ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಲ್ಕು ವಿಶ್ವ ನಾಯಕರನ್ನು ಭೇಟಿ ಮಾಡಲಿದ್ದಾರೆ ಮತ್ತು ಫ್ರಾನ್ಸ್ನ ಬಿಯರಿಟ್ಜ್ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಎರಡು ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೆನೆಗಲ್ ಅಧ್ಯಕ್ಷ ಮ್ಯಾಕಿ ಸಾಲ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮತ್ತು ಚಿಲಿಯ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಅವರನ್ನು ಭೇಟಿ ಮಾಡಲಿದ್ದಾರೆ.
ಹವಾಮಾನ, ಜೀವವೈವಿಧ್ಯ, ಸಾಗರಗಳು ಮತ್ತು ಡಿಜಿಟಲ್ ರೂಪಾಂತರಗಳ ಕುರಿತ ಎರಡು ಅಧಿವೇಶನಗಳಲ್ಲಿ ಅವರು ಇಂದು ಭಾಗಿಯಾಗಲಿದ್ದಾರೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮೋದಿ ಸಭೆ ಮಧ್ಯಾಹ್ನ 3.45 ಕ್ಕೆ ಸಭೆ ಆರಂಭವಾಗಲಿದ್ದು, ಸಂಜೆ 4.30 ರವರೆಗೆ ಮುಂದುವರಿಯಲಿದೆ. ಇದು ಇಬ್ಬರು ಮುಖಂಡರ ನಡುವಣ ಈ ವರ್ಷದ ಎರಡನೇಯ ಸಭೆ ಆಗಿದೆ. ಎರಡು ತಿಂಗಳ ಹಿಂದೆ ಒಸಾಕಾದಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಇವರಿಬ್ಬರು ಪರಸ್ಪರ ಭೇಟಿಯಾಗಿದ್ದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370 ನೇ ವಿಧಿಯನ್ನು ಭಾರತ ರದ್ದುಪಡಿಸಿದ ನಂತರ ಮೋದಿ ಮತ್ತು ಟ್ರಂಪ್ ಭೇಟಿಯಾಗುತ್ತಿರುವುದು ಇದೇ ಮೊದಲು. ಭಾರತದ ನಿಲುವಿನ ಹಿನ್ನಲೆಯಲ್ಲಿ ಪ್ರಸ್ತುತ ಉದ್ವಿಗ್ನಗೊಂಡಿರುವ ಭಾರತ ಪಾಕಿಸ್ಥಾನ ಪರಿಸ್ಥಿತಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
“ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಅನ್ನು ರದ್ದುಗೊಳಿಸುವ ಭಾರತದ ನಿರ್ಧಾರವು ಆಂತರಿಕ ನಿರ್ಧಾರವಾಗಿದೆ, ಆದರೆ ಖಂಡಿತವಾಗಿಯೂ ಪ್ರಾದೇಶಿಕ ಪರಿಣಾಮಗಳನ್ನು ಹೊಂದಿದೆ. ಈ ಮಹತ್ವದ ನಡೆಯ ಹಿನ್ನಲೆಯಲ್ಲಿ ಪ್ರಾದೇಶಿಕ ಉದ್ವಿಗ್ನತೆಯನ್ನು ಶಾಂತಗೊಳಿಸಲು ಪ್ರಧಾನಿ ಮೋದಿ ಯಾವ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಕೇಳಲು ಅಧ್ಯಕ್ಷ ಟ್ರಂಪ್ ಬಯಸುತ್ತಾರೆ” ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಮೂರು ಬಾರಿ ಮುಂದಿಟ್ಟಿದ್ದಾರೆ. ಆದರೆ ಭಾರತ ಇದನ್ನು ನಿರಾಕರಿಸಿದೆ. ಪಾಕಿಸ್ಥಾನದೊಂದಿಗಿನ ಸಂಬಂಧಗಳು ಶಿಮ್ಲಾ ಮತ್ತು ಲಾಹೋರ್ ಒಪ್ಪಂದಗಳನ್ನು ಅನುಸರಿಸುತ್ತವೆ, ಅದರ ಪ್ರಕಾರ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಸ್ವೀಕಾರಾರ್ಹವಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಟ್ರಂಪ್ ಜೊತೆಗಿನ ಇಂದಿನ ಸಭೆಯಲ್ಲಿ ವ್ಯಾಪಾರ, ರಕ್ಷಣಾ ಸಂಬಂಧಗಳು ಮತ್ತು ಅಫ್ಘಾನ್ ಶಾಂತಿ ಪ್ರಕ್ರಿಯೆ ಬಗ್ಗೆಯೂ ಚರ್ಚೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.