ದೇಶದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರು ನಮ್ಮನ್ನು ಅಗಲಿರಬಹುದು, ಆದರೆ ಅವರು ಸಾಧನೆಯ ಉತ್ತುಂಗವನ್ನು ಏರಿದ ಪರಿ ನಮ್ಮ ಸಮಾಜದ ಪ್ರತಿ ಮಹಿಳೆಯರಿಗೂ ಪ್ರೇರಣೆಯಾಗಿದೆ. 1973ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ ಅವರು, ದೇಶದ ಎರಡನೇ ಮಹಿಳಾ ಐಪಿಎಸ್ ಅಧಿಕಾರಿಯೂ ಹೌದು. ಮೊದಲನೆಯವರು ಕಿರಣ್ ಬೇಡಿ. ರಾಜ್ಯವೊಂದರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಗೆ ಏರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕಾಂಚನ ಅವರದ್ದಾಗಿದೆ.
ಕಾಂಚನಾ ಅವರು 2004-2007ರ ಅವಧಿಯಲ್ಲಿ ಉತ್ತರಾಖಂಡದಲ್ಲಿ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸುದೀರ್ಘ 33 ವರ್ಷಗಳ ಸೇವಾವಧಿಯಲ್ಲಿ ಬ್ಯಾಡ್ಮಿಂಟನ್ ಆಟಗಾರ ಸೈಯದ್ ಮೋದಿ ಹತ್ಯೆ, ರಿಲಾಯನ್ಸ್-ಬಾಂಬೆ ಡೈಯಿಂಗ್ ಪ್ರಕರಣ ಸೇರಿದಂತೆ ಮಹತ್ವದ ಪ್ರಕರಣಗಳ ತನಿಖೆಯನ್ನು ಅವರು ನಡೆಸಿದ್ದಾರೆ. ಅವರ ಜೀವನ ಚರಿತ್ರೆ ಆಧರಿಸಿ ದೂರದರ್ಶನದಲ್ಲಿ ‘ಉಡಾನ್’ ಎಂಬ ಧಾರಾವಾಹಿ ಕೂಡ ಪ್ರಸಾರವಾಗಿದೆ.
1975 ರಲ್ಲಿ ಲಕ್ನೋ ಜಿಲ್ಲೆಯ ಮಾಲಿಹಾಬಾದ್ನಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು ಅವರ ಮೊದಲ ಪೋಸ್ಟಿಂಗ್. ಈ ಪ್ರದೇಶವು ದಶೇರಿ ಮಾವಿನಹಣ್ಣು ಮತ್ತು ಡಕಾಯಿತರಿಗೆ ಹೆಚ್ಚು ಹೆಸರುವಾಸಿಯಾಗಿದೆ. ಅಲ್ಲಿ ಇವರು ನೇಮಕಗೊಂಡ ಒಂದು ವರ್ಷದೊಳಗೆ, 13 ಜನ ಡಕಾಯಿತರನ್ನು ಪೊಲೀಸರು ಬಂಧಿಸಿದರು. ಅದರಲ್ಲಿ ಒಬ್ಬ ಪ್ರಮುಖ ಡಕಾಯಿತ ಮಖನ್ ಸಿಂಗ್. ಈತ ಒಂದು ದಶಕದಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದ.
ಏಳು ಬಾರಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಸೈಯದ್ ಮೋದಿಯವರ ಕ್ರೂರ ಹತ್ಯೆ ಪ್ರಕರಣ ತನಿಖೆ ಅವರ ವೃತ್ತಿ ಜೀವನದಲ್ಲಿ ನಿರ್ವಹಿಸಿದ ಪ್ರಮುಖ ಪ್ರಕರಣಗಳಲ್ಲಿ ಒಂದು. 1987 ರಲ್ಲಿ ಲಕ್ನೋದಲ್ಲಿ ಅಪರಿಚಿತ ಹಲ್ಲೆಕೋರರು ಗುಂಡಿಕ್ಕಿ ಸೈಯದ್ ಮೋದಿ ಅವರನ್ನು ಕೊಂದಿದ್ದರು. ಸಿಬಿಐನ ಅಪರಾಧ ಶಾಖೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾಂಚನ ಅವರು ಈ ಪ್ರಕರಣದ ತನಿಖೆ ನಡೆಸಿದರು. ಅಲ್ಲದೇ ಇವರು, ರಿಲಾಯನ್ಸ್-ಬಾಂಬೆ ಡೈಯಿಂಗ್ ಪ್ರಕರಣದಂತಹ ಅನೇಕ ಹೈಪ್ರೊಫೈಲ್ ಪ್ರಕರಣಗಳ ತನಿಖೆಯನ್ನೂ ನಡೆಸಿದ್ದಾರೆ.
ಅವರ ವೃತ್ತಿಜೀವನದಲ್ಲಿನ ಸಾಧನೆ ಪರಿಗಣಿಸಿ 1997ರಲ್ಲಿ ಅವರ ವಿಶೇಷ ಸೇವೆಗಾಗಿ ಪೊಲೀಸ್ ಪದಕವನ್ನು ನೀಡಲಾಗಿತ್ತು. ಅಲ್ಲದೆ ಅವರಿಗೆ ರಾಜೀವ್ ಗಾಂಧಿ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿತ್ತು. ಮಹಿಳೆಯರ ವಿಷಯದಲ್ಲಿ ಅತ್ಯಂತ ಸೂಕ್ಷ್ಮ ಸಂವೇದನೆಯನ್ನು ಹೊಂದಿದ್ದ ಕಾಂಚನ ಅವರು ಅಪಾಯದಲ್ಲಿದ್ದ ಅನೇಕ ಮಹಿಳೆಯರಿಗೆ ರಕ್ಷಣೆಯನ್ನು ಒದಗಿಸಿದ್ದಾರೆ, ಲೈಂಗಿಕ ಕಿರುಕುಳ, ದೌರ್ಜನ್ಯಗಳಿಗೆ ಒಳಗಾದ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.