ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಗೆ ಮಹಾತ್ಮ ಗಾಂಧೀಜಿ ಅವರ ಕೊಡುಗೆ ಅನನ್ಯವಾದುದು. ಸತ್ಯ, ಅಹಿಂಸೆ, ಏಕತೆ, ಸಮಾನತೆಗಾಗಿನ ಅವರ ಆದರ್ಶಗಳು, ತತ್ವಗಳು ಸಮಕಾಲೀನ ಭಾರತದಲ್ಲೂ ಹೆಚ್ಚು ಪ್ರಸ್ತುತವಾಗಿವೆ.
ಭಾರತದ ರಾಷ್ಟ್ರಪಿತ ಎಂದೇ ಕರೆಯಲ್ಪಡುವ ಗಾಂಧೀಜಿ, ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಜಾತಿ, ಧರ್ಮ, ಜನಾಂಗವನ್ನು ಮೀರಿ ಹೆಚ್ಚು ಮನ್ನಣೆ, ಗೌರವಕ್ಕೆ ಪಾತ್ರರಾಗಿದ್ದಾರೆ.
ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನ ನಾನಾ ದೇಶಗಳು ಬಾಪು ಅವರ 150ನೇ ಜನ್ಮದಿನವನ್ನು ವಿಭಿನ್ನವಾದ ರೀತಿಯಲ್ಲಿ ಆಚರಣೆ ಮಾಡುತ್ತಿವೆ.
ವಿಶ್ವಸಂಸ್ಥೆ
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಮತ್ತು ಹಲವಾರು ದೇಶಗಳ ಮುಖ್ಯಸ್ಥರು ಗಾಂಧಿ ಸೌರ ಉದ್ಯಾನವನವನ್ನು ಪ್ರಾರಂಭಿಸಿದ್ದಾರೆ. ಭಾರತ ನೀಡಿದ 1 ಮಿಲಿಯನ್ ಅನುದಾನದಿಂದ ಯುಎನ್ ಕೇಂದ್ರ ಕಚೇರಿಯ ಮೇಲ್ಛಾವಣಿಯಲ್ಲಿ ಸೌರ ಫಲಕವನ್ನು ಅಳವಡಿಸಲಾಗಿದೆ.
ನ್ಯೂಯಾರ್ಕ್ ಸ್ಟೇಟ್ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ 150 ಗಿಡಗಳನ್ನು ನೆಡುವ ಮೂಲಕ ಗಾಂಧಿ ಶಾಂತಿ ಉದ್ಯಾನವನ್ನು ಉದ್ಘಾಟಿಸಲಾಗಿದೆ.
ಮಹಾತ್ಮ ಗಾಂಧಿಯವರ ಸ್ಮರಣಾರ್ಥ ವಿಶ್ವಸಂಸ್ಥೆಯು ಅಂಚೆ ಚೀಟಿಯನ್ನು ಕೂಡ ಬಿಡುಗಡೆ ಮಾಡಿದೆ.
ಆಸ್ಟ್ರೇಲಿಯಾ
ಭಾರತೀಯ ಮಹಾನ್ ನಾಯಕನನ್ನು ಗೌರವಿಸುವ ಸಲುವಾಗಿ ಆಸ್ಟ್ರೇಲಿಯಾ ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಯ ಹಿನ್ನಲೆಯಲ್ಲಿ ಸರಣಿ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿದೆ.
ಒಂದು ವಾರದ ಪ್ರದರ್ಶನ ಮತ್ತು ಮೆಲ್ಬೋರ್ನ್ನಲ್ಲಿ ಸಂವಾದ, ಗಾಂಧಿಯವರ ತತ್ವಗಳು, ಸಿದ್ಧಾಂತಗಳು, ಕಾರ್ಯಗಳು ಮತ್ತು ಸಾಧನೆಗಳ ಕುರಿತು ಅಡಿಲೇಡ್ನಲ್ಲಿ ಪೋಸ್ಟರ್ ಸ್ಪರ್ಧೆ ಮತ್ತು ಕ್ಯಾನ್ಬೆರಾ ಮೂಲದ ಭಾರತೀಯ ಹೈಕಮಿಷನ್ನಲ್ಲಿ ಪ್ರಾರ್ಥನಾ ಸಭೆ ಇತ್ಯಾದಿ ಕಾರ್ಯಕ್ರಮಗಳು ಅಲ್ಲಿ ಒಂದು ವಾರಗಳ ಕಾಲ ನಡೆಯಲಿದೆ.
ಅಡಿಲೇಡ್ ವಿಶ್ವವಿದ್ಯಾಲಯದ ಗಾರ್ಡನ್ ಆಫ್ ಕಾಂಟೆಂಪ್ಲೇಷನ್ನಲ್ಲಿ ಗಾಂಧಿ ಪ್ರತಿಮೆಗೆ ಹೂಮಾಲೆ ಸಮರ್ಪಣೆ ಸಮಾರಂಭ ನಡೆಯಲಿದ್ದು, ನಂತರ “ಮಹಾತ್ಮ ಗಾಂಧಿಯವರ 150 ಜನ್ಮ ವರ್ಷಾಚರಣೆ – ಆಸ್ಟ್ರೇಲಿಯಾ ಮತ್ತು ಜಗತ್ತಿಗೆ ಅದರ ಪ್ರಸ್ತುತತೆ” ಕುರಿತು ಪ್ರಖ್ಯಾತ ನ್ಯಾಯಶಾಸ್ತ್ರಜ್ಞ ಮತ್ತು ಶೈಕ್ಷಣಿಕ ತಜ್ಞ ಮೈಕೆಲ್ ಕಿರ್ಬಿ ಅವರಿಂದ ಭಾಷಣ ಕಾರ್ಯಕ್ರಮ ನಡೆಯಲಿದೆ.
ಆಸ್ಟ್ರೇಲಿಯಾದ ನಾಲ್ಕು ನಗರಗಳಲ್ಲಿ ಪ್ರಸಿದ್ಧ ನುಡಿಮುತ್ತುಗಳ ಉಲ್ಲೇಖಗಳೊಂದಿಗೆ ಕೆತ್ತಿದ ಗಾಂಧಿಯ ಐದು ಶಿಲ್ಪಗಳು ಸಹ ಆಚರಣೆಯ ಭಾಗವಾಗಲಿವೆ.
ಡೊಮಿನಿಕನ್ ರಿಪಬ್ಲಿಕ್
ಡೊಮಿನಿಕನ್ ರಿಪಬ್ಲಿಕ್ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಗಾಂಧಿಯನ್ನು ಗೌರವಿಸಲು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.
ಸ್ಲೊವೇನಿಯಾ
ಸ್ಲೊವೇನಿಯನ್ ಸರ್ಕಾರವು ಮಹಾತ್ಮ ಗಾಂಧಿಯವರ ಜೀವನದ ನೆನಪಿಗಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.
ಟುನೀಷಿಯಾ
ಟುನೀಷಿಯಾದ ಪ್ರಸಿದ್ಧ ಗಾಯಕ ಅಬ್ಡೆರಹ್ಮೆನ್ ಬೌಖಾರಿ ಮಹಾತ್ಮನ ನೆಚ್ಚಿನ ಭಜನೆಯಾದ ‘ವೈಷ್ಣವ ಜನತೋ’ ಅನ್ನು ಪ್ರಚುರಪಡಿಸಲು ವಿಶೇಷ ಪ್ರಯತ್ನಗಳನ್ನು ಮಾಡಿದ್ದಾರೆ. ಟುನೀಷಿಯಾದಲ್ಲಿ ಮಹಾತ್ಮ ಗಾಂಧಿಯ 150 ನೇ ಜನ್ಮ ವಾರ್ಷಿಕೋತ್ಸವದಡಿಯಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಯಿತು.
ಉತ್ತರ ಆಫ್ರಿಕಾದ ಈ ದೇಶವು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯಂದು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.
ಯುಎಇ
ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈನಲ್ಲಿ ಭಾರತದ ಅತ್ಯಂತ ಪ್ರಭಾವಶಾಲಿ ನಾಯಕನಾದ ಗಾಂಧೀಜಿಯವರ ಜೀವನ ಮತ್ತು ಮೌಲ್ಯವನ್ನು ಎತ್ತಿ ಹಿಡಿಯುವಂತಹ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದೆ.
ಎಮಿರೇಟ್ಸ್ ಅಂಚೆ ಇಲಾಖೆಯು 6,000 ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದೆ, ಇದು ದುಬೈನ ಎಮಿರೇಟ್ಸ್ ಪೋಸ್ಟ್ ಸೆಂಟ್ರಲ್ ಹ್ಯಾಪಿನೆಸ್ ಕೇಂದ್ರಗಳಲ್ಲಿ ಲಭ್ಯವಿದೆ.
ಜೆಕ್ ರಿಪಬ್ಲಿಕ್
ಜೆಕ್ ಗಣರಾಜ್ಯವು ಶೈಕ್ಷಣಿಕ ವರ್ಣಚಿತ್ರಕಾರ ಜಾನ್ ಕವನ್ ಅವರು ಬಿಡಿಸಿದ ಗಾಂಧೀಜಿ ಭಾವಚಿತ್ರವನ್ನು ಹೊಂದಿದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಭಾರತೀಯ ಸಂಪ್ರದಾಯದಂತೆ ಕೈ ಮುಗಿಯುವ ಭಂಗಿಯಲ್ಲಿರುವ ಮಹಾತ್ಮ ಗಾಂಧಿಯ ಅಂಚೆಚೀಟಿಯನ್ನು ಜೆಕ್ ಪೋಸ್ಟ್ ಮತ್ತು ಪೆರುಗ್ವೆಯ ಭಾರತೀಯ ರಾಯಭಾರ ಕಚೇರಿಯು ಜಂಟಿಯಾಗಿ ಹೊರಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.