ಜನವರಿ 25 ಅನ್ನು ಭಾರತದಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸಲಾಗುತ್ತದೆ ಎಂಬ ವಿಷಯ ಹೆಚ್ಚಿನ ಜನರಿಗೆ ತಿಳಿದೇ ಇಲ್ಲ. ಇದು ದೇಶದೊಳಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಭಾರತ ಸರ್ಕಾರ ಪ್ರಾರಂಭಿಸಿದ ದಿನವಾಗಿದೆ. ಪ್ರವಾಸೋದ್ಯಮದ ಮಹತ್ವ ಮತ್ತು ಭಾರತೀಯ ಆರ್ಥಿಕತೆಯಲ್ಲಿ ಅದು ವಹಿಸುವ ಪಾತ್ರದ ಬಗ್ಗೆ ಜನರಿಗೆ ತಿಳಿಸಲು ಇದು ಒಂದು ಪ್ರಮುಖ ದಿನ. ಪ್ರವಾಸ ಮತ್ತು ಪ್ರವಾಸೋದ್ಯಮದ ವಿಷಯದಲ್ಲಿ ಭಾರತವು ಎಷ್ಟು ಅದ್ಭುತವಾಗಿದೆ ಎಂದು ತಿಳಿಯುವ ಸಲುವಾಗಿಯೂ ಬಹುಶಃ ಇದೊಂದು ಅತ್ಯುತ್ತಮ ದಿನವಾಗಿದೆ. ನಮ್ಮಲ್ಲಿ ಅನೇಕರು ನಮ್ಮ ದೇಶದಲ್ಲಿ ನೋಡಲು ಎಷ್ಟು ಸುಂದರ ತಾಣಗಳಿವೆ ಎಂಬುದನ್ನೂ ತಿಳಿದುಕೊಳ್ಳದೆ ವಿದೇಶದಲ್ಲಿನ ಆಕರ್ಷಣೀಯ ತಾಣಗಳಿಗೆ ಭೇಟಿ ನೀಡುವ ಕನಸು ಕಾಣುತ್ತಾರೆ. ವರ್ಷದಿಂದ ವರ್ಷಕ್ಕೆ ಭಾರತವು ಅನೇಕ ವಿದೇಶಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇಸ್ರೇಲ್, ಯುಎಸ್ಎ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ನ ಜನರು ಭಾರತವನ್ನು ಅದರ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗಾಗಿ ಹೆಚ್ಚು ಇಷ್ಟಪಡುತ್ತಾರೆ. ಭಾರತೀಯ ಪ್ರವಾಸೋದ್ಯಮದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ಜಿಡಿಪಿಗೆ ಪ್ರವಾಸೋದ್ಯಮದ ಕೊಡುಗೆ
ಭಾರತದ ಆರ್ಥಿಕತೆಯನ್ನು ವೃದ್ಧಿಸುವಲ್ಲಿ ಪ್ರವಾಸೋದ್ಯಮವು ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ. ವರದಿಗಳ ಪ್ರಕಾರ, ಪ್ರವಾಸ ಮತ್ತು ಪ್ರವಾಸೋದ್ಯಮವು 2015 ರಲ್ಲಿ ಭಾರತದಲ್ಲಿ ಜಿಡಿಪಿಗೆ ಒಟ್ಟು $4 124.8 ಬಿಲಿಯನ್ ಕೊಡುಗೆ ನೀಡಿದೆ. ಅಂದರೆ ಭಾರತದ ಒಟ್ಟು ಜಿಡಿಪಿಯ ಶೇಕಡಾ 6 ರಷ್ಟು ಪ್ರಯಾಣ ಮತ್ತು ಪ್ರವಾಸೋದ್ಯಮದಿಂದ ಬಂದಿದೆ. ಪ್ರವಾಸೋದ್ಯಮವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂಬ ಅಂಶವನ್ನು ಇದು ಪುನರುಚ್ಚರಿಸುತ್ತದೆ. ಈ ನಿಟ್ಟಿನಲ್ಲಿಯೇ ದೇಶವನ್ನು ಸ್ವಚ್ಛ ಮತ್ತು ಸುಂದರಗೊಳಿಸಲು ಸರ್ಕಾರವು ಹೆಚ್ಚಿನ ಪ್ರಯತ್ನಗಳನ್ನು ನಡೆಸುತ್ತಿದೆ. ರೈಲ್ವೆ ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸೌಲಭ್ಯಗಳು ಮತ್ತು ನೈರ್ಮಲ್ಯವನ್ನು ಪರಿಚಯಿಸಲಾಗಿದೆ ಮತ್ತು ಜನಪ್ರಿಯ ಸ್ಥಳಗಳಲ್ಲಿ ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ವಿಶ್ವದ ಇತರ ಭಾಗಗಳಿಗೆ ಹೋಲಿಸಿದರೆ, ಭಾರತದ ಪ್ರವಾಸೋದ್ಯಮ ಕ್ಷೇತ್ರವು ಬಹಳ ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ
2014 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಭಾರತವು ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿದೆ. ಇದು ಪ್ರವಾಸೋದ್ಯಮ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನವನ್ನು ಹೊಂದಿದೆ. ಆದರೆ 2014 ಮತ್ತು 2024 ರ ನಡುವೆ ಭಾರತದಲ್ಲಿ ಜಿಡಿಪಿಗೆ ಪ್ರಯಾಣ ಮತ್ತು ಪ್ರವಾಸೋದ್ಯಮದ ನೇರ ಕೊಡುಗೆ ವಾರ್ಷಿಕವಾಗಿ ಶೇಕಡಾ 6.4 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಭಾರತವು ಅನೇಕ ಪಾಶ್ಚಿಮಾತ್ಯ ಪ್ರಯಾಣಿಕರಿಗೆ ಜನಪ್ರಿಯ ಪ್ರವಾಸಿ ತಾಣವಾಗಿದೆ ಮತ್ತು ಪ್ರತಿವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಆಗ್ರಾದ ತಾಜ್ಮಹಲ್, ದೆಹಲಿಯ ಕುತುಬ್ ಮಿನಾರ್, ಸಾಂಚಿಯ ಪ್ರಾಚೀನ ಸ್ತೂಪಗಳು ಮತ್ತು ಗೋವಾದ ಪಾರ್ಟಿ ಹಬ್ನಂತಹ ದೊಡ್ಡ ಆಕರ್ಷಣೆಗಳೊಂದಿಗೆ ಭಾರತವು ರಜಾದಿನಗಳಿಗೆ ಹೇಳಿ ಮಾಡಿದಂತಹ ತಾಣವಾಗಿ ಹೊರಹೊಮ್ಮುತ್ತಿದೆ.
ಪ್ರವಾಸೋದ್ಯಮದಲ್ಲಿ ಉದ್ಯೋಗಗಳು
ಯಾವುದೇ ದೇಶದ ಆರ್ಥಿಕತೆಯಲ್ಲಿ ಉದ್ಯೋಗಗಳು ಒಂದು ಪ್ರಮುಖ ಅಂಶವಾಗಿರುತ್ತವೆ. ಭಾರತದಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮವು ಹೆಚ್ಚಿನ ಸಂಖ್ಯೆಯ ಉದ್ಯೋಗಗಳಿಗೆ ಕಾರಣವಾಗುತ್ತಿದೆ. ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ಪ್ರವಾಸೋದ್ಯಮವು 40 ಮಿಲಿಯನ್ ಉದ್ಯೋಗಗಳನ್ನು ನೀಡುತ್ತಿದೆ. ಅದು ದೇಶದ ಅತಿದೊಡ್ಡ ಉದ್ಯೋಗ ಒದಗಿಸುವ ಕ್ಷೇತ್ರಗಳಲ್ಲಿ ಒಂದಾಗಿದೆ. ಕೇದಾರನಾಥದಂತಹ ಪ್ರಮುಖ ಯಾತ್ರಾ ಸ್ಥಳಗಳಾಗಲಿ ಅಥವಾ ಗೋವಾದಂತಹ ತಾಣಗಳಾಗಲಿ, ಭಾರತದಲ್ಲಿ ಪ್ರವಾಸ ಮತ್ತು ಪ್ರವಾಸೋದ್ಯಮವು ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳಲ್ಲಿನ ಕೆಲಸಗಾರರಿಂದ ಹಿಡಿದು ಐತಿಹಾಸಿಕ ಸ್ಮಾರಕಗಳಲ್ಲಿನ ಮಾರ್ಗದರ್ಶಿಗಳು ಮತ್ತು ವಾಹನ ನಿರ್ವಾಹಕರು, ಸ್ಮಾರಕ ನೋಡಿಕೊಳ್ಳುವವರು, ಅಂಗಡಿ ಮಾಲೀಕರವರೆಗೆ ಹಲವಾರು ಜನರು ತಮ್ಮ ತುತ್ತಿಗಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರವು 2023 ರವರೆಗೆ ವಾರ್ಷಿಕ ಸರಾಸರಿ ಶೇಕಡಾ 7.9 ರ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಇದು ಮುಂಬರುವ ದಶಕದಲ್ಲಿ ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಮೂರನೇ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲಿದೆ.
ಪ್ರವಾಸೋದ್ಯಮದಲ್ಲಿ ನೌಕರರ ಶೇಕಡಾವಾರು
2015 ರಲ್ಲಿ ಪ್ರವಾಸೋದ್ಯಮವು ಭಾರತದಲ್ಲಿ 23.5 ದಶಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿತು. ಅಂದರೆ ಶೇಕಡಾ 7.7 ರಷ್ಟು ಭಾರತೀಯ ಉದ್ಯೋಗಿಗಳು ಪ್ರವಾಸೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂದರೆ ಭಾರತದ ಉದ್ಯೋಗಿಗಳ ಗಣನೀಯ ಭಾಗವು ಪ್ರವಾಸೋದ್ಯಮ ಕ್ಷೇತ್ರದಲ್ಲಿದೆ. ಇದು ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಅತ್ಯಂತ ಪ್ರಮುಖ ಕ್ಷೇತ್ರವನ್ನಾಗಿ ಮಾಡುತ್ತಿದೆ. ಯಾಕೆಂದರೆ ಇದು ದೊಡ್ಡ ಸಂಖ್ಯೆಯ ಯುವ ಭಾರತೀಯರನ್ನು ಒಳಗೊಂಡಿದೆ. ಪ್ರವಾಸೋದ್ಯಮದ ಬೆಳವಣಿಗೆ ಮತ್ತು ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಸಂಖ್ಯೆಯು ಈ ಉದ್ಯೋಗಿಗಳ ಶೇಕಡಾವಾರು ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಕುಂಭಮೇಳ
ಭಾರತದ ನಡೆಯುವ ಮಹಾನ್ ಸಮಾವೇಶ ಕುಂಭಮೇಳ. ಇದು ಭೂಮಿ ಮೇಲಿನ ಜನರ ಅತಿದೊಡ್ಡ ಧಾರ್ಮಿಕ ಸಭೆ ಎಂದು ಪರಿಗಣಿಸಲ್ಪಟ್ಟಿದೆ. 2011 ರಲ್ಲಿ, ಕುಂಭಮೇಳವು 75 ದಶಲಕ್ಷಕ್ಕೂ ಹೆಚ್ಚು ಯಾತ್ರಿಕರಿಗೆ ಸಾಕ್ಷಿಯಾಯಿತು. ಸಭೆ ಎಷ್ಟು ದೊಡ್ಡದಾಗಿದೆ ಎಂದರೆ ಜನಸಮೂಹವು ಬಾಹ್ಯಾಕಾಶದಿಂದಲೂ ಕೂಡ ಗೋಚರಿಸುವಷ್ಟು. ಧಾರ್ಮಿಕ ಪ್ರಾಮುಖ್ಯತೆಯ ದೊಡ್ಡ ಕಾರ್ಯಕ್ರಮ ಮಾತ್ರ ಇದಲ್ಲ, ಇದು ಭಾರತದ ಪ್ರವಾಸೋದ್ಯಮ ಕ್ಷೇತ್ರದ ಅತೀದೊಡ್ಡ ವಾಣಿಜ್ಯ ಕಾರ್ಯಕ್ರಮಗಳಲ್ಲೂ ಒಂದಾಗಿದೆ, ಯಾಕೆಂದರೆ ಇದು ಅಪಾರ ಪ್ರಮಾಣದ ಹಣ ಮತ್ತು ಜನರನ್ನು ಒಳಗೊಂಡ ಕಾರ್ಯಕ್ರಮ.
ಅತಿ ದೊಡ್ಡ ಅಂಚೆ ನೆಟ್ವರ್ಕ್
ಭಾರತವು ವಿಶ್ವದ ಅತಿದೊಡ್ಡ ಅಂಚೆ ಜಾಲವನ್ನು ಹೊಂದಿದೆ ಎಂಬುದು ಗಮನಿಸಬೇಕಾದ ಸಂಗತಿ. ಭಾರತದಲ್ಲಿ ಸ್ಥಾಪನೆಗೊಂಡಿರುವ ಅಂಚೆ ಕಛೇರಿಗಳ ಸಂಖ್ಯೆ 1, 55,015 ಕ್ಕೂ ಹೆಚ್ಚು. ಒಂದು ಅಂಚೆ ಕಛೇರಿ ಸರಾಸರಿ 7,175 ಜನರಿಗೆ ಸೇವೆ ಸಲ್ಲಿಸುತ್ತಿದೆ. ಈ ರೀತಿಯ ದಕ್ಷತೆಗೆ ಸರಿ ಸಾಟಿ ಯಾವುದೂ ಇಲ್ಲ.
ಯುಎಸ್ಎ ಅತಿದೊಡ್ಡ ಮಾರುಕಟ್ಟೆಯಾಗಿದೆ
ಭಾರತವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂಬುದು ನಿಜ, ಆದರೆ ಕೆಲವು ದೇಶಗಳು ನಮ್ಮ ದೇಶದ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿವೆ. ಭಾರತಕ್ಕೆ ಅತೀಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುವವರು ಅಮೆರಿಕಾದವರು, ನಂತರ ಬಾಂಗ್ಲಾದೇಶ ಮತ್ತು ಯುಕೆ. 2020ರಲ್ಲಿ ಭಾರತದಿಂದ ಹೊರಹೋಗುವ ಪ್ರಯಾಣವು 1.41 ಮಿಲಿಯನ್ ತಲುಪಲಿದೆ ಎಂದು ವರದಿಗಳು ಊಹಿಸಿವೆ. ನಿಧಾನವಾಗಿ, ಭಾರತಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಭಾರತದಿಂದ ಹೆಚ್ಚು ಹೆಚ್ಚು ಆರ್ಥಿಕ ಲಾಭಗಳನ್ನು ಪಡೆಯುತ್ತದೆ.
ಸಾರ್ವಕಾಲಿಕ ಗರಿಷ್ಠಕ್ಕೇರಿದ ಪ್ರವಾಸಿಗರ ಆಗಮನ
ಭಾರತವು ಜಗತ್ತಿನಾದ್ಯಂತ ಜನರಿಗೆ ಯಾವಾಗಲೂ ನೆಚ್ಚಿನ ತಾಣವಾಗಿಯೇ ಇದೆ. ಲಗನ್, ಸ್ಲಮ್ಡಾಗ್ ಮಿಲಿಯನೇರ್ ಮತ್ತು ಈಟ್ ಪ್ರೇ ಲವ್ನಂತಹ ಯಶಸ್ವಿ ಚಿತ್ರಗಳ ಪರಿಣಾಮವಾಗಿ ಪ್ರಪಂಚದಾದ್ಯಂತದ ಹೆಚ್ಚು ಹೆಚ್ಚು ಜನರು ಭಾರತದತ್ತ ಒಲವು ತೋರಿಸುತ್ತಿದ್ದಾರೆ ಮತ್ತು ನಮ್ಮ ದೇಶದ ಈ ಸುಂದರವಾದ ಗಮ್ಯಸ್ಥಾನಕ್ಕೆ ಪ್ರವಾಸಗಳನ್ನು ಯೋಜಿಸಲು ಪ್ರಾರಂಭಿಸಿದ್ದಾರೆ, ಇದು ಅವರಿಗೆ ಅದ್ಭುತ ಬಜೆಟ್ ಪ್ರವಾಸವನ್ನು ನೀಡುತ್ತದೆ. ಭಾರತದಲ್ಲಿ ಪ್ರವಾಸಿಗರ ಆಗಮನವು 2016 ರ ಅಕ್ಟೋಬರ್ನಲ್ಲಿ ಇದ್ದ 7,54,000 ದಿಂದ ನವೆಂಬರ್ನಲ್ಲಿ 8,91,000 ಕ್ಕೆ ಏರಿತು. 2000 ರಿಂದ 2016 ರವರೆಗೆ ಇದು ಸರಾಸರಿ 4,26,846.43 ರಷ್ಟಿತ್ತು. ಈ ಸಂಖ್ಯೆ ಮೇ 2001 ರಲ್ಲಿ ಇದ್ದ 1,29,286 ಕ್ಕಿಂತ 2015 ರ ಡಿಸೆಂಬರ್ನಲ್ಲಿ ಸಾರ್ವಕಾಲಿಕ ಗರಿಷ್ಠ 9,13,000 ಕ್ಕೆ ತಲುಪಿತು. ಇದು ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಒಂದು ಉತ್ತೇಜಕ ಸಮಯವಾಗಿ ಹೊರಹೊಮ್ಮಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.