ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಸೋಮವಾರ ಒರಿಸ್ಸಾದ ಕರಾವಳಿಯಲ್ಲಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಭೂ ದಾಳಿ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಭೂ ದಾಳಿ ಸಾಮರ್ಥ್ಯದ ಈ ಬ್ರಹ್ಮೋಸ್ ಕ್ಷಿಪಣಿ ಸುಮಾರು 450 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಅಲ್ಲದೇ ಆಗಸದಲ್ಲಿ ಗರಿಷ್ಠ 15 ಕಿ.ಮೀ ಎತ್ತರದವರೆಗೂ ಹಾರುವ ಈ ಕ್ಷಿಪಣಿ ಭೂಮಿಯ ಮೇಲ್ಮೈ ಮೇಲೆ ಕನಿಷ್ಠ 15 ಮೀಟರ್ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
2019 ಜೂನ್ ತಿಂಗಳಲ್ಲೂ ಡಿಆರ್ಡಿಒ 450 ಕಿ.ಮೀ ವ್ಯಾಪ್ತಿಯ ಈ ಬ್ರಹ್ಮೋಸ್ ಅನ್ನು ಪರೀಕ್ಷಿಸಿತ್ತು, ಇದು ನವೀಕರಿಸಿದ ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿದೆ ಮತ್ತು ರಷ್ಯಾ ವಿನ್ಯಾಸದ ಅನ್ವೇಷಕನನ್ನು ಹೊಂದಿದ್ದು ಇದು ಕ್ಷಿಪಣಿಗೆ ಹೆಚ್ಚಿನ ನಿಖರತೆಯನ್ನು ನೀಡುತ್ತದೆ.
2017ರ ಮಾರ್ಚ್ 11ರಂದು ಬ್ರಹ್ಮೋಸ್ ವಿಸ್ತೃತ ಶ್ರೇಣಿಯ ಮೊದಲ ಪರೀಕ್ಷೆಯನ್ನು ನಡೆಸಲಾಯಿತು. ವಿಸ್ತೃತ-ಶ್ರೇಣಿಯ ಕ್ಷಿಪಣಿಯನ್ನು ಭೂಮಿ ಮತ್ತು ಸಮುದ್ರ ಆಧಾರಿತ ವೇದಿಕೆಗಳಿಂದ ಹಾರಿಸಬಹುದಾಗಿದೆ ಮತ್ತು 200 ರಿಂದ 300 ಕಿಲೋಗ್ರಾಂಗಳಷ್ಟು ತೂಕದ ಸಾಂಪ್ರದಾಯಿಕ ಸಿಡಿತಲೆಗಳನ್ನು ಇದು ಒಯ್ಯಬಲ್ಲದು. 450 ಕಿ.ಮೀ ವ್ಯಾಪ್ತಿಯ ಬ್ರಹ್ಮೋಸ್ 290 ಕಿ.ಮೀ ವ್ಯಾಪ್ತಿಯ ಆವೃತ್ತಿಯಷ್ಟೇ ಇಂಧನವನ್ನು ಸಾಗಿಸಲಿದೆ ಮತ್ತು ಉತ್ತಮ ಇಂಧನ ದಕ್ಷತೆಯಿಂದಾಗಿ ಇದಕ್ಕೆ ಹೆಚ್ಚಿನ ದೂರವನ್ನು ಪ್ರಯಾಣಿಸಲು ಸಾಧ್ಯವಾಗಲಿದೆ ಎಂಬುದು ಗಮನಾರ್ಹ. ಡಿಆರ್ಡಿಒ ಪ್ರಕಾರ, ಎಂಜಿನ್ನ ದಹನಕಾರಕಕ್ಕೆ ಇಂಧನದ ಹರಿವನ್ನು ನಿಯಂತ್ರಿಸಲು ಪ್ರೋಗ್ರಾಮ್ ಮಾಡಲಾದ ಹೊಸ ಕಂಪ್ಯೂಟರ್-ನಿಯಂತ್ರಿತ ಇಂಜೆಕ್ಟರ್ ವ್ಯವಸ್ಥೆಯಿಂದ ಇದನ್ನು ಸಾಧಿಸಲಾಗಿದೆ.
ಬ್ರಹ್ಮೋಸ್ ಒಂದು “ಫೈರ್ ಅಂಡ್ ಫರ್ಗೆಟ್” ಕ್ಷಿಪಣಿಯಾಗಿದ್ದು, ಇದು ಮೊದಲೇ ನಿರ್ಧರಿಸಿದ ಮತ್ತು ಪ್ರೋಗ್ರಾಮ್ ಮಾಡಲಾದ ಗುರಿಯತ್ತ ತನ್ನಷ್ಟಕ್ಕೆ ಸಂಚರಿಸಲು ಸಮರ್ಥವಾಗಿದೆ. ಕ್ಷಿಪಣಿ 15 ಕಿ.ಮೀ ಎತ್ತರ ಮತ್ತು 10 ಮೀಟರ್ ಕಡಿಮೆ ಹಾರಬಲ್ಲ ಸಾಮರ್ಥ್ಯ ಹೊಂದಿದೆ. ಕ್ಷಿಪಣಿ ಭೂಮಿ, ಸಮುದ್ರ ಮತ್ತು ಉಪ-ಸಮುದ್ರ ಪ್ಲಾಟ್ಫಾರ್ಮ್ಗಳಿಗೆ ಸಂರಚನೆಯನ್ನು ಹೊಂದಿದೆ ಮತ್ತು ಸಾರಿಗೆ, ಸಂಗ್ರಹಣೆ ಮತ್ತು ಉಡಾವಣೆಗೆ ಟ್ರಾನ್ಸ್ಪೋರ್ಟ್ ಲಾಂಚ್ ಕಾನಿಸ್ಟರ್ (ಟಿಎಲ್ಸಿ) ಅನ್ನು ಬಳಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.