ಕಳೆದ ವರ್ಷ, ಚೀನಾದ ಸ್ಮಾರ್ಟ್ಫೋನ್ ತಯಾರಕ ಹುವೇಯಿ ಅಮೆರಿಕದ ಟೆಕ್ ದೈತ್ಯ ಆ್ಯಪಲ್ ಅನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕನಾಗಿ ಹೊರಹೊಮ್ಮಿದೆ. ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ಗಿಂತ ಇದು ಹಿಂದೆ ಇದೆ. ತ್ರೈಮಾಸಿಕದಲ್ಲಿ ಹುವೇಯಿಯ ಜಾಗತಿಕ ಮಾರುಕಟ್ಟೆ ಪಾಲು 15.8% ಕ್ಕೆ ಏರಿದೆ, ಇದು ಒಂದು ವರ್ಷದ ಹಿಂದೆ ಇದ್ದ 11.0% ಕ್ಕಿಂ ತೀವ್ರ ಏರಿಕೆಯಾಗಿದೆ.
ಆದರೆ ಹುವೇಯಿಯ ಅದೃಷ್ಟ ಕಳೆದ ಒಂದು ವರ್ಷದಿಂದ ದಕ್ಷಿಣ ದಿಕ್ಕಿನತ್ತವೂ ಸಾಗಿದೆ. ಆದರೆ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಿರುವ ಸುರಕ್ಷತಾ ಉಲ್ಲಂಘನೆಯ ವಿಷಯವು ಹುವೇಯಿಗೆ ಬಹಳ ಹಾನಿಕಾರಕವಾಗಿ ಪರಿಣಮಿಸಿದೆ. ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಆಸ್ಟ್ರೇಲಿಯಾದಂತಹ ಹುವೇಯಿಯ ಅನೇಕ ಪ್ರಮುಖ ಮಾರುಕಟ್ಟೆಗಳು ಸುರಕ್ಷತಾ ವಿಷಯಗಳ ಹಿನ್ನಲೆಯಲ್ಲಿ ಹುವೇಯಿಯನ್ನು ನಿಷೇಧಿಸಿವೆ.
ಚೀನಾದ ಸ್ಮಾರ್ಟ್ಫೋನ್ ದೈತ್ಯನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ ತನ್ನ ಯುರೋಪಿಯನ್ ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿದೆ. ಯುರೋಪಿಯನ್ ಒಕ್ಕೂಟವು ಹುವೇಯಿಯನ್ನು ಕಪ್ಪುಪಟ್ಟಿಗೆ ಸೇರಿಸಿಲ್ಲವಾದರೂ, ಕೆಲವು ದೇಶಗಳು ನಿಯಂತ್ರಣ ವಿಧಿಸುವ ಭಾವನೆಯನ್ನು ವ್ಯಕ್ತಪಡಿಸಿವೆ ಮತ್ತು ಚೀನಾದ ಸ್ಮಾರ್ಟ್ಫೋನ್ ದೈತ್ಯರ ಮೇಲೆ ತೀವ್ರ ಪರಿಣಾಮ ಬೀರುವಂತಹ ನಿಯಮಗಳನ್ನು ಅವುಗಳು ಪರಿಚಯಿಸಲು ಮುಂದಾಗಿವೆ.
ಗೂಢಚರ್ಯೆ ಮತ್ತು ಇರಾನ್ನೊಂದಿಗೆ ವ್ಯವಹಾರ ನಡೆಸಿದ ಆರೋಪದ ಮೇರೆಗೆ ಅಮೆರಿಕಾವು ಹುವೇಯಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಇದರಿಂದಾಗಿ ಹುವೇಯಿ ತೀವ್ರ ನಷ್ಟಕ್ಕೀಡಾಗಿದೆ. ತನ್ನ ಉತ್ಪಾದನಾ ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಅಮೆರಿಕಾದ ಕಂಪನಿಗಳೊಂದಿಗೆ ಇನ್ನು ಮುಂದೆ ವ್ಯಾಪಾರ ಮಾಡಲು ಸಾಧ್ಯವಾಗದ ಕಾರಣ ಕಂಪನಿಯು ಈ ನಿಷೇಧದಿಂದಾಗಿ ತೀವ್ರವಾಗಿ ಹಾನಿಗೊಳಗಾಗಿದೆ.
ಅಮೆರಿಕಾದ ನಿಷೇಧದಿಂದಾಗಿ, ಗೂಗಲ್ ಆಂಡ್ರಾಯ್ಡ್ ಸಿಸ್ಟಮ್ನಂತಹ ಕಂಪೋನೆಂಟ್ ಮತ್ತು ಸಾಫ್ಟ್ವೇರ್ ಹುವೇಯಿ ಉತ್ಪಾದಿಸುವ ಸ್ಮಾರ್ಟ್ಫೋನ್ಗಳಲ್ಲಿ ಅಪ್ಡೇಟ್ ಆಗುವುದಿಲ್ಲ. ಗೂಗಲ್ ಮ್ಯಾಪ್ ಮತ್ತು ಜಿಮೇಲ್ನಂತಹ ಪ್ರಮುಖ ಅಪ್ಲಿಕೇಶನ್ಗಳು ಹಾನರ್ 20 ನಲ್ಲಿ ಕಾರ್ಯನಿರ್ವಹಿಸುವುದಿಲ್ಲ.
ಕಂಪನಿಯು ತನ್ನ 5 ಜಿ ಪ್ರಯೋಗಗಳಿಗೆ ಅವಕಾಶ ನೀಡುವಂತೆ ಭಾರತ ಸರ್ಕಾರವನ್ನು ಕೇಳಿದೆ. “ಹುವೇಯಿ 5 ಜಿ ಪ್ರಯೋಗಗಳಲ್ಲಿ ಭಾಗವಹಿಸಲು ಅತೀ ಉತ್ಸಾಹದಿಂದ ಕಾಯುತ್ತಿದೆ” ಎಂದು ಕಂಪನಿಯ ಇಂಡಿಯಾ ಸಿಇಒ ಜೇ ಚೆನ್ ಹೇಳಿದ್ದಾರೆ. ಆದರೆ, ನಿರ್ಣಾಯಕ ಭದ್ರತಾ ಡೇಟಾವನ್ನು ಚೀನಾದ ಸರ್ಕಾರಕ್ಕೆ ವರ್ಗಾಯಿಸುವ ಅನುಮಾನದ ಮೇಲೆ ಅನೇಕ ದೇಶಗಳು ಇದಕ್ಕೆ ನಿಷೇಧವನ್ನು ಹೇರಿರುವ ಹಿನ್ನಲೆಯಲ್ಲಿ ಭಾರತ ಸರ್ಕಾರ ಇನ್ನೂ ಇದಕ್ಕೆ ಅನುಮತಿಯನ್ನು ನೀಡಿಲ್ಲ.
ಬ್ಲೂಮ್ಬರ್ಗ್ನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ನೀತಿಯ ಅಭಿಪ್ರಾಯ ಅಂಕಣಕಾರ ಎಲಿ ಲೇಕ್ ಅವರ ಪ್ರಕಾರ, “ಹುವೇಯಿ ಟೆಕ್ ಕಂಪನಿಯು ಯುಎಸ್ನಲ್ಲಿ ತನ್ನ ತಂತ್ರಜ್ಞಾನದ ಮೂಲಕ ಗುಪ್ತಚರವನ್ನು ಸಂಗ್ರಹಿಸುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇರುವುದರಿಂದ ಹುವೇಯಿ ಮೇಲೆ ಡೊನಾಲ್ಡ್ ಟ್ರಂಪ್ ನಿಷೇಧ ಅಗತ್ಯವಾಗಿತ್ತು” ಎಂದಿದ್ದಾರೆ.
ಹುವೇಯಿ ಮೇಲಿನ ಬೇಹುಗಾರಿಕೆ ಮತ್ತು ಭದ್ರತಾ ಉಲ್ಲಂಘನೆಯ ಆರೋಪವು ಆ ಕಂಪನಿಯ ಹಿನ್ನಡೆಗೆ ಕಾರಣವಾಗಿದೆ. ಹುವೇಯಿ ಪ್ರಪಂಚದಾದ್ಯಂತದ ಬಳಕೆದಾರರ ಖಾಸಗಿ ಡೇಟಾದ ಬಗೆಗಿನ ಮಾಹಿತಿಯನ್ನು ಅನಧಿಕೃತವಾಗಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಗೆ ನೀಡಿದೆ. ಕಂಪನಿಯ ಭದ್ರತಾ ಉಲ್ಲಂಘನೆ ಕುರಿತು ವಿಶ್ವದಾದ್ಯಂತದ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಚರ್ಚೆ ನಡೆಸುತ್ತಿವೆ. ಯುಎಸ್ ಸೇರಿದಂತೆ ಕೆಲವು ಸರ್ಕಾರಗಳು ಈ ನಿಟ್ಟಿನಲ್ಲಿ ಹುವೇಯಿ ವಿರುದ್ಧ ಕ್ರಮ ಜರುಗಿಸಿವೆ, ಇನ್ನೂ ಕೆಲವು ಸರ್ಕಾರಗಳು ಈ ಕಂಪನಿಯ ಬಗ್ಗೆ ಎಚ್ಚರಿಕೆಯಿಂದ ಇವೆ.
ಕಂಪನಿಯ ಬಗ್ಗೆ ಭಾರತ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದ ಕಾರಣ, ಚೀನಾದ ಅಧಿಕಾರಿಗಳು ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಅವರನ್ನು ಭೇಟಿಯಾಗಿದ್ದಾರೆ ಮತ್ತು ಒಂದು ವೇಳೆ ಭಾರತವು ಹುವೇಯಿ ಅನ್ನು ನಿಷೇಧಿಸಿದ್ದರೆ ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳು ತೀವ್ರ ಸ್ವರೂಪದ ಹಿನ್ನಡೆಯನ್ನು ಅನುಭವಿಸುತ್ತವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಹುವೇಯಿಗಾಗಿ ಚೀನಾ ಅನುಸರಿಸುತ್ತಿರುವ ಆಕ್ರಮಣಕಾರಿ ಧೋರಣೆ ಕೇವಲ ಕಂಪನಿಗಾಗಿನ ಲಾಬಿ ಎಂದು ಅನಿಸುವುದಿಲ್ಲ. 5 ಜಿ ತಂತ್ರಜ್ಞಾನದಲ್ಲಿನ ಪ್ರಾಬಲ್ಯವನ್ನು ಸಾಧಿಸುವ ಮೂಲಕ ಸಿಲಿಕಾನ್ ವ್ಯಾಲಿಯನ್ನು ರಿಪ್ಲೇಸ್ ಮಾಡುವುದು ಚೀನಾದ ಭವ್ಯ ಯೋಜನೆಯಾಗಿದೆ. ಇದು ಕ್ಸಿ ಜಿನ್ಪಿಂಗ್ ಅವರ ಮಹತ್ವಾಕಾಂಕ್ಷೆಯ ವಿದೇಶಾಂಗ ನೀತಿಯ ಕಾರ್ಯಸೂಚಿಯ ಒಂದು ಭಾಗವೂ ಆಗಿದೆ. ಚೀನೀ ಕಮ್ಯುನಿಸ್ಟ್ ಪಕ್ಷವು “ಕಣ್ಗಾವಲು ಮತ್ತು ಗೂಢಚರ್ಯೆಗೆ ತಮ್ಮನ್ನು ಒಡ್ಡಿಕೊಳ್ಳುವ ಸಲುವಾಗಿ ಬಲಿಷ್ಠ ಶಸ್ತ್ರಾಸ್ತ್ರ ಹೊಂದಿರುವ ದೇಶಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದೆ” ಎಂದು ಯುಎಸ್ ಕಾಂಗ್ರೆಸ್ಸಿಗರು ಹೇಳುತ್ತಾರೆ.
ಈ ಎಲ್ಲಾ ಕಾರಣಗಳಿಂದಲೂ, ಭಾರತ ಸರ್ಕಾರವು ಹುವೇಯಿ ಮೇಲೆ ‘ಸಂಪೂರ್ಣ ನಿಷೇಧ’ ವಿಧಿಸಬೇಕು. ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದು ಉಚಿತವಲ್ಲ.
ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಈಗಾಗಲೇ ಹುವೇಯಿಯ 5 ಜಿ ತಂತ್ರಜ್ಞಾನದ ಬಗ್ಗೆ ಭದ್ರತಾ ಕಾಳಜಿಯನ್ನು ವ್ಯಕ್ತಪಡಿಸಿದೆ. “ಭದ್ರತೆಯ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಎನ್ಎಸ್ಎಬಿ ಸದಸ್ಯ ಮತ್ತು ಐಐಟಿ ಮದ್ರಾಸ್ನಲ್ಲಿ ಪ್ರಾಧ್ಯಾಪಕರಾಗಿರುವ ವಿ. ಕಾಮಕೋಟಿ ಅವರು ಹೇಳಿದ್ದಾರೆ. ದೇಶವನ್ನು ಸುರಕ್ಷಿತವಾಗಿಸಲು 5 ಜಿ ತಂತ್ರಜ್ಞಾನದ ದೇಶೀಕರಣವನ್ನೂ ಅವರು ಪ್ರತಿಪಾದಿಸಿದ್ದಾರೆ.
ಸೂಕ್ಷ್ಮ ತಂತ್ರಜ್ಞಾನಗಳಲ್ಲಿ ಚೀನಾವನ್ನು ಅವಲಂಬಿಸುವುದರ ವಿರುದ್ಧ ಸ್ವದೇಶಿ ಜಾಗರಣ್ ಮಂಚ್ (ಎಸ್ಜೆಎಂ) ಎಚ್ಚರಿಕೆ ನೀಡಿದೆ. “ಸ್ವದೇಶಿ ಜಾಗರಣ್ ಮಂಚ್ ದೇಶೀಕರಣ ಮತ್ತು ಸ್ವದೇಶಿ ಕರೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ, ಏಕೆಂದರೆ ಭಾರತೀಯ ಕಂಪನಿಗಳು 100% ಸ್ಥಳೀಯ ಜಾಲವನ್ನು ನಿರ್ಮಿಸುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿವೆ” ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಸಹ ಸಂಚಾಲಕ ಅಶ್ವಿನಿ ಮಹಾಜನ್ ಹೇಳಿದ್ದಾರೆ.
ಭಾರತೀಯ ಟೆಲಿಕಾಂ ಕಂಪನಿಗಳು ಚೀನಾದ ಕಂಪನಿಯನ್ನು 5ಜಿ ನೆಟ್ವರ್ಕ್ನಿಂದ ಹೊರಗಿಡಲು ಯೋಜಿಸುತ್ತಿವೆ. “ಹುವೇಯಿ ಉಪಕರಣಗಳಿಗೆ ಸಂಬಂಧಿಸಿದಂತೆ ಜಾಗತಿಕ ಭದ್ರತಾ ಕಾಳಜಿಗಳು ಹೇಗಿವೆ ಎಂಬುದನ್ನು ಗಮನಿಸಿದರೆ, ಯಾರೂ ಸಂದಿಗ್ಧತೆಯಲ್ಲಿ ಸಿಲುಕಿಕೊಳ್ಳಲು ಬಯಸುವುದಿಲ್ಲ. 5 ಜಿ ನೆಟ್ವರ್ಕ್ನಲ್ಲಿ ಹುವೇಯಿ ಅನ್ನು ದೂರವಿಡುವುದೇ ಸುರಕ್ಷಿತ ವಿಧಾನವಾಗಿದೆ ”ಎಂದು ಹಿರಿಯ ಟೆಲಿಕಾಂ ಕಾರ್ಯನಿರ್ವಾಹಕರೊಬ್ಬರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.