ಇಡೀ ಮಹಿಳಾ ಕುಲವೇ ಹೆಮ್ಮೆಪಡಬೇಕಾದ, ಭಾರತೀಯರೆಲ್ಲರೂ ಎಂದಿಗೂ ಚಿರಋಣಿಗಳಾಗಿರಬೇಕಾದ ವೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ. ರಾಣಿ ಲಕ್ಷ್ಮೀಬಾಯಿ 19 ನವೆಂಬರ್ 1829 ರಲ್ಲಿ ಕಾಶಿ (ವಾರಣಾಸಿ) ಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇಂದು ಝಾನ್ಸಿ ರಾಣಿಯ ಜನ್ಮದಿನ. ಆಕೆಯ ಜೀವನವನ್ನು ಮೆಲುಕು ಹಾಕುವುದು ಈ ಸಂದರ್ಭದಲ್ಲಿ ಸ್ಫೂರ್ತಿದಾಯಕವಾಗುತ್ತದೆ.
ಲಕ್ಷ್ಮೀಬಾಯಿಯ ಬಾಲ್ಯದ ಹೆಸರು ಮಣಿಕರ್ಣಿಕಾ. ಪ್ರೀತಿಯಿಂದ ಎಲ್ಲರೂ ಮನು ಎಂದು ಕರೆಯುತ್ತಿದ್ದರು. ಮಣಿಕರ್ಣಿಕಾ 4 ವರ್ಷದವಳಿದ್ದಾಗಲೇ ಅವರ ತಾಯಿ ಅಕಾಲಿಕ ಮರಣ ಹೊಂದಿದರು. ತಂದೆ ಮೋರೋಪಂತ ತಂಬೆಯವರ ಪಾಲನೆ ಪೋಷಣೆಯಲ್ಲಿಯೇ ಮಣಿಕರ್ಣಿಕಾ ಬೆಳೆದಳು. ಚಿಕ್ಕಂದಿನಿಂದಲೂ ಕುದುರೆ ಸವಾರಿ, ಕತ್ತಿವರಸೆ, ಬಿಲ್ವಿದ್ಯೆಯನ್ನು ತುಂಬಾ ಆಸಕ್ತಿಯಿಂದ ಕಲಿಯುತ್ತಿದ್ದರು ಮನು.
ಮಣಿಕರ್ಣಿಕಾಳಿಗೆ 14 ವರ್ಷವಾದಾಗ ಝಾನ್ಸಿಯ ರಾಜ ಬಾಲಗಂಗಾಧರ ರಾವ್ರವರೊಂದಿಗೆ ಬಾಲ್ಯವಿವಾಹವಾಯಿತು. ವಿವಾಹದ ನಂತರ ಮಣಿಕರ್ಣಿಕಾಳ ಹೆಸರನ್ನು ಲಕ್ಷ್ಮಿಬಾಯಿಯೆಂದು ಬದಲಾಯಿಸಲಾಯಿತು.
ಹೆಸರು ಬದಲಾದರೇನಂತೆ ಹಣೆಬರಹ ಬದಲಾಗಬೇಕಲ್ಲ ? ಲಕ್ಷ್ಮೀಬಾಯಿ 1851 ರಲ್ಲಿ ಒಂದು ಗಂಡುಮಗುವಿಗೆ ಜನ್ಮ ನೀಡಿದರು. ಆದರೆ ಆ ಮಗು4 ತಿಂಗಳಿರುವಾಗ ಮರಣವನ್ನಪ್ಪಿತು. ಮಗನ ಸಾವಿನ ದುಃಖ ತಾಳಲಾರದೆ ರಾಜ ಬಾಲಗಂಗಾಧರ್ರವರು 21 ನವೆಂಬರ್ 1853 ರಲ್ಲಿ ಮರಣವನ್ನಪ್ಪಿದರು. ಲಕ್ಷ್ಮೀಬಾಯಿ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡು, ತಾಯಿಯಾದಾಗ ಮಗುವನ್ನು ಕಳೆದುಕೊಂಡು ಕೊನೆಗೆ ಆಸರೆಯಾಗಿದ್ದ ಪತಿಯನ್ನು ಕಳೆದುಕೊಂಡು ಧೃತಿಗೆಡದೆ, ಧೈರ್ಯವಾಗಿ ಝಾನ್ಸಿಗೆ ರಾಣಿಯಾಗಿ ಬ್ರಿಟಿಷರನ್ನು ಎದುರಿಸಿದ ವೀರ ಮಹಿಳೆ.
ದಾಮೋದರನೆಂಬ ಮಗುವನ್ನು ಲಕ್ಷ್ಮೀಬಾಯಿ ದತ್ತು ತೆಗೆದುಕೊಂಡರೂ ಬ್ರಿಟಿಷರು ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯನ್ನು ಅನುಸರಿಸಿ ಝಾನ್ಸಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಆದರೆ ಝಾನ್ಸಿರಾಣಿ ತನ್ನ ಚಿಕ್ಕ ಸೈನ್ಯದೊಂದಿಗೆ ಬ್ರಿಟಿಷರನ್ನು ಸೋಲಿಸಲು ಹೊರಟ ಧೈರ್ಯವಂತ ರಾಣಿ. ರಾಣಿಗೆ ಮುಂದರ ಮತ್ತು ಜೂಹಿ ಎಂಬ ಅಂಗರಕ್ಷಕಿಯರಿದ್ದರು. ಅವರೂ ಸಹ ವೀರ ಮಹಿಳೆಯರೇ ಆಗಿದ್ದರು. ಬದುಕಿರುವವರೆಗೂ ನಿಮ್ಮ ಜೊತೆಯಲ್ಲಿಯೇ ಇದ್ದು, ಸಾಯುವಾಗಲೂ ಸಹ ನಿಮ್ಮ ಜೊತೆಯಲ್ಲಿಯೇ ಇರುತ್ತೇವೆಂದು ಹೇಳಿ ವಚನವನ್ನು ನಿಭಾಯಿಸಿದ ವೀರ ಅಂಗರಕ್ಷಕಿಯರು.
ಲಕ್ಷ್ಮೀಬಾಯಿ ತಾತ್ಯಟೋಪಿ, ರಘುನಾಥ ಹಾಗು ರಾಮಚಂದ್ರರೆಂಬ ನಂಬುಗೆಯ ಸೇನಾನಾಯಕರೊಡಗೂಡಿ ಬ್ರಿಟಿಷರೊಡನೆ ತನ್ನ ದತ್ತು ಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ಎರಡು ಕೈಗಳಲ್ಲಿ ಖಡ್ಗ ಹಿಡಿದು ಹೋರಾಡಿದಳು. ಯುದ್ಧದಲ್ಲಿ ಗಾಯಾಳುವಾದಾಗ ತನ್ನ ಸಹಚರರಿಗೆ ತನ್ನ ಪವಿತ್ರ ದೇಹವನ್ನು ಕೇವಲ ಪವಿತ್ರ ಅಗ್ನಿ ಮಾತ್ರ ಮುಟ್ಟಬೇಕು, ಯಾವುದೇ ಕಾರಣಕ್ಕೂ ಬ್ರಿಟಿಷರು ತನ್ನ ಪವಿತ್ರ ದೇಹವನ್ನು ಮುಟ್ಟಬಾರದು ಎಂದು ಹೇಳಿದ್ದಳು.
ರಾಣಿ ಲಕ್ಷ್ಮೀಬಾಯಿ ಅವರು ದೇಶದ ವೀರ ವನಿತೆ ಎಂದು ಪ್ರಸಿದ್ದರಾಗಿದ್ದಾರೆ. ಭಾರತೀಯ ಸೇನೆ ತನ್ನ ಮಹಿಳಾ ಪಡೆಗೆ ಅವರ ಹೆಸರನ್ನಿಟ್ಟು ಗೌರವ ನೀಡಿದೆ. ರಾಣಿ ಲಕ್ಷ್ಮೀಬಾಯಿವರಿಗೆ ಗೌರವವಾಗಿ ಝಾನ್ಸಿ ಹಾಗು ಗ್ವಾಲಿಯರ್ ನಗರಗಳಲ್ಲಿ ಅವರು ಕುದುರೆ ಸವಾರಿ ಮಾಡುತ್ತಿರುವ ಕಂಚಿನ ವಿಗ್ರಹವನ್ನು ಸ್ಥಾಪನೆ ಮಾಡಲಾಗಿದೆ.
ಲಕ್ಷ್ಮೀಬಾಯಿಯವರ ಇತಿಹಾಸವನ್ನು ಓದುತ್ತಿದ್ದರೆ ಮೈ ಜುಮ್ಮೆನಿಸುತ್ತದೆ. ಲಕ್ಷ್ಮೀಬಾಯಿಗಿದ್ದ ಧೃಡ ಮನಸ್ಸು, ಧೈರ್ಯ, ಅಪಾರವಾದ ದೇಶಭಕ್ತಿ, ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡರೂ ಧೃತಿಗೆಡದೆ ಜೀವನದ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ಮುನ್ನಡೆಯುವುದು, ತನ್ನ ಪವಿತ್ರ ದೇಹದ ಬಗ್ಗೆಯಿದ್ದ ಕಾಳಜಿ ಎಲ್ಲರೂ ಮೆಚ್ಚುವಂಥದ್ದು. ಅಲ್ಲದೇ ಎಲ್ಲಾ ಮಹಿಳಾಕುಲವೇ ಇವರನ್ನು ಆದರ್ಶವಾಗಿಟ್ಟುಕೊಂಡು ಜೀವಿಸಿದರೆ ಜೀವನದ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಬದುಕುವ ಛಲ ಬಂದೀತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.