ಪರದೇಶಿ ಬ್ರಿಟಿಷರು ಭಾರತದ ನೆಲಕ್ಕೆ ಬಂದು ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ನೆಲಕ್ಕೇ ಹೋಗಿ ಇಂಗ್ಲೆಂಡಿನಲ್ಲೇ ಕ್ರಾಂತಿಚಟುವಟಿಕೆ ನಡೆಸಿ ಬ್ರಿಟಿಷರನ್ನೇ ಬೆಚ್ಚಿ ಬೀಳಿಸಿದ, ವಿದೇಶಿ ನೆಲದಲ್ಲಿ ಭಾರತಕ್ಕಾಗಿ ಮೊದಲ ಬಲಿದಾನ ಮಾಡಿದ ಕೆಚ್ಚೆದೆಯ ವೀರ ಮದನ್ ಲಾಲ್ ಧಿಂಗ್ರಾ.
ಸೆಪ್ಟೆಂಬರ್ 18, 1883 ರಂದು ಅಮೃತಸರದಲ್ಲಿ ಜನಿಸಿದ ಅವರದ್ದು ಅತ್ಯಂತ ಶ್ರೀಮಂತ ಕುಟುಂಬ. ಅವರ ತಂದೆ ದಿತ್ತ ಮಲ್ ಅವರು ಸರ್ಕಾರಿ ಹಿರಿಯ ವೈದ್ಯರಾಗಿ ನಿವೃತ್ತಿ ಪಡೆದಿದ್ದವರು. ಬ್ರಿಟಿಷ್ ಸರ್ಕಾರ ಅವರನ್ನು ರಾಜ್ ಸಾಹೇಬ ಎಂದೇ ಗೌರವಿಸುತ್ತಿತ್ತು. ಅವರಿಗೆ ಏಳು ಗಂಡು ಮಕ್ಕಳು ಮತ್ತು ಒಬ್ಬ ಪುತ್ರಿ ಇದ್ದರು. ಮೂರು ಗಂಡು ಮಕ್ಕಳು ವೈದ್ಯರಾದರೆ, ಮೂರು ಮಕ್ಕಳು ಬ್ಯಾರಿಸ್ಟರ್ ಪದವಿ ಪಡೆದವರು.
ಪಂಜಾಬಿನ ಅಮೃತಸರದ ಶ್ರೀಮಂತ ಕುಟುಂಬದ ಮದನ್ ಲಾಲ್ ಇಂಜಿನೀಯರಿಂಗ್ ಓದಲಿಕ್ಕೆಂದು ಲಂಡನ್ಗೆ ಹೋಗಿದ್ದವನು. ಸ್ವಭಾವತಃ ಶೋಕಿಲಾಲ. ಮನೆಯವರೆಲ್ಲ ಬ್ರಿಟಿಷರ ಪರಮ ಭಕ್ತರು. ಇಂಗ್ಲೆಂಡ್ ವಿಲಾಸೀ ಸಂಸ್ಕೃತಿಗೆ ಮಾರು ಹೋದ ಮದನ್ ಬೆಲೆಬಾಳುವ ಸೂಟು ಬೂಟುಗಳನ್ನು ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡಿನ ರಸ್ತೆಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತ ಕಾಲ ಕಳೆಯುತೊಡಗಿದ್ದ. ಆದರೆ ವರ್ಷವಿಡೀ ಹೊರಗೆ ಅಲೆದರೂ ಪರೀಕ್ಷೆಯಲ್ಲಿ ಮಾತ್ರ ಮೊದಲ ಸ್ಥಾನವನ್ನೇಗಳಿಸುತ್ತಿದ್ದ ಪ್ರತಿಭಾವಂತ ಆತ. ಅವನ ಬದುಕಿಗೆ ಮಹತ್ವದ ತಿರುವು ಸಿಕ್ಕಿದ್ದು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ರ ಇಂಗ್ಲೆಂಡ್ ಭೇಟಿಯ ಮೂಲಕ.
ಬ್ರಿಟಿಷರಿಗೆ ಅವರ ಭೂಮಿಯಲ್ಲೇ ಭಾರತೀಯರ ಸಂಘಟಿಸಿ ಉತ್ತರ ಕೊಡಬೇಕೆಂಬ ಸಂಕಲ್ಪದಿಂದ ಇಂಗ್ಲೆಂಡ್ಗೆ ತೆರಳಿದ್ದ ಸಾವರ್ಕರ್ ಅಲ್ಲಿದ್ದ ‘ಭಾರತ ಭವನ’ದ ಮೂಲಕ ಇಂಗ್ಲೆಂಡಿನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ತುಂಬುತ್ತಿದ್ದರು. ಅವರ ಧೀಮಂತ ವ್ಯಕ್ತಿತ್ವ, ದೇಶಾಭಿಮಾನದ ಮಾತುಗಳನ್ನು ಕೇಳಿದ ಮದನ್ ಲಾಲ್ ಧಿಂಗ್ರಾಗೆ ಸಾವರ್ಕರ್ ಮೇಲೆ ಅಭಿಮಾನ ಉಂಟಾಯಿತು. ದೇಶಭಕ್ತಿಯ ಹೊಸ ವಿದ್ಯುತ್ ಅವನಲ್ಲಿ ಪ್ರವಹಿಸಿತು. ಶೋಕಿಲಾಲ ಮದನ್ ಲಾಲ್ ಮಹಾನ್ ದೇಶಪ್ರೇಮಿಯಾಗಿ ಬದಲಾದ.
ಆ ಹೊತ್ತಿಗೆ ಬ್ರಿಟಿಷರಿಗೆ ಕ್ರಾಂತಿಯ ಮೂಲಕ ಉತ್ತರ ಕೊಡುವ ಮಾತುಕತೆ ಸಾವರ್ಕರ್ ನೇತೃತ್ವದಲ್ಲಿ ಭಾರತ ಭವನದಲ್ಲಿ ನಡೆಯುತ್ತಿತ್ತು. ಬಂಗಾಳದ ವಿಭಜನೆಗೆ ಹೊಂಚು ಹಾಕಿದ್ದ ಬ್ರಿಟಿಷ್ ಅಧಿಕಾರಿ ಕರ್ಜನ್ ವಾಯ್ಲಿ ಆಗಷ್ಟೇ ಇಂಗ್ಲೆಂಡ್ಗೆ ಮರಳಿದ್ದ. ಲಂಡನ್ನಿನಲ್ಲಿ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಎಂಬ ಸಂಸ್ಥೆ ಇತ್ತು. ಇಂಗ್ಲೆಂಡ್ಗೆ ಬಂದ ಭಾರತೀಯ ತರುಣರನ್ನು ಹಾಳು ಮಾಡಿ ಬ್ರಿಟಿಷರಿಗೆ ನಿಷ್ಠೆಯಾಗಿ ಮಾಡುವುದು ಈ ಸಂಸ್ಥೆಯ ಕೆಲಸವಾಗಿತ್ತು. ವಿಲಿಯಂ ಕರ್ಜನ್ ವಾಲಿ ಅದರ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ. ಸಹಜವಾಗಿ ಕ್ರಾಂತಿಕಾರಿಗಳ ಸಿಟ್ಟು ಆತನೆಡೆ ತಿರುಗಿತು. ತನ್ನ ತಂದೆಯ ಮೂಲಕ ಅವನ ಪರಿಚಯ ಗಳಿಸಿಕೊಂಡ ಮದನ್ ಲಂಡನ್ನಿನ ಜಹಾಂಗೀರ್ ಹಾಲ್ನ ತುಂಬಿದ ಸಭೆಯಲ್ಲಿ ಕರ್ಜನ್ ವ್ಯಾಲಿಯಗೆ ಗುಂಡಿಟ್ಟು ಕೊಂದು ಬ್ರಿಟಿಷರ ನೆಲದಲ್ಲೇ ಅವರನ್ನು ಬೆಚ್ಚಿಬೀಳಿಸಿದ. ಲಂಡನ್ ಒಮ್ಮೆಗೆ ನಡುಗಿ ಹೋಯಿತು. ಸ್ವಾತಂತ್ರ್ಯ ಕ್ರಾಂತಿಯ ಜ್ಯೋತಿ ಬ್ರಿಟಿಷ್ ನೆಲದಲ್ಲೇ ಮೊಳಗಿತ್ತು. ಘಟನೆಯ ನಂತರ ಧಿಂಗ್ರಾ ಪಲಾಯನ ಮಾಡಲಿಲ್ಲ. ತಾನೇ ಪೊಲೀಸರಿಗೆ ಶರಣಾದ. ನ್ಯಾಯಾಲಯದಲ್ಲಿ ತನ್ನ ಪರವಾಗಿ ತಾನೇ ವಾದ ಮಾಡಿ ತಾನು ಮಾಡಿದ ಕೆಲಸ ಹೇಗೆ ಸರಿ ಎಂದು ಸಮರ್ಥಿಸಿಕೊಂಡ. ನ್ಯಾಯಾಲಯದ ಅವನ ವಾದವೇ ಒಂದು ಕ್ರಾಂತಿಕಾರಿಗಳ ಪಾಲಿನ ಮಹಾಕಾವ್ಯ. ತಾನು ಇದನ್ನು ಮಾಡಿರುವುದಕ್ಕೆ ಹೆಮ್ಮೆ ಪಡುವುದಾಗಿಯೂ, ತನಗೆ ಮರಣದಂಡನೆಯೇ ಸೂಕ್ತ ಎಂದೂ ಧೀರ ಮದನ್ ಲಾಲ್ ಧಿಂಗ್ರಾ ಖುಷಿಯಿಂದ ಹೇಳಿದ.
“ತಾಯಿಭಾರತಿಯ ಸೇವೆಯೆಂದರೆ ಪ್ರಭು ಶ್ರೀರಾಮನ ಸೇವೆ. ಆ ತಾಯಿಗೆ ಅಪಮಾನವಾದರೆ ಶ್ರೀ ರಾಮನಿಗೆ ಅಪಮಾನವಾದಂತೆ. ಆ ದೊಡ್ಡ ತಾಯಿಗೆ ಈ ದಡ್ಡಮಗ ತನ್ನ ರಕ್ತವನ್ನಲ್ಲದೆ ಇನ್ನೇನು ತಾನೇ ಕೊಡಲಿಕ್ಕೆ ಸಾಧ್ಯ?. ಆದ್ದರಿಂದ ನಾನು ಹೆಮ್ಮೆಯಿಂದ ಪ್ರಾಣಬಿಡುತ್ತಿದ್ದೇನೆ. ನನ್ನ ತಾಯಿನಾಡು ಸ್ವತಂತ್ರವಾಗುವವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆಮತ್ತೆ ಹುಟ್ಟಬೇಕು. ಇದೇ ಧ್ಯೇಯಕ್ಕಾಗಿ ಬಲಿದಾನ ನೀಡಬೇಕು. ಇದೊಂದೇ ನಾನು ದೇವರಲ್ಲಿ ಮಾಡುವ ಪ್ರಾರ್ಥನೆ” ಹಾಗಂತ ಬಲಿದಾನದ ಮುನ್ನ ಹೇಳಿದ್ದ ಧಿಂಗ್ರಾ. 1909 ಆಗಸ್ಟ್ 17 ರಂದು ಈ ಅಪ್ರತಿಮ ಕ್ರಾಂತಿಕಾರಿಗೆ ಮರಣದಂಡನೆಯ ಶಿಕ್ಷೆ ನೀಡಲಾಯಿತು. ವಿದೇಶಿ ನೆಲದಲ್ಲಿ ಮೊದಲ ಬಲಿದಾನ ಮಾಡಿದ ಧಿಂಗ್ರಾನ ಅಪ್ರತಿಮ ಶೌರ್ಯ ಮುಂದೆ ಭಾರತದಲ್ಲಿ ದೊಡ್ಡ ಕ್ರಾಂತಿಕಾರಿ ಪರಂಪರೆಗೆ ನಾಂದಿಯಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.