದುತ್ವಕ್ಕೆ ಅವರ ಅವಶ್ಯಕತೆಯಿದೆ”.
ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಅಕ್ರಮ ಒಳನುಸುಳುಕೋರರ ವಿರುದ್ಧ ರಾಜ್ ಠಾಕ್ರೆ ದಕ್ಷಿಣ ಮುಂಬಯಿಯಲ್ಲಿ ದೊಡ್ಡ ಸಮಾವೇಶವನ್ನು ನಡೆಸಿದ್ದಾರೆ. ಸಿಎಎಗೆ ಬೆಂಬಲ ವ್ಯಕ್ತಪಡಿಸಿ ನಡೆದ ಈ ಸಮಾವೇಶದಲ್ಲಿ ಅಪಾರ ಪ್ರಮಾಣದ ಜನರು ಭಾಗಿಯಾಗಿದ್ದರು. ಸಮಾವೇಶದ ಇಡೀ ಪ್ರದೇಶವೇ ಕೇಸರಿಮಯವಾಗಿತ್ತು. ರಾಜ್ ಠಾಕ್ರೆ ಅವರ ಪ್ರಕಾರ, ಸಿಎಎ, ಎನ್ಆರ್ಸಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸುವ ಬಹುಪಾಲು ಜನರು ನೆರೆಯ ಇಸ್ಲಾಮಿಕ್ ದೇಶಗಳಿಂದ ಅಕ್ರಮವಾಗಿ ನುಸುಳಿ ಬಂದವರು. ಮುಂಬೈನ ಅನೇಕ ಪ್ರದೇಶಗಳಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಟಕ್ಕರ್ ನೀಡುವ ಸಲುವಾಗಿಯೇ ಅವರು ಈ ಬೃಹತ್ ಸಮಾವೇಶವನ್ನು ನಡೆಸಿದ್ದಾರೆ.
ಹಿಂದುತ್ವದೊಂದಿಗೆ, ರಾಜ್ ಠಾಕ್ರೆ ಮಹಾರಾಷ್ಟ್ರದ ರಾಜಕೀಯದಲ್ಲಿ ಮುಂದಿನ ದೊಡ್ಡ ವ್ಯಕ್ತಿತ್ವ ಆಗಲಿದ್ದಾರೆ ಎಂಬುದು ವಿರೋಧಪಕ್ಷಗಳ ನಾಯಕರಿಗೆ ಚೆನ್ನಾಗಿಯೇ ತಿಳಿದಿದೆ. ಅವರ ರಾಜಕೀಯ ಏರಿಕೆ ಮತ್ತು ವೃತ್ತಿಜೀವನವು ಬಾಲ್ ಠಾಕ್ರೆ ಮತ್ತು ಶಿವಸೇನೆಯಂತೆಯೇ ತಿರುವು ಪಡೆಯುತ್ತಿದೆ.
ಶಿವಸೇನೆಯಂತೆ, ಎಂಎನ್ಎಸ್ ಕೂಡ ಮರಾಠಿ ಮನುಸ್ (ಮಣ್ಣಿನ ಮಗ) ಅಜೆಂಡಾದೊಂದಿಗೆ ಹುಟ್ಟಿ ಬಂದಿದೆ, ಆದರೆ, 1980 ರ ದಶಕದ ಮಧ್ಯಭಾಗದಲ್ಲಿ ಬಿಜೆಪಿ ದೇವಾಲಯ ಮತ್ತು ಹಿಂದುತ್ವ ಸಮಸ್ಯೆಗಳನ್ನು ಎತ್ತಲು ಪ್ರಾರಂಭಿಸಿದಾಗ, ಭಾಳ್ ಠಾಕ್ರೆ ಈ ಸಮಸ್ಯೆಯನ್ನು ತಾವೇ ಮುನ್ನಲೆಗೆ ಬಂದು ದೊಡ್ಡ ಮಟ್ಟದಲ್ಲಿ ಬಿಂಬಿಸಿದರು ಮತ್ತು ಅದರಿಂದ ಅಪಾರ ಲಾಭವನ್ನೂ ಪಡೆದರು. ಸಿಎಎ ಕೂಡ ರಾಜ್ ಠಾಕ್ರೆ ಅವರಿಗೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಅವಕಾಶ ನೀಡಬಲ್ಲದು, ಅವರ ಪಕ್ಷವು ಸೈದ್ಧಾಂತಿಕ ನಿಲುವನ್ನು ಮಣ್ಣಿನ ಮಗನಿಂದ ಹಿಂದುತ್ವಕ್ಕೆ ವರ್ಗಾಯಿಸುತ್ತಿದೆ.
ರಾಜ್ ಠಾಕ್ರೆ 2006 ರಲ್ಲಿ ಪಕ್ಷವನ್ನು ರಚಿಸಿದಾಗ, ಅವರ ಮುಖ್ಯ ಗಮನ ಮರಾಠಿ ಮನುಸ್ (ಮಣ್ಣಿನ ಮಗ) ಆಗಿತ್ತು, ಅವರು ಶಿವಸೇನೆಗಿಂತ ಮರಾಠಿ ಉಪ-ರಾಷ್ಟ್ರೀಯತೆ ಮತ್ತು ವಲಸೆ-ವಿರೋಧಿ ವಿಷಯವನ್ನು ಇನ್ನಷ್ಟು ತೀವ್ರ ರೀತಿಯಲ್ಲಿ ಎತ್ತಿದರು. ಆದರೆ ಉದ್ಧವ್ ಠಾಕ್ರೆ ಪಕ್ಷವು ಮರಾಠಿ ಮನುಸ್ (ಮಣ್ಣಿನ ಮಗ) ಮತ್ತು ಹಿಂದುತ್ವದ ವಿಷಯಗಳ ಬಗ್ಗೆ ರಾಜಿ ಮಾಡಿಕೊಂಡು ಎನ್ಸಿಪಿ-ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತು. ಇದೀಗ ರಾಜ್ ಠಾಕ್ರೆ ಅವರು ಶಿವಸೇನೆ ಬಿಟ್ಟ ಸೈದ್ಧಾಂತಿಕತೆಯನ್ನು ತಾವು ಪಡೆಯಲು ಸಿದ್ಧರಾಗಿದ್ದಾರೆ.
ತಮ್ಮ ದಿವಂಗತ ಚಿಕ್ಕಪ್ಪ ಮತ್ತು ಶಿವಸೇನೆ ಪಿತಾಮಹ ಭಾಳ್ ಠಾಕ್ರೆಯಿಂದ ರಾಜಕೀಯ ಕಲಿತ ರಾಜ್ ಠಾಕ್ರೆ, ಹಿಂದುತ್ವ ಮತ್ತು ಮಣ್ಣಿನ ಮಗ ರಾಜಕಾರಣದ ಹೊಸ ಅವತಾರವಾಗಿ ಮೇಲೇಳುತ್ತಿದ್ದಾರೆ.
ರಾಜ್ ಠಾಕ್ರೆ ಅವರು ವ್ಯಕ್ತಿತ್ವ, ರಾಜಕೀಯ ಭಾಷಣ ಮತ್ತು ಇತರ ಎಲ್ಲ ರಾಜಕೀಯ ಗುಣಲಕ್ಷಣಗಳ ವಿಷಯದಲ್ಲಿ ಭಾಳ್ ಠಾಕ್ರೆ ಅವರ ರಾಜಕೀಯದ ಕಾನೂನುಬದ್ಧ ಉತ್ತರಾಧಿಕಾರಿ. ಅವರು ಅದೇ ಶೈಲಿಯಲ್ಲಿ ಭಾಷಣಗಳನ್ನು ಮಾಡುತ್ತಾರೆ, ಅದೇ ಘೋಷಣೆಗಳನ್ನು ಪಠಿಸುತ್ತಾರೆ ಮತ್ತು ದೊಡ್ಡ ಜನಸಮೂಹವನ್ನು ಸೆಳೆಯುವ ಶಕ್ತಿ ಅವರಿಗಿದೆ.
ಮತ್ತೊಂದೆಡೆ, ಉದ್ಧವ್ ಠಾಕ್ರೆ ಅವರು ಜನಪ್ರಿಯ ರಾಜಕಾರಣಿಯ ಯಾವುದೇ ಗುಣಲಕ್ಷಣಗಳನ್ನು ಹೊಂದಿಲ್ಲ, ಆದ್ದರಿಂದ ಅವರು ಮೈತ್ರಿಕೂಟದಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಪಡೆದರು ಕೂಡ, ನೇತೃತ್ವ ವಹಿಸುವಲ್ಲಿ ಅವರು ವಿಫಲರಾಗುತ್ತಿದ್ದಾರೆ. ಮೈತ್ರಿ ಪಾಲುದಾರರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಹಿ ಹಾಕಲು ಅವರನ್ನು ಕುರ್ಚಿಯ ಮೇಲೆ ಕೂರಿಸಿಕೊಂಡು ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಸಚಿವ ಸ್ಥಾನ ಹಂಚಿಕೆಯಲ್ಲೂ ಶಿವಸೇನೆ ಹಿನ್ನಡೆ ಅನುಭವಿಸಿದೆ, ಎಲ್ಲಾ ಮಹತ್ವದ ಸಚಿವ ಸ್ಥಾನಗಳು ಎನ್ಸಿಪಿ ಪಾಲಾಗಿವೆ.
ಎರಡೂ ಪಕ್ಷಗಳ ಮತದಾರರ ಮೂಲ ಒಂದೇ ಆಗಿರುವುದರಿಂದ ರಾಜ್ ಠಾಕ್ರೆ ಅವರು ತಮ್ಮ ಕಾರ್ಯತಂತ್ರವನ್ನು ಎಚ್ಚರಿಕೆಯಿಂದ ಕಾರ್ಯಗತಗೊಳಿಸಿದರೆ ಶಿವಸೇನೆಗೆ ಹೊಡೆತ ನೀಡಿ ಭಾರೀ ಲಾಭ ಪಡೆಯಬಹುದಾಗಿದೆ. ಮತ್ತೊಂದೆಡೆ, ಬಿಜೆಪಿ ಮಹಾರಾಷ್ಟ್ರದಲ್ಲಿ ಮತ್ತೊಂದು ಮಿತ್ರನನ್ನು ಕಂಡುಕೊಳ್ಳುತ್ತದೆ, ಎರಡೂ ಪಕ್ಷಗಳ ಸೈದ್ಧಾಂತಿಕ ಹೋಲಿಕೆಯನ್ನು ಗಮನದಲ್ಲಿಟ್ಟುಕೊಂಡು ನೈಸರ್ಗಿಕ ಮಿತ್ರ ಎಂದು ಕರೆಯಬಹುದು. ಪಕ್ಷಗಳು ಕೈಜೋಡಿಸಲು ನಿರ್ಧರಿಸಿದರೆ, ಶಿವಸೇನೆಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.