ನಾವು ಗಳಿಸಿದ್ದನ್ನೆಲ್ಲ ಉಣ್ಣಾಕ ಆಗೋದಿಲ್ಲ, ಪಡೆದು ಬಂದಿದ್ದನ್ನ ಮಾತ್ರ ಇಲ್ಲಿ ಉಣಬಹುದು. ಭಾನುವಾರ (ಜುಲೈ 28) ತಮ್ಮ 57ನೇ ವಯಸ್ಸಿನಲ್ಲಿ ನಿಧನರಾದ, ಹಿರಿಯ ಸಾಮಾಜಿಕ ಕಾರ್ಯಕರ್ತ ಕಿಶೋರಸಿಂಗ್ ರಾಮಸಿಂಗ್ ಭಾತಖಂಡೆ ತಮ್ಮ ಸಹವರ್ತಿಗಳಿಗೆ ಸದೈವ ನೆನಪಿಸುತ್ತಿದ್ದ ಮಾತು.
ಸ್ವತಃ ವಿಕಲಚೇತನರಾದರೂ, ಅಂಗವೈಕಲ್ಯ ಮೆಟ್ಟಿ ನಿಂತವರು. ಅನುಕಂಪ ತೋರಿದರೆ ಅವರಿಗೆ ಸಿಟ್ಟು ಬರುತ್ತಿತ್ತು. ಗುಡ್ಡದೂರು ಧಾರವಾಡದಲ್ಲಿ ಒಂದೇ ಕಾಲಿನಿಂದ ಸೈಕಲ್ ಓಡಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ನೀಡಿದ ಅನ್ಯಾನ್ಯ ಜವಾಬ್ದಾರಿಗಳನ್ನು 30 ವರ್ಷಗಳಿಗೂ ಅಧಿಕ ಕಾಲ ನಿಭಾಯಿಸಿದವರು. ಸ್ವಯಂಸೇವಕರು ಮಾತ್ರವಲ್ಲ, ಅವರ ಕುಟುಂಬದವರೊಟ್ಟಿಗೂ ಸಂಬಂಧ ಇಟ್ಟುಕೊಂಡಿದ್ದ ವಿಶಿಷ್ಠ ‘ಸಂಪರ್ಕ ಪ್ರಮುಖ್’ ಕಿಶೋರ್ಜೀ.
ಮೀನಿನಂತೆ ಈಜುವುದನ್ನು ಕರಗತ ಮಾಡಿಕೊಂಡು, ಜೀವ ರಕ್ಷಾ ಕೌಶಲ ಎಂದು ಮನವರಿಕೆ ಮಾಡಿ, ಹಲವರಿಗೆ ಈಜುವುದನ್ನು ಕಲಿಸಿದವರು. ವ್ಯರ್ಥ ಖರ್ಚು ಮಾಡಬಾರದು; ಆದರೆ, ಒಳ್ಳೆಯ ಪುಸ್ತಕಗಳನ್ನು ಕೊಂಡು ಓದಬೇಕು ಎಂದು ಕಿರಿಯರಿಗೆ ಒತ್ತಾಯ ಮಾಡುತ್ತಿದ್ದ, ಹೊಸ ಪುಸ್ತಕ ಓದಲು ಶಿಫಾರಸು ಮಾಡುತ್ತಿದ್ದ ಅಣ್ಣ.
ಇಂಡಿಯನ್ ಬ್ಯಾಂಕ್ ಧಾರವಾಡ ಶಾಖೆಯಲ್ಲಿ ಪ್ರಬಾರಿ ಪ್ರಬಂಧಕರೂ ಆಗಿದ್ದ ಕಿಶೋರ್ಜೀ, ಬಹುತೇಕ ಎಲ್ಲ ಗ್ರಾಹಕರೊಂದಿಗೆ ಆಪ್ತ ಸಂಬಂಧ ಹೊಂದಿದ್ದವರು. ಬಹುತೇಕ ಹಿರಿಯ ತಲೆಮಾರಿನ ಗ್ರಾಹಕರ ಖಾತೆ ಸಂಖ್ಯೆ ಇವರಿಗೆ ಬಾಯಿಪಾಠ! ಕೆಲವೊಮ್ಮೆ ನಿಯಮಗಳನ್ನು ಸಡಿಲಿಸಿ ಸಹಾಯ ಮಾಡುವಷ್ಟು ಸಂಬಂಧ ಬಾಳಿಸುವ ಕಳಕಳಿ. ಪಿಂಚಣಿ ಖಾತೆ ತೆರೆಯಲು ಬಹುತೇಕ ಬ್ಯಾಂಕ್ಗಳವರು ಮನಸ್ಸು ಮಾಡುವುದಿಲ್ಲ. ಆದರೆ, ಇವರು ಆಪತ್ಕಾಲದಲ್ಲಿ ಕುಟುಂಬಕ್ಕೊಂದು ಸಹಾಯ ಎಂಬಂತೆ ಖಾತೆ ತೆರೆಯಲು ಮುಂದಾಗುತ್ತಿದ್ದರು. ‘ಇನಿಶಿಯಲ್ ಡೆಪಾಸಿಟ್ ಕೂಡ ತುಂಬುತ್ತಿದ್ದುದು ಇವರೇ!
ಅಂಗ ವೈಕಲ್ಯ ಇರುವವರನ್ನು ಸಮಾಜ ಸರಿಯಾಗಿ ನಡೆಸಿಕೊಳ್ಳದಿದ್ದರೆ, ವೈಕಲ್ಯವಿರುವುದು ವ್ಯಕ್ತಿಯಲ್ಲಲ್ಲ.. ಸಮಾಜದಲ್ಲಿ! ಎಂಬ ಸ್ಪಷ್ಟ ಕಲ್ಪನೆ ಹೊಂದಿದ್ದ ಕಿಶೋರ್ಜೀ, ಬಹಳ ಪ್ರಭಾವಶಾಲಿ ಅಂತಲ್ಲ; ಪ್ರೀತಿಯ ಸಂಬಂಧಗಳ ಮೇಲೆಯೇ ಅನೇಕ ಬಡ ವಿದ್ಯಾರ್ಥಿಗಳಿಗೆ ಪ್ರವೇಶಾತಿ, ಶುಲ್ಕ ವಿನಾಯಿತಿ, ಧನ ಸಹಾಯ, ವಾರಾನ್ನದ ಮನೆ ಗೊತ್ತು ಪಡಿದಸುವುದು, ತಂಗುವ ವ್ಯವಸ್ಥೆ, ಪುಸ್ತಕ ಕೊಡಿಸುವುದು, ದೇಣಿಗೆ ನೀಡುವವರಿಂದ ಸಂಗ್ರಹಿಸಿ ಪಾತ್ರರಿಗೆ ದಾನ.. ತುರ್ತು ಸಂದರ್ಭದಲ್ಲಿ ರಕ್ತದಾನ, ಸಂಕಷ್ಟದಲ್ಲಿರುವ ಸಹವರ್ತಿಗಳಿಗೆ ಸಹಾಯಹಸ್ತ ಇವು ಕಿಶೋರ್ಜೀ ಗುಣ. ಜೋಡಿಸುವ ಕಲೆ ಅವರಿಗೆ ಜನ್ಮಜಾತವಾಗಿತ್ತು. ತುರ್ತು ಸಂದರ್ಭಗಳಲ್ಲಿ ಸಾಲಕ್ಕೆ ಸಾಕ್ಷಿ ಸಹ ಹಾಕಿ ಸಂಕಷ್ಟಕ್ಕೆ ಸಿಲುಕಿದ್ದೂ ಇದೆ.
ಶಿವಕೃಪಾ ಟ್ರಸ್ಟ್ ವಿಶ್ವಸ್ಥರಾಗಿ, ಭಾರತೀಯ ಶಿಕ್ಷಣ ಪ್ರಸಾರ ಮಂಡಳದ ಆದರ್ಶ ಬಾಲಿಕಾ ಪ್ರೌಢ ಶಾಲೆ ಆಡಳಿತ ಮಂಡಳಿ ಸದಸ್ಯರಾಗಿ, ವಿಕಲ ಚೇತನರ ಸಂಘಟನೆಗಾಗಿ ಮೀಸಲಿರುವ ಸಕ್ಷಮದ ಪ್ರಾಂತ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸಮಾಜಮುಖಿ ಜೀವನ ನಡೆಸಿದವರು. ಸ್ವಂತಕ್ಕೆ ಸ್ವಲ್ಪ; ಸಮಾಜಕ್ಕೆ ಸರ್ವಸ್ವ ಕಿಶೋರ್ಜೀ ಅವರ ಜೀವನ ಪದ್ಧತಿಯಾಗಿತ್ತು.
ಅವರ ನಡೆ-ನುಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಗೆ ಮಾದರಿ ಹಾಗೂ ಪ್ರೇರಣಾದಾಯಿ. ಯಾವುದೇ ಅಪೇಕ್ಷೆ ಇಟ್ಟುಕೊಳ್ಳದೇ ನಿಸ್ವಾರ್ಥ ಭಾವದಿಂದ ಸಮಾಜ ಸೇವಾ ಕೈಂಕರ್ಯಯ ಮಾಡುವುದು ಹೇಗೆ? ಎಂಬ ಬಗ್ಗೆ ಕಿಶೋರ್ಜೀ ಒಂದು ಗುಣಮಟ್ಟ ವ್ಯಾಖ್ಯಾನಿಸಿದ್ದಾರೆ.
ಅಲ್ಪಕಾಲಿಕ ಅಸೌಖ್ಯ ತದನಂತರ ಅವರ ಅಕಾಲಿಕ ನಿರ್ಗಮನ ಸೃಷ್ಟಿಸಿರುವ ನಿರ್ವಾತ ತುಂಬಿಬಾರದ ಹಾನಿ. ಮೂರು ಪೀಳಿಗೆಯ ಸ್ವಯಂಸೇವಕರೊಂದಿಗೆ ಅವರು ಹೊಂದಿದ್ದ ಆತ್ಮೀಯ ಸಂಪರ್ಕ ಮತ್ತು ಸಂಬಂಧದ ಮೂರು ಕೊಂಡಿಗಳು ಏಕ ಕಾಲದಲ್ಲಿ ಕಳಚಿದಂತಾಗಿದೆ. ವಿನಾ ದೈನ್ಯೇಯನ ಜೀವನಂ; ಅನಾಯಾಸೇನ ಮರಣಂ ಜೀವನ ಧ್ಯೇಯಕ್ಕೆ ಕಿಶೋರ್ಜೀ ಬದುಕು ಅನ್ವರ್ಥಕ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೋಟ್ಯಂತರ ಸ್ವಯಂಸೇವಕರ ಪರವಾಗಿ ಅವರಿಗೆ ನುಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸಮಾಜಮುಖಿ ಜೀವನ ಪದ್ಧತಿಯ ಒಂದು ಮಾದರಿ ಕಿಶೋರ್ಸಿಂಗ್ ಸೃಷ್ಟಿಸಿದ್ದಾರೆ. ಇಡೀ ಸಮಾಜ ತನ್ನ ಕುಟುಂಬ ಎಂದು ಪರಿಭಾವಿಸುವ ಅವರ ಮನೋಧರ್ಮ ಮನನೀಯ. ಸಂಘದ ಸಂಸ್ಕಾರವದು. ಸರ್ವೇ ಜನಾಃ ಸುಖಿನೋ ಭವಂತು ಮಾತಿನ ನಿಹಿತಾರ್ಥವನ್ನು ಜೀವನ ಧರ್ಮವಾಗಿ ಸ್ವೀಕರಿಸಿದ್ದ ಕಿಶೋರ್ಜೀ ನನಗೆ ಗುರು ಸಮಾನರು.
ಮಾನ್ಯ ಶಂಕರಾನಂದರು, ಅಖಿಲ ಭಾರತೀಯ ಸಹ ಸಂಘಟನಾ ಮಂತ್ರಿ,
ಭಾರತೀಯ ಶಿಕ್ಷಣ ಮಂಡಲ, ಹೊಸ ದಿಲ್ಲಿ.
ಕಿಶೋರ್ಸಿಂಗ್ ಭಾತಖಂಡೆ ಅವರ ನಿಧನ ಸಮಾಜಕ್ಕಾದ ಬಹುದೊಡ್ಡ ಹಾನಿ. ಇಂಥವರಿಂದ ನಮ್ಮ ಸಮಾಜದಲ್ಲಿ ಸಮಷ್ಠಿ ಪ್ರಜ್ಞೆ, ಕುಟುಂಬ ಪ್ರಬೋಧನೆ, ಪರಸ್ಪರ ಸಹಕಾರಿ ಮನೋಭಾವ ಪಲ್ಲವಿಸಿ, ಸಂಬಂಧಗಳನ್ನು ವ್ಯವಹಾರದಾಚೆಯೂ ಬಾಳಿಸುವ ಸಂಸ್ಕಾರ ಕಿರಿ ಪೀಳಿಗೆಗೆ ಕೈ ದೀವಿಗೆ ಪ್ರಾಪ್ತವಾಗುತ್ತದೆ. ಗೋಡೆಗಳನ್ನು ಕಟ್ಟುವವರ ಮಧ್ಯೆ, ಸಮಾಜವನ್ನು ಕೆಡುವವರ ಮಧ್ಯೆ, ಭಾವೈಕ್ಯ ಸೇತುವೆಯಾಗಿ ಬಾಳುವ ಇಂಥವರು ಪರೋಪಕಾರದ ಆಶಯಕ್ಕೆ ಎಣ್ಣೆ ಬತ್ತಿಯಾದವರು.
ಡಾ. ಹ.ವೆಂ. ಕಾಖಂಡಿಕಿ, ಹಿರಿಯ ಸಾಹಿತಿ, ಧಾರವಾಡ
ಕಿಶೋರ್ಸಿಂಗ್ ರಾಮಸಿಂಗ್ ಭಾತಖಂಡೆ, ಅಲ್ಪಕಾಲಿಕ ಅಸೌಖ್ಯದಿಂದ ಬಳಲಿ ಭಾನುವಾರ (ಜುಲೈ 28) ಬೆಳಗ್ಗೆ 10.30 ಗಂಟೆಗೆ ಧಾರವಾಡದ ಸತ್ತೂರಿನ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾದರು. ಪಾರ್ಥಿವ ಶರೀರದ ಅಂತ್ಯಕ್ರಿಯೆ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಸೋಮವಾರ (ಜುಲೈ 29) ಬೆಳಗ್ಗೆ 8.30ಕ್ಕೆ ನೆರವೇರಿತು. ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ಮೂವರು ಸಹೋದರರು, ಇಬ್ಬರು ಸಹೋದರಿಯರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಂಧುಗಳನ್ನು ಅಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.