
ಝಾನ್ಸಿಯ ರಾಣಿ ಲಕ್ಷ್ಮಿಬಾಯಿಯ ಜೀವದ ಗೆಳತಿ ಮತ್ತು ಬ್ರಿಟಿಷರ ಹಿಡಿತದಿಂದ ರಾಣಿಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟವಳು ಝಲ್ಕರಿ ಬಾಯಿ. ಮಾರ್ಚ್-ಏಪ್ರಿಲ್ 1858 ರಲ್ಲಿ ಬ್ರಿಟಿಷ್ ಜನರಲ್ ಸರ್ ಹಗ್ ರೋಸ್ ಝಾನ್ಸಿ ಕೋಟೆಯನ್ನು ಸುತ್ತುವರೆದಾಗ, ಪರಿಸ್ಥಿತಿ ಅತ್ಯಂತ ಭೀಕರವಾಯಿತು. ಈ ಕ್ಷಣದಲ್ಲಿ, ಝಲ್ಕರಿ ಬಾಯಿ ಧೈರ್ಯಶಾಲಿ ಹೆಜ್ಜೆಯನ್ನು ಇಟ್ಟಳು, ಆಕೆಯಿಟ್ಟ ಧೈರ್ಯದ ಹೆಜ್ಜೆಯನ್ನು ಇತಿಹಾಸ ಪುಸ್ತಕಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ. ಝಲ್ಕರಿ ದೇವಿ ರಾಣಿ ಲಕ್ಷ್ಮಿಬಾಯಿಯೊಂದಿಗೆ ಹೇಗೆ ಸಂಪರ್ಕಕ್ಕೆ ಬಂದಳು, ಅವರಿಬ್ಬರು ಸ್ನೇಹ ಎಂತದ್ದು ಮತ್ತು ರಾಣಿ ಅಪಾಯದಲ್ಲಿದ್ದಾಗ, ಅವಳು ತನ್ನ ಪ್ರಾಣವನ್ನು ಹೇಗೆ ಪಣಕ್ಕಿಟ್ಟಳು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ನವೆಂಬರ್ 22, 1830 ರಂದು ಝಾನ್ಸಿ ಬಳಿಯ ಭೋಜ್ಲಾ ಗ್ರಾಮದಲ್ಲಿ ಸರಳ ಕೋಲಿ ಕುಟುಂಬದಲ್ಲಿ ಜನಿಸಿದ ಝಲ್ಕರಿ ಬಾಯಿ, ರಾಣಿ ಲಕ್ಷ್ಮಿಬಾಯಿಯ ಸೈನ್ಯದ ಗನ್ನರ್ ಪೂರಣ್ ಸಿಂಗ್ ಅವರನ್ನು ವಿವಾಹವಾದರು. ಮದುವೆಯ ನಂತರ, ಝಲ್ಕರಿ ಕೂಡ ರಾಣಿ ಲಕ್ಷ್ಮಿಬಾಯಿಯ ಸೈನ್ಯವನ್ನು ಸೇರಲು ಬಯಸಿದ್ದರು ಮತ್ತು ಆ ಅವಕಾಶ ಕೂಡ ಒಲಿದು ಬಂದಿತು. ಗೌರಿ ಪೂಜೆಯ ಸಂದರ್ಭದಲ್ಲಿ, ರಾಜ್ಯದ ಮಹಿಳೆಯರು ರಾಣಿಗೆ ಗೌರವ ಸಲ್ಲಿಸಲು ಕೋಟೆಗೆ ಹೋದರು, ಮತ್ತು ಅವರಲ್ಲಿ ಝಲ್ಕರಿಯೂ ಇದ್ದಳು. ಝಲ್ಕರಿಯನ್ನು ನೋಡಿದಾಗ ರಾಣಿ ಆಶ್ಚರ್ಯಚಕಿತರಾದರು. ಝಲ್ಕರಿಯ ಮುಖ, ನಿಲುವು ಮತ್ತು ಆಕೃತಿ ರಾಣಿಯಂತೆಯೇ ಇತ್ತು. ರಾಣಿ ಅವಳ ಧೈರ್ಯದ ಕಥೆಗಳನ್ನು ಕೇಳಿದಳು ಮತ್ತು ತಕ್ಷಣ ಅವಳನ್ನು ತನ್ನ ಹತ್ತಿರಕ್ಕೆ ಕರೆಸಿಕೊಂಡಳು. ರಾಣಿ ಝಲ್ಕರಿಯನ್ನು ವಿಶೇಷ ಸಶಸ್ತ್ರ ಮಹಿಳೆಯರ ಗುಂಪಾದ ದುರ್ಗಾ ದಳ ಸೇರಿಸಿಕೊಂಡಳು. ಶೀಘ್ರದಲ್ಲೇ ಝಲ್ಕರಿ ಅದರ ಕಮಾಂಡರ್ ಕೂಡ ಆದಳು.
ಮಾರ್ಚ್ 1858 ರಲ್ಲಿ, ಬ್ರಿಟಿಷ್ ಜನರಲ್ ಸರ್ ಹಗ್ ರೋಸ್ ಸೈನ್ಯವು ಝಾನ್ಸಿಯನ್ನು ಮುತ್ತಿಗೆ ಹಾಕಿತು. ಬ್ರಿಟಿಷ್ ಸೈನ್ಯವು ಹೆಚ್ಚಿನ ಸಂಖ್ಯೆಯಲ್ಲಿದ್ದಿತು ಮತ್ತು ಆಧುನಿಕ ಫಿರಂಗಿಗಳು ಮತ್ತು ಶಸ್ತ್ರಾಸ್ತ್ರಗಳಿಂದ ಸಜ್ಜುಗೊಂಡಿತು. ಝಾನ್ಸಿ ಕೋಟೆಯನ್ನು ರಕ್ಷಿಸುವಲ್ಲಿ ರಾಣಿ ಮತ್ತು ಅವಳ ಸೈನ್ಯವು ಅದಮ್ಯ ಧೈರ್ಯವನ್ನು ಪ್ರದರ್ಶಿಸಿತು. ಝಲ್ಕರಿ ಬಾಯಿ ಮತ್ತು ದುರ್ಗಾ ದಳದ ಮಹಿಳೆಯರು ಮುಂಚೂಣಿಯಲ್ಲಿರುವ ಪುರುಷ ಸೈನಿಕರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದರು. ಅವರು ಮದ್ದುಗುಂಡುಗಳನ್ನು ಹೊತ್ತೊಯ್ದರು, ಗಾಯಾಳುಗಳನ್ನು ನೋಡಿಕೊಂಡರು ಮತ್ತು ಕೆಲವೊಮ್ಮೆ ಫಿರಂಗಿಗಳನ್ನು ಸಹ ನಿರ್ವಹಿಸಿದರು.
ಕೋಟೆಯ ಮೇಲಿನ ದಾಳಿ ತೀವ್ರಗೊಂಡಿತು. ಬ್ರಿಟಿಷ್ ಸೈನ್ಯವು ಕೋಟೆಯ ಗೋಡೆಗಳನ್ನು ಭೇದಿಸಲು ನಿರಂತರವಾಗಿ ಫಿರಂಗಿಗಳಿಂದ ಗುಂಡು ಹಾರಿಸಿತು. ರಾಣಿಯ ಸೈನ್ಯವು ಒಳಗಿನಿಂದ ಪ್ರತಿದಾಳಿ ನಡೆಸಿತು, ಆದರೆ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಹೋಯಿತು. ರಾಣಿಯ ಸೈನ್ಯದಲ್ಲಿದ್ದ ದೇಶದ್ರೋಹಿ ಸೈನಿಕ ದುಲ್ಹೆರಾವ್ ರಾಣಿಗೆ ದ್ರೋಹ ಬಗೆದ. ಅವನು ರಹಸ್ಯವಾಗಿ ಕೋಟೆಯ ದ್ವಾರವನ್ನು ಬ್ರಿಟಿಷರಿಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ. ಹೀಗಾಗಿ ಕೋಟೆಯ ಪತನ ಅನಿವಾರ್ಯವೆಂದು ತೋರಿತು.
ಈ ಪರಿಸ್ಥಿತಿಯಲ್ಲಿ, ರಾಣಿಯ ಸೇನಾಪತಿಗಳು ಮತ್ತು ಝಲ್ಕರಿ ಬಾಯಿ ಕೆಲವು ಸೈನಿಕರೊಂದಿಗೆ ಕೋಟೆಯನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ತಪ್ಪಿಸಿಕೊಳ್ಳಲು ಮುಂದಾದರು. ರಾಣಿ ಲಕ್ಷ್ಮೀ ಬಾಯಿ ತನ್ನ ಅಪ್ರಾಪ್ತ ದತ್ತುಪುತ್ರ ದಾಮೋದರ್ ರಾವ್ ಮತ್ತು ಕೆಲವು ವಿಶ್ವಾಸಾರ್ಹ ಸೈನಿಕರೊಂದಿಗೆ ರಾತ್ರಿಯ ಕತ್ತಲೆಯಲ್ಲಿ ಕೋಟೆಯನ್ನು ತೊರೆದಳು. ಅವರು ಕಲ್ಪಿಗೆ ತೆರಳಿದರು, ಅಲ್ಲಿ ಅವರು ಇತರ ಬಂಡಾಯ ನಾಯಕರನ್ನು ಭೇಟಿಯಾಗಿ ತಮ್ಮ ಭವಿಷ್ಯದ ಕ್ರಮವನ್ನು ಯೋಜಿಸಿದರು.
ನಂತರ ಝಲ್ಕರಿ ಬಾಯಿ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾದರು. ರಾಣಿ ಇನ್ನೂ ಕೋಟೆಯಲ್ಲಿದ್ದಾಳೆ ಮತ್ತು ಹೋರಾಡುತ್ತಿದ್ದಾಳೆ ಎಂದು ಬ್ರಿಟಿಷ್ ಸೈನ್ಯವನ್ನು ನಂಬುವಂತೆ ದಾರಿ ತಪ್ಪಿಸುವುದು ಯೋಜನೆಯಾಗಿತ್ತು. ಇದು ರಾಣಿ ಲಕ್ಷ್ಮೀಬಾಯಿಗೆ ಸುರಕ್ಷಿತವಾಗಿ ದೂರಕ್ಕೆ ಹಿಮ್ಮೆಟ್ಟಲು ಸಮಯವನ್ನು ನೀಡುತ್ತದೆ. ಝಲ್ಕರಿಯು ರಾಣಿ ಲಕ್ಷ್ಮಿಬಾಯಿಯ ಸಂಪೂರ್ಣ ವೇಷವನ್ನು ಧರಿಸಿ, ಅದೇ ಉಡುಪು, ಆಭರಣಗಳು, ಪೇಟ ಮತ್ತು ಯೋಧೆಯಂತಹ ಉಡುಗೆ ಧರಿಸಿದ್ದಳು. ಅವಳು ಕುದುರೆಯ ಮೇಲೆ ಸವಾರಿ ಮಾಡಿ ಸೈನ್ಯದ ಅಧಿಪತ್ಯ ವಹಿಸಿಕೊಂಡಳು. ಝಲ್ಕರಿ ಸೈನಿಕರನ್ನು ಪ್ರೋತ್ಸಾಹಿಸಿ ಬ್ರಿಟಿಷ್ ಪಡೆಗಳ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದಳು. ಅವಳ ಧ್ವನಿ ಮತ್ತು ನಡವಳಿಕೆ ರಾಣಿ ಲಕ್ಷ್ಮಿಬಾಯಿಯಂತೆಯೇ ಇದ್ದವು, ಅವಳು ನಿಜವಾದ ರಾಣಿ ಅಲ್ಲ ಎಂದು ಯಾರಿಗೂ ಪತ್ತೆ ಮಾಡಲು ಸಾಧ್ಯವಾಗಲಿಲ್ಲ.
ಕೋಟೆಯೊಳಗಿನ ಯುದ್ಧವು ಬ್ರಿಟಿಷರ ಪರವಾಗಿ ತಿರುಗುತ್ತಿತ್ತು, ಏಕೆಂದರೆ ಅವರ ಪಡೆಗಳು ಹೆಚ್ಚು ಬಲಶಾಲಿಯಾಗಿದ್ದವು. ಆದಾಗ್ಯೂ, ಲಕ್ಷ್ಮಿಬಾಯಿ ಹೋರಾಡುತ್ತಿದ್ದಾರೆ ಎಂಬ ಭ್ರಮೆಯನ್ನು ರಾಣಿ ಕಲ್ಪಿಯನ್ನು ಸುರಕ್ಷಿತವಾಗಿ ತಲುಪುವವರೆಗೆ ಸ್ವಲ್ಪ ಸಮಯದವರೆಗೆ ಉಳಿಸಿಕೊಳ್ಳಬೇಕಾಯಿತು.
ಈ ಪರಿಸ್ಥಿತಿಯಲ್ಲಿ, ಝಲ್ಕರಿ ಬಾಯಿ ಕೋಟೆಯನ್ನು ಬಿಟ್ಟು ಬ್ರಿಟಿಷ್ ಜನರಲ್ ಹಗ್ ರೋಸ್ ಅವರ ಶಿಬಿರವನ್ನು ತಲುಪಿದರು. ಅಲ್ಲಿ, ಝಲ್ಕರಿ ಬಾಯಿ ತಮ್ಮನ್ನು ರಾಣಿ ಲಕ್ಷ್ಮಿಬಾಯಿ ಎಂದು ಘೋಷಿಸಿಕೊಂಡರು ಮತ್ತು ಆತನನ್ನು ಭೇಟಿಯಾಗಲು ಬಯಸುವುದಾಗಿ ಹೇಳಿದಳು. ರೋಸ್ ಮತ್ತು ಅವರ ಸೈನಿಕರು ಆಗ ಝಾನ್ಸಿಯನ್ನು ಮರಳಿ ಪಡೆದಿದ್ದೇವೆ ಮತ್ತು ರಾಣಿ ಜೀವಂತವಾಗಿ ಸಿಕ್ಕಿದ್ದಾಳೆ ಎಂದು ಸಂತೋಷಪಟ್ಟರು. ಆದರೆ ಆಕೆ ನಿಜವಾದ ರಾಣಿಯಲ್ಲ ರಾಣಿಯನ್ನು ಹೋಲುವ ಝಲ್ಕರಿ ಬಾಯಿ ಎಂದು ಜನರಲ್ ಹಗ್ ರೋಸ್ ಕಂಡುಹಿಡಿದ, ಆದರೆ ಆ ಹೊತ್ತಿಗೆ ರಾಣಿ ಲಕ್ಷ್ಮೀಬಾಯಿ ಅದಾಗಲೇ ಸುರಕ್ಷಿತ ಸ್ಥಳಕ್ಕೆ ತಲುಪಿದ್ದರು. ಝಲ್ಕರಿಯನ್ನು ಕೊಲ್ಲುವುದಾಗಿ ಬ್ರಿಟಿಷರು ಗುಡುಗಿದರು. ಆದ ಝಲ್ಕರಿ, ‘ಗುಂಡು ಹಾರಿಸಿ, ನಾನು ಇತರ ಅನೇಕ ಸೈನಿಕರಂತೆ ಸಾಯುತ್ತೇನೆ’ ಎಂದು ಉತ್ತರಿಸಿದಳು. ಝಲ್ಕರಿಯ ಈ ವರ್ತನೆಯನ್ನು ಕಂಡು ಬ್ರಿಟಿಷ್ ಸೈನಿಕ ಸ್ಟುವರ್ಟ್ “ಈ ಮಹಿಳೆ ಹುಚ್ಚಿ” ಎಂದು ಗುಣುಗಿದ. ಜನರಲ್ ರೋಸ್ ಉತ್ತರಿಸಿ, “ಇಲ್ಲ, ಸ್ಟುವರ್ಟ್, ಭಾರತೀಯ ಮಹಿಳೆಯರಲ್ಲಿ ಶೇ. 1 ರಷ್ಟು ಮಹಿಳೆಯರು ಕೂಡ ಹೀಗಾದ್ದರೆ ಬ್ರಿಟಿಷರು ಶೀಘ್ರದಲ್ಲೇ ಭಾರತವನ್ನು ತೊರೆಯಬೇಕಾಗುತ್ತದೆ” ಎಂದು ಉದ್ಘರಿಸಿದ.
ಝಲ್ಕರಿ ದೇವಿಯ ಸಾವಿನ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಕೆಲವರು ಯುದ್ಧದ ನಂತರ ಅವಳೂ ಬಿಡುಗಡೆಗೊಂಡು 1890 ರಲ್ಲಿ ನಿಧನರಾದರು ಎಂದು ಹೇಳುತ್ತಾರೆ. ಇದಕ್ಕೆ ವಿರುದ್ಧವಾಗಿ, ಕೆಲವು ಇತಿಹಾಸಕಾರರು ಝಲ್ಕರಿ ಬಾಯಿ ಏಪ್ರಿಲ್ 4, 1858 ರಂದು ಯುದ್ಧದ ಸಮಯದಲ್ಲಿ ನಿಧನರಾದಳು ಎಂದು ನಂಬುತ್ತಾರೆ.
ಅವರ ತ್ಯಾಗವು ರಾಣಿ ಲಕ್ಷ್ಮಿ ಬಾಯಿಯನ್ನು ಉಳಿಸಿತ್ತು. ನಂತರ ರಾಣಿ ಕಲ್ಪಿ ಮತ್ತು ಗ್ವಾಲಿಯರ್ನಲ್ಲಿ ಹೋರಾಡಿದಳು ಮತ್ತು ಜೂನ್ 18, 1858 ರಂದು ಗ್ವಾಲಿಯರ್ ಬಳಿ ಹುತಾತ್ಮಳಾದಳು.
“ಝಾನ್ಸಿ ರಾಣಿಯ ನೆರಳು” ಅಥವಾ “ಝಾನ್ಸಿಯ ಎರಡನೇ ರಾಣಿ” ಎಂದು ಕರೆಯಲ್ಪಡುವ ಝಲ್ಕರಿಯ ಗೌರವಾರ್ಥವಾಗಿ ಭಾರತ ಸರ್ಕಾರವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.
ಭಾರತದ ಹೆಣ್ಣುಮಕ್ಕಳು ಇತಿಹಾಸಕ್ಕೆ ಸಾಕ್ಷಿಗಳಲ್ಲ, ಅದರ ಸೃಷ್ಟಿಕರ್ತರು ಎಂದು ಝಲ್ಕರಿ ಬಾಯಿ ಸಾಬೀತುಪಡಿಸಿದರು. ಅವರ ತ್ಯಾಗವು ಪ್ರತಿಯೊಬ್ಬ ಭಾರತೀಯನೊಳಗೆ ದೇಶಭಕ್ತಿಯ ಜ್ವಾಲೆಯನ್ನು ಯಾವಾಗಲೂ ಉರಿಯುವಂತೆ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



