ನಮ್ಮ ದೇಶದಲ್ಲಿ ಅದೆಷ್ಟೋ ಮಂದಿ ಚಿಂದಿ ಆಯುತ್ತಾ ಜೀವನ ಕಳೆಯುತ್ತಿದ್ದಾರೆ. ಆದರೆ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಕೆಲಸ ಮಾಡುವುದು ಇವರಿಗೆ ಅನಿವಾರ್ಯ. ಒಂದು ದಿನ ಚಿಂದಿ ಆಯದಿದ್ದರೂ ಉಪವಾಸ ಮಲಗಬೇಕಾದ ಸ್ಥಿತಿಯಲ್ಲಿ ಇವರಿರುತ್ತಾರೆ. ವರದಿಗಳ ಪ್ರಕಾರ, ನಮ್ಮ ದೇಶದಲ್ಲಿ ಚಿಂದಿ ಆಯುವ ಜನರ ಸಂಖ್ಯೆ ಸುಮಾರು 1.5 ಮಿಲಿಯನ್ ನಿಂದ 4 ಮಿಲಿಯನ್.
ನಮ್ಮ ದೇಶದ ಸ್ವಚ್ಛತಾ ಕಾರ್ಯದಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುವ ಇವರು, ಕೆಲವೊಮ್ಮೆ ತಮ್ಮ ಜೀವನವನ್ನು ಅಪಾಯಕ್ಕೆ ತಂದೊಡ್ಡುತ್ತಾರೆ. ಅವರು ಅಸಂಘಟಿತ, ವೇತನ ರಹಿತ, ಕಾಯಿಲೆ ಮತ್ತು ಸೋಂಕುಗಳಿಗೆ ಸುಲಭವಾಗಿ ತುತ್ತಾಗಬಲ್ಲವರಾಗಿದ್ದಾರೆ. ಮಾಸ್ಕ್, ಗ್ಲೌಸ್ನಂತಹ ಸುರಕ್ಷತಾ ವಿಧಾನಗಳಿಲ್ಲದೆ ಬೀದಿಗಳಲ್ಲಿ, ಕೊಳಚೆಗಳಲ್ಲಿ ತ್ಯಾಜ್ಯವನ್ನು ಮೇಲೆತ್ತುವ ಇವರ ಸ್ಥಿತಿ ಮಳೆಗಾಲದಲ್ಲಿ ಇನ್ನಷ್ಟು ಬಿಗಡಾಯಿಸುತ್ತದೆ. ನೀರು ತುಂಬಿದ ತೊಟ್ಟಿಗಳಿಂದ, ಕೊಳಚೆ ನೀರುಗಳಿಂದ ತ್ಯಾಜ್ಯವನ್ನು ತೆಗೆಯುತ್ತಾರೆ. ಇದರಿಂದಾಗಿ ಡೆಂಗ್ಯೂ, ಡಯೇರಿಯಾ, ಮಲೇರಿಯಾದಂತಹ ರೋಗಗಳಿಗೆ ತುತ್ತಾಗುತ್ತಾರೆ.
ಆದರೆ ಯಾವುದೇ ಸರ್ಕಾರಗಳು ಇವರ ನೆರವಿಗೆ ಬರುವುದಿಲ್ಲ. ಇವರ ಸುರಕ್ಷತೆಗಾಗಿ ಯಾವ ಕ್ರಮಗಳನ್ನೂ ತೆಗೆದುಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯ ನಡುವೆ ಮುಂಬಯಿಯ ಬಾಲಕಿಯೊಬ್ಬಳು ಚಿಂದಿ ಆಯುವವರ ಜೀವನದಲ್ಲಿ ಬದಲಾವಣೆಯನ್ನು ತರುವ ಕಾರ್ಯವನ್ನು ಮಾಡುತ್ತಿದ್ದಾಳೆ.
ಮುಂಬಯಿ ಸ್ಕಾಟಿಶ್ ಸ್ಕೂಲ್ ವಿದ್ಯಾರ್ಥಿನಿ ಸಂಜನಾ ರನ್ವಾಲ್ ಎರಡು ತಿಂಗಳ ಹಿಂದೆ, ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಕೊಳಚೆ ಗುಂಡಿಯಲ್ಲಿ ಕೆಲವರು ಗ್ಲೌಸ್, ಮಾಸ್ಕ್ ಇಲ್ಲದೆಯೇ ತ್ಯಾಜ್ಯ ಮೇಲೆತ್ತುವುದನ್ನು ಕಂಡಿದ್ದಾಳೆ. ಅವರು ಯಾಕೆ ಹಾಗೆ ಮಾಡುತ್ತಿದ್ದರು, ಅವರ ಕಷ್ಟಗಳೇನು ಎಂದು ಚಿಂತನೆ ನಡೆಸಿದ ಆಕೆ ಅವರ ಬಗ್ಗೆ ಇತರರಿಂದ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡಿದ್ದಳು. ಬಳಿಕ ಅವರಿಗೆ ಸಹಾಯ ಮಾಡಲು ಮುಂದಾದಳು.
ಎಲ್ಲದಕ್ಕಿಂತಲೂ ಮಿಗಿಲಾಗಿ ಆಕೆಯ ಸಹೋದರ ಸಿದ್ಧಾರ್ಥ್ ಕ್ಲೀನ್ ಅಪ್ ಫೌಂಡೇಶನ್ ಎಂಬ ಎನ್ಜಿಓವೊಂದನ್ನು ಸ್ಥಾಪಿಸಿ ಅದರ ಮೂಲಕ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆಯಂತಹ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಎನ್ಜಿಓ ಸಹಾಯವನ್ನು ಪಡೆದುಕೊಂಡ ಸಂಜನಾ, ಅದರ ಮೂಲಕ ಫಂಡ್ ರೈಸಿಂಗ್ ಅಭಿಯಾನವನ್ನು ಆರಂಭಿಸಿದ್ದಾಳೆ.
ಚಿಂದಿ ಆಯುವ ಬಹುತೇಕರಿಗೆ ಮನೆ ಎಂಬುದು ಇರುವುದಿಲ್ಲ, ಮಳೆಗಾಲದಲ್ಲಿ ನೀರಿಗೆ ಅದು ಕೂಡ ಕೊಳಚೆ ನೀರಿಗೆ ಹೆಚ್ಚು ತೆರೆದುಕೊಳ್ಳುವ ಅವರು ಸುಲಭವಾಗಿ ರೋಗ ರುಜಿನಗಳಿಗೆ ತುತ್ತಾಗುತ್ತಾರೆ. ಶಿಕ್ಷಣವೂ ಇಲ್ಲದ ಕಾರಣ ಆರೋಗ್ಯ ಕಾಳಜಿಯ ಬಗ್ಗೆ ಅವರಿಗೆ ಜ್ಞಾನವೂ ಇರುವುದಿಲ್ಲ, ವೈದ್ಯರ ಬಳಿ ಹೋಗದೆ ತಾವೇ ಗಾಯಗಳಿಗೆ, ರೋಗಗಳಿಗೆ ಮದ್ದು ಮಾಡಲಾರಂಭಿಸುತ್ತಾರೆ. ಇಂತಹ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯವನ್ನು ಒದಗಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿರುತ್ತದೆ ಎಂದು ಸಂಜನಾ ಅಭಿಪ್ರಾಯಿಸುತ್ತಾಳೆ.
ಸಂಜನಾ ಕುಟುಂಬ ಸದಾ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುತ್ತದೆ. ಅವರ ಹೆಜ್ಜೆಯನ್ನೇ ಅನುಸರಿಸುತ್ತಿರುವ ಆಕೆ, ಮಹಾರಾಷ್ಟ್ರದ ವಿಧರ್ಭ ಪ್ರದೇಶದಲ್ಲಿ ಕಾಯಿಲೆ, ಅಪಘಾತಗಳಲ್ಲಿ ಕಾಲು ಕಳೆದುಕೊಂಡ ಜನರಿಗೆ ಕೃತಕ ಕಾಲು ಅಳವಡಿಸಲು ಆಕೆ 2018ರಲ್ಲಿ ರೂ.80 ಸಾವಿರ ಹಣವನ್ನು ಸಂಗ್ರಹ ಮಾಡಿದ್ದಳು.
ಸಾಮಾಜಿಕ ಜಾಲತಾಣ ವೇದಿಕೆಗಳು ಮಾಂತ್ರಿಕವಾದ ರೀತಿಯಲ್ಲಿ ಕಾರ್ಯನಿರ್ವಹಿಸಿದವು, ಹಲವಾರು ಜನರು ತಮ್ಮಿಂದಾದಷ್ಟು ಹಣವನ್ನು ಕೊಡುಗೆ ನೀಡಿದರು. ಇದು ಆಕೆಯಲ್ಲಿನ ಆತ್ಮವಿಶ್ವಾಸವನ್ನು ವೃದ್ಧಿಸಿತ್ತು ಮತ್ತು ಕ್ರೌಡ್ ಫಂಡಿಂಗ್ ವೇದಿಕೆಯನ್ನು ಸೃಷ್ಟಿಸಲು ಆಕೆಗೆ ನೆರವಾಯಿತು.
ಈ ಬಾರಿಯೂ ಸಂಜನಾ ಚಿಂದಿ ಆಯುವವರಿಗೆ ರೈನ್ ಕೋಟ್, ಗಮ್ ಬೂಟ್ ಇತ್ಯಾದಿಗಳನ್ನು ಖರೀದಿ ಮಾಡಲು ಹಣ ಸಂಗ್ರಹವನ್ನು ಮಾಡಿದ್ದಾಳೆ. ಸುಮಾರು 200 ಮಂದಿ ಚಿಂದಿ ಆಯುವ ಜನರಿಗೆ ಇದನ್ನು ಆಕೆ ವಿತರಣೆ ಮಾಡಿದ್ದಾಳೆ. 2019ರ ಮೇ 27 ರಂದು ಬಾಂದ್ರಾದಲ್ಲಿರುವ ಬೃಹನ್ ಮುಂಬೈ ಕಾರ್ಪೊರೇಷನ್ ಕಛೇರಿಯಲ್ಲಿ ಆಕೆ ರೈನ್ ಕೋಟ್, ಗಮ್ ಬೂಟ್ ಇತ್ಯಾದಿ ಸಾಧನಗಳನ್ನು ಆಕೆ ಹಂಚಿಕೆ ಮಾಡಿದ್ದಾಳೆ.
ಮುಂಬಯಿ ಮಹಾನಗರ ಪಾಲಿಕೆಯ ವಾರ್ಡ್ ಸದಸ್ಯ ಚಂದ್ರಕಾಂತ್ ತಂಬೆ ಎಂಬುವವರು ಈಕೆಗೆ ಚಿಂದಿ ಆಯುವವರನ್ನು ಗುರುತಿಸಲು ನೆರವಾಗಿದ್ದಾರೆ, ಅವರನ್ನು ಒಂದೇ ಕಡೆಗೆ ಕರೆಸಿ ಈಕೆಯಿಂದ ಸುರಕ್ಷಿತ ಸಾಧನಗಳನ್ನು ಅವರು ಪಡೆದುಕೊಳ್ಳುವಂತೆ ಮಾಡಿದ್ದಾರೆ.
ತನ್ನ ಕಾರ್ಯದ ಯಶಸ್ಸಿನಿಂದ ಪ್ರೇರಣೆಗೊಂಡಿರುವ ಸಂಜನಾ ಈಗ ಚಿಂದಿ ಆಯುವವರಿಗೆ ಮೆಡಿಕಲ್ ಇನ್ಸುರೆನ್ಸ್ ಒದಗಿಸುವ ಕಾರ್ಯವನ್ನು ಮಾಡುವತ್ತ ಕಾರ್ಯೋನ್ಮುಖಗೊಂಡಿದ್ದಾಳೆ.
ಆಕೆಯ ಸಹೋದರ ಸಿದ್ಧಾರ್ಥ್ ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ಕಾರಣ, ಸಂಜನಾಳೆ ಎನ್ಜಿಓ ಕಾರ್ಯದಲ್ಲಿ ಸಕ್ರಿಯಗೊಂಡಿದ್ದಾಳೆ. ಸಮಾಜಸೇವೆ ಮತ್ತು ಶಿಕ್ಷಣವನ್ನು ಸಮತೋಲನದಿಂದ ಮುಂದುವರೆಸುತ್ತಿದ್ದಾಳೆ.
ದೇಶಾದ್ಯಂತದ ಇರುವ ಚಿಂದಿ ಆಯುವವರ ಕಲ್ಯಾಣಕ್ಕಾಗಿ ನಾನು ಕೆಲಸ ಮಾಡಲು ಬಯಸುತ್ತೇನೆ, ಅದೇ ಸಮಯದಲ್ಲಿ, ನನ್ನ ಶಿಕ್ಷಣಕ್ಕೆ ತೊಂದರೆಯಾಗದಂತೆ ನಾನು ನೋಡಿಕೊಳ್ಳಬೇಕಿದೆ. ನಾನು ಪ್ರತಿದಿನ ಒಂದು ಗಂಟೆಯನ್ನು ಎನ್ಜಿಒಗಾಗಿ ಅರ್ಪಿಸುತ್ತೇನೆ ಮತ್ತು ನನ್ನ ಹೆಚ್ಚಿನ ವಾರಾಂತ್ಯಗಳನ್ನು ಎನ್ಜಿಓ ಕಚೇರಿಯಲ್ಲೇ ಕಳೆಯುತ್ತೇನೆ. ನನ್ನ ಕುಟುಂಬದ ಪೂರ್ತಿ ಬೆಂಬಲ ನನಗೆ ಇದೆ ಎಂದು ಸಂಜನಾ ಹೇಳುತ್ತಾಳೆ.
ಸಂಜನಾ ಅವರ ನಿಸ್ವಾರ್ಥ ಪ್ರಯತ್ನಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ನಮ್ಮ ಸಮಾಜದಲ್ಲಿರುವ ಸಮಸ್ಯೆಗಳನ್ನು ಮನಗಂಡು ಅದಕ್ಕೆ ಯಾವುದಾದರೂ ರೀತಿಯಲ್ಲಿ ಪರಿಹಾರವನ್ನು ನೀಡಲು ಸಾಧ್ಯವೇ ಎಂಬುವತ್ತ ಚಿಂತನೆ ನಡೆಸುವ ಮನಸ್ಥಿತಿ ಎಲ್ಲರಲ್ಲೂ ಮೂಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.