ಶ್ರೀರಾಮ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಆರ್. ರಾಮಮೂರ್ತಿ ರವರು ನಿರ್ದೇಶನದ “ದೇವರ ಗುಡಿ” ಸಿನಿಮಾವು 1975ರಲ್ಲಿ ಬಿಡುಗಡೆಗೊಳ್ಳುತ್ತದೆ. ಚಿಟ್ಟಿಬಾಬು ರವರ ಛಾಯಾಗ್ರಹಣವಿದ್ದು, ರಾಜನ್-ನಾಗೇಂದ್ರ ರವರು ಸಂಗೀತ ನೀಡಿದ್ದಾರೆ. ಇದು ತಮಿಳಿನ ಪುಗುಂತ ವೀಡು ಸಿನಿಮಾದ ರಿಮೇಕ್. ವಿಷ್ಣುವರ್ಧನ್, ಭಾರತಿ, ಲೀಲಾವತಿ, ಮಂಜುಳ, ರಾಜೇಶ್, ಕೆ.ಎಸ್.ಅಶ್ವತ್ಥ್, ಮನೋರಮಾ ಹಾಗೂ ಶಿವರಾಮ್ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಕಥೆ:
ತಾಯಿ, ಮಗ ಹಾಗೂ ಮಗಳು ಇರುವ ಅದೊಂದು ಬಡಕುಟುಂಬ. ಬಡಕುಟುಂಬವಾದರೂ ಸರಿ, ಪ್ರೀತಿ, ಮಮತೆ, ಸಂಕೋಚ, ಸ್ವಾಭಿಮಾನಕ್ಕೇನೂ ಕೊರತೆಯಿಲ್ಲ. ಸುಂದರನಿಗೆ (ವಿಷ್ಣುವರ್ಧನ್) ಸದಾ ಹಾಡುವ ಗೀಳು. ಸಂಗೀತದಲ್ಲಿ ಆಸಕ್ತಿ ಇರುವ ಆತ, ರೇಡಿಯೋದಲ್ಲಿ ಆಗಿದ್ದಾಂಗೆ ಹಾಡುತ್ತಿರುತ್ತಾನೆ. ಹಾಡುಗಾರಿಕೆ ಹೊಟ್ಟೆ ತುಂಬಿಸುವುದಿಲ್ಲವೆಂದು ಆತನ ತಾಯಿ (ಲೀಲಾವತಿ) ಸದಾ ಹೇಳುತ್ತಿರುತ್ತಾಳೆ. ಕುಟುಂಬ ಪೋಷಣೆಗಾಗಿ ನಾಯಕನ ತಂಗಿ (ಮಂಜುಳಾ) ಸಿರಿವಂತರ ಮನೆಯ ಕೆಲಸದಾಳಾಗಿ ದುಡಿಯುತ್ತಾಳೆ. ಒಂದು ಕಡೆ ಅಣ್ಣ-ತಂಗಿ ಇಬ್ಬರೇ ಇರುವ ಸಿರಿವಂತ ಕುಟುಂಬ. ನಾಯಕಿಗೆ (ಭಾರತಿ) ರೇಡಿಯೋದಲ್ಲಿ ಹಾಡುವ ಸುಂದರನ ಹಾಡುಗಾರಿಕೆ ತುಂಬಾ ಇಷ್ಟ. ಆತನ ಹಾಡುಗಾರಿಕೆಗೆ ಮನಸೋತಿರುತ್ತಾಳೆ. ದೈವೆಚ್ಚೆಯೆಂಬಂತೆ ರೇಡಿಯೋದಲ್ಲಿ ಹಾಡುತ್ತಿದ್ದ ಸುಂದರ್ ಹೊಟ್ಟೆಪಾಡಿಗಾಗಿ ನಾಯಕಿಯ ಮನೆಯ ಡ್ರೈವರ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅದೇ ಮನೆಯಲ್ಲಿ ತನ್ನ ತಂಗಿಯೂ ಕೆಲಸದಾಳಾಗಿ ದುಡಿಯುವುದು ಕಂಡು ಮನನೊಂದುಕೊಳ್ಳುತ್ತಾನೆ. ಸಿರಿವಂತ ಕುಟುಂಬವಾದರೂ ನಾಯಕಿಯ ಅಣ್ಣ (ರಾಜೇಶ್) ತುಂಬಾ ಶಾಂತ ಸ್ವಭಾವಿ, ಅಷ್ಟೇ ಅಲ್ಲದೇ ತನ್ನ ತಂಗಿಗಾಗಿ ಎಲ್ಲ ಸುಖವನ್ನು ಧಾರೆಯೆರೆಯುತ್ತಾನಲ್ಲದೇ, ತಂಗಿಗೆ ಇಷ್ಟವಿಲ್ಲದ ತನ್ನ ಕುಷ್ಟರೋಗಿ ತಂದೆಯನ್ನು (ಕೆ.ಎಸ್.ಅಶ್ವತ್ಥ್) ಮನೆಯ ಕೋಣೆಯೊಂದರಲ್ಲೆ ಇರಿಸುತ್ತಾನೆ. ಆದರೆ ನಾಯಕಿಗೆ ಸಿರಿತನದ ಸೋಗಿನಲ್ಲೇ ಬೆಳೆದವಳಗಾಗಿದ್ದು, ತನ್ನ ಅಣ್ಣನ ಮುದ್ದಿನ ಆರೈಕೆಯಲ್ಲಿ ಮಹಾರಾಣಿಯಂತೆ ಮೆರೆಯುತ್ತಾಳೆ. ತನ್ನದೇ ಮಾತು ನಡೆಯಬೇಕೆಂಬ ಹಠವಾದಿ ಕೂಡ ಆಗುತ್ತಾಳೆ. ಆಕೆಗೆ ತನ್ನ ತಂದೆ ಕುಷ್ಠರೋಗಿ ಎಂಬ ಸತ್ಯ ಕೂಡ ಗೊತ್ತಿರುವುದಿಲ್ಲ. ಆ ಮಹಾಚೆಲುವೆಗೂ ಹಾಡುವ ಕೋಗಿಲೆಗೂ ಪ್ರೇಮಾಂಕುರವಾಗುತ್ತದೆ. ಈ ಸಂಧರ್ಭದಲ್ಲಿ ಬರುವ “ಮಾಮರವೆಲ್ಲೋ ಕೋಗಿಲ್ಲೆಯೆಲ್ಲೋ” ಎಂಬ ಹಾಡು ಇಂದಿಗೂ ಕನ್ನಡಿಗರ ಜನಮಾನಸದಲ್ಲಿದೆ.
ಹೀಗೆ ಪ್ರೀತಿಸಿ ಎರಡೂ ಕಡೆಯ ಹಿರಿಯರನ್ನು ಒಪ್ಪಿಸಿ ಮದುವೆಯಾಗುತ್ತಾರೆ. ತಂಗಿ ಸುಖಕ್ಕಾಗಿ, ತನ್ನ ಮನೆಯಲ್ಲಿಯೇ ಕೆಲಸದವಳಾಗಿ ದುಡಿಯುತ್ತಿದ್ದ ಸುಂದರನ ತಂಗಿಯನ್ನೇ ನಾಯಕಿಯ ಅಣ್ಣ ಮದುವೆಯಾಗುತ್ತಾನೆ. ಈ ಗಂಡ-ಹೆಂಡತಿ ನಡುವೆ ಸಾಮರಸ್ಯವಿರುತ್ತದೆ, ಅನ್ಯೋನ್ಯತೆ ಇರುತ್ತದೆ. ಎಂಥಾ ಸಂಧರ್ಭದಲ್ಲಿ ಕೂಡ ತನ್ನ ಗಂಡನನ್ನು ಬಿಟ್ಟುಕೊಡುವುದಿಲ್ಲ. ಶ್ರೀಮಂತಿಕೆಯ ನೆರಳಲ್ಲೇ ಬೆಳೆದ ನಾಯಕಿ ಬಡವನ ಗುಡಿಸಲಿಗೆ ರಾಣಿಯಾಗಲು ಅರೆಮನಸಿನಿಂದ ಕಷ್ಟಪಡುತ್ತಿರುತ್ತಾಳೆ. ಈ ನಡುವೆ ಆಗಾಗ ಸ್ವಲ್ಪ ಕೆಮ್ಮುವ ಅತ್ತೆಯನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಾಳೆ. ಆಕೆಯ ನಡುವಳಿಕೆಗೆ ಸ್ವತಃ ಅಣ್ಣನೇ ಅಸಮಾಧಾನ ವ್ಯಕ್ತಪಡಿಸುತ್ತಾರಾದರೂ ಈಕೆಯನ್ನು ತಿದ್ದಲು ಮುಂದುವರಿಯುವುದಿಲ್ಲ. ಸ್ವಲ್ಪ ಕಾಯಿಲೆಯಿಂದ ಬಳಲುವ ಅತ್ತೆಯನ್ನು ನೋಡಿಕೊಳ್ಳಲು ಇಷ್ಟಪಡದ, ಅತ್ತೆಯೊಂದಿಗೆ ಮನೆಯಲ್ಲಿರಲು ಇಷ್ಟಪಡದ ಅವಳು, ಕಾಯಿಲೆಯ ನೆಪದೊಂದಿಗೆ ಅತ್ತೆಯನ್ನು ಆಸ್ಪತ್ರೆ ಸೇರಿಸುತ್ತಾಳೆ. ಅತ್ತೆಯನ್ನು ಕಂಡರೆ ದ್ವೇಷಿಸುತ್ತಾಳೆ. ಮೀಸೆ ಚಿಗುರಿದಾಗ ಸಿಕ್ಕ ಹೆಂಡತಿ ಎದುರು ಜೀವ ಕೊಟ್ಟ ತಾಯಿಯನ್ನು ಜೀವಕ್ಕಿಂತಾ ಹೆಚ್ಚು ಪ್ರೀತಿಸುವುದು ಮಗನ ತಪ್ಪೇ? ತಾಯಿಯ ಪರ ಮಾತನಾಡುವವರು ತಪ್ಪು ಎಂದು ಹೇಳುವುದಿಲ್ಲ ಬಿಡಿ. ಆದರೆ ಕೆಲವರಿಗಂತೂ ಅದು ತಪ್ಪಾಗಿಯೇ ಕಾಣುತ್ತದೆ. ನಾಯಕಿಯ ಕಥೆಯೂ ಕೂಡ ಅದೇ. ಒಮ್ಮೆ ಅತಿರೇಕಕ್ಕೆ ಹೋದಾಗ, ನಿನ್ನ ತಾಯಿ ಇರುವವರೆಗೂ ನಾನು ಈ ಮನೆಯ ಹೊಸ್ತಿಲು ತುಳಿಯುವುದಿಲ್ಲ ಎಂದು ಮನೆ ಬಿಟ್ಟು ತವರು ಮನೆಗೆ ಹೋಗಿಬಿಡುತ್ತಾಳೆ. ಹಾಲು –ಜೇನಿನಂತೆ ಬೆರೆತ ಅಣ್ಣ-ಅತ್ತಿಗೆಯ ಸಂಸಾರದಲ್ಲೂ ಸಣ್ಣಗೆ ಬಿರುಗಾಳಿ ಎಬ್ಬಿಸುತ್ತಾಳೆ. ತನಗಾಗಿ ತನ್ನ ಅತ್ತಿಗೆಯನ್ನು ಮನೆಯಿಂದ ಹೊರಹಾಕುವಂತೆ ಅಣ್ಣನನ್ನು ಬೇಡುತ್ತಾಳೆ. ತಂಗಿಯ ಮಾತು ಕೇಳಿ, ತಾನೂ ಮಾಡುತ್ತಿರುವುದು ತಪ್ಪು ಎಂದು ತಿಳಿದರೂ, ಕಳ್ಳತನದ ಆರೋಪ ಹೊರಿಸಿ ತುಂಬು ಗರ್ಭಿಣಿಯಾದ ಆಕೆಯನ್ನು ಮನೆಯಿಂದ ಹೊರಹಾಕುತ್ತಾನೆ. ಮಗು ಹುಟ್ಟಿದ ಬಳಿಕವೂ ತನ್ನ ಮಗುವನ್ನು ನೋಡಲು ಸಹ ತಂಗಿಯ ದೌಲತ್ತು ಬಿಡುವುದಿಲ್ಲ. ಇದರಿಂದಾಗಿ ಆತ ಬಲು ನೊಂದುಕೊಳ್ಳುತ್ತಾನೆ.
ಅಣ್ಣನೂ ತನ್ನ ತಂಗಿಯ ಮನಃ ಪರಿವರ್ತನೆ ಮಾಡುವಲ್ಲಿ ಪ್ರಯತ್ನಪಡುತ್ತಾನೆ. ಜನ್ಮ ಕೊಟ್ಟ ತಂದೆ ಕುಷ್ಟರೋಗಿಯಾಗಿದ್ದು, ಮಗಳ ಹಿತಕ್ಕಾಗಿ ತಂದೆ ಎಂದು ಹೇಳಿಕೊಳ್ಳಲು ಮುಂದೆ ಬಾರದ ತಂದೆಯ ಔದಾರ್ಯವನ್ನು ಕಂಡು, ಇಷ್ಟು ದಿನ ತಾನು ಮಾಡಿದ್ದು ತಪ್ಪು ತಿಳಿದು, ನಾಯಕಿ ಮನಸು ಬದಲಿಸಿಕೊಂಡು ಗಂಡನ ಮನೆಗೆ ಹೋಗುತ್ತಾಳೆ. ಅತ್ತೆಯ ಬಳಿ ಕ್ಷಮೆ ಕೇಳಿಕೊಂಡು, ತಾನು ಗಂಡನಮನೆಯಲ್ಲೇ ಬದುಕುವ ನಿರ್ಧಾರ ಮಾಡುತ್ತಾಳೆ. ಇಲ್ಲಿಗೆ ಕಥೆ ಸುಖಾಂತ್ಯವಾಗುತ್ತದೆ. ಈ ಸಿನಿಮಾದ ಹಾಡುಗಳಂತೂ ಇಂದಿಗೂ ಜನಪ್ರಿಯ. “ಚೆಲುವೆಯ ಅಂದದ ಮೊಗಕೇ,”, ಹಾಗೂ “ಮಾಮರವೆಲ್ಲೂ ಕೋಗಿಲೆಯೆಲ್ಲೋ” ಗೀತೆಯನ್ನು ಹಾಡದ ಹಾಡುಗಾರರಿಲ್ಲ ಕೇಳದ ಕನ್ನಡಿಗರಿಲ್ಲ.
ಆದರೆ ವಾಸ್ತವದಲ್ಲಿ ಇದೇ ರೀತಿಯ ಗಂಡ-ಹೆಂಡತಿ ಜಗಳಗಳು ವಿಚ್ಛೇದನದಲ್ಲಿ ಮುಗಿಯುತ್ತವೆ. ಅಲ್ಲದೇ, ಗಂಡ, ಹೆಂಡತಿ, ಮಕ್ಕಳ ನಡುವೆ ಒಂದು ರೀತಿಯ ದೊಡ್ಡ ಅನಾಹುತವನ್ನೇ ಸೃಷ್ಟಿಸಿರುತ್ತವೆ. ಗಂಡ-ಹೆಂಡತಿ ನಡುವೆ ಪ್ರೀತಿ ತಾನಾಗೇ ಇರುತ್ತದೆ. ಆ ಪ್ರೀತಿಯ ನಡುವೆ ಆಗಾಗ ಚಿಕ್ಕಪುಟ್ಟ ಮನಸ್ತಾಪಗಳು ಸಹ ಇರುತ್ತವೆ. ಗಂಡನ ಮನೆಯವರಾದರೂ ಸರಿ, ಹೆಣ್ಣಿನ ಮನೆಯವರಾದರೂ ಸರಿ, ಗಂಡ-ಹೆಂಡಿರ ನಡುವೆ ಹುಟ್ಟುವ ಮನಸ್ತಾಪಗಳಿಗೆ ತುಪ್ಪ ಸುರಿದು ಬೆಂಕಿ ಹೊತ್ತಿಸದೇ, ಅವರ ಪಾಡಿಗೆ ಅವರನ್ನು ಬಿಟ್ಟು, ಗಂಡ-ಹೆಂಡಿರು ಸುಖವಾಗಿ ಸಂಸಾರ ಮಾಡುವಂತೆ ತಿಳಿಹೇಳಬೇಕೇ ವಿನಃ ಅನಗತ್ಯ ಗೊಂದಲ ಸೃಷ್ಟಿಸಿ ಗಂಡ-ಹೆಂಡಿರನ್ನು ಬೇರೆ ಮಾಡುವುದು ಒಳ್ಳೆಯದಲ್ಲ. ಇತ್ತೀಚಿನ ದಿನಗಳಲಂತೂ ಪ್ರತಿ ಮನೆಯಲ್ಲೂ ಈ ರೀತಿಯ ಗೊಂದಲ ಸೃಷ್ಟಿಸುವ ಕಿಡಿಗೇಡಿ ಮನಸುಗಳು ಇವೆ ಎಂದರೆ ತಪ್ಪಾಗಲಾರದು. ಹೆಣ್ಣಿಗೆ ಗಂಡು ಸಿಕ್ಕ ನಂತರವಷ್ಟೇ ಮುತ್ತೈದೆ ಭಾಗ್ಯ ತನ್ನದಾಗುತ್ತದೆ. ಪ್ರತಿಯೊಂದು ಹೆಣ್ಣು ತನ್ನ ಗಂಡ ಹಾಗೂ ಗಂಡನ ಮನೆಯವರ ಪರವಾಗಿ ಇರಬೇಕಾದ್ದು ಹಾಗೂ ಮನೆಯ ಉನ್ನತಿಗೂ ತನ್ನ ತಿಳುವಳಿಕೆಯಿಂದ ಎಲ್ಲವನೂ ಸಮದೂಗಿಸುವುದು ಧರ್ಮ.
ಜನುಮ ಜನುಮದ ಅನುಬಂಧ. ಗಂಡ-ಹೆಂಡಿರ ಬಂಧ. ಆ ಬಂಧವನ್ನು ಯಾರೂ ಕೆಡಿಸುವ ಪ್ರಯತ್ನ ಮಾಡಬಾರದು. ಗಂಡಾಗಲಿ, ಹೆಣ್ಣಾಗಲಿ ಅನುಬಂಧ ಕೆಡದೇ ಇರುವಂತೆ ಎಚ್ಚರವಹಿಸುವುದಂತೂ ತಮ್ಮ ಆದ್ಯ ಕರ್ತವ್ಯ. ಎಲ್ಲಾ ಗಂಡ-ಹೆಂಡಿರ ಬಾಳು ಸದಾ ಹಸನಾಗಲಿ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ವಿವಾಹಿತರು ಹಾಗೂ ಅವಿವಾಹಿತರು ತಪ್ಪದೇ ನೋಡಲೇಬೇಕಾದ ಸಿನಿಮಾ.
2. ಬಂಧುತ್ವ ಹಾಗೂ ಮಾನವೀಯತೆಯ ಮೌಲ್ಯ ತಿಳಿಸುವ ಸಿನಿಮಾ.
3. ಹಸಿವು, ನೋವು, ನಲಿವು, ಬದುಕು, ಆಪ್ಯಾಯಮಾನ, ಆತ್ಮೀಯತೆ, ಬಾಂಧವ್ಯ ಇವುಗಳ ಕುರಿತು ತಿಳಿಯಲು.
4. ಜೀವನದಲ್ಲಿ ಸ್ನೇಹ, ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
5. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.