ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಅರ್ಪಿಸಿಕೊಂಡ ಅನೇಕ ಹಿರಿಯರಲ್ಲಿ ಪ್ರಸಿದ್ಧವಾಗಿ ಕೇಳಿ ಬರುವ ಹೆಸರುಗಳು ಮೂರು. ಲಾಲ್-ಬಾಲ್-ಪಾಲ್. ಅರ್ಥಾತ್ ಲಾಲಾ ಲಜಪತ್ ರಾಯ್, ಬಾಲ ಗಂಗಾಧರ ತಿಲಕ್, ಮತ್ತು ಬಿಪಿನ್ ಚಂದ್ರ ಪಾಲ್. ಈ ಮೂವರು ಹಿರಿಯರು ತಮ್ಮ ತೀಕ್ಷ್ಣತಮವಾದ ಹೋರಾಟಗಳಿಂದ, ಯುವಕರನ್ನು ಬಡಿದೆಬ್ಬಿಸಿದವರು. ತಮ್ಮ ಲೇಖನಿಯ ಹರಿತದಿಂದಲೇ ಬ್ರಿಟಿಷರ ಧ್ವಜವನ್ನು ಕತ್ತರಿಸಿದವರು.
ಬಿಪಿನ್ ಚಂದ್ರ ಪಾಲ್ ನವೆಂಬರ್ 7, 1858ರಂದು ಈಗಿನ ಬಾಂಗ್ಲಾದೇಶದ ಸಿಲ್ಹೆಟ್ ನ ಶ್ರೀಮಂತ ಕಾಯಸ್ಥ ಕುಟುಂಬದಲ್ಲಿ ಜನಿಸಿದರು.ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕೆಲವು ವರ್ಷಗಳ ಅಧ್ಯಯನದ ನಂತರ, ಅವರು ಅಧ್ಯಾಪಕ ವೃತ್ತಿಯನ್ನು ಕೈಗೆತ್ತಿಕೊಂಡರು.
ಕಲ್ಕತ್ತದಲ್ಲಿ ವಾಸವಾಗಿದ್ದ ಸಮಯದಲ್ಲೇ ಪಾಲರಿಗೆ, ಶಿವನಾಥ ಶಾಸ್ತ್ರೀ, ಎಸ್.ಎನ್.ಬ್ಯಾನರ್ಜಿ ಮುಂತಾದವರ ಸಂಪರ್ಕ ಉಂಟಾಗಿ ರಾಜಕೀಯ ಕ್ಷೇತ್ರದತ್ತ ಒಲವು ತಳೆದರು. ತಿಲಕರ ಮತ್ತು ಅರವಿಂದರ ರಾಷ್ಟ್ರೀಯ ವಿಚಾರಧಾರೆಗಳಿಂದ ಪ್ರೇರಿತರಾಗಿ ರಾಷ್ಟ್ರದ ಸ್ವಾತಂತ್ರ್ಯಕ್ಕೆ ತಮ್ಮನ್ನು ಸಮರ್ಪಿಸಲು ನಿರ್ಧರಿಸಿದರು.
ಉತ್ತಮ ಬರಹಗಾರರೂ, ಭಾಷಣಕಾರರೂ ಆಗಿದ್ದ ಪಾಲರು ತಮ್ಮ ವಾಕ್ಪ್ರವಾಹದಿಂದ ಸುಪ್ತವಾಗಿದ್ದ ಭಾರತೀಯರನ್ನು ಎಚ್ಚರಿಸಿದರು. ವಿಶೇಷವಾಗಿ ಲಾರ್ಡ್ ಕರ್ಜನ್ ಬಂಗಾಳದ ವಿಭಜನೆಗೆ ಮುಂದಾದಾಗ, ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದವರು ಪಾಲರು. ಆಗ, ಅರವಿಂದರ ಜೊತೆ ಸೇರಿ ‘ವಂದೇ ಮಾತರಂ ಎಂಬ ಅದ್ಭುತವಾದ ಪತ್ರಿಕೆಯನ್ನು ಆರಂಭಿಸಿದರು. ಅದರ ಒಂದೊಂದು ಲೇಖನದಿಂದ ಸಿಡಿದೆದ್ದ ಕ್ರಾಂತಿಕಾರಿಗಳು ಹಲವಾರು. ಅಲ್ಲಿಂದ ಅವರ ತೀವ್ರಗಾಮಿತನ ದೇಶಾದ್ಯಂತ ಪರಿಚಿತವಾಯಿತು. ‘ನ್ಯೂ ಇಂಡಿಯಾ ಎಂಬ ಆಂಗ್ಲ ಪತ್ರಿಕೆಯನ್ನು, ‘ಪರಿದರ್ಶಕ್ ಎಂಬ ಬಂಗಾಲ ಪತ್ರಿಕೆಯನ್ನು ಪ್ರಾರಂಭಿಸಿದರು. ಸ್ವಾತಂತ್ರ್ಯ, ಸಮಾಜ ಸುಧಾರಣೆಯ ಕುರಿತಾದ ಹಲವು ಪುಸ್ತಕಗಳ ರಚನೆಯನ್ನೂ ಮಾಡಿದರು. ಬ್ರಹ್ಮ ಸಮಾಜದ ಕಾರ್ಯಕರ್ತರಾಗಿದ್ದ ಪಾಲರು ಆ ಕಾಲದ ಸಮಾಜ ಸುಧಾರಣೆಯಲ್ಲೂ ಅಪಾರ ಕೆಲಸ ಮಾಡಿದರು.
ಇವೆಲ್ಲದರ ಜೊತೆಗೆ, ಅವರು ಸ್ವದೇಶೀ ಚಳುವಳಿಯನ್ನೂ ತೀವ್ರಗೊಳಿಸಿದರು. ಹೋದ ಕಡೆಯೆಲ್ಲ, ತಮ್ಮ ಭಾಷಣದಲ್ಲಿ ವಿದೇಶಿ ವಸ್ತುಗಳ ಪರಿತ್ಯಾಗಕ್ಕೆ ಒಟ್ಟು ಕೊಡುತ್ತಿದ್ದರು. ಅಣು-ಅಣುವಿನಿಂದ, ಗ್ರಾಮ-ಊರು-ರಾಜ್ಯಗಳಿಂದ ಕೂಡಿ ನಾವೆಲ್ಲರೂ ಒಂದು ದೇಶವಾಗಿ ಸ್ವಾತಂತ್ರ್ಯ ಸಾಧಿಸುವವರೆಗೂ ಚಳುವಳಿ ನಡೆಯುತ್ತಿರಬೇಕೆಂಬುದು ಅವರ ಭಾಷಣದ ಸಾರವಾಗಿರುತ್ತಿತ್ತು. ಈ ಮಧ್ಯದಲ್ಲಿ, ಬಾಂಬ್ ಪ್ರಕರಣದಲ್ಲಿ ಅನ್ಯಾಯವಾಗಿ ಅರವಿಂದರನ್ನು ಬಂಧಿಸಲಾಯಿತು. ಅರವಿಂದರ ವಿರುದ್ಧವಾಗಿ ಸಾಕ್ಷಿ ಹೇಳಲು ಪಾಲರಿಗೆ ಆಂಗ್ಲರು ಹೇಳಿದಾಗ, ಖಡಾಖಂಡಿತವಾಗಿ ತಿರಸ್ಕರಿಸಿದರು. ಸುಳ್ಳು ಸಾಕ್ಷಿ ಹೇಳಲು ನಿರಾಕರಿಸಿದ್ದಕ್ಕಾಗಿಯೇ ಅವರನ್ನೂ ಜೈಲಿಗೆ ತಳ್ಳಲಾಯಿತು.
‘ಕ್ರಾಂತಿಕಾರಿ ಚಿಂತನೆಗಳ ಜನಕ ಎಂದು ಸಮಕಾಲೀನ ವಿದ್ವಾಂಸರಿಂದ ಗುರುತಿಸಲ್ಪಟ್ಟ ಬಿಪಿನ್ ಚಂದ್ರ ಪಾಲರು ಹುಟ್ಟಿದ ದಿನ ನವೆಂಬರ್ 7. ಅವರ ಹೋರಾಟದ ಬದುಕು, ದೇಶಕ್ಕಾಗಿ ದುಡಿಯುವ ಸ್ವಭಾವ, ಸಮಾಜಕ್ಕಾಗಿ ಸ್ಪಂದಿಸುವ ಹೃದಯ, ಬರವಣಿಗೆಯ ಶಕ್ತಿ ನಮ್ಮಲ್ಲಿ ಪ್ರವಹಿಸಲಿ..
ವಂದೇ ಮಾತರಂ…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.