ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಸೇವಕನೆಂಬ ಭಾವನೆಯೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ಭಾರತವು 2047ನೇ ಇಸವಿಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಹೊಂದಲು ಪುರುಷರ ಜೊತೆಜೊತೆಯಲ್ಲಿ ಮಹಿಳೆಯರ ಪಾತ್ರವೂ ಬಹಳ ಮಹತ್ವವನ್ನು ಹೊಂದಿದೆ ಎಂಬ ನಂಬಿಕೆ ಮೋದಿಜೀ ಅವರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬೆಂಗಳೂರು ಮಹಾನಗರ ಮಹಿಳಾ ಮೋರ್ಚಾ ವತಿಯಿಂದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಡವರ ಮನೆಯ ಹೆಣ್ಣುಮಗು ಶಾಪ ಎಂದು ತಿರಸ್ಕರಿಸುವ ಕಾಲಘಟ್ಟವಿತ್ತು. ಆ ಮಗು ಶಾಪವಲ್ಲ; ಭಾಗ್ಯಲಕ್ಷ್ಮಿ ಎಂದು ತಿಳಿಸಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದ್ದರು ಎಂದು ವಿವರಿಸಿದರು. ಆ ಮಗುವಿಗೆ ಬದುಕು ಕಟ್ಟಿಕೊಡುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ, ಅನಾನುಕೂಲತೆ ಕಾರಣದಿಂದ 5, 6 ಅಥವಾ 7ನೇ ತರಗತಿ ಬಳಿಕ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಮನೆಯಲ್ಲೇ ಉಳಿಯುವ ಸ್ಥಿತಿ ಇತ್ತು. ಯಡಿಯೂರಪ್ಪನವರ ಬಿಜೆಪಿ ಸರಕಾರದ ಬೈಸಿಕಲ್ ಯೋಜನೆ ಮೂಲಕ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ತಪ್ಪಿತು ಎಂದು ಹೇಳಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿತ್ತು. ಮುಖ್ಯಮಂತ್ರಿ, ಗೃಹ ಸಚಿವರು, ಎಲ್ಲ ಸಚಿವರು ಬೆಳಗಾವಿಯಲ್ಲಿದ್ದರು. ಬೆಳಗಾವಿಯ ಸುವರ್ಣಸೌಧದ ಕೇವಲ 10 ಕಿಮೀ ದೂರದಲ್ಲಿ ಹಾಡಹಗಲೇ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ ನಡೆದಿದೆ; ಆದರೆ ಮುಖ್ಯಮಂತ್ರಿಗಳು ಕೈಚೆಲ್ಲಿ ಕೂತಿದ್ದರು ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡಿರಲಿಲ್ಲ; ಬಿಜೆಪಿ ರಾಜ್ಯ ಅಧ್ಯಕ್ಷನಾಗಿ ನಾನು, ಆ ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿದ್ದೇವೆ ಎಂದು ವಿವರಿಸಿದರು.
ಮಹಿಳೆಯರಲ್ಲಿ ಜಾಗೃತಿ ಹೆಚ್ಚಾಗಿದೆ ಎಂದ ಅವರು, ತಾಯಂದಿರು ಕೇವಲ ಅಡುಗೆಮನೆಗೆ ಸೀಮಿತಾಗಿ ಇರಬಾರದು; ಸಮಾಜದ ಮುಂಚೂಣಿಯಲ್ಲಿ ಬರಬೇಕೆಂಬ ಇಚ್ಛಾಶಕ್ತಿ ಮಹಿಳೆಯರಲ್ಲಿದೆ. ಅದರ ಪರಿಣಾಮವೇ ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ನೇತೃತ್ವ ವಹಿಸುವಂಥ ಉತ್ಕøಷ್ಟ ಸಾಧನೆ ಆಗುತ್ತಿದೆ ಎಂದರು. ಮೋದಿಜೀ ಅವರು ಮಹಿಳಾ ಮೀಸಲಾತಿಯ ವಿಚಾರದಲ್ಲಿ ಪ್ರಾಮಾಣಿಕ ಕಳಕಳಿ ತೋರಿಸಿದ್ದಾರೆ ಎಂದು ತಿಳಿಸಿದರು. ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆ ದ್ರೌಪದಿ ಮುರ್ಮು ಅವರನ್ನು ಗೌರವಾನ್ವಿತ ರಾಷ್ಟ್ರಪತಿಗಳಾಗಿ ಮಾಡಿ ತಮ್ಮ ಇಚ್ಛಾಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೇಶಾದ್ಯಂತ ಮತ್ತು ವಿವಿಧ ದೇಶಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ನುಡಿದರು. ಮಹಿಳೆಯರು ಮಾಡಿದ ಸಾಧನೆಯನ್ನು ಗೌರವಿಸುವುದು ಒಂದು ಕಡೆ ನಡೆದರೆ, ಲಿಂಗ ಸಮಾನತೆಗೆ ಒತ್ತು ಕೊಡುವುದು, ಮಹಿಳಾ ಹಕ್ಕುಗಳ ಜಾಗೃತಿಯ ಕೆಲಸವೂ ಈ ದಿನ ನಡೆಯುತ್ತದೆ ಎಂದು ವಿವರಿಸಿದರು.
ಭಾರತದಲ್ಲಿ ಹಿಂದಿನಿಂದಲೂ ಮಹಿಳೆಯರನ್ನು ಬಹಳ ಗೌರವದಿಂದ ಕಾಣಲಾಗುತ್ತಿತ್ತು. ಇಡೀ ಜಗತ್ತಿನಲ್ಲಿ ತಾಯಿಯನ್ನು ದೇವರ ಸ್ಥಾನದಲ್ಲಿ ನೋಡುವ ಪುಣ್ಯಭೂಮಿ ಭಾರತ ಎಂದು ವಿಶ್ಲೇಷಿಸಿದರು. ಶರಣೆ ಅಕ್ಕಮಹಾದೇವಿಗೆ ಜನ್ಮ ಕೊಟ್ಟ ಈ ಕನ್ನಡನಾಡು, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಸೇರಿ ಅನೇಕ ಸಾಧಕರನ್ನು ನಾಡಿಗೆ ನೀಡಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


