ಹರೇಕಳ ಹಾಜಬ್ಬ. ದಕ್ಷಿಣ ಕನ್ನಡಕ್ಕೆ ಮಾತ್ರ ಚಿರಪರಿಚಿತವಾಗಿದ್ದ ಈ ಹೆಸರು ಇಂದು ರಾಷ್ಟ್ರಮಟ್ಟಕ್ಕೂ ತನ್ನ ಸಾಧನೆಯ ಘಮವನ್ನು ಪಸರಿಸಿದೆ. ಅಕ್ಷರ ಸಂತ ಎಂದು ಕರೆಯಲ್ಪಡುವ ಹಾಜಬ್ಬರಿಗೆ ಅಕ್ಷರ ಜ್ಞಾನವಿಲ್ಲ. ಆದರೆ ಅಕ್ಷರದ ಮಹತ್ವ ಎಂತಹುದು ಎಂಬ ಅರಿವು ಅವರಿಗೆ ಸ್ಪಷ್ಟವಾಗಿದೆ. ಕಿತ್ತಳೆ ಮಾರಿ ಜೀವನ ನಿರ್ವಹಣೆ ಮಾಡುತ್ತಿದ್ದರೂ ಅವರೊಂದು ಸುಂದರ ವಿದ್ಯಾ ದೇಗುಲವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲಿನ ನೂರಾರು ಮಕ್ಕಳು ವಿದ್ಯೆ ಕಲಿತು ಸಮಾಜದ ಬೆಳಕಾಗಿ ಹೊರಹೊಮ್ಮುತ್ತಿದ್ದಾರೆ.
ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೇಕಳದವರಾದ ಹಾಜಬ್ಬರ ಊರಲ್ಲಿ ಒಂದು ಕಾಲದಲ್ಲಿ ಒಂದು ಶಾಲೆ ಕೂಡ ಇರಲಿಲ್ಲ. ಇಲ್ಲಿನ ಮಕ್ಕಳಿಗೆ ವಿದ್ಯೆ ಕಲಿಯಲು ಇದ್ದ ಆಸರೆಯೆಂದರೆ ಸಮೀಪದ ಖಾಸಗಿ ಶಾಲೆ. ಆದರೆ ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಎಟಕುವಂತಹ ದರದಲ್ಲಿ ಶಿಕ್ಷಣ ಸಿಗುವುದು ಆ ಕಾಲದಲ್ಲೂ, ಈ ಕಾಲದಲ್ಲೂ ಮರಿಚಿಕೆಯೇ. ತನ್ನೂರಿನ ಮಕ್ಕಳು ವಿದ್ಯಾವಂತರಾಗಿ ಬೆಳೆಯಬೇಕು ಎಂಬುದು ಕಿತ್ತಳೆ ಹಣ್ಣು ಮಾರುತ್ತಿದ್ದ ಬಡಪಾಯಿ ಹಾಜಬ್ಬರವರ ಹೆಬ್ಬಯಕೆಯಾಗಿತ್ತು. ಆದರೆ ಕಿಸೆಯಲ್ಲಿ ನೂರು ರೂಪಾಯಿ ಇಲ್ಲದೆಯೇ ತಮ್ಮ ಹೆಬ್ಬಯಕೆಯನ್ನು ಅವರು ಪೂರೈಸಿ ನೂರಾರು ಮಕ್ಕಳಿಗೆ ವಿದ್ಯಾ ದಾನ ಮಾಡಿದ ಯಶೋಗಾಥೆ ಯಾವುದೇ ಹೋರಾಟಕ್ಕಿಂತ ಕಡಿಮೆಯಲ್ಲ.
ಕಿತ್ತಳೆ ಹಣ್ಣಿನ ವ್ಯಾಪಾರ ಮಾಡುತ್ತಾ ಶಾಲೆ ನಿರ್ಮಾಣಕ್ಕಾಗಿ ಒಂಚೂರು ಹಣವನ್ನು ಉಳಿಸಿದರು. ಆ ಹಣದಲ್ಲಿ ಜಲ್ಲಿ, ಕಲ್ಲು, ಸಿಮೆಂಟು ತಂದು ಹಾಕಿದರು. ಒಂದಿಷ್ಟು ಹಣ ಸಂಗ್ರಹವಾಗುತ್ತಿದ್ದಂತೆ ಕಾರ್ಮಿಕರನ್ನು ಕರೆ ತಂದು ಕಟ್ಟಡ ಕೆಲಸ ಪ್ರಾರಂಭಿಸಿದರು. ಹಣ ಖಾಲಿಯಾದಾಗ ತಾನೇ ಮೇಸ್ತ್ರಿಯಾಗಿ ಕೆಲಸ ಮಾಡಿದರು. ಅವರ ಪರಿಶ್ರಮದ ಪರಿಣಾಮವಾಗಿ 1999ರಲ್ಲಿ ಹರೇಕಳದಲ್ಲಿ ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ತಲೆ ಎತ್ತಿ ನಿಂತಿತು. ಹಾಜಬ್ಬರಿಗೆ ತಮ್ಮ ಪರಿಶ್ರಮ ಫಲಕೊಟ್ಟ ಖುಸಿ . ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಶಾಲೆಯ ನೆಲ ಒರೆಸುವುದು, ಅಂಗಳ ಗುಡಿಸುವುದರಿಂದ ಹಿಡಿದು ಎಲ್ಲಾ ಕೆಲಸವನ್ನು ಅವರೇ ಮಾಡುತ್ತಾ ಬಂದಿದ್ದಾರೆ. ಶಾಲೆ ಕೆಲಸ ಮುಗಿಸಿಯೇ ಅವರು ಕಿತ್ತಳೆ ವ್ಯಾಪಾರಕ್ಕೆ ತೆರಳುತ್ತಿದ್ದರು. ಮುಂದೆ ಸಾಗುತ್ತಾ ಸಾಗುತ್ತಾ ಅವರು ಶಾಲೆಯನ್ನು ಹೈಸ್ಕೂಲ್ ಹಂತದವರೆಗೂ ವಿಸ್ತರಿಸಿದರು. ಕಾಲೇಜು ಮಟ್ಟದವರೆಗೂ ವಿಸ್ತರಿಸಬೇಕು ಎಂಬ ಮಹದಾಸೆ ಅವರದ್ದಾಗಿದೆ.
ಅಕ್ಷರ ಸಂತನ ವಿದ್ಯಾ ಸೇವೆಗೆ ಒಲಿದು ಬಂದ ಪ್ರಶಸ್ತಿಗಳ ಸಂಖ್ಯೆ ಕಡಿಮೆಯೇನೂ ಇಲ್ಲ. ಹಲವು ಸಂಘಸಂಸ್ಥೆಗಳು ಅವರ ಸೇವೆಯನ್ನು ಗುರುತಿಸಿ ಅವರ ಶಾಲೆಗೆ ಕೊಡುಗೆಗಳನ್ನು ನೀಡಿವೆ. ಹಲವರು ಅವರನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಈಗ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಪ್ರಶಸ್ತಿ ಒಲಿದು ಬಂದಿದೆ. ತನ್ನೂರಿನಲ್ಲಿ ಸದ್ದಿಲ್ಲದೆ ಸಾಧನೆಯನ್ನು ಮಾಡಿದ ಅಕ್ಷರ ಸಂತ ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಪದ್ಮಶ್ರೀ ಪುರಸ್ಕಾರ ಘೋಷಣೆಯ ಈ ಸಂತೋಷದ ಸಂದರ್ಭದಲ್ಲಿ ಹಾಜಬ್ಬನವರು ನ್ಯೂಸ್ 13 ಕಛೇರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನ್ಯೂಸ್ 13 ಮುಖ್ಯಸ್ಥ ಸುನಿಲ್ ಕುಲಕರ್ಣಿ ಅವರೊಂದಿಗೆ ತಮ್ಮ ಸಾಧನೆಯ ಹಾದಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಶಾಲೆ ಕಟ್ಟುವ ತುಡಿತ ಆರಂಭವಾಗಿದ್ದು ಹೇಗೆ, ಕನಸನ್ನು ನನಸು ಮಾಡುವ ಹಾದಿಯಲ್ಲಿ ತನಗೆ ಯಾರೆಲ್ಲಾ ಸಹಾಯ ಮಾಡಿದರು, ತಾನು ಎಷ್ಟೆಲ್ಲಾ ಕಷ್ಟಪಡಬೇಕಾಯಿತು ಎಂಬೆಲ್ಲಾ ವಿಷಯಗಳನ್ನು ಹಂಚಿಕೊಂಡು ಭಾವುಕರಾದರು. ಈ ಸಂದರ್ಭದಲ್ಲಿ ಇವರ ಸಾಧನೆಯನ್ನು ಜಗತ್ತಿಗೆ ಪರಿಚಯಿಸಿದ ಅವರ ಆಪ್ತರಾದ ಹೊಸದಿಗಂತ ಪತ್ರಿಕೆಯ ಹಿರಿಯ ಪತ್ರಕರ್ತರಾದ ಗುರುವಪ್ಪ ಬಾಳೆಪುಣಿ ಅವರು ಉಪಸ್ಥಿತರಿದ್ದರು.
ಭವಿಷ್ಯದಲ್ಲೂ ಹಾಜಪ್ಪ ಅವರ ಸಾಧನೆ ಇನ್ನಷ್ಟು ಮುಂದಕ್ಕೆ ಹೋಗಲಿ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವರು ಮಿಂಚಲಿ ಎಂಬ ಆಶಯ ನಮ್ಮದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.